ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜು ಸಂಯೋಜನೆ, ಮನ್ನಣೆ ಪ್ರಕ್ರಿಯೆ ಡಿಜಿಟಲೀಕರಣ

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ದಿಟ್ಟ ಹೆಜ್ಜೆ
Last Updated 14 ಮಾರ್ಚ್ 2019, 20:20 IST
ಅಕ್ಷರ ಗಾತ್ರ

ಬೆಂಗಳೂರು: ಪದವಿ ಕಾಲೇಜುಗಳ ಸಂಯೋಜನೆ ಮತ್ತು ಸಂಸ್ಥೆಗಳು ಮನ್ನಣೆಗಾಗಿ ಇನ್ನು ಮುಂದೆ ‘ಸ್ಥಳೀಯ ವಿಚಾರಣಾ ಸಮಿತಿ’(ಎಲ್‌ಐಸಿ) ಮುಂದೆ ಕೈ ಕಟ್ಟಿ ನಿಲ್ಲಬೇಕಾಗಿಲ್ಲ. ಸ್ವಯಂ ಆಸ್ತಿ ತೆರಿಗೆ ಘೋಷಣೆ ಮಾದರಿಯಲ್ಲೇ, ಕಾಲೇಜುಗಳು ಆನ್‌ಲೈನ್‌ ಮೂಲಕವೇ ನಿಗದಿತ ಶುಲ್ಕ ಪಾವತಿಸಿ ವಿಶ್ವವಿದ್ಯಾಲಯ ಬಯಸುವ ಎಲ್ಲ ಮಾಹಿತಿಗಳನ್ನು ತುಂಬಿದರೆ ಸಾಕು.

‘ಸ್ಥಳೀಯ ವಿಚಾರಣಾ ಸಮಿತಿ’ ಪ್ರಕ್ರಿಯೆಯನ್ನು ಮೊದಲ ಬಾರಿಗೆ ಡಿಜಿಟಲೀಕರಣ ಮಾಡಿರುವ ಕೀರ್ತಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯಕ್ಕೆ (ಬಿಸಿಯು) ಸಲ್ಲುತ್ತದೆ. ಇದೇ ಶೈಕ್ಷಣಿಕ ವರ್ಷದಿಂದಲೇ ಮನ್ನಣೆಗಾಗಿ ಸಂಸ್ಥೆಗಳು ಆನ್‌ಲೈನ್‌ ಬಳಸಬಹುದಾಗಿದ್ದು, ಇದಕ್ಕೆ ಅಕಾಡೆಮಿಕ್‌ ಕೌನ್ಸಿಲ್‌ ಮತ್ತು ಸಿಂಡಿಕೇಟ್‌ ಒಪ್ಪಿಗೆ ನೀಡಿವೆ.

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಈ ಕ್ರಮ ದೇಶದಲ್ಲೇ ಪ್ರಥಮ ಎಂದು ಕುಲಪತಿ ಪ್ರೊ.ಎಸ್‌.ಜಾಫೆಟ್‌ ಎಂದು ‘ಪ್ರಜಾವಾಣಿ’ಗೆ ವಿವರಿಸಿದರು.

ಮುಖ್ಯವಾಗಿ, ಕಾಲೇಜು ಅಥವಾ ಶಿಕ್ಷಣ ಸಂಸ್ಥೆಯ ಆವರಣದ ವ್ಯಾಪ್ತಿ, ಕಟ್ಟಡ, ಮೂಲಸೌಕರ್ಯ, ವಿದ್ಯಾರ್ಥಿಗಳ ಸಂಖ್ಯೆ, ಕೋರ್ಸ್‌ಗಳು, ಪಠ್ಯ ಇತ್ಯಾದಿಗಳ ಕುರಿತ ಸುಮಾರು 350 ಮಾನದಂಡಗಳನ್ನು ಭರ್ತಿ ಮಾಡಬೇಕು. ಈ ಆನ್‌ಲೈನ್‌ನ ಸಾಫ್ಟ್‌ವೇರ್ ಅನ್ನು ಬೆಂಗಳೂರು ವಿಶ್ವವಿದ್ಯಾಲಯ, ನ್ಯಾಕ್‌ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಮಾರ್ಗಸೂಚಿಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ ಎಂದು ಜಾಫೆಟ್‌ ಹೇಳಿದರು.

ಕಾಲೇಜುಗಳ ಸಂಯೋಜನೆ ಮತ್ತು ಸಂಸ್ಥೆಗಳ ಮನ್ನಣೆಗಾಗಿ ಮಾಹಿತಿಯನ್ನು ಆನ್‌ಲೈನ್‌ ಮೂಲಕ ಸ್ವಯಂ ಘೋಷಣೆ ಮಾಡಿದ (ಎಂಟ್ರಿ) ಬಳಿಕ, ಸಾಫ್ಟ್‌ವೇರ್‌ ಸ್ವಯಂ ಆಗಿ ಈ ಮಾಹಿತಿಯನ್ನು ಆಧರಿಸಿ ಅಂಕಗಳನ್ನು ನೀಡುತ್ತದೆ. ಒಮ್ಮೆ ಮಾಹಿತಿಯನ್ನು ನೀಡಿ ಫ್ರೀಝ್‌ ಮಾಡಿದ ಬಳಿಕ ಮಾಹಿತಿಯನ್ನು ಬದಲಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ ಎಂದು ವಿವರಿಸಿದರು.

ಇದರ ಆಧಾರದ ಮೇಲೆ ಸ್ಥಳೀಯ ವಿಚಾರಣಾ ಸಮಿತಿ(ಎಲ್‌ಐಸಿ) ಕಾಲೇಜುಗಳಿಗೆ ಭೇಟಿ ನೀಡಿ, ಸಲ್ಲಿಸಿರುವ ಮಾಹಿತಿ ಸರಿ ಇದೆಯೇ ಎಂಬುದನ್ನು ಪರಿಶೀಲಿಸುತ್ತದೆ. ಅಲ್ಲದೆ, ಸ್ಥಳದಲ್ಲಿಯೇ ಆನ್‌ಲೈನ್‌ ಮೂಲಕ ಮಾಹಿತಿಯನ್ನು ತಾಳೆ ಹಾಕಿ, ಎಲ್‌ಐಸಿ ಅಂಕವನ್ನು ನೀಡುತ್ತದೆ. ಅದನ್ನು ಸಂಬಂಧಿಸಿದ ಕಾಲೇಜುಗಳು ಪ್ರಾಂಶುಪಾಲರಿಗೆ ತೋರಿಸಿ, ಅವರಿಂದ ಸಹಿ ಹಾಕಿಸಿಕೊಂಡು ಮೊಹರು ಹಾಕಿದ ಕವರ್‌ನಲ್ಲಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಬೇಕಾಗುತ್ತದೆ ಎಂದರು.

ಆನ್‌ಲೈನ್‌ನಲ್ಲಿ ಭರ್ತಿ ಮಾಡಿದ ಮಾಹಿತಿ ಮತ್ತು ವಿಚಾರಣಾ ಸಮಿತಿ ಪರಿಶೀಲನೆ ನಡೆಸಿ ಸಲ್ಲಿಸಿದ ಮಾಹಿತಿಯನ್ನು ಆಧರಿಸಿ ಮನ್ನಣೆ ನೀಡಬೇಕೊ ಇಲ್ಲವೋ ಎಂಬ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಜಾಫೆಟ್‌ ಹೇಳಿದರು.

‘ಈ ಕ್ರಮ ಹೆಚ್ಚು ಪಾರದರ್ಶಕವಾಗಿರುತ್ತದೆ. ಭ್ರಷ್ಟಾಚಾರ ಆರೋಪಕ್ಕೆ ಕಾರಣವಾಗುವುದಿಲ್ಲ. ವಿಶ್ವವಿದ್ಯಾಲಯದ ವಿಶ್ವಾಸಾರ್ಹತೆಯೂ ಹೆಚ್ಚಲು ಸಹಾಯಕವಾಗುತ್ತದೆ. ನಮ್ಮ ವಿಶ್ವವಿದ್ಯಾಲಯ ಸ್ಥಾಪನೆಯಾಗಿ ಒಂದು ವರ್ಷವಾಗಿದೆ. ಈ ಅವಧಿಯಲ್ಲಿ ಸಂಯೋಜನೆ ಮತ್ತು ಮನ್ನಣೆಗಾಗಿ ಬಂದಿರುವ ದಾಖಲೆಗಳೇ ಒಂದು ಕೋಣೆ ಭರ್ತಿ ಆಗಿದೆ. ಇನ್ನು ಮುಂದೆ ಇದು ತಪ್ಪಲಿದೆ’ ಎಂದರು.

ಆನ್‌ಲೈನ್‌ ಆಧರಿಸಿ ಕ್ರಮ: ಮುಂದಿನ ವರ್ಷದಿಂದ ಎಲ್‌ಐಸಿ ಸ್ಥಳ ಪರಿಶೀಲನೆ ನಡೆಸುವುದಿಲ್ಲ. ಬದಲಿಗೆ ತಂತ್ರಜ್ಞಾನದ ಮೂಲಕವೇ ಮಾಹಿತಿ ಸಂಗ್ರಹಿಸಿ, ಆನ್‌ಲೈನ್‌ ಆಧಾರಿತ ವರದಿಯ ಮೇರೆಗೆ ಮಾನ್ಯತೆ ನೀಡಲಾಗುತ್ತದೆ. ಯಾವುದೇ ಹಂತದಲ್ಲೂ ಮಾನವ ಹಸ್ತಕ್ಷೇಪಕ್ಕೆ ಅವಕಾಶ ಇರುವುದಿಲ್ಲ. ಸಂಪೂರ್ಣ ಮೆರಿಟ್‌ ಆಧರಿಸಿಯೇ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಜಾಫೆಟ್‌ ವಿವರಿಸಿದರು.

ಮನ್ನಣೆಗೆ ಏನೆಲ್ಲ ಅಗತ್ಯ
* ಕಾಲೇಜು ಸ್ಥಾಪನೆಯ ಸ್ಥಳ, ಸ್ಥಳೀಯ ಅವಶ್ಯಕತೆ ಪೂರೈಸುವ ಸಾಮರ್ಥ್ಯ ಹೊಂದಿದೆಯೇ. ಆಡಳಿತ ಮಂಡಳಿ ರಚಿಸಲಾಗಿದೆಯೆ ಮತ್ತು ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಕೋರ್ಸ್‌ಗೆ ಅನುಗುಣವಾಗಿ ಬೋಧಕ ಸಿಬ್ಬಂದಿಯನ್ನು ನೇಮಿಸಲಾಗಿದೆಯೇ ಎಂಬ ಪರಿಶೀಲನೆ

* ಕಾಲೇಜು ನಡೆಸಲು ಕಟ್ಟಡವನ್ನು ಹೊಂದಿರಬೇಕು. ಶಿಕ್ಷಣಮ ಬೋಧನೆ ಅಥವಾ ತರಬೇತಿಗೆ ತಕ್ಕ ಏರ್ಪಾಡು ಆಗಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು.

* ವಿಜ್ಞಾನದ ವಿದ್ಯಾರ್ಥಿಗಳಿಗೆ ಸೂಕ್ತ ಪ್ರಯೋಗಾಲಯ, ಆಟಕ್ಕೆ ಮೈದಾನ, ವಿದ್ಯಾರ್ಥಿಗಳಿಗೆ (ವಸತಿಯುಕ್ತವಾಗಿದ್ದರೆ) ಹಾಸ್ಟೆಲ್‌ ವ್ಯವಸ್ಥೆ ಮಾಡಲಾಗಿದೆಯೇ ಎಂಬುದನ್ನು ಖಚಿತಪಡಿಸಬೇಕು.

*
ಎಲ್‌ಐಸಿ ದೋಷ ಪತ್ತೆ ಸಮಿತಿಯಲ್ಲ, ಸತ್ಯ ಶೋಧನಾ ತಂಡ.
-ಪ್ರೊ.ಎಸ್‌.ಜಾಫೆಟ್‌, ಕುಲಪತಿ, ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ


***
‘ಜೈವಿಕ ಉದ್ಯಾನ ನಿರ್ಮಾಣ’
ಬೆಂಗಳೂರು:
‘ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಸಸ್ಯಶಾಸ್ತ್ರ ವಿಭಾಗಕ್ಕೆ ನೀಡಿರುವ 50 ಎಕರೆ ಭೂಮಿಯಲ್ಲಿ ಜೈವಿಕ ಉದ್ಯಾನ, ಗಾಜಿನ ಮನೆ ಹಾಗೂ ಸಭಾಂಗಣವನ್ನು ನಿರ್ಮಿಸಲಾಗುತ್ತದೆ’ ಎಂದು ಕುಲಪತಿ ಕೆ.ಆರ್‌.ವೇಣುಗೋಪಾಲ್‌ ಹೇಳಿದರು.

ಜ್ಞಾನಭಾರತಿ ಆವರಣದ ಸಸ್ಯಶಾಸ್ತ್ರ ವಿಭಾಗದಲ್ಲಿ ಶತಮಾನೋತ್ಸವ ಅಂಗವಾಗಿ ಆಯೋಜಿಸಿದ್ದ ‘ಉಪನ್ಯಾಸ ಸರಣಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‌

‘ಸಸ್ಯಶಾಸ್ತ್ರ ವಿಭಾಗ ಈಚೆಗೆ ಶತಮಾನೋತ್ಸವ ಆಚರಿಸಿಕೊಂಡ ಅಂಗವಾಗಿ ಎಂಎಸ್ಸಿ ಔಷಧ ಸಸ್ಯಗಳ ಅಧ್ಯಯನ ವಿಭಾಗವನ್ನು ಆರಂಭಿಸಲಿದ್ದೇವೆ. ಇವುಗಳ ನಿರ್ಮಾಣಕ್ಕೆ ₹ 2 ಕೋಟಿ ವೆಚ್ಚವನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ’ ಎಂದರು.

ಕುಲಸಚಿವ ಬಿ.ಕೆ.ರವಿ, ‘ಈ ವಿಭಾಗದ ಹಳೆಯ ವಿದ್ಯಾರ್ಥಿಗಳು ಇವತ್ತು ಉತ್ತಮ ಹುದ್ದೆಗಳಲ್ಲಿದ್ದಾರೆ. ಇದೊಂದು ಬಲಿಷ್ಠವಾದ ವಿಭಾಗ’ ಎಂದರು. ವಿವಿಯ ವಿಶ್ರಾಂತ ಕುಲಪತಿ ಪ್ರೊ.ಎನ್‌.ಆರ್‌.ಶೆಟ್ಟಿ ಅವರು ಕಾರ್ಯ ಕ್ರಮ ಉದ್ಘಾಟಿಸಿದರು. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವಿ.ಶಿವರಾಂ, ಪ್ರೊ.ಎಚ್‌.ಆರ್‌.ರವೀಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT