ಬೆಂಗಳೂರು: ಬಹುನಿರೀಕ್ಷಿತ ವೈಟ್‌ಫೀಲ್ಡ್ ಮಾರ್ಗದಲ್ಲಿ ಮೆಟ್ರೊ ರೈಲುಗಳ ಕಾರ್ಯಾಚರಣೆಗೆ ಕಾಲ ಕೂಡಿಬಂದಿದೆ. ಮಾರ್ಚ್ 25ರಂದು ಪ್ರಧಾನಿಯಿಂದ ಚಾಲನೆ ದೊರಕಲಿದ್ದು, 26ರಿಂದ ವಾಣಿಜ್ಯ ಕಾರ್ಯಾಚರಣೆ ಆರಂಭವಾಗಲಿದೆ. ರಕ್ಕಸ ರೂಪದಲ್ಲಿ ಕಾಡುತ್ತಿರುವ ವಾಹನ ದಟ್ಟಣೆ ಸಮಸ್ಯೆಯನ್ನು ಸೀಳಲು ಮೆಟ್ರೊ ರೈಲುಗಳು ಸಜ್ಜಾಗಿವೆ.
ಮಾಹಿತಿ ತಂತ್ರಜ್ಞಾನ (ಐ.ಟಿ) ಕ್ಷೇತ್ರದ ಕಂಪನಿಗಳು ಬೆಳೆದಂತೆ ಬೆಂಗಳೂರಿನ ಹೊರ ವಲಯ, ಅದರಲ್ಲೂ ಮಹಾದೇವಪುರ, ವೈಟ್‌ಫೀಲ್ಡ್ ಸುತ್ತಮುತ್ತಲ ಪ್ರದೇಶ ಅಂಕೆಗೆ ಸಿಗದೆ ಬೆಳೆಯುತ್ತಿದೆ. ಆದರೆ, ಅಲ್ಲಿನ ಮೂಲಸೌಕರ್ಯ ಮಾತ್ರ ಇದ್ದಂತೆಯೇ ಇದೆ. ಈ ಅಸಮತೋಲನದಿಂದಾಗಿ ಈ ಪ್ರದೇಶದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಐ.ಟಿ ಕಂಪನಿಗಳ ಉದ್ಯೋಗಿಗಳ ಜತೆಗೆ ಸ್ಥಳೀಯರೂ ದಟ್ಟಣೆಯಲ್ಲಿ ಸಿಲುಕಿ ನಲುಗುತ್ತಿದ್ದಾರೆ.
ಈ ಸಮಸ್ಯೆಗೆ ಪರಿಹಾರವಾಗಿ ಮೆಟ್ರೊ ರೈಲು ಯೋಜನೆಯನ್ನು ವೈಟ್‌ಫೀಲ್ಡ್ ತನಕ ವಿಸ್ತರಣೆ ಮಾಡಲು ಸರ್ಕಾರ ಮುಂದಾಯಿತು. ಸಮಗ್ರ ಯೋಜನಾ ವರದಿಯನ್ನು 2011ರಲ್ಲಿ ಸಿದ್ಧಪಡಿಸಿತು. ಯೋಜನೆಗೆ ಅನುಮೋದನೆ ದೊರೆತು, ಕಾಮಗಾರಿ ಆರಂಭವಾಗಿ ಪೂರ್ಣಗೊಳ್ಳಲು 12 ವರ್ಷ ಬೇಕಾಯಿತು.
ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ 2020ರಲ್ಲೇ ವೈಟ್‌ಫೀಲ್ಡ್‌ಗೆ ಮೆಟ್ರೊ ರೈಲು ಸಂಪರ್ಕ ದೊರಕಬೇಕಿತ್ತು. ಕೋವಿಡ್ ಕಾರಣದಿಂದ ವಿಳಂಬವಾಗಿದ್ದರಿಂದ ಕಾಮಗಾರಿ ಪೂರ್ಣಗೊಳಿಸುವ ದಿನಾಂಕವನ್ನು 2021ರ ಆಗಸ್ಟ್‌ಗೆ ವಿಸ್ತರಿಸಲಾಗಿತ್ತು. ಬಳಿಕ 2022ರ ಜೂನ್‌ಗೆ ಮುಂದೂಡಲಾಯಿತು. ಅದು ಕೂಡ ಸಾಧ್ಯವಾಗದೆ, 2022ರ ಡಿಸೆಂಬರ್‌ಗೆ ಗಡುವು ನೀಡಲಾಗಿತ್ತು. ಈ ಗಡುವುಗಳೆಲ್ಲವನ್ನೂ ಮೀರಿ ಈಗ 2023ರ ಮಾರ್ಚ್ 25ರಂದು ಚಾಲನೆ ದೊರಕುತ್ತಿದೆ.
ನೇರಳೆ ಮಾರ್ಗದ ವಿಸ್ತರಿತ ಮಾರ್ಗ ಇದಾಗಿದ್ದು, ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್ ತನಕ 15 ಕಿಲೋ ಮೀಟರ್ ಮೆಟ್ರೊ ಮಾರ್ಗ ನಿರ್ಮಾಣವಾಗಿದೆ. ಕೆ.ಆರ್.ಪುರ, ಮಹದೇವಪುರ, ಕುಂದಲಹಳ್ಳಿ, ಐಟಿಪಿಎಲ್ ಮೂಲಕ ವೈಟ್‌ಫೀಲ್ಡ್‌ಗೆ ಸಂಪರ್ಕ ಕಲ್ಪಿಸಲಿದೆ. ಈ ಮಾರ್ಗ ಪರಿಪೂರ್ಣವಾಗಿ ಕಾರ್ಯಾಚರಣೆಗೊಂಡರೆ ಪ್ರತಿನಿತ್ಯ 2.50 ಲಕ್ಷದಿಂದ 3 ಲಕ್ಷ ಮಂದಿ ಪ್ರಯಾಣ ಮಾಡಬಹುದು ಎಂದು ಬಿಎಂಆರ್‌ಸಿಎಲ್ ಅಂದಾಜಿಸಿದೆ.
ಸದ್ಯ ಕೆ.ಆರ್.ಪುರದಿಂದ ವೈಟ್‌ಫೀಲ್ಡ್ ತನಕ 13 ಕಿಲೋ ಮೀಟರ್‌ನಲ್ಲಿ ರೈಲುಗಳು ಸಂಚರಿಸಲಿದ್ದು, ಬೈಯಪ್ಪಹಳ್ಳಿಯಿಂದ ಕೆ.ಆರ್.ಪುರ ನಡುವಿನ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಆದ್ದರಿಂದ ಪ್ರತಿನಿತ್ಯ 1.50 ಲಕ್ಷ ಜನ ಮೆಟ್ರೊ ರೈಲುಗಳನ್ನು ಬಳಕೆ ಮಾಡಿಕೊಳ್ಳುವ ಅಂದಾಜಿದೆ. ಜೂನ್ ಅಥವಾ ಜುಲೈ ವೇಳೆಗೆ ಬಾಕಿ ಕಾಮಗಾರಿಯೂ ಪೂರ್ಣಗೊಳ್ಳಲಿದ್ದು, ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳುತ್ತಾರೆ.
ಕೆ.ಆರ್.ಪುರದಿಂದ ವೈಟ್‌ಫೀಲ್ಡ್ ತನಕ ಬಸ್‌ನಲ್ಲಿ ಪ್ರಯಾಣ ಮಾಡಲು ಕನಿಷ್ಠ 40 ನಿಮಿಷ ಬೇಕಾಗುತ್ತದೆ. ವಾಹನ ದಟ್ಟಣೆ ಇದ್ದರೆ ಒಂದು ತಾಸನ್ನೂ ಮೀರಲಿದೆ. ‘ಈ ನಿಲ್ದಾಣಗಳ ನಡುವೆ ಮೆಟ್ರೊ ರೈಲು ಪ್ರಯಾಣಕ್ಕೆ 23 ನಿಮಿಷ ಬೇಕಾಗಲಿದ್ದು, ಮೊದಲಿಗೆ ಪ್ರತಿ 10 ನಿಮಿಷಕ್ಕೊಂದು ರೈಲು ಸಂಚರಿಸಲಿವೆ’ ಎಂದು ಅಧಿಕಾರಿಗಳು ವಿವರಿಸುತ್ತಾರೆ.
ಚಾಲನೆ ನೀಡುವ ಮೊದಲ ಪ್ರಧಾನಿ
ಮಾರ್ಚ್ 25ರಂದು ಪ್ರಧಾನಿ ನರೇಂದ್ರ ಮೋದಿ ಅವರು ರೈಲುಗಳ ಕಾರ್ಯಾಚರಣೆಗೆ ಚಾಲನೆ ನೀಡುವರು. ಮೆಟ್ರೊ ರೈಲು ಸಂಚಾರಕ್ಕೆ ಚಾಲನೆ ನೀಡುವ ಮೊದಲ ಪ್ರಧಾನಿ ಇವರು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳುತ್ತಾರೆ.
ಮನಮೋಹನ ಸಿಂಗ್ ಪ್ರಧಾನಿ ಆಗಿದ್ದಾಗ 2006ರಲ್ಲಿ ಮೊದಲ ಹಂತದ ಮೆಟ್ರೊ ರೈಲು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಮೊದಲ ಹಂತದ ಮೆಟ್ರೊ ಸುರಂಗ ಮಾರ್ಗವನ್ನು 2017ರಲ್ಲಿ ಅಂದಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಉದ್ಘಾಟಿಸಿದ್ದರು.
ಕಾರ್ಪೊರೇಟ್ ಬಲ: ಹೆಚ್ಚಿದ ಮೆರುಗು
ವೈಟ್‌ಫೀಲ್ಡ್ ಮಾರ್ಗದ ವಿಶೇಷ ಎಂದರೆ ಮೆಟ್ರೊ ರೈಲು ಮಾರ್ಗದ ಕಂಬಗಳಿಗೂ ಬಣ್ಣ ಬಳಿಯಲಾಗುತ್ತಿದೆ. ಕಂಬಗಳು ಬಗೆ ಬಗೆಯ ಚಿತ್ತಾರಗಳಿಂದ ಮಿನುಗುತ್ತಿವೆ.
ಈ ಮಾರ್ಗದಲ್ಲಿ ಮೆಟ್ರೊ ರೈಲು ಕಾರ್ಯಾಚರಣೆ ಆರಂಭವಾಗುತ್ತಿರುವುದರಿಂದ ಐ.ಟಿ ಕಂಪನಿಗಳಿಗೆ ಹೊಸ ಉತ್ಸಾಹ ತಂದಿದೆ. ಇಲ್ಲಿರುವ ಐ.ಟಿ ಕಂಪನಿಗಳು ಸ್ವಯಂ ಪ್ರೇರಿತವಾಗಿ ಮುಂದೆ ಬಂದು ಮೆಟ್ರೊ ಮಾರ್ಗದ ಮೆರುಗು ಹೆಚ್ಚಿಸುವ ಕೆಲಸ ಮಾಡುತ್ತಿವೆ. ಸಾಮಾಜಿಕ ಹೊಣೆಗಾರಿಕೆ ನಿಧಿ(ಸಿಎಸ್‌ಆರ್) ಬಳಸಿ ಈ ಕಾರ್ಯವನ್ನು ಕಂಪನಿಗಳು ಮಾಡುತ್ತಿವೆ. ಈ ರೀತಿಯ ಕಾರ್ಯಕ್ಕೆ ಮುಂದೆ ಬರುವ ಕಂಪನಿಗಳಿಗೆ ಅನುಮತಿ ನೀಡಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ಕಂಪನಿಗಳು ತಮ್ಮ ಕ್ಯಾಂಪಸ್‌ಗಳಿಗೆ ಪಾದಚಾರಿ ಮೇಲ್ಸೇತುವೆಗಳನ್ನು ನಿರ್ಮಿಸಿಕೊಳ್ಳುತ್ತಿವೆ. ಮೆಟ್ರೊ ಕಂಬಗಳ ನಡುವಿನ ರಸ್ತೆ ವಿಭಜಕಗಳ ಮೇಲೆ ಸಸಿ ನೆಡುವ ಜತೆಗೆ ನಿರ್ವಹಣೆ ಒಪ್ಪಂದವನ್ನೂ ಮಾಡಿಕೊಂಡಿವೆ.
ಇನ್ಫೊಸಿಸ್ ಫೌಂಡೇಶನ್, ಬಯೋಕಾನ್ ಫೌಂಡೇಶನ್, ಇಂಟೆಲ್ ಟೆಕ್ನಾಲಜಿ, ಪ್ರೆಸ್ಟೀಜ್, ಬಾಗ್ಮನೆ, ಬಾಷ್, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸೇರಿ ಹಲವು ಕಂಪನಿಗಳು ಮುಂದೆ ಬಂದಿವೆ ಎಂದು ಅವರು ವಿವರಿಸುತ್ತಾರೆ.
12 ಮೆಟ್ರೊ ನಿಲ್ದಾಣ
ಕೆ.ಆರ್.ಪುರಂ
ಮಹದೇವಪುರ
ಗರುಡಾಚಾರ್‌ಪಾಳ್ಯ
ಹೂಡಿ ಜಂಕ್ಷನ್
ಸೀತಾರಾಮಪಾಳ್ಯ
ಕುಂದಲಹಳ್ಳಿ
ನಲ್ಲೂರುಹಳ್ಳಿ
ಶ್ರೀಸತ್ಯಸಾಯಿ ಆಸ್ಪತ್ರೆ
ಪಟ್ಟಂದೂರು ಅಗ್ರಹಾರ
ಕಾಡುಗೋಡಿ
ಚನ್ನಸಂದ್ರ
ವೈಟ್‌ಫೀಲ್ಡ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.