ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್ ಆಗದ ಬೆಂಗಳೂರು ಮಹಾನಗರ: ಗರಗಸದಂತಹ ರಸ್ತೆ

ಮಿನ್ಸ್‌ ಸ್ಕ್ವೇರ್‌ನಲ್ಲಿ ಹೊಂಡ; ವಾಹನ ಸಂಚಾರ ಪ್ರಯಾಸಕರ l ದ್ವಿಚಕ್ರ ವಾಹನ ಸವಾರರ ತಿಣುಕಾಟ
Last Updated 6 ಸೆಪ್ಟೆಂಬರ್ 2021, 2:35 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಬ್ರ್ಯಾಂಡ್ ಮೌಲ್ಯ ಹೆಚ್ಚಿಸಲು ಅನುಷ್ಠಾನಗೊಳ್ಳುತ್ತಿರುವ ಸ್ಮಾರ್ಟ್‌ಸಿಟಿ ಯೋಜನೆಯ ಕಾಮಗಾರಿ ಕೆಲವೆಡೆ ಪೂರ್ಣಗೊಂಡಿದೆ. ಪಾದಚಾರಿ ಮಾರ್ಗಗಳು ವಿಶಾಲಗೊಂಡಿವೆಯಾದರೂ, ವಾಹನ ಸಂಚಾರಕ್ಕೆ ಇರುವ ರಸ್ತೆಗಳು ಮಾತ್ರ ಗರಗಸದಂತಾಗಿವೆ. ಕಾಮಗಾರಿ ಬಳಿಕವೂ ‘ಸ್ಮಾರ್ಟ್’ ಆಗದ ರಸ್ತೆಗಳಲ್ಲಿ ವಾಹನ ಸಂಚಾರ ಪ್ರಯಾಸಕರವಾಗಿದೆ.

ನಗರದ ಕೇಂದ್ರ‌ ವಾಣಿಜ್ಯ ಪ್ರದೇಶದಲ್ಲಿ (ಸಿಬಿಡಿ) ಸದಾ ಗಿಜಿಗುಡುವ 36 ರಸ್ತೆಗಳಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯ ಕಾಮಗಾರಿ ನಿರ್ವಹಿಸಲಾಗುತ್ತಿದೆ. ಈಗಾಗಲೇ ಕಾಮಗಾರಿ ಪೂರ್ಣಗೊಂಡಿರುವ ರಸ್ತೆಗಳನ್ನು ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜುಲೈ 23ರಂದು ಪರಿಶೀಲನೆ ನಡೆಸಿದ್ದರು. ಕಾಮಗಾರಿ ನಿರ್ವಹಣೆ ಬಗ್ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದರು.

ಆದರೆ, ಅದೇ ರಸ್ತೆಗಳಲ್ಲಿ ಮತ್ತೊಮ್ಮೆ ಸಾಗಿದರೆ ಕಾಮಗಾರಿಯ ಅಸಲಿಯತ್ತು ಏನೆಂಬುದು ಮನದಟ್ಟಾಗುತ್ತದೆ. ಉದಾಹರಣೆಗೆ ಕಬ್ಬನ್ ಪಾರ್ಕ್‌ ಮೆಟ್ರೊ ನಿಲ್ದಾಣದ ಕಡೆಯಿಂದ ರಾಜಭವನ ಕಡೆಗಿನ ರಸ್ತೆಯಲ್ಲಿ ಸಾಗಿದರೆ ಗರಗಸದ ಮೇಲೆ ವಾಹನ ಚಾಲನೆ ಮಾಡಿದ ಅನುಭವವಾಗುತ್ತದೆ. ಈವರೆಗೆ ಕಾಮಗಾರಿ ನಡೆಯುತ್ತಿದ್ದರಿಂದ ಆಗುತ್ತಿದ್ದ ತೊಂದರೆಯನ್ನು ವಾಹನ ಸವಾರರು ಸಹಿಸಿಕೊಂಡಿದ್ದರು. ರಾಜಭವನದ ಮುಂದೆ ವಿಶಾಲವಾದ ಪಾದಚಾರಿ ಮಾರ್ಗ ನಿರ್ಮಾಣವಾಗಿದೆ. ಆದರೆ, ರಸ್ತೆ ಮಾತ್ರ ಮೊದಲಿಗಿಂತಲೂ ಹಾಳಾಗಿದೆ.ಮಿನ್ಸ್ಕ್‌ ಸ್ಕ್ವೇರ್ ಬಳಿಯಂತೂ ದೊಡ್ಡ ಹೊಂಡವೇ ಬಿದ್ದಿದೆ.

ಕಬ್ಬನ್ ರಸ್ತೆ ಮತ್ತು ಕುಂಬ್ಳೆ ವೃತ್ತದ ಕಡೆಯಿಂದ ಬರುವ ಕ್ವೀನ್ಸ್ ರಸ್ತೆಯಲ್ಲಿ ವೇಗವಾಗಿ ಬರುವ ವಾಹನಗಳು ಮಿನ್ಸ್‌ ಸ್ಕ್ವೇರ್ ಬಳಿ ಇರುವ ಹೊಂಡಕ್ಕೆ ಇಳಿದು ಸಾಗುತ್ತಿವೆ. ಹೊಂಡ ಕಣ್ಣೆದುರಿಗೆ ಬಂದ ಕೂಡಲೇ ಧುತ್ತೆಂದು ಬ್ರೇಕ್ ಒತ್ತಿದರೆ ಹಿಂದಿನಿಂದ ವೇಗವಾಗಿ ಬರುವ ವಾಹನಗಳು ಡಿಕ್ಕಿ ಹೊಡೆಯುವ ಭಯ ಚಾಲಕರದು. ಗುಂಡಿಯೊಳಗೆ ಬಿದ್ದು ಎದ್ದು ಮುಂದೆ ಸಾಗಬೇಕಾಗುತ್ತದೆಯೇನೋ ಎಂಬ ಆತಂಕವನ್ನು ದ್ವಿಚಕ್ರ ವಾಹನ ಸವಾರರು ಎದುರಿಸುತ್ತಿದ್ದಾರೆ.

ಜವಾಹರ್‌ಲಾಲ್‌ ನೆಹರು ತಾರಾಲಯ ರಸ್ತೆಯಲ್ಲೂ ಪಾದಚಾರಿ ಮಾರ್ಗ ವಿಶಾಲವಾಗಿದೆ. ರಸ್ತೆ ಅಭಿವೃದ್ಧಿ ಕಾರ್ಯ ಪೂರ್ಣಗೊಂಡಿಲ್ಲ. ಇನ್ಫೆಂಟ್ರಿ ರಸ್ತೆಯಲ್ಲೂ ಇದೇ ಸ್ಥಿತಿ ಇದೆ. ಜುಮ್ಮಾ ಮಸೀದಿ ರಸ್ತೆ, ಡಿಕನ್ಸನ್‌ ರಸ್ತೆಯ ಸ್ಥಿತಿ ಕೂಡ ಇದಕ್ಕೆ ಹೊರತಾಗಿಲ್ಲ. ಒಮ್ಮೆ ಕಾಮಗಾರಿ ಮುಗಿಸಿದ ಬಳಿಕ ಮತ್ತೊಮ್ಮೆ ಅಗೆದು ದುರಸ್ತಿಪಡಿಸುವ ಕೆಲಸ ಅಲ್ಲಲ್ಲಿ ನಡೆಯುತ್ತಿದೆ. ಸ್ಮಾರ್ಟ್ ಸಿಟಿ ಮಾಡಲು ಹೋಗಿ ಸರ್ಕಾರ, ರಸ್ತೆಗಳ ಸ್ಥಿತಿಯನ್ನು ಇನ್ನಷ್ಟು ವಿರೂಪಗೊಳಿಸಿದೆ ಎಂದು ಸ್ಥಳೀಯರು ದೂರುತ್ತಾರೆ.

ರಸ್ತೆಗಿಂತ ಎತ್ತರದಲ್ಲಿವೆ ಮಳೆ ನೀರ ತೊಟ್ಟಿಗಳು

ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿ ನಿರ್ವಹಣೆಯಾಗುತ್ತಿರುವ ಎಲ್ಲ ರಸ್ತೆಗಳಲ್ಲೂಅಲ್ಲಲ್ಲಿ ಮಳೆ ನೀರು ನೆಲದಡಿಯಲ್ಲಿರುವ ಚರಂಡಿ ಸೇರಿಕೊಳ್ಳಲು ಸಣ್ಣ ಸಣ್ಣಬಾಕ್ಸ್‌ಗಳನ್ನು ನಿರ್ಮಿಸಲಾಗಿದೆ.

ರಸ್ತೆಗಿಂತ ಕೆಳಗೆ ಅಥವಾ ರಸ್ತೆಯ ಮಟ್ಟದಲ್ಲಿದ್ದರೆ ಮಳೆ ನೀರು ಹರಿದು ಹೋಗುತ್ತದೆ. ಆದರೆ, ಇವೆಲ್ಲವೂ ರಸ್ತೆಗಿಂತ ಅರ್ಧ ಅಡಿ ಎತ್ತರದಲ್ಲಿವೆ. ಅವುಗಳಲ್ಲಿ ಮಳೆನೀರು ಇಳಿದು ಹೋಗುವುದಾದರೂ ಹೇಗೆ ಎಂಬುದು ಸ್ಥಳೀಯರ ಪ್ರಶ್ನೆ.

ಇನ್ಫೆಂಟ್ರಿ ರಸ್ತೆಯಲ್ಲಿ ಸಾಗಿ ಮೈನ್ ಗಾರ್ಡ್ ಕ್ರಾಸ್ ರಸ್ತೆಗೆ ಎಡಕ್ಕೆತಿರುವು ಪಡೆದುಕೊಳ್ಳುವ ಜಾಗದಲ್ಲಿ ರಸ್ತೆಗಿಂತ ಅರ್ಧ ಅಡಿ ಎತ್ತರದಲ್ಲಿರುವ ಈ ತೊಟ್ಟಿ ನಿರ್ಮಾಣವಾದ ಕೆಲವೇ ದಿನಗಳಲ್ಲಿ ಪುಡಿಪುಡಿಯಾಗಿದೆ. ಕಾಮಗಾರಿ ಎಷ್ಟು ಕಳಪೆಯಾಗಿದೆಎಂಬುದಕ್ಕೆ ಇದೇ ಸಾಕ್ಷಿ ಎಂದು ಬೊಟ್ಟುಮಾಡಿತೋರಿಸುತ್ತಾರೆ ಪಾದಚಾರಿಗಳು.

ಕಮರ್ಷಿಯಲ್ ಸ್ಟ್ರೀಟ್‌ ಬಣ್ಣ ಬಯಲು!
ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಕೊನೆ ಗಳಿಗೆಯಲ್ಲಿ ತರಾತುರಿಯಲ್ಲಿ ನಗರ ವೀಕ್ಷಣೆ ಕೈಗೊಂಡಿದ್ದರು. ಈ ವೇಳೆ ಕಮರ್ಷಿಯಲ್ ಸ್ಟ್ರೀಟ್‌ಗೂ ಭೇಟಿ ನೀಡಿದ್ದರು. ಬಣ್ಣ ಬಣ್ಣದ ಇಂಟರ್‌ ಲಾಕ್‌ ಜೋಡಿಸಿದ್ದ ರಸ್ತೆ ಮತ್ತು ಪಾದಚಾರಿ ಮಾರ್ಗ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬಣ್ಣ ಬಣ್ಣದಿಂದ ನಳನಳಿಸುತ್ತಿದ್ದ ಕರ್ಮರ್ಷಿಯಲ್ ಸ್ಟ್ರೀಟ್‌ನ ನಿಜ ಬಣ್ಣ ಉದ್ಘಾಟನೆಯಾದ ತಿಂಗಳ ಒಳಗೆ ಬಯಲಾಗಿದೆ.

ಈಗ ಈ ರಸ್ತೆಯಲ್ಲಿ ಬಣ್ಣ ಬಣ್ಣದ ಇಂಟರ್‌ ಲಾಕ್‌ಗಳನ್ನು ಹುಡುಕಬೇಕಾದ ಸ್ಥಿತಿ ಇದೆ. ಬಣ್ಣವೆಲ್ಲ ಮಾಸಿ ಹೋಗಿದ್ದು, ಸಿಮೆಂಟ್‌ ಕೂಡ ಎದ್ದು ಬರುವಂತಿದೆ. ಜೋಡಿಸುವ ಕ್ರಮವೂ ಸರಿಯಾಗಿರದ ಕಾರಣ ಅವು ಅಲುಗಾಡುತ್ತಿವೆ. ಪಾದಚಾರಿಗಳು ಬೀಳುತ್ತೇವೆಯೇನೋ ಎಂಬ ಭಯದಲ್ಲೇ ಹೆಜ್ಜೆ ಇಡಬೇಕಾದ ಸ್ಥಿತಿ ಇಲ್ಲಿದೆ. ಇನ್ನು ಪಾದಚಾರಿ ಮಾರ್ಗದ ಕತೆಯೂ ಇದಕ್ಕೆ ಹೊರತಾಗಿಲ್ಲ. ನಡೆದಾಗ ಅಲುಗಾಡುವ ಕಡೆ ಅಲ್ಲಲ್ಲಿ ಇಂಟರ್ ಲಾಕ್‌ಗಳನ್ನು ಕಿತ್ತು ರಾಶಿ ಹಾಕಲಾಗಿದೆ.

ಸ್ಮಾರ್ಟ್‌ಸಿಟಿ ಕಾಮಗಾರಿ ಎಂದರೆ ‘ಹಳೇ ಕಲ್ಲು–ಹೊಸ ಬಿಲ್ಲು’ ಎಂದು ಕಮರ್ಷಿಯಲ್ ಸ್ಟ್ರೀಟ್ ವ್ಯಾಪಾರಿಗಳು ವ್ಯಂಗ್ಯವಾಡುತ್ತಾರೆ. ‘ನಿರ್ಮಾಣವಾದ ಕೆಲವೇ ದಿನಗಳಲ್ಲಿ ಹಾಳಾಗಿರುವ ರಸ್ತೆಯಲು ನಡೆದಾಡಲು ಸಾಧ್ಯವಾಗದ ಸ್ಥಿತಿ ಇರುವುದರಿಂದ ಗ್ರಾಹಕರೇ ಬರುತ್ತಿಲ್ಲ’ ಎಂದು ಬಟ್ಟೆ ಅಂಗಡಿ ನಡೆಸುವ ವ್ಯಾಪಾರಿ ಖಲೀಮ್ ಉಲ್ಲಾ ಬೇಸರ ವ್ಯಕ್ತಪಡಿಸಿದರು.

ಚರ್ಚ್‌ ಸ್ಟ್ರೀಟ್ ಮಾದರಿಯಲ್ಲಿ ರಸ್ತೆ ನಿರ್ಮಿಸಲು ಹೋಗಿ ಕಳಪೆ ಕಾಮಗಾರಿಯಿಂದಾಗಿ ಮೊದಲಿಗಿಂತ ರಸ್ತೆ ಹಾಳಾಗಿದೆ ಎಂದು ದೂರಿದರು.

ಕಾಮಗಾರಿ ಪೂರ್ಣಗೊಳಿಸಲು ಸೆಪ್ಟೆಂಬರ್ ಗಡುವು

ಈ ಯೋಜನೆಯ ಬಹುತೇಕ ಕಾಮಗಾರಿಗಳನ್ನು ಸೆಪ್ಟೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸಲು ಗುರಿ ನಿಗದಿಪಡಿಸಲಾಗಿದೆ ಎಂದು ಸ್ಮಾರ್ಟ್ ಸಿಟಿ ಯೋಜನೆಯ ಮುಖ್ಯ ಎಂಜಿನಿಯರ್ ವಿನಾಯಕ ಸುಗೂರು ತಿಳಿಸಿದರು.

ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಜೋಡಿಸಿರುವ ಇಂಟರ್‌ ಲಾಕ್‌ಗಳ ಬಣ್ಣ ಮಾಸಿರುವುದರಿಂದ ಅವುಗಳನ್ನು ದುರಸ್ತಿಪಡಿಸಲು ನಿರ್ಧರಿಸಲಾಗಿದೆ. ಮಿನ್ಸ್ಕ್‌ ಸ್ಕ್ವೇರ್‌ನಲ್ಲಿ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಲಾಗುವುದು. ಸ್ಮಾರ್ಟ್‌ಸಿಟಿ ಯೋಜನೆಯ ಕಾಮಗಾರಿ ನಿರ್ವಹಣೆಯಾಗುತ್ತಿರುವ ಎಲ್ಲ ರಸ್ತೆಗಳಿಗೂ ಮಳೆಗಾಲ ಮುಗಿದ ಬಳಿಕ ಡಾಂಬರು ಹಾಕಲಾಗುವುದು ಎಂದು ಅವರು ತಿಳಿಸಿದರು.

ಅಂಕಿ ಅಂಶ
ಸ್ಮಾರ್ಟ್‌ ಸಿಟಿ ಯೋಜನೆಯಡಿ ಟೆಂಡರ್‌ಶ್ಯೂರ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ರಸ್ತೆಗಳ ಸಂಖ್ಯೆ: 36
ಅಭಿವೃದ್ಧಿಗೊಳ್ಳಲಿರುವ ರಸ್ತೆಗಳ ಒಟ್ಟು ಉದ್ದ: 29.53 ಕಿ.ಮೀ
ರಸ್ತೆ ಅಭಿವೃದ್ಧಿ ಕಾಮಗಾರಿಗಳ ಅಂದಾಜು ಮೊತ್ತ:₹ 481.65 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT