ಭಾನುವಾರ, ಜೂನ್ 20, 2021
20 °C

ಅಯ್ಯಪ್ಪ ಕೊಲೆ ಪ್ರಕರಣ: ಸುಧೀರ್ ಅಂಗೂರ್ ಜಾಮೀನು ಅರ್ಜಿ ವಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಲಯನ್ಸ್ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಅಯ್ಯಪ್ಪ ದೊರೆ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸುಧೀರ್ ಅಂಗೂರ್‌ಗೆ ಜಾಮೀನು ನೀಡಲು ಹೈಕೋರ್ಟ್‌ ನಿರಾಕರಿಸಿದೆ.

ನ್ಯಾಯಮೂರ್ತಿ ಪಿ.ಎಸ್. ದಿನೇಶ್‌ಕುಮಾರ್ ಅವರು ಜಾಮೀನು ಅರ್ಜಿ ವಜಾಗೊಳಿಸಿದ್ದಾರೆ. 2019ರ ಅಕ್ಟೋಬರ್ 15ರಂದು ಎಚ್‌ಎಂಟಿ ಮೈದಾನದ ಬಳಿ ಅಯ್ಯಪ್ಪ ದೊರೆ ಅವರನ್ನು ಹತ್ಯೆ ಮಾಡಲಾಗಿತ್ತು. 

‘ಅಲಯನ್ಸ್ ವಿಶ್ವವಿದ್ಯಾಲಯದ ಹಕ್ಕು ಕುರಿತು ಸಹೋದರರಾದ ಸುಧೀರ್ ಅಂಗೂರ್ ಮತ್ತು ಮಧುಕರ್ ಅಂಗೂರ್ ನಡುವೆ ದೀರ್ಘಕಾಲದ ವಿವಾದ ಇತ್ತು. ಮಧುಕರ್ ಅಂಗೂರ್ ಅವರಿಗೆ ಸಹಾಯ ಮಾಡುತ್ತಿದ್ದರು ಎಂಬ ಕಾರಣಕ್ಕೆ ಅಯ್ಯಪ್ಪ ಅವರನ್ನು ಸುಧೀರ್ ವಿಶ್ವವಿದ್ಯಾಲಯದಿಂದ ಹೊರ ಹಾಕಿದ್ದರು’ ಎಂದು ಆರ್‌.ಟಿ. ನಗರ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಸುಧೀರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಬಿ.ವಿ. ಆಚಾರ್ಯ, ‘ಈ ಆರೋಪ ಸುಳ್ಳು. ಏಕೆಂದರೆ ಸುಧೀರ್ ತನ್ನ ಸಹೋದರನ ವಿರುದ್ಧದ ಎಲ್ಲಾ ದಾವೆಗಳಲ್ಲಿ ಗೆಲುವು ಸಾಧಿಸಿದ್ದರು. ಅಯ್ಯಪ್ಪ ಅವರಿಂದ ಮಧುಕರ್ ₹37 ಕೋಟಿ ಪಡೆದಿದ್ದರು‘ ಎಂದರು. 

‘ಈ ಪ್ರಕರಣದಲ್ಲಿ 180 ಸಾಕ್ಷ್ಯಗಳಿದ್ದು, ಅದರಲ್ಲಿ ಶೇ 80ರಷ್ಟು ಮಂದಿ ಅಲಯನ್ಸ್ ವಿಶ್ವವಿದ್ಯಾಲಯಕ್ಕೆ ಸೇರಿದವರು. ಎಲ್ಲಾ ಸಾಕ್ಷ್ಯಗಳು ಸುಧೀರ್ ವಿರುದ್ಧವೇ ಇವೆ’ ಎಂದು ಸರ್ಕಾರಿ ವಕೀಲ ಶೀಲವಂತ ವಾದ ಮಂಡಿಸಿದರು.  

ಇದನ್ನು ಮಾನ್ಯ ಮಾಡಿದ ಪೀಠ, ಜಾಮೀನು ಅರ್ಜಿ ತಿರಸ್ಕರಿಸಿತು. ಈ ಹಿಂದೆ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಕೂಡ ಸುಧೀರ್ ಅವರ ಜಾಮೀನು ಅರ್ಜಿ ವಜಾಗೊಳಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು