ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಕ್ರೀದ್ | ಎಲ್ಲರಲ್ಲೂ ಮನುಷ್ಯತ್ವ ಬೆಳೆಯಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಸಂದೇಶ

Published 17 ಜೂನ್ 2024, 16:15 IST
Last Updated 17 ಜೂನ್ 2024, 16:15 IST
ಅಕ್ಷರ ಗಾತ್ರ

ಬೆಂಗಳೂರು: ‘ಒಬ್ಬರು ಇನ್ನೊಂದು ಧರ್ಮವನ್ನು ಪ್ರೀತಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಭಾರತ ಬಹುತ್ವದ ದೇಶ. ಎಲ್ಲಾ ಧರ್ಮ, ಜಾತಿ, ಭಾಷೆ, ಪ್ರಾಂತ್ಯದವರು ಒಟ್ಟಾಗಿ ಬಾಳಬೇಕು. ಮನುಷ್ಯತ್ವ ಬಹಳ ದೊಡ್ಡದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಚಾಮರಾಜಪೇಟೆಯಲ್ಲಿ ಬಕ್ರೀದ್ ಅಂಗವಾಗಿ ನಡೆದ ಸಾಮೂಹಿಕ ಪ್ರಾರ್ಥನೆ ನಂತರ ಅವರು ಮಾತನಾಡಿದರು.

‘ಎಲ್ಲರೂ ಭಕ್ತಿಯಿಂದ ಪ್ರಾರ್ಥನೆಯಲ್ಲಿ ಭಾಗವಹಿಸಿ ಮನುಕುಲಕ್ಕೆ ಒಳಿತಾಗಲಿ ಎಂದು ಪ್ರಾರ್ಥಿಸಿದ್ದೀರಿ. ಎಲ್ಲರೂ ಸಾಮೂಹಿಕ ಪ್ರಾರ್ಥನೆ ಮಾಡಿದ್ದು, ಸಮಾಜದಲ್ಲಿ ನಾವೆಲ್ಲರೂ ಅಣ್ಣತಮ್ಮಂದಿರ ಹಾಗೆ ಪರಸ್ಪರ ಪ್ರೀತಿ ವಿಶ್ವಾಸದಿಂದ ಬಾಳಬೇಕು’ ಎಂದರು.

‘ಎಲ್ಲರೂ ಪರಸ್ಪರ ಪ್ರೀತಿಸಬೇಕು. ಪ್ರತಿಯೊಬ್ಬರೂ ಸಹಿಷ್ಣುತೆ ಪಾಲಿಸಬೇಕು. ಎಲ್ಲ ಧರ್ಮವನ್ನು ಪ್ರೀತಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ರಾಷ್ಟ್ರ, ಸಮಾಜ ಹಾಗೂ ಎಲ್ಲಾ ಧರ್ಮಗಳೂ ಏಳಿಗೆಯಾಗುತ್ತದೆ’ ಎಂದು ಹೇಳಿದರು.

‘ಸಂವಿಧಾನದಲ್ಲಿ ನಂಬಿಕೆ ಇಟ್ಟಿರುವ ನಮ್ಮ ಸರ್ಕಾರ, ಸಂವಿಧಾನ ಹೇಳುವಂತೆ ನಡೆದುಕೊಳ್ಳುತ್ತದೆ. ಯಾವುದೇ ತಾರತಮ್ಯ ಮಾಡುವುದಿಲ್ಲ. ಕರ್ನಾಟಕದ ಏಳು ಕೋಟಿ ಜನರನ್ನು ರಕ್ಷಣೆ ಮಾಡುವ ಜವಾಬ್ದಾರಿ ನಮ್ಮದು’ ಎಂದು ಭರವಸೆ ನೀಡಿದರು.

ಚಾಮರಾಜಪೇಟೆಯ ಈದ್ಗ ಮೈದಾನದಲ್ಲಿ ಬಕ್ರೀದ್‌ ಹಬ್ಬವನ್ನು ಮಕ್ಕಳು ಸಂಭ್ರಮಿಸಿದ್ದು ಹೀಗೆ..
ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಚಾಮರಾಜಪೇಟೆಯ ಈದ್ಗ ಮೈದಾನದಲ್ಲಿ ಬಕ್ರೀದ್‌ ಹಬ್ಬವನ್ನು ಮಕ್ಕಳು ಸಂಭ್ರಮಿಸಿದ್ದು ಹೀಗೆ.. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.

‘ಅಲ್ಪಸಂಖ್ಯಾತರು ಯಾವುದೇ ಕಾರಣಕ್ಕೂ ಭಯ, ಆತಂಕ ಪಡಬೇಕಾದ ಅಗತ್ಯವಿಲ್ಲ. ನಮ್ಮ ಸರ್ಕಾರದಲ್ಲಿ ಅಲ್ಪಸಂಖ್ಯಾತರು, ಬಹುಸಂಖ್ಯಾತರಿಗೆ ಒಂದೇ ರೀತಿಯಲ್ಲಿ ರಕ್ಷಣೆ ಕೊಡುವ ಕೆಲಸ ಮಾಡುತ್ತೇವೆ. ಎಲ್ಲಕ್ಕಿಂತ ಮುಖ್ಯವಾಗಿ ನಾಡಿನ ಅಭಿವೃದ್ಧಿಗೆ ಒಳ್ಳೆ ಮಳೆ ಬೆಳೆಯಾಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ತಿಳಿಸಿದರು.

ವಸತಿ ಸಚಿವ ಜಮೀರ್ ಅಹಮದ್‌ ಖಾನ್ ಉಪಸ್ಥಿತರಿದ್ದರು.

ಬೆಂಗಳೂರಿನ ಚಾಮರಾಜಪೇಟೆಯ ಈದ್ಗ ಮೈದಾನದಲ್ಲಿ ಈದ್ ಉಲ್ ಅದಾ ಹಬ್ಬದ ಅಂಗವಾಗಿ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಬೆಂಗಳೂರಿನ ಚಾಮರಾಜಪೇಟೆಯ ಈದ್ಗ ಮೈದಾನದಲ್ಲಿ ಈದ್ ಉಲ್ ಅದಾ ಹಬ್ಬದ ಅಂಗವಾಗಿ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.

ನಗರದಾದ್ಯಂತ ಬಕ್ರೀದ್ ಸಂಭ್ರಮ:

ತ್ಯಾಗ ಹಾಗೂ ಬಲಿದಾನದ ಸಂಕೇತವಾದ ಬಕ್ರೀದ್‌ ಅನ್ನು ಮುಸ್ಲಿಂ ಸಮುದಾಯದವರು ನಗರದಲ್ಲಿ ಶ್ರದ್ಧೆ ಹಾಗೂ ಭಕ್ತಿಯಿಂದ ಆಚರಿಸಿದರು. ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಸಮುದಾಯದವರು ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಧರ್ಮಗುರುಗಳು ಸಂದೇಶ ನೀಡಿದರು. ಚಾಮರಾಜಪೇಟೆ ಪಾದರಾಯನಪುರ ಕಲಾಸಿಪಾಳ್ಯ ಮೈಸೂರು ರಸ್ತೆ ಶಿವಾಜಿನಗರ ಹೆಬ್ಬಾಳ ಆರ್‌.ಟಿ.ನಗರ ಶಾಂತಿನಗರ ಲಾಲ್‌ಬಾಗ್‌ ರಸ್ತೆ ಮಾಗಡಿ ರಸ್ತೆ ಕಮ್ಮಗೊಂಡನಹಳ್ಳಿ ಸೇರಿದಂತೆ ನಗರದ ವಿವಿಧೆಡೆಯಲ್ಲಿರುವ ಪ್ರಮುಖ ಮಸೀದಿಗಳಲ್ಲಿ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು. ಮಕ್ಕಳು ದೊಡ್ಡವರು ಹೊಸ ಬಟ್ಟೆ ಧರಿಸಿ ಹೊಸ ಟೋಪಿ ತೊಟ್ಟು ಸಂಭ್ರಮಿಸಿದರು. ಪರಸ್ಪರ ಆಲಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು. ಮಕ್ಕಳು ಶುಭಾಶಯ ವಿನಿಯಮ ಮಾಡಿಕೊಂಡರು. ‌ ತ್ಯಾಗ ಬಲಿದಾನದ ಪ್ರತೀಕವಾದ ಈ ಹಬ್ಬದಲ್ಲಿ ಕುರಿ ಬಲಿ ನೀಡಲಾಯಿತು. ತಮ್ಮ ಶಕ್ತಿಗೆ ಅನುಸಾರವಾಗಿ ಮಾಂಸ ದಾನ ಮಾಡಿದರು. ಹಬ್ಬದೂಟ ತಯಾರಿಸಿ ಸಂಬಂಧಿಕರ ಜೊತೆಗೆ ಸ್ನೇಹಿತರೊಂದಿಗೆ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT