ಬೆಂಗಳೂರು: ಮಕ್ಕಳ ಕ್ಯಾನ್ಸರ್ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಸೆಪ್ಟೆಂಬರ್ ತಿಂಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ತಿಳಿಸಿದೆ.
ನಗರದ ಮೆಟ್ರೊ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಚಿತ್ರ ರಚಿಸಿ ಮಕ್ಕಳ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಕ್ಯಾನ್ಸರ್‌ಗೆ ಸಂಬಂಧಿಸಿದ ಸವಾಲುಗಳು ಮತ್ತು ಕಾಯಿಲೆಯನ್ನು ಬೇಗ ಪತ್ತೆಹಚ್ಚಿ ಚಿಕಿತ್ಸೆ ನೀಡುವುದು ಹೇಗೆ ಎಂಬುದರ ಕುರಿತು ಜನರಿಗೆ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ.
ಪ್ರತಿ ವರ್ಷ ವಿಶ್ವದಾದ್ಯಂತ ಸುಮಾರು 5 ಲಕ್ಷ ಮಕ್ಕಳು ಹಾಗೂ ದೇಶದಲ್ಲಿ 50 ಸಾವಿರ ಮಕ್ಕಳು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕರ್ನಾಟಕದಲ್ಲಿ ಸುಮಾರು 3 ಸಾವಿರ ಪ್ರಕರಣಗಳು ದಾಖಲಾಗಿದ್ದು, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಪ್ರತಿ ವರ್ಷ ಸುಮಾರು 800 ಮಕ್ಕಳು ಕ್ಯಾನ್ಸರ್ ಚಿಕಿತ್ಸೆಗಾಗಿ ದಾಖಲಾಗುತ್ತಿದ್ದಾರೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಚಿಕಿತ್ಸೆ ಹಾಗೂ ಆರೈಕೆಗೆ ಸಂಸ್ಥೆಯು ಪ್ರತ್ಯೇಕ ಕಪೂರ್ ಬ್ಲಾಕ್ ಹೊಂದಿದೆ. ಮಕ್ಕಳ ವಿಭಾಗದಲ್ಲಿ ನಿತ್ಯ 4ರಿಂದ 5 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಶೇ 80ರಿಂದ 85ರಷ್ಟು ಮಕ್ಕಳು ಈ ರೋಗದಿಂದ ಗುಣಮುಖರಾಗುತ್ತಿದ್ದಾರೆ. ದೇಶದಲ್ಲೂ ಗುಣಮುಖರಾಗುವವರ ಸಂಖ್ಯೆ ಹೆಚ್ಚುತ್ತಿದೆ. ಇನ್ನೂ ಉತ್ತಮ ಫಲಿತಾಂಶ ಬರಬೇಕೆಂದರೆ, ರೋಗವನ್ನು ಆರಂಭದಲ್ಲಿಯೇ ಪತ್ತೆ ಮಾಡಿ, ಸುಲಭ ಮಾರ್ಗದಲ್ಲಿ ಚಿಕಿತ್ಸೆಯನ್ನು ಕೊಡಿಸಬೇಕು ಎಂದು ಸಲಹೆ ನೀಡಿದೆ.
ಮಕ್ಕಳಲ್ಲಿ ಕಂಡುಬರುವ ಕ್ಯಾನ್ಸರ್ ಲಕ್ಷಣಗಳು:
ವಾರದಿಂದ ಕಾಡುವ ಜ್ವರ, ಎರಡು ವಾರಕ್ಕೂ ಹೆಚ್ಚು ಕುತ್ತಿಗೆ ಭಾಗದಲ್ಲಿ ಊತ ಇರುವುದು ಹಾಗೂ ಹೊಟ್ಟೆ ಅಥವಾ ದೇಹದ ಯಾವುದೇ ಭಾಗದಲ್ಲಿ ಗಡ್ಡೆ ಅಥವಾ ಊತ ಕಂಡು ಬರುವುದು, ಪದೇ ಪದೇ ವಾಂತಿ ಮತ್ತು ತಲೆ ನೋವು.