ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಗ್ರಾಹಕರ ಸೋಗಿನಲ್ಲಿ ಕಳ್ಳತನ: ಮಹಿಳೆಯರು ಸೆರೆ

Published 2 ಸೆಪ್ಟೆಂಬರ್ 2023, 23:42 IST
Last Updated 2 ಸೆಪ್ಟೆಂಬರ್ 2023, 23:42 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಆರೋಪದಡಿ ಇಬ್ಬರು ಮಹಿಳೆಯರನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ತಮಿಳುನಾಡಿನ ಲಕ್ಷ್ಮಿ ಪೆರುಮಾಳ್ ಹಾಗೂ ಕೃಷ್ಣವೇಣಿ ಬಂಧಿತರು. ಠಾಣೆ ವ್ಯಾಪ್ತಿಯ ಚಿನ್ನಾಭರಣ ಮಳಿಗೆಯೊಂದರಲ್ಲಿ ಎರಡು ತಿಂಗಳ ಹಿಂದೆಯಷ್ಟೇ ಕಳ್ಳತನವಾಗಿತ್ತು. ಮಾಲೀಕರು ನೀಡಿದ್ದ ದೂರಿನಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ, ಇಬ್ಬರೂ ಸಿಕ್ಕಿಬಿದ್ದರು’ ಎಂದು ಪೊಲೀಸರು ಹೇಳಿದರು.

‘ಲಕ್ಷ್ಮಿ ಹಾಗೂ ಕೃಷ್ಣವೇಣಿ, ಒಂದೇ ಊರಿನವರು. ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ ಇವರಿಬ್ಬರು, ಆಗಾಗ ಬೆಂಗಳೂರಿಗೆ ಬಂದು ಕೃತ್ಯ ಎಸಗಿ ಪರಾರಿಯಾಗುತ್ತಿದ್ದರು. ಇವರಿಬ್ಬರ ವಿರುದ್ಧ ನಗರದ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುವ ಮಾಹಿತಿ ಇದೆ’ ಎಂದು ತಿಳಿಸಿದರು.

ನಕಲಿ ಚಿನ್ನ ಬಳಕೆ: ‘ಲಕ್ಷ್ಮಿ ಹಾಗೂ ಕೃಷ್ಣವೇಣಿ, ನಗರದಲ್ಲಿ ಸುತ್ತಾಡುತ್ತಿದ್ದರು. ಗ್ರಾಹಕರು ಹೆಚ್ಚಿರುತ್ತಿದ್ದ ಮಳಿಗೆಗಳನ್ನು ಗುರುತಿಸುತ್ತಿದ್ದರು. ನಕಲಿ ಚಿನ್ನಾಭರಣ ಸಮೇತ ಮಳಿಗೆಗೆ ಹೋಗುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ನಕಲಿ ಚಿನ್ನವನ್ನೇ ಅಸಲಿ ಎಂಬುದಾಗಿ ಮಳಿಗೆ ಕೆಲಸಗಾರರಿಗೆ ತೋರಿಸುತ್ತಿದ್ದರು. ಅದೇ ಮಾದರಿಯ ಚಿನ್ನಾಭರಣ ತೋರಿಸುವಂತೆ ಕೇಳುತ್ತಿದ್ದರು. ಅದನ್ನು ನಂಬುತ್ತಿದ್ದ ಕೆಲಸಗಾರ, ಅಸಲಿ ಚಿನ್ನಾಭರಣ ತೋರಿಸುತ್ತಿದ್ದ. ಅದೇ ಸಂದರ್ಭದಲ್ಲಿ ಆರೋಪಿಗಳು, ಚಿನ್ನಾಭರಣ ಅದಲು–ಬದಲು ಮಾಡುತ್ತಿದ್ದರು. ಅಸಲಿ ಚಿನ್ನಾಭರಣ ಸಮೇತ ಮಳಿಗೆಯಿಂದ ಹೊರಟು ಹೋಗುತ್ತಿದ್ದರು’ ಎಂದು ತಿಳಿಸಿದರು.

‘ಬನಶಂಕರಿಯ ಮಳಿಗೆಯಲ್ಲಿ ಆರೋಪಿಗಳು ಕೃತ್ಯ ಎಸಗಿದ್ದ ದೃಶ್ಯ, ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದೇ ಸುಳಿವಿನಿಂದ ಅವರಿಬ್ಬರು ಸಿಕ್ಕಿಬಿದ್ದರು’ ಎಂದು ಹೇಳಿದರು.

ದೇವಸ್ಥಾನ, ಕಲ್ಯಾಣ ಮಂಟಪಗಳಲ್ಲಿ ಕೃತ್ಯ; ‘ನಗರದ ದೇವಸ್ಥಾನ ಹಾಗೂ ಮದುವೆ–ಇತರೆ ಸಮಾರಂಭಗಳು ನಡೆಯುತ್ತಿದ್ದ ಕಲ್ಯಾಣ ಮಂಟಪಗಳಲ್ಲೂ ಆರೋಪಿಗಳು ಕಳ್ಳತನ ಮಾಡಿರುವ ಮಾಹಿತಿ ಇದೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT