ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಕಾಫಿ ತೋಟದ ಮಧ್ಯೆ ಗಾಂಜಾ ಗಿಡ ಬೆಳೆದ ಆರೋಪಿಗೆ ಜಾಮೀನು

Published 23 ಮೇ 2024, 16:34 IST
Last Updated 23 ಮೇ 2024, 16:34 IST
ಅಕ್ಷರ ಗಾತ್ರ

ಬೆಂಗಳೂರು: ಕಾಫಿ ತೋಟದ ಮಧ್ಯೆ ಎಂಟು ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪದ ಅಡಿ ಬಂಧನಕ್ಕೆ ಒಳಗಾಗಿದ್ದ ವ್ಯಕ್ತಿಯೊಬ್ಬರಿಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಪ್ರಕರಣದ ಆರೋಪಿಯಾದ ಕೆ.ಎಂ. ರಾಜೇಂದ್ರ (55) ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ರಜಾಕಾಲದ ಪೀಠದಲ್ಲಿದ್ದ ನ್ಯಾಯಮೂರ್ತಿ ಎಂ.ಜಿ. ಉಮಾ ಪುರಸ್ಕರಿಸಿದ್ದಾರೆ.

‘ಅರ್ಜಿದಾರರ ವಿರುದ್ಧದ ಆರೋಪ ಗಂಭೀರ ಸ್ವರೂಪದಿಂದ ಕೂಡಿದೆ. ತೋಟದಲ್ಲಿ ಎಂಟು ಗಾಂಜಾ ಗಿಡಗಳನ್ನು ಬೆಳೆದಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡು ಸ್ಥಳವನ್ನು ಮಹಜರು ಮಾಡಿದ್ದಾರೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಮುಂದಿನ ವಿಚಾರಣೆಗೆ ಅರ್ಜಿದಾರರ ಅಗತ್ಯವಿಲ್ಲವಾಗಿದೆ. ಹಾಗಾಗಿ, ಜಾಮೀನು ಮಂಜೂರು ಮಾಡಲಾಗುತ್ತಿದೆ’ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಆರೋಪಿಯು ₹2 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ನೀಡಬೇಕು. ಇದೇ ಮಾದರಿಯ ಅಪರಾಧ ಕೃತ್ಯದಲ್ಲಿ ಭಾಗಿಯಾಗಬಾರದು’ ಎಂಬ ಷರತ್ತುಗಳನ್ನು ವಿಧಿಸಲಾಗಿದೆ.

ಪ್ರಕರಣವೇನು?: ಖಚಿತ ಮಾಹಿತಿಯ ಮೇರೆಗೆ ಚಿಕ್ಕಮಗಳೂರು ಸಿಇಎನ್‌ ಠಾಣಾ ಪೊಲೀಸರು, 2024ರ ಮಾರ್ಚ್ 6ರಂದು ಬೆಳಿಗ್ಗೆ 8 ಗಂಟೆಗೆ ಅವತಿ ಹೋಬಳಿಯ ಕೆಳಹೊಲಗದ್ದೆ ಗ್ರಾಮದ ನಿವಾಸಿ ರಾಜೇಂದ್ರ ಎಂಬುವರ ಕಾಫಿ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಈ ವೇಳೆ ಕಾಫಿ ಗಿಡಗಳ ಮಧ್ಯೆ, ಮಾರಾಟ ಮಾಡುವ ಉದ್ದೇಶದಿಂದ 8 ಗಾಂಜಾ ಗಿಡಗಳನ್ನು ಬೆಳೆದಿರುವುದು ಕಂಡುಬಂದಿತ್ತು. ಅದರಂತೆ ₹1 ಸಾವಿರ ಬೆಲೆ ಬಾಳುವ 100 ಗ್ರಾಂನಷ್ಟು ಗಾಂಜಾ ಗಿಡ, ಅದರ ಹಸಿ ಬೇರು, ಕಾಂಡ, ಕಡ್ಡಿ, ಸೊಪ್ಪು, ಮೊಗ್ಗುಗಳನ್ನು ವಶಪಡಿಸಿಕೊಂಡಿದ್ದ ಪೊಲೀಸರು ರಾಜೇಂದ್ರ ಅವರನ್ನು ಬಂಧಿಸಿದ್ದರು.

ಗಾಂಜಾ ಗಿಡ ಬೆಳೆಸಿಕೊಡುವಂತೆ ಹೇಳಿದ್ದ ಅದೇ ಗ್ರಾಮದ ಲಕ್ಷ್ಮಣ್‌ ಎಂಬುವರನ್ನು ಎರಡನೇ ಆರೋಪಿಯನ್ನಾಗಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT