ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣೆಗಾಗಿ ಸಂವಿಧಾನ ಹಿಡಿದ ಕಾಂಗ್ರೆಸ್‌: ಬಿ.ವೈ. ವಿಜಯೇಂದ್ರ

Published : 14 ಫೆಬ್ರುವರಿ 2024, 16:01 IST
Last Updated : 14 ಫೆಬ್ರುವರಿ 2024, 16:01 IST
ಫಾಲೋ ಮಾಡಿ
Comments

ಬೆಂಗಳೂರು: ‘ಅಂಬೇಡ್ಕರ್‌ ಅವರಿಗೆ ಜೀವಿತಾವಧಿಯುದ್ದಕ್ಕೂ ಅವಮಾನ ಮಾಡಿದ್ದ ಕಾಂಗ್ರೆಸ್‌ಗೆ ಚುನಾವಣೆ ಬಂದಾಗ ಸಂವಿಧಾನದ ನೆನಪಾಗುತ್ತದೆ. ಈಗಲೂ ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಚುನಾವಣೆಗಾಗಿ ಸಂವಿಧಾನ ಜಾಗೃತಿ ಜಾಥಾ ಮಾಡುತ್ತಿದೆ’ ಎಂದು ಬಿಜೆಪಿಯ ಬಿ.ವೈ. ವಿಜಯೇಂದ್ರ ವಿಧಾನಸಭೆಯಲ್ಲಿ ಬುಧವಾರ ಟೀಕಿಸಿದರು.

ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ ಪಕ್ಷವು ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ 90 ಬಾರಿ ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿತ್ತು. ಇವರಿಗೆ ಸಂವಿಧಾನದ ಹೆಸರಿನಲ್ಲಿ ಅಭಿಯಾನ ನಡೆಸಲು ಯಾವ ನೈತಿಕತೆ ಇದೆ’ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಅತ್ಯಂತ ಹೆಚ್ಚು ಅವಧಿಗೆ ಆಡಳಿತ ನಡೆಸಿರುವುದು ಕಾಂಗ್ರೆಸ್‌ ಪಕ್ಷ. ಈಗಲೂ ರಾಜ್ಯವು ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು, ಜನರು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅದರ ಹೊಣೆಯನ್ನು ಕಾಂಗ್ರೆಸ್‌ ಪಕ್ಷವೇ ಹೊರಬೇಕು ಎಂದರು.

ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ. ಬರಗಾಲದಿಂದ ಸಂಕಷ್ಟದಲ್ಲಿರುವ ಜನರಿಗೆ ಪರಿಹಾರ ಕೊಡುವುದಕ್ಕೂ ಹಣವಿಲ್ಲ. ದೆಹಲಿಯಲ್ಲಿ ಕಾಂಗ್ರೆಸ್‌ನವರು ನಡೆಸಿದ ರಾಜಕೀಯ ನಾಟಕಕ್ಕೆ ಸರ್ಕಾರದ ಖಜಾನೆಯ ಹಣ ಬಳಸಲಾಗಿದೆ. ರಾಜಕೀಯ ಪ್ರತಿಭಟನೆ ಬೆಂಬಲಿಸಿ ಜಾಹೀರಾತು ನೀಡಿದ ಆಯುಕ್ತರಿಂದಲೇ ಹಣ ವಸೂಲಿ ಮಾಡಿ. ಇಲ್ಲವಾದರೆ ಅವರನ್ನು ಜಾಗ ಖಾಲಿ ಮಾಡಿಸಿ ಎಂದು ಆಗ್ರಹಿಸಿದರು.

ಬಿಜೆಪಿಯ ಎಸ್‌. ಚನ್ನಬಸಪ್ಪ, ಮಾತನಾಡಿ, ‘ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಅಪರಾಧ ಚಟುವಟಿಕೆ ಹೆಚ್ಚಳವಾಗಿದೆ. ಪೊಲೀಸರು ಅಪರಾಧಿಗಳ ಜತೆ ಶಾಮೀಲಾಗಿದ್ದಾರೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT