ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳೆಹಣ್ಣು ಬೆಲೆ ಕೇವಲ ₹30: ಕುಸಿದ ಬೇಡಿಕೆ; ಹೊರ ರಾಜ್ಯಗಳಿಂದಲೂ ಪೂರೈಕೆ

Last Updated 2 ಜನವರಿ 2022, 20:16 IST
ಅಕ್ಷರ ಗಾತ್ರ

ಬೆಂಗಳೂರು: ಬೇಡಿಕೆ ಕುಸಿದ ಕಾರಣ ಕಳೆದ ಎರಡು ವರ್ಷಗಳ ಅವಧಿಯಲ್ಲಿಯೇ ದಾಖಲೆಯ ಮಟ್ಟದಲ್ಲಿ ಬಾಳೆಹಣ್ಣಿನ ಬೆಲೆ ನೆಲಕಚ್ಚಿದೆ. ಅಲ್ಲದೆ, ನಿರಂತರ ಮಳೆಯಿಂದಾಗಿ ಹಣ್ಣಿನ ಗುಣಮಟ್ಟದ ಮೇಲೂ ಪರಿಣಾಮ ಬೀರಿದೆ.

ಮೈಸೂರು, ಮಂಡ್ಯ, ಚಾಮರಾಜನಗರ, ಕೊಳ್ಳೆಗಾಲ, ಗೌರಿಬಿದನೂರು ಮತ್ತಿತರ ಭಾಗಗಳಿಂದ ಪ್ರತಿದಿನ 600ರಿಂದ 650 ಟನ್‌ ಬಾಳೆ ಹಣ್ಣು ಪೂರೈಕೆ ಆಗುತ್ತಿದೆ. ಕೆಲವು ವಿಧದ ಬಾಳೆಹಣ್ಣುಗಳು ನೆರೆಯ ತಮಿಳುನಾಡು ಮತ್ತು ಆಂಧ್ರ ಪ್ರದೇಶದಿಂದಲೂ ಸರಬರಾಜು ಆಗುತ್ತಿವೆ. ಬಿನ್ನಿ ಮಿಲ್‌ ಬಾಳೆಹಣ್ಣು ಮಾರುಕಟ್ಟೆಗೆ ಪ್ರತಿದಿನ ಸುಮಾರು 250 ಟನ್‌ ಪೂರೈಕೆಯಾಗುತ್ತಿದೆ.

‘ಏಲಕ್ಕಿ ಬಾಳೆಹಣ್ಣಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಆದರೆ, ಈ ಬಾರಿ ವರಮಹಾಲಕ್ಷ್ಮಿ ಹಬ್ಬದ ಸಂದರ್ಭದ ಹೊರತುಪಡಿಸಿದರೆ ಉಳಿದ ದಿನಗಳಲ್ಲಿ ಈ ಹಣ್ಣಿನ ದರ ₹ 30 ದಾಟಿಲ್ಲ’ ಎಂದು ಬಾಳೆಹಣ್ಣು ಮಾರಾಟಗಾರರ ಸಂಘದ ಅಧ್ಯಕ್ಷ ಕೆ. ಜಿ. ಪುರುಷೋತ್ತಮ ತಿಳಿಸಿದರು.

‘1976ರಿಂದಲೂ ಬಾಳೆಹಣ್ಣು ವ್ಯಾಪಾರ ನೋಡಿಕೊಂಡು ಬಂದಿದ್ದೇನೆ. ಅಂದಿನ ಬೆಲೆಗೆ ಈಗಿನ ಬೆಲೆಯನ್ನು ಹೋಲಿಸಿ ನೋಡಲು ಸಾಧ್ಯ ಇಲ್ಲ. ಸದ್ಯ ಸಗಟು ಮಾರುಕಟ್ಟೆಯಲ್ಲಿ ಪಚ್ಚ ಬಾಳೆಹಣ್ಣು ಕಿಲೋಗೆ ₹ 20ರಂತೆ ಮಾರಾಟ ಆಗುತ್ತಿತ್ತು. ಈಗ ₹ 8ರಿಂದ 12ಕ್ಕೆ ಇಳಿದಿದೆ. ಏಲಕ್ಕಿ ಬಾಳೆಹಣ್ಣಿನ ದರ ₹ 45–50ರಿಂದ‌ ₹ 25–30ರ ಮಧ್ಯೆ ಇದೆ. ನೇಂದ್ರ ಬಾಳೆಹಣ್ಣಿಗೆ ಕಿಲೋಗೆ ₹ 30ರಿಂದ ₹ 40ರ ಮಧ್ಯೆ ಬೆಲೆ ಇದೆ. ಇಷ್ಟೊಂದು ದರ ಕುಸಿತ ಹಿಂದೆಂದೂ ಆಗಿಲ್ಲ’ ಎಂದೂ ಅವರು ಹೇಳಿದರು.

‘ಕಳೆದ ಎರಡು ವರ್ಷಗಳಲ್ಲಿ ಬಾಳೆಹಣ್ಣು ಮಾರಾಟ ಪ್ರಮಾಣ ಕೂಡಾ ಗಣನೀಯವಾಗಿ ಕುಸಿದಿದೆ. ಕೆ.ಆರ್‌. ಮಾರ್ಕೆಟ್‌ನಲ್ಲಿ ಹಿಂದೆ 50 ಬಾಳೆ ಹಣ್ಣು ಮಾರಾಟಗಾರರಿದ್ದರು. ಈಗ ಕೇವಲ 30 ಮಂದಿ ಇದ್ದೇವೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ನಮಗೆಲ್ಲರಿಗೂ
ಕಷ್ಟ ಆಗಲಿದೆ’ ಎಂದು ಕೆ. ಆರ್‌. ಮಾರ್ಕೆಟ್‌ನ ಬಾಳೆಹಣ್ಣು ವ್ಯಾಪಾರಿ ಹೇಳಿದರು.

‘ಬೆಲೆ ಕುಸಿತದ ಮಧ್ಯೆಯೂ ನೆರೆ ರಾಜ್ಯಗಳಿಂದ ಭಾರಿ ಪ್ರಮಾಣದಲ್ಲಿ ಬಾಳೆಹಣ್ಣು ನಗರಕ್ಕೆ ಬರುತ್ತಿದೆ. ಸದ್ಯ ಯಾವುದೇ ಹಬ್ಬ ಇಲ್ಲದೇ ಇರುವುದರಿಂದ ಬೇಡಿಕೆ ಕುಸಿದಿದೆ. ಅಲ್ಲದೆ, ಬಾಳೆಹಣ್ಣು ತಿನ್ನುವುದರಿಂದ ಶೀತ ಆಗುತ್ತದೆ ಎನ್ನುವ ಭಾವನೆ ಜನರಲ್ಲಿದೆ’ ಎಂದು ತೋಟಗಾರಿಕಾ ಇಲಾಖೆಯ ಹೆಚ್ಚುವರಿ ನಿರ್ದೇಶಕ (ಹಣ್ಣುಗಳು) ಕೆ. ದುಂಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT