ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ಆಸ್ಪತ್ರೆಗಳು ಕೋವಿಡ್‌ ಮುಕ್ತ

ಆಸ್ಪತ್ರೆಗಳಿಗೆ ದಾಖಲಾದ ಎಲ್ಲಾ ಸೋಂಕಿತರು ಚೇತರಿಕೆ
Published : 2 ಜೂನ್ 2023, 23:06 IST
Last Updated : 2 ಜೂನ್ 2023, 23:06 IST
ಫಾಲೋ ಮಾಡಿ
Comments

ಬೆಂಗಳೂರು: ನಗರದ ಆಸ್ಪತ್ರೆಗಳಲ್ಲಿ ಕೋವಿಡ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ಎಲ್ಲರೂ ಚೇತರಿಸಿಕೊಂಡಿದ್ದಾರೆ. ಹಲವು ತಿಂಗಳ ಬಳಿಕ ಇಲ್ಲಿನ ಎಲ್ಲಾ ಆಸ್ಪತ್ರೆಗಳು ಕೋವಿಡ್ ಮುಕ್ತವಾಗಿವೆ. 

ಆಸ್ಪತ್ರೆಗಳಲ್ಲಿನ ಅಷ್ಟೂ ಹಾಸಿಗೆಗಳನ್ನು ಈಗ ಕೋವಿಡೇತರ ಚಿಕಿತ್ಸೆಗಳಿಗೆ ಬಳಸಿಕೊಳ್ಳಲಾಗಿದೆ. ಕೊರೊನಾ ಸೋಂಕಿತರ ಆಸ್ಪತ್ರೆ ದಾಖಲಾತಿ ಕಳೆದ ವಾರ ಒಂದಂಕಿಗೆ ಇಳಿಕೆಯಾಗಿತ್ತು. ಸಾಮಾನ್ಯ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಲ್ಲರೂ ಗುಣಮುಖರಾಗಿದ್ದಾರೆ. ಹೊಸದಾಗಿ ಸೋಂಕಿತರಾದವರೂ ಮನೆಯಲ್ಲಿಯೇ ಚೇತರಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಈ ವರ್ಷ ಇದೇ ಮೊದಲ ಬಾರಿ ನಗರದ ಆಸ್ಪತ್ರೆಗಳಲ್ಲಿ ಕೋವಿಡ್ ದಾಖಲಾತಿ ಶೂನ್ಯಕ್ಕೆ ಇಳಿದಿದೆ. 

ಕೆಲ ದಿನಗಳ ಹಿಂದೆ ವಿಶ್ವ ಆರೋಗ್ಯ ಸಂಸ್ಥೆಯು ‘ಕೋವಿಡ್‌ಗೆ ಸಂಬಂಧಿಸಿದ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಕೊನೆಗೊಂಡಿದೆ’ ಎಂದು ಘೋಷಿಸಿತ್ತು. ಬಳಿಕ ಆಸ್ಪತ್ರೆ ಚಿಕಿತ್ಸೆ ಅ‌ಗತ್ಯ ಇರುವವರನ್ನು ಮಾತ್ರ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿತ್ತು. ಇದರಿಂದಾಗಿ ಆಸ್ಪತ್ರೆ ದಾಖಲಾತಿ ಇಳಿಮುಖ ಮಾಡಿತ್ತು. ಹೊಸ ಪ್ರಕರಣಗಳೂ ಇಳಿಕೆಯಾಗಿ, ಸಕ್ರಿಯ ಪ್ರಕರಣಗಳ ಸಂಖ್ಯೆ 50ರ ಆಸುಪಾಸಿನಲ್ಲಿದೆ. 2022ರ ಡಿಸೆಂಬರ್‌ನಲ್ಲಿ ಇಲ್ಲಿನ ಆಸ್ಪತ್ರೆಗಳು ಕೋವಿಡ್‌ ಮುಕ್ತವಾಗಿದ್ದವು. ಬಳಿಕ ಮತ್ತೆ ದಾಖಲಾತಿ ಎರಡಂಕಿ ತಲುಪಿತ್ತು.

ಕೋವಿಡ್ ಎರಡನೇ ಅಲೆಯಲ್ಲಿ ತೀವ್ರ ನಿಗಾ ಘಟಕ (ಐಸಿಯು) ಸೇರಿದಂತೆ ವಿವಿಧ ಮಾದರಿಯ ಹಾಸಿಗೆಗಳು ಸಿಗದೆ, ಸಮಸ್ಯೆ ಗಂಭೀರ ಸ್ವರೂಪ ಪಡೆದು, ಕೋವಿಡ್ ಪೀಡಿತರಿಗೆ ಆಸ್ಪತ್ರೆ ದಾಖಲಾತಿಯೇ ಸಮಸ್ಯೆಯಾಗಿತ್ತು. ಸರ್ಕಾರವು ಕೋವಿಡ್ ಮೂರನೇ ಅಲೆಯಲ್ಲಿ ಖಾಸಗಿ ಆಸ್ಪತ್ರೆಗಳ ಸಹಯೋಗದಲ್ಲಿ ಸೋಂಕಿತರಿಗೆ ಚಿಕಿತ್ಸೆ ಒದಗಿಸುವ ವ್ಯವಸ್ಥೆ ರೂಪಿಸಿತ್ತು. ಇದರಿಂದಾಗಿ ಕೋವಿಡ್‌ ಚಿಕಿತ್ಸೆಗೆ ನಗರದಲ್ಲಿ 6 ಸಾವಿರಕ್ಕೂ ಅಧಿಕ ಹಾಸಿಗೆಗಳು ದೊರೆತಿದ್ದವು. ಮೂರನೇ ಅಲೆ ಸಂದರ್ಭದಲ್ಲಿ ದಿನವೊಂದಕ್ಕೆ ವರದಿಯಾಗುತ್ತಿದ್ದ ಹೊಸ ಪ್ರಕರಣಗಳ ಸಂಖ್ಯೆಯು ನಗರದಲ್ಲಿ 30 ಸಾವಿರದವರೆಗೆ ಹೆಚ್ಚಳ ಕಂಡಿದ್ದರೂ ಸೋಂಕಿತರಲ್ಲಿ ಶೇ 98ರಷ್ಟು ಮಂದಿ ಮನೆ ಆರೈಕೆಗೆ ಒಳಗಾಗಿದ್ದರು.

99.10ರಷ್ಟು ಚೇತರಿಕೆ: ನಗರದಲ್ಲಿ ವಾರದಲ್ಲಿ 12,246 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದ್ದು, 39 ಮಂದಿ ಸೋಂಕಿತರಾಗಿರುವುದು ದೃಢಪಟ್ಟಿದೆ. ಈ ಅವಧಿಯಲ್ಲಿ 51 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ ವರದಿಯಾದ ಒಟ್ಟು ಪ್ರಕರಣಗಳಲ್ಲಿ ಚೇತರಿಕೆ ಪ್ರಮಾಣ ಶೇ 99.10ರಷ್ಟಿದೆ.

‘ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪೀಡಿತರಿದ್ದರೂ ಎಲ್ಲರು ಮನೆಯಲ್ಲಿಯೇ ಚೇತರಿಸಿಕೊಳ್ಳುತ್ತಿದ್ದಾರೆ. ಸದ್ಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಪೀಡಿತರು ಇಲ್ಲ’ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT