ಪಾಟ್ನಾಗೆ ಹೊರಟಿದ್ದ ‘ಗೋ ಏರ್’ ವಿಮಾನ 10 ಗಂಟೆ ತಡ; ಪ್ರಯಾಣಿಕರ ಆಕ್ರೋಶ

ಬೆಂಗಳೂರು: ನಗರದಿಂದ ಪಾಟ್ನಾಗೆ ಶನಿವಾರ ಹೊರಡಬೇಕಿದ್ದ ‘ಗೋ ಏರ್’ ವಿಮಾನ 10 ಗಂಟೆ ತಡವಾಗಿದ್ದರಿಂದ, ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ನಿಲ್ದಾಣದಿಂದ ವಿಮಾನ ಹೊರಡಬೇಕಿತ್ತು. ನಿಗದಿತ ಸಮಯಕ್ಕಿಂತಲೂ ಮುಂಚೆಯೇ ಪ್ರಯಾಣಿಕರು ಬಂದಿದ್ದರು. ಆದರೆ, ನಿಗದಿಯಂತೆ ವಿಮಾನ ಹಾರಾಟ ನಡೆಸಲಿಲ್ಲ.
‘ಗೋ ಏರ್’ ವಿಮಾನ ಕಂಪನಿ ಕೌಂಟರ್ ಎದುರು ಸೇರಿದ್ದ ಪ್ರಯಾಣಿಕರು, ವಿಮಾನ ತಡವಾದ ಬಗ್ಗೆ ವಿಚಾರಿಸಿದರು. ಸಿಬ್ಬಂದಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆಕ್ರೋಶಗೊಂಡ ಪ್ರಯಾಣಿಕರು, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಪ್ರಯಾಣಿಕರು ಸಿಬ್ಬಂದಿ ಜೊತೆ ಮಾತಿನ ಚಕಮಕಿ ನಡೆಸಿದರು. ನಿಲ್ದಾಣದ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿದರೂ ಪ್ರಯಾಣಿಕರು ಸಮಾಧಾನವಾಗಲಿಲ್ಲ. ವಿಮಾನ ಕಂಪನಿಯ ವರ್ತನೆಗೆ ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದರು.
‘ಕೂ’ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಪ್ರಕಟಿಸಿರುವ ಜಿ. ಕುಮಾರ್, ‘10 ಗಂಟೆ ಕಾದರೂ ವಿಮಾನ ಹಾರಾಟ ನಡೆಸಲಿಲ್ಲ. ಈ ಬಗ್ಗೆ ಕೇಳಿದ್ದಕ್ಕೆ ಸಿಬ್ಬಂದಿ ಪ್ರಯಾಣಿಕರ ಜೊತೆಯೇ ವಾಗ್ವಾದ ನಡೆಸಿದರು’ ಎಂದು ಹೇಳಿಕೊಂಡಿದ್ದಾರೆ.
ವಿಮಾನ ತಡವಾದ ಬಗ್ಗೆ ಪ್ರತಿಕ್ರಿಯೆ ಪಡೆಯಲು ‘ಗೋ ಏರ್’ ಕಂಪನಿ ಪ್ರತಿನಿಧಿಗಳು ಸಂಪರ್ಕಕ್ಕೆ ಸಿಗಲಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.