ಶುಕ್ರವಾರ, ಫೆಬ್ರವರಿ 26, 2021
32 °C

ಬಮೂಲ್‌ ಅಧ್ಯಕ್ಷತೆ: ಕೈ – ತೆನೆ ಜಟಾಪಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಜಿಲ್ಲೆಗಳನ್ನು ಒಳಗೊಂಡ ಬೆಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಬಮೂಲ್‌) ಆಡಳಿತ ಮಂಡಳಿ ಅಧ್ಯಕ್ಷರ ಆಯ್ಕೆ ವಿಷಯ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮಧ್ಯೆ ಜಟಾಪಟಿಗೆ ಕಾರಣವಾಗಿದೆ.

ಅಧ್ಯಕ್ಷ– ಉಪಾಧ್ಯಕ್ಷರ ಆಯ್ಕೆಗೆ ಬುಧವಾರ ಚುನಾವಣೆ ನಿಗದಿಯಾಗಿತ್ತು. ಆಡಳಿತ ಮಂಡಳಿಯಲ್ಲಿ 13 ಚುನಾಯಿತ ನಿರ್ದೇಶಕರು, ಒಬ್ಬರು ನಾಮನಿರ್ದೇಶಿತ ನಿರ್ದೇಶಕ ಮತ್ತು ಅಧಿಕಾರಿಗಳು ಸೇರಿ ಒಟ್ಟು 17 ಮತದಾರರಿದ್ದಾರೆ. ಈ ಪೈಕಿ ಕಾಂಗ್ರೆಸ್ ಬೆಂಬಲಿತ ಎಂಟು ಮತ್ತು ಜೆಡಿಎಸ್‌ ಬೆಂಬಲಿತ ಮೂವರು ನಿರ್ದೇಶಕ
ರಿದ್ದಾರೆ.

ಯಾರ ಬೆಂಬಲವೂ ಇಲ್ಲದೆ ಅಧ್ಯಕ್ಷ– ಉಪಾಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳುವ ಸದಸ್ಯ ಬಲವನ್ನು ಕಾಂಗ್ರೆಸ್ ಹೊಂದಿದೆ. ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿರುವುದರಿಂದ ಬಮೂಲ್‌ನಲ್ಲೂ ‘ದೋಸ್ತಿ’ ಮುಂದುವರೆಸಲು ನಾಯಕರು ನಿರ್ಧರಿಸಿದ್ದರು. ಮಂಗಳವಾರ ಸಚಿವ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಚಿವ ಎಂ.ಟಿ.ಬಿ. ನಾಗರಾಜ್, ಸಂಸದರಾದ ಡಿ.ಕೆ.ಸುರೇಶ್, ವೀರಪ್ಪ ಮೊಯಿಲಿ, ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತಿತರರು ಮೈತ್ರಿಗೆ ಒಪ್ಪಿಗೆ ಸೂಚಿಸಿದ್ದರು.

ನರಸಿಂಹಮೂರ್ತಿ ಅವರಿಗೆ ಅಧ್ಯಕ್ಷ ಸ್ಥಾನ, ಶ್ರೀನಿವಾಸ್ ಅವರಿಗೆ ಉಪಾಧ್ಯಕ್ಷ ಸ್ಥಾನ ನೀಡಲು ಕಾಂಗ್ರೆಸ್‌ ಪ್ರಸ್ತಾವ ಮುಂದಿಟ್ಟಿತ್ತು. ಇದಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒಪ್ಪಿಗೆ ಸೂಚಿಸಿದ್ದರು.

ಅಧ್ಯಕ್ಷ ಸ್ಥಾನಕ್ಕೆ ನರಸಿಂಹಮೂರ್ತಿ ಮತ್ತು ರಾಜಕುಮಾರ್, ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀನಿವಾಸ್ ಬುಧವಾರ ನಾಮಪತ್ರ ಸಲ್ಲಿಸಿದ್ದರು. ಆದರೆ, ಮಾಗಡಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ನಿರ್ದೇಶಕರಾಗಿದ್ದ ನರಸಿಂಹಮೂರ್ತಿ ಅವರ ಸದಸ್ಯತ್ವ
ವನ್ನು ಇದ್ದಕ್ಕಿದ್ದಂತೆ ಅನರ್ಹಗೊಳಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ನಿರ್ದೇಶಕರು ಗೈರು: ಚುನಾವಣೆ ಮುಂದೂಡಿಕೆ

‘ಮಧ್ಯಾಹ್ನ 2 ಗಂಟೆಗೆ ನಿಗದಿಯಾಗಿದ್ದ ಸಭೆಗೆ ಯಾವೊಬ್ಬ ನಿರ್ದೇಶಕರು ಹಾಜರಾಗಲಿಲ್ಲ. ಈ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಲಾಗಿದೆ’ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

ಸದಸ್ಯತ್ವವೇ ಅನರ್ಹವಾದರೆ ಅಧ್ಯಕ್ಷ ಸ್ಥಾನದ ನಾಮಪತ್ರ ತಿರಸ್ಕಾರವಾಗುವ ಸಾಧ್ಯತೆ ಇದೆ. ಹೀಗಾಗಿ, ಚುನಾವಣಾ ಸಭೆಗೆ ಯಾರೊಬ್ಬರು ಹಾಜರಾಗಲಿಲ್ಲ ಎಂದು ನಿರ್ದೇಶಕರೊಬ್ಬರು ‘‍ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು