ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ನಿಯಮ ಜಾಗೃತಿ | ಶಾಲಾ ಪಠ್ಯದಲ್ಲಿ ಪಾಠ: ಕಮಿಷನರ್ ಎಂ.ಎನ್‌.ಅನುಚೇತ್

ಪೀಣ್ಯ ಕೈಗಾರಿಕೆಗಳ ಒಕ್ಕೂಟದಲ್ಲಿ ‘ಸಂಚಾರ ಸಂಪರ್ಕ ದಿನ’
Published 10 ಫೆಬ್ರುವರಿ 2024, 14:10 IST
Last Updated 10 ಫೆಬ್ರುವರಿ 2024, 14:10 IST
ಅಕ್ಷರ ಗಾತ್ರ

ಬೆಂಗಳೂರು: ‘ಸಂಚಾರ ನಿಯಮಗಳ ಜಾಗೃತಿಗೆ ಪಾಠವೊಂದನ್ನು ಸಿದ್ಧಪಡಿಸಿ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಗೆ (ಡಿಎಸ್‌ಇಆರ್‌ಟಿ) ಸಲ್ಲಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ 1 ರಿಂದ 10ನೇ ತರಗತಿ ಪಠ್ಯದಲ್ಲಿ ಸೇರಿಸುವುದಾಗಿ ಡಿಎಸ್‌ಇಆರ್‌ಟಿ ಹೇಳಿದೆ’ ಎಂದು ಬೆಂಗಳೂರು ಸಂಚಾರ ವಿಭಾಗದ ಜಂಟಿ ಕಮಿಷನರ್ ಎಂ.ಎನ್‌.ಅನುಚೇತ್ ತಿಳಿಸಿದರು.

ನಗರದ ಪೀಣ್ಯ ಕೈಗಾರಿಕೆಗಳ ಒಕ್ಕೂಟದ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ‘ಸಂಚಾರ ಸಂಪರ್ಕ ದಿನ’ ಅಹವಾಲು ಸ್ವೀಕಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಸಂಚಾರ ನಿಯಮಗಳನ್ನು ಬಹುತೇಕರು ಪಾಲಿಸುತ್ತಿಲ್ಲ. ಇದರಿಂದಲೇ ರಸ್ತೆ ಅವಘಡಗಳು ಸಂಭವಿಸುತ್ತಿದೆ. ಈ ಕುರಿತ  ಜಾಗೃತಿಗೆ ಏನು ಕ್ರಮ ಕೈಗೊಂಡಿದ್ದೀರಾ’ ಎಂದು ಸಾರ್ವಜನಿಕರೊಬ್ಬರು ಪ್ರಶ್ನಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಅನುಚೇತ್, ‘ಜಾಗೃತಿಗೆ ಸಮಿತಿ ರಚಿಸಲಾಗಿದೆ. ವಾರದಲ್ಲಿ ಎರಡು ದಿನ ಶಾಲೆಗಳಲ್ಲಿ ವಿಶೇಷ ಪಾಠ ಮಾಡಲಾಗುತ್ತಿದೆ. ಸಂಚಾರ ಉದ್ಯಾನದಲ್ಲಿ ನಿತ್ಯ ತಲಾ 50 ಮಕ್ಕಳಿಗೆ ಪ್ರಾತ್ಯಕ್ಷಿಕೆ ಸಮೇತ ವಿವರಣೆ ನೀಡಲಾಗುತ್ತಿದೆ’ ಎಂದರು.

‘ಸಂಚಾರ ಜಾಗೃತಿ ನಿಯಮದ ಕುರಿತು ಶಾಲೆ ಪಠ್ಯದಲ್ಲಿ ಪಾಠ ಸೇರಿಸುವ ಕೆಲಸ ಆರಂಭಿಸಿದ್ದೇವೆ. ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಪಾಠ ಸಿದ್ಧಪಡಿಸಿ, ಡಿಎಸ್‌ಇಆರ್‌ಟಿಗೆ ಸಲ್ಲಿಸಲಾಗಿದೆ. ಅವರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಮುಂದಿನ ವರ್ಷವೇ ಪಠ್ಯದಲ್ಲಿ ಪಾಠ ಸೇರ್ಪಡೆಯಾಗುವ ವಿಶ್ವಾಸವಿದೆ’ ಎಂದು ಅನುಚೇತ್ ಹೇಳಿದರು.

ನಾನಾ ಸಮಸ್ಯೆ: ‘ತುಮಕೂರು ರಸ್ತೆ, ಪೀಣ್ಯ ಕೈಗಾರಿಕೆ ಪ್ರದೇಶ, ಜಾಲಹಳ್ಳಿ ಹಾಗೂ ಸುತ್ತಮುತ್ತ ರಸ್ತೆಗಳಲ್ಲಿ ನಿತ್ಯವೂ ದಟ್ಟಣೆ ಹೆಚ್ಚಿರುತ್ತದೆ. ಈ ಭಾಗದಲ್ಲಿ ಕರ್ತವ್ಯಕ್ಕೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಬೇಕು. ವ್ಹೀಲೆ ಮಾಡುವವರ ಸಂಖ್ಯೆಯೂ ಹೆಚ್ಚಾಗಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದರು.

‘ಬಹುತೇಕ ರಸ್ತೆಗಳಲ್ಲಿ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಕೆಲವೆಡೆ ಪಾದಚಾರಿ ಮಾರ್ಗಗಳಲ್ಲಿಯೇ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಪಾದಚಾರಿಗಳು ಓಡಾಡಲು ಜಾಗವೇ ಇಲ್ಲದಂತಾಗಿದೆ’ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್, ‘ವ್ಹೀಲೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಪಾದಚಾರಿ ಮಾರ್ಗದ ಒತ್ತುವರಿಯನ್ನು ಬಿಬಿಎಂಪಿ ಅಧಿಕಾರಿಗಳು ತೆರವು ಮಾಡುತ್ತಿದ್ದು, ಸಹಕಾರ ನೀಡಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT