ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಬ್ರುವರಿ 29ರಿಂದ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ

Published 3 ಜನವರಿ 2024, 12:55 IST
Last Updated 3 ಜನವರಿ 2024, 12:55 IST
ಅಕ್ಷರ ಗಾತ್ರ

ಬೆಂಗಳೂರು: ಫೆಬ್ರುವರಿ 29ರಿಂದ ಮಾರ್ಚ್‌ 7ರವರೆಗೆ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ 15ನೇ ಆವೃತ್ತಿಯನ್ನು ನಡೆಸಲು ನಿರ್ಧರಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬುಧವಾರ ನಡೆದ ಉನ್ನತಮಟ್ಟದ ಸಭೆಯಲ್ಲಿ ಚಲನಚಿತ್ರೋತ್ಸವದ ದಿನಾಂಕವನ್ನು ಅಂತಿಮಗೊಳಿಸಲಾಯಿತು. ಫೆ.29ರಂದು ಮುಖ್ಯಮಂತ್ರಿಯವರು ಚಿತ್ರೋತ್ಸವ ಉದ್ಘಾಟಿಸಲಿದ್ದು, ಮಾರ್ಚ್‌1ರಿಂದ 7ರವರೆಗೆ ಸಿನಿಮಾಗಳ ಪ್ರದರ್ಶನ ನಡೆಯಲಿದೆ.

ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ಕೋಮುವಾದದ ವಿರುದ್ಧ, ಸಮಾನತೆ, ಲಿಂಗ ಸಮಾನತೆ, ಸೌಹಾರ್ದತೆ, ಮಾನವೀಯತೆಯ ಸಂದೇಶಗಳು ಸಮಾಜಕ್ಕೆ ತಲುಪಬೇಕು. ಬಹುತ್ವಕ್ಕೆ ಹೆಚ್ಚು ಒತ್ತು ಕೊಡುವ ರೀತಿಯಲ್ಲಿ ಚಲನಚಿತ್ರೋತ್ಸವ ನಡೆಯಲಿದೆ. ಅಂತಹ ಚಿತ್ರಗಳನ್ನು ಹೆಚ್ಚು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಅಗತ್ಯವಿರುವ ಆರ್ಥಿಕ ನೆರವನ್ನು ಸರ್ಕಾರ ಒದಗಿಸಲಿದೆ’ ಎಂದರು.

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿದೇಶಿ ಸಿನಿಮಾಗಳು, ಭಾರತದ ವಿವಿಧ ಭಾಷೆಗಳ ಸಿನಿಮಾಗಳು ಹಾಗೂ ಕನ್ನಡ ಸಿನಿಮಾಗಳ ಪ್ರದರ್ಶನ ನಡೆಯಲಿದೆ. ಮಾರ್ಚ್‌ 7ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರು ಪ್ರಶಸ್ತಿ ಪ್ರದಾನ ಮಾಡುವರು ಎಂದು ತಿಳಿಸಿದರು.

ಚಿತ್ರೋತ್ಸವದ ಸಿದ್ಧತೆಗಾಗಿ ‘ಕೋರ್‌ ಸಮಿತಿ’ ರಚಿಸಲಾಗಿದೆ. ವಿಧಾನಸೌಧದ ಮುಂಭಾಗದಲ್ಲಿ ಚಿತ್ರೋತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಮಾರೋಪ ಸಮಾರಂಭವನ್ನು ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಆಯೋಜಿಸಲಾಗುವುದು ಎಂದು ತಿಳಿಸಿದರು.

ಚಲನಚಿತ್ರೋತ್ಸವಕ್ಕೆ ₹ 1.61 ಕೋಟಿ ಅನುದಾನ ಒದಗಿಸಲಾಗಿದೆ. ಅಗತ್ಯವಿದ್ದಲ್ಲಿ ಹೆಚ್ಚುವರಿ ಅನುದಾನವನ್ನೂ ಒದಗಿಸಲಾಗುವುದು. ಲೀಲಾವತಿ, ಭಗವಾನ್‌, ಸಿ.ವಿ. ಶಿವಶಂಕರ್‌ ಸೇರಿದಂತೆ ಕನ್ನಡ ಚಿತ್ರರಂಗದ ಗಣ್ಯರಿಗೆ ಗೌರವ ಸಲ್ಲಿಸಲು ಅವರ ಚಿತ್ರಗಳನ್ನು ಪ್ರದರ್ಶಿಸಲಾಗುವುದು. ಹಿಂದಿನ ವರ್ಷಗಳಂತೆ ಈ ಬಾರಿಯೂ ಒರಾಯನ್‌ ಮಾಲ್‌ನಲ್ಲಿರುವ ಪಿವಿಆರ್‌ ಥಿಯೇಟರ್‌ನ 11 ಪರದೆಗಳಲ್ಲಿ ಚಿತ್ರಪ್ರದರ್ಶನ ಆಯೋಜಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT