ಭಾನುವಾರ, ಜನವರಿ 16, 2022
28 °C

ರಾಜಧಾನಿಯಲ್ಲಿ ಧಾರಾಕಾರ ಮಳೆ: ತುಂಬಿ‌ ಹರಿದ ರಾಜಕಾಲುವೆಗಳು: ಮನೆಗೆ ನುಗ್ಗಿದ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ನಗರದಲ್ಲಿ ಭಾನುವಾರ ರಾತ್ರಿ ಧಾರಾಕಾರ ಮಳೆ ಆಗಿದ್ದು, ರಾಜಕಾಲುವೆಗಳು ತುಂಬಿ ಹರಿದು ಮನೆಗಳಿಗೆ ನೀರು ನುಗ್ಗಿದೆ.

ಯಲಹಂಕ, ವಿದ್ಯಾರಣ್ಯಪುರ, ಸಿಂಗಾಪುರ, ಕೋಗಿಲು ಕ್ರಾಸ್ ಹಾಗೂ ಸುತ್ತಮುತ್ತ ಜೋರು ಮಳೆ ಆಗಿದೆ. ಅಲ್ಲೆಲ್ಲ ನೀರು, ರಸ್ತೆಯಲ್ಲಿ ಹೊಳೆಯಂತೆ ಹರಿಯಿತು. ಜೊತೆಗೆ ಹಲವು‌ ಮನೆಗಳಿಗೆ ನೀರು‌ ನುಗ್ಗಿ, ನಿವಾಸಿಗಳು ‌ತೊಂದರೆಗೆ ಸಿಲುಕಿದ್ದರು.

ರಕ್ಷಣಾ ಕಾರ್ಯ; ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್ ಸಮುಚ್ಚಯ ಜಲ ದಿಗ್ಬಂಧನಕ್ಕೆ ಒಳಪಟ್ಟಿದೆ. ನೀರು‌ ಹೊರಹಾಕುವ ಹಾಗೂ‌ ನಿವಾಸಿಗಳನ್ನು ತೆರವು‌ ಮಾಡುವ ಕೆಲಸ‌ ನಡೆದಿದೆ.

ಅಪಾರ್ಟ್‌ಮೆಂಟ್ ನೆಲ ಮಹಡಿಯಲ್ಲಿ ತುಂಬಿದ್ದ ನೀರನ್ನು ಹೊರ ಹಾಕಿಸುವ ಕಾರ್ಯ ಮುಂದುವರಿದಿದೆ.

ಮಳೆ‌ ನೀರು ನಿಂತಿದ್ದರಿಂದ  ನೂರಾರು ಜನರು ಮನೆಗಳಿಂದ ಹೊರ ಬರಲಾದೇ, ಹೊರಗಿದ್ದವರು ಮನೆಯೊಳಗೆ ಹೋಗದೇ ತಡ ರಾತ್ರಿವರೆಗೆ ಹೊರಗೇ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಶಾಸಕ ಎಸ್.ಆರ್.ವಿಶ್ವನಾಥ್ ಅವರು ಪರಿಹಾರ ಕಾರ್ಯದ ಉಸ್ತುವಾರಿ ನೋಡಿಕೊಂಡರು.

ವಿಪತ್ತು ಪರಿಹಾರ ತಂಡಗಳು, ಬಿಬಿಎಂಪಿ ಮತ್ತು ಇತರೆ ಸ್ವಯಂಸೇವಾ ತಂಡಗಳು ನೀರನ್ನು ಹೊರ ಹಾಕಿದವು.

ತಡ ರಾತ್ರಿ ಸುಮಾರು ಮೂರು ಗಂಟೆಯ ವೇಳೆಗೆ ನೀರನ್ನು ಹೊರ ಹಾಕಿಸಿದ ನಂತರ ಅಪಾರ್ಟ್‌ಮೆಂಟ್ ಜನರು ಕೊಂಚ ನಿರಾಳರಾದರು. ಜಲಾವೃತಗೊಂಡಿದ್ದ ಅಂಬೇಡ್ಕರ್ ನಗರದ ವಿವಿಧ ಬಡಾವಣೆಗಳಿಗೂ ನೀರು ನುಗ್ಗಿದೆ. ಯಲಹಂಕ ಕೆರೆ ತುಂಬಿ ಹರಿಯುತ್ತಿದೆ.

'ಇತ್ತೀಚಿನ ದಿನಗಳಲ್ಲಿ ದಾಖಲೆ ಎನ್ನಬಹುದಾದ 106 ಮಿಲಿ ಮೀಟರ್ ನಷ್ಟು ಮಳೆ ಭಾನುವಾರ ಸುರಿದಿದೆ ಇದರಿಂದಾಗಿ ತಗ್ಗು ಪ್ರದೇಶಗಳು ಮತ್ತು ಕೆಲವು ಅಪಾರ್ಟ್‌ಮೆಂಟ್ ಬೇಸ್‌ಮೆಂಟ್‌ಗಳಲ್ಲಿ ನೀರು ತುಂಬಿ ಜನರು ಜಲದಿಗ್ಬಂಧನಕ್ಕೆ ಒಳಗಾಗಿದ್ದರು. ಸಂಕಷ್ಟಕ್ಕೆ ಒಳಗಾಗಿರುವ ಜನ ರಕ್ಷಣೆ ಮತ್ತು ಪರಿಹಾರಕ್ಕೆ ಕ್ರಮ ಕೈಗೊಂಡಿದ್ದೇವೆ ಎಂದು ಶಾಸಕ ವಿಶ್ವನಾಥ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು