ಬೆಂಗಳೂರು–ಮೈಸೂರು ದಶಪಥ ಟೋಲ್‌ಗೆ ಹಣವಿಲ್ಲ; ಸರ್ವೀಸ್ ರಸ್ತೆ ಸರಿ ಇಲ್ಲ!

ಬೆಂಗಳೂರು: ‘ಮಾಗಡಿಗೆ ಹೋಗಬೇಕಾದ ನಾನು ಮದ್ದೂರಿಗೆ ಹೋಗಿದ್ದೆ. ಯಾಕಂದ್ರೆ, ಹೆದ್ದಾರಿ ಬದಿ ಒಂದು ಬೋರ್ಡ್ ಕೂಡ ಇಲ್ಲ!’
- ಇದು ಬಾಲು ಎಂಬ ಪ್ರಯಾಣಿಕರ ಮಾತು. ಬೆಂಗಳೂರು–ಮೈಸೂರು ದಶಪಥದಲ್ಲಿ ಪ್ರಯಾಣಿಸುವ ವೇಳೆ ತಮಗಾದ ಕಹಿ ಅನುಭವವನ್ನು ಅವರು ‘ಪ್ರಜಾವಾಣಿ’ ಜೊತೆ ಹಂಚಿಕೊಂಡರು.
ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ದಶಪಥ ಹೇಗಿದೆ ಎಂದು ನೋಡಲು ತೆರಳಿದಾಗ ಕಂಡದ್ದು ಇಂತಹ ಹಲವು ನ್ಯೂನತೆ.
ಬೆಂಗಳೂರಿನಿಂದ ಮೈಸೂರು ತಲುಪಲು ಅತಿ ಕಡಿಮೆ ಸಮಯ ತೆಗೆದುಕೊಳ್ಳುವ 118 ಕಿಲೋ ಮೀಟರ್ ಉದ್ದದ, ₹8,478 ಕೋಟಿ ವೆಚ್ಚದ ಈ ಹೆದ್ದಾರಿಯು ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಉದ್ಘಾಟನೆಗೊಂಡಿದೆ ಎನ್ನುವ ಆರೋಪ ಮೊದಲಿನಿಂದಲೇ ಇತ್ತು. ಈ ಆರೋಪಕ್ಕೆ ಪುಷ್ಟಿ ನೀಡುವಂತೆ ಬೆಂಗಳೂರಿನ ನೈಸ್ ರಸ್ತೆ ಜಂಕ್ಷನ್‌ನಿಂದ ಮದ್ದೂರು ತಾಲ್ಲೂಕಿನ ನಿಡಘಟ್ಟವರೆಗಿನ ಮೊದಲ ಹಂತದ ಕಾಮಗಾರಿ ಶೇ 95ರಷ್ಟು ಪೂರ್ಣಗೊಂಡಿದ್ದರೆ, ನಿಡಘಟ್ಟದಿಂದ ಮೈಸೂರಿನ ಮಣಿಪಾಲ್ ಆಸ್ಪತ್ರೆ ಜಂಕ್ಷನ್‌ವರೆಗಿನ ಎರಡನೇ ಹಂತದ ಕಾಮಗಾರಿ ಇನ್ನೂ ಶೇ 15–20ರಷ್ಟು ಬಾಕಿ ಇದೆ.
ಆಸ್ಪತ್ರೆ, ಪೆಟ್ರೋಲ್ ಬಂಕ್ ಕೊರತೆ: ಪ್ರತಿದಿನ ಸಾವಿರಾರು ವಾಹನಗಳು ಓಡಾಡುವ ಪ್ರಮುಖ ಹೆದ್ದಾರಿಯ ಬದಿಯಲ್ಲಿ ಆಸ್ಪತ್ರೆಗಳು ಕಾಣಸಿಗುವುದಿಲ್ಲ. ಬೈಪಾಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ವಾಹನ ಕೆಟ್ಟು ನಿಂತರೆ, ಪೆಟ್ರೋಲ್–ಡೀಸೆಲ್ ಖಾಲಿ ಆದರೆ ಈ ಹೆದ್ದಾರಿಯಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ಏಕೆಂದರೆ, ಪೆಟ್ರೋಲ್ ಬಂಕ್ ಇಲ್ಲ. ಇನ್ನು, ತುರ್ತು ಸಂದರ್ಭಗಳಲ್ಲಿ ವಾಹನ ಸರ್ವೀಸ್ ರಸ್ತೆಗೆ ಹೋಗಲು ಹಲವೆಡೆ ಅವಕಾಶಗಳಿಲ್ಲ. ಈ ರಸ್ತೆಯಲ್ಲಿ ಸಾಗಿದಂತೆಲ್ಲಾ ಮೂಲಸೌಕರ್ಯಗಳ ಕೊರತೆ ಕಣ್ಣಿಗೆ ರಾಚುತ್ತದೆ. ಇನ್ನು ಇದೇ ರಸ್ತೆಯಲ್ಲಿ ಮುಂದುವರಿದಂತೆ ಅಪಘಾತಕ್ಕೊಳಗಾಗಿ ರಸ್ತೆ ಬದಿ ನಿಂತಿದ್ದ ಕಾರು, ದ್ವಿಚಕ್ರ ವಾಹನ ಕಣ್ಣಿಗೆ ಬೀಳುತ್ತವೆ.
‘ಡಾಬಾನೂ ಇಲ್ಲ, ನೀರೂ ಸಿಗಲ್ಲ’
‘ಈ ಹೆದ್ದಾರಿಯಲ್ಲಿ ಒಂದೂ ಡಾಬಾ ಇಲ್ಲ. ಆಸ್ಪತ್ರೆಗೆ ಹೋಗಬೇಕಾದರೆ ನಿಡಘಟ್ಟದಿಂದ ವಾಪಸ್ ಬಂದು 5 ಕಿಲೋಮೀಟರ್‌ವರೆಗೆ ಹೋಗಬೇಕು’ ಎಂದು ವಾಹನ ಚಾಲಕ ಸಿದ್ದೀಕ್ ಹೇಳುತ್ತಾರೆ.
‘ಕಾಸು ಕೊಡುತ್ತೇನೆ ಅಂದ್ರೂ ಒಂದು ಲೋಟ ನೀರೂ ಸಿಗಲ್ಲ. ಅಕ್ಕಪಕ್ಕ ವಾಸಸ್ಥಳ, ಜನರಿಲ್ಲದ ಕಾರಣ ಯಾರ ಸಹಾಯವೂ ಸಿಗುವುದಿಲ್ಲ’ ಎಂದು ಮತ್ತೊಬ್ಬ ಚಾಲಕರು ಹೇಳಿದರು.
‘ಡಿಕೆಶಿ ರಾಜಕಾರಣ’
ಬೆಂಗಳೂರು: ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ ಟೋಲ್ ಸಂಗ್ರಹದ ಬಗ್ಗೆ ಜನ ಸಾಮಾನ್ಯರು ತಕರಾರು ಮಾಡುತ್ತಿಲ್ಲ. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಹೆದ್ದಾರಿಯ ಟೋಲ್ ಸಂಗ್ರಹದ ಬಗ್ಗೆ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಇಲ್ಲಿ ಟೋಲ್ ಸಂಗ್ರಹ ಮಾಡಲಾಗುತ್ತದೆ ಎಂಬ ವಿಚಾರ ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಾಣದ ಆರಂಭಕ್ಕೆ ಮೊದಲೇ ಎಲ್ಲರಿಗೂ ತಿಳಿದಿತ್ತು ಎಂದು ತಿಳಿಸಿದರು.
ಟೋಲ್ ರಸ್ತೆಯ ಪಕ್ಕದಲ್ಲೇ ಸರ್ವೀಸ್ ರಸ್ತೆ ಇದೆ. ಸರ್ವೀಸ್ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಟೋಲ್ ಸಂಗ್ರಹ ಮಾಡುವುದಿಲ್ಲ. ಬಹಳಷ್ಟು ಸೇವೆಗಳು ಸರ್ವೀಸ್ ರಸ್ತೆಯಲ್ಲೇ ಸಿಗುತ್ತದೆ. ವಿನಾಕಾರಣ ರಾಜಕಾರಣ ಮಾಡಲಾಗುತ್ತಿದೆ. ಡಿ.ಕೆ.ಶಿವಕುಮಾರ್ ಬಳಸುವ ಭಾಷೆ, ಅವರು ನಡೆದುಕೊಳ್ಳುವ ರೀತಿ ಶೋಭೆ ತರುವುದಿಲ್ಲ ಎಂದು ಬೊಮ್ಮಾಯಿ ಕಿಡಿಕಾರಿದರು.
***
ಎಕ್ಸ್‌ಪ್ರೆಸ್‌ವೇನಿಂದ ಕೆಲವು ಊರುಗಳಿಗೆ ಪ್ರವೇಶ ಪಡೆಯಲು ಆಗುವುದಿಲ್ಲ. ಇದರಿಂದ ಬಿಡದಿ ತಟ್ಟೆ ಇಡ್ಲಿ, ಮದ್ದೂರು ವಡೆ ಮಾರುವವರಿಗೆ ನಷ್ಟವಾಗುತ್ತಿದೆ.
–ಶಶಿಕುಮಾರ್, ಹೋಟೆಲ್ ಮಾಲೀಕ, ಬಿಡದಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.