ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಸ್ತು ನೆಪ: ಮನೆ ಮಾರಿಸಿ ₹ 3.50 ಕೋಟಿ ವಂಚನೆ

ಠಾಣೆಗೆ ದೂರು ನೀಡಿದ್ದ ವೃದ್ಧೆ * ಮೂವರು ಮಹಿಳೆಯರು ಸೇರಿ ನಾಲ್ವರು ಬಂಧನ
Published 18 ಆಗಸ್ಟ್ 2023, 0:30 IST
Last Updated 18 ಆಗಸ್ಟ್ 2023, 0:30 IST
ಅಕ್ಷರ ಗಾತ್ರ

ಬೆಂಗಳೂರು: ‘ವಾಸ್ತು ಸರಿ ಇಲ್ಲ’ ಎಂಬುದಾಗಿ ಹೇಳಿ ಮನೆ ಮಾರಿಸಿ ₹ 3.50 ಕೋಟಿ ವಂಚನೆ ಮಾಡಿದ್ದ ಆರೋಪದಡಿ ಮೂವರು ಮಹಿಳೆಯರು ಸೇರಿ ನಾಲ್ವರನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಅಪೂರ್ವಾ ಯಾದವ್, ಅರುಂಧತಿ, ವಿಶಾಲಾ ಹಾಗೂ ರಾಕೇಶ್ ಬಂಧಿತರು. ನಾಲ್ವರು ಸೇರಿಕೊಂಡು ಒಳಸಂಚು ರೂಪಿಸಿ ವೃದ್ಧೆ ಶಾಂತಾ ಅವರ ಹಣ ತಮ್ಮದಾಗಿಸಿಕೊಂಡಿದ್ದರು. ವೃದ್ಧೆ ನೀಡಿದ್ದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಎಂಬಿಎ ಪದವೀಧರರಾದ ಅಪೂರ್ವಾ ಹಾಗೂ ಅರುಂಧತಿ, ಇಬ್ಬರೂ ಬ್ಯಾಂಕ್ ಉದ್ಯೋಗಿಗಳು. ಅಪೂರ್ವಾ ಅವರ ತಾಯಿ ವಿಶಾಲಾ ಹಾಗೂ ಅರುಂಧತಿ ಪತಿ ರಾಕೇಶ್‌ ಕೃತ್ಯಕ್ಕೆ ಸಹಕಾರ ನೀಡಿದ್ದರು’ ಎಂದರು.

ಬ್ಯಾಂಕ್‌ಗೆ ಹೋಗಿ ಬರುತ್ತಿದ್ದ ವೃದ್ಧೆ: ‘ವೃದ್ಧೆ ಶಾಂತಾ ಅವರ ಪತಿ ತೀರಿಕೊಂಡಿದ್ದಾರೆ. ಪದ್ಮನಾಭನಗರದಲ್ಲಿ ಮಗಳ ಜೊತೆ ವೃದ್ಧೆ ವಾಸವಿದ್ದರು. ಹಣ ಪಡೆಯುವುದಕ್ಕಾಗಿ ಆಗಾಗ ಬ್ಯಾಂಕ್‌ಗೆ ಹೋಗಿ ಬರುತ್ತಿದ್ದರು. ಇದೇ ವೇಳೆಯೇ ಆರೋಪಿಗಳು, ವೃದ್ಧೆಯನ್ನು ಪರಿಚಯ ಮಾಡಿಕೊಂಡಿದ್ದರು’ ಎಂದು ಪೊಲೀಸರು ತಿಳಿಸಿದರು.

‘ವೃದ್ಧೆ ಜೊತೆ ಹೆಚ್ಚು ಮಾತನಾಡಲಾರಂಭಿಸಿದ್ದ ಆರೋಪಿಗಳು, ವಿಮೆ ಮಾಡಿಸಿಕೊಡುವುದಾಗಿ ಹೇಳಿ ಕೆಲ ತಿಂಗಳ ಹಿಂದೆಯಷ್ಟೇ ಮನೆಗೆ ಹೋಗಿದ್ದರು. ಮನೆ ನೋಡಿದ್ದ ಆರೋಪಿಗಳು, ‘ನಿಮ್ಮ ಮನೆಯ ವಾಸ್ತು ಸರಿ ಇಲ್ಲ. ಈ ಮನೆಯಲ್ಲಿ ಇದ್ದರೆ, ನಿಮಗೆ ಸಾಕಷ್ಟು ತೊಂದರೆಗಳು ಬರುತ್ತವೆ. ಈ ಮನೆ ಮಾರಿ, ಬೇರೆ ಮನೆ ಖರೀದಿಸಿ. ಬೇಕಾದರೆ, ನಾವೇ ಖರೀದಿದಾರರನ್ನು ಹುಡುಕಿಕೊಡುತ್ತೇವೆ’ ಎಂದು ಹೇಳಿದ್ದರು. ಅದನ್ನು ನಂಬಿದ್ದ ವೃದ್ಧೆ, ಮನೆ ಮಾರಲು ತೀರ್ಮಾನಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಖರೀದಿದಾರರನ್ನು ಕರೆತಂದಿದ್ದ ಆರೋಪಿಗಳು, ₹ 3.50 ಕೋಟಿಗೆ ಮನೆ ಮಾರಾಟ ಮಾಡಿಸಿದ್ದರು. ಹಣವೆಲ್ಲವೂ ವೃದ್ಧೆ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿತ್ತು. ಅದರಲ್ಲಿ ಸ್ವಲ್ವ ಹಣವನ್ನು ವೃದ್ಧೆ ನಿಶ್ಚಿತ ಠೇವಣಿ (ಎಫ್‌.ಡಿ) ಇರಿಸಿದ್ದರು. ಪತಿಯ ಹೆಸರಿನಲ್ಲಿರುವ ಷೇರು ಹಣ ಪಡೆಯಬೇಕೆಂದು ಹೇಳಿ ವೃದ್ಧೆಯ ಸಹಿ ಪಡೆದಿದ್ದ ಆರೋಪಿಗಳು, ನಿಶ್ಚಿತ ಠೇವಣಿ ಖಾತೆಗಳನ್ನು ಬಂದ್ ಮಾಡಿಸಿದ್ದರು. ಇದಾದ ನಂತರ, ವೃದ್ಧೆಯಿಂದ ಖಾಲಿ ಚೆಕ್‌ಗಳಿಗೆ ಸಹಿ ಪಡೆದುಕೊಂಡಿದ್ದರು. ಹಂತ ಹಂತವಾಗಿ ₹ 3.50 ಕೋಟಿಯನ್ನು ವರ್ಗಾಯಿಸಿಕೊಂಡಿದ್ದರು’ ಎಂದು ತಿಳಿಸಿದರು.

ಸಂಬಂಧಿಕರ ಖಾತೆಗಳಿಗೆ ಹಣ: ‘ವೃದ್ಧೆ ಖಾತೆಯಲ್ಲಿದ್ದ ಹಣವನ್ನು ಆರೋಪಿಗಳು, ತಮ್ಮ ಹಾಗೂ ಸಂಬಂಧಿಕರ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದರು. ಕೆಲ ಸಂಬಂಧಿಕರು, ತಮ್ಮ ಸಾಲಗಳನ್ನು ತೀರಿಸಿಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.

‘ಅಪೂರ್ವಾ ಅವರಿಗೆ ಸ್ನೇಹಿತನಿದ್ದು, ಆತನ ಖಾತೆಗೂ ₹ 2 ಲಕ್ಷ ವರ್ಗಾವಣೆ ಆಗಿದೆ. ವಂಚನೆ ಹಣ ಪಡೆದಿದ್ದ ಸಂಬಂಧಿಕರು, ತಮ್ಮ ಸಾಲುಗಳನ್ನು ತೀರಿಸಿದ್ದಾರೆ. ಸದ್ಯ ಬಂಧಿತ ಆರೋಪಿಗಳಿಂದ ₹ 1.75 ಕೋಟಿ ಜಪ್ತಿ ಮಾಡಲಾಗಿದೆ. ಮರುಪಾವತಿ ಮಾಡಿರುವ ಸಾಲದ ಹಣವನ್ನು ವಾಪಸು ನೀಡುವಂತೆ ಬ್ಯಾಂಕ್‌ಗೆ ಪತ್ರ ಬರೆಯಲಾಗಿದೆ’ ಎಂದು ತಿಳಿಸಿದರು.

ವಿಶಾಲಾ
ವಿಶಾಲಾ
ರಾಕೇಶ್
ರಾಕೇಶ್
ಅರುಂಧತಿ
ಅರುಂಧತಿ

ಬ್ಯಾಂಕ್ ಉದ್ಯೋಗಿಗಳಿಂದಲೇ ಸಂಚು ಮಗಳ ಜೊತೆ ವಾಸವಿದ್ದ ವೃದ್ಧೆ ₹ 1.75 ಕೋಟಿ ಜಪ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT