ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಮಳೆ| ಮುಳುಗಡೆಗಿಲ್ಲ ಕೊನೆಗಾಲ

ಅಬ್ಬಯ್ಯರೆಡ್ಡಿ ಲೇಔಟ್‌: 20 ವರ್ಷಗಳಿಂದ ನೆಲೆಸಿರುವ ವಲಸೆ ಕಾರ್ಮಿಕರ ಅಳಲು
Last Updated 7 ಸೆಪ್ಟೆಂಬರ್ 2022, 19:20 IST
ಅಕ್ಷರ ಗಾತ್ರ

ಬೆಂಗಳೂರು: ‘ಮಳೆ ಬಂದಾಗಲೆಲ್ಲಾ ತುಂಬುವ ಗುಡಿ ಸಿಲು, ಇಡೀ ರಾತ್ರಿ ನಿದ್ರೆಯಿಲ್ಲ, ವಾರದಿಂದ ಕೆಲ ಸವಿಲ್ಲ, ಊಟಕ್ಕೂ ಗತಿ ಇಲ್ಲ...’ ಇದು ಕಗ್ಗದಾಸನಪುರದ ಅಬ್ಬಯ್ಯರೆಡ್ಡಿ ಲೇಔಟ್‌ನಲ್ಲಿ ನೆಲೆಸಿರುವ ವಲಸೆ ಕಾರ್ಮಿಕರ ಅಳಲು.

ದೊಡ್ಡನೆಕ್ಕುಂದಿ ಕೆರೆಗೆ ಹೊಂದಿ ಕೊಂಡಂತೆ ಇರುವ ಈ ಬಡಾವಣೆಯ ತುದಿಯಲ್ಲಿ ವಲಸೆ ಕಾರ್ಮಿಕರ ಜೋಪಡಿಗಳಿವೆ. 20 ವರ್ಷಗಳಿಂದ ಕಾರ್ಮಿಕರ ಗುಂಪು ಇಲ್ಲಿ ನೆಲೆಸಿದ್ದು, ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದೆ. ಈ ಕಾರ್ಮಿಕರ ಗುಡಿಸಲುಗಳು ಮಳೆ ಬಂದಾಗಲೇ ನೀರಿನಲ್ಲಿ ಮುಳುಗೇಳುತ್ತಿವೆ. ಈ ವರ್ಷದ ಮಳೆಯಂತೂ ಈ ಕಾರ್ಮಿಕರನ್ನು ರೋಸಿಹೋಗುವಂತೆ ಮಾಡಿದೆ.

ಸುತ್ತಲೂ ತಲೆ ಎತ್ತಿರುವ ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ಅಂಚಿನಲ್ಲಿ ಈ ಗುಡಿಸಿಲುಗಳಿದ್ದು, ಸಂಜೆಯಾದರೆ ಅಬ್ಬರಿಸುವ ಮಳೆಯ ನೀರು ಈ ಗುಡಿಸಿಲುಗಳನ್ನು ದಾಟಿ ಕೆರೆ ಸೇರಿಕೊಳ್ಳುತ್ತಿದೆ. ನೀರು ಬಂದ ಕೂಡಲೇ ಮಕ್ಕಳೊಂದಿಗೆ ಓಡಿ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಕಾರ್ಮಿಕರು ಸೇರಿಕೊಳ್ಳುತ್ತಾರೆ. ಮಕ್ಕಳೊಂದಿಗೆ ಇಡೀ ರಾತ್ರಿ ಕುಳಿತೇ ಕಾಲ ಕಳೆಯುತ್ತಿದ್ದಾರೆ.

‘ನೀರಿನಲ್ಲಿ ತೊಯ್ದಿರುವ ದಿನಸಿ, ಬಟ್ಟೆ ಮತ್ತಿತರ ವಸ್ತುಗಳನ್ನು ಬೆಳಿಗ್ಗೆ ಒಣಗಿಸುತ್ತೇವೆ. ರಾತ್ರಿಯಾದರೆ ಮತ್ತೆ ಅದೇ ಸ್ಥಿತಿಗೆ ಮರಳುತ್ತಿದೆ. ಜೋರು ಮಳೆ ಬಂದರೆ 20 ವರ್ಷದಿಂದಲೂ ಇದೇ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದೇವೆ. ಸುರಕ್ಷಿತ ಪ್ರದೇಶಕ್ಕೆ ತೆರಳಬೇಕೆಂದರೆ ಎಲ್ಲಿಯೂ ಜಾಗವಿಲ್ಲ. ಬಿಟ್ಟು ಹೋದರೆ ಈ ಜಾಗವೂ ಮತ್ತೆ ಸಿಗುವ ಖಾತ್ರಿ ಇಲ್ಲ’ ಎಂದು ಕಾರ್ಮಿಕರು ಬೇಸರ ವ್ಯಕ್ತಪಡಿಸಿದರು.

‘ತಂದಿಟ್ಟಿದ್ದ ಅಕ್ಕಿ ನೀರುಪಾಲಾಗಿದೆ, ಹೊತ್ತಿನ ಊಟಕ್ಕೂ ಪರದಾಡುತ್ತಿದ್ದೇವೆ. ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳುವುದೋ ಗೊತ್ತಿಲ್ಲ. ಕೇಳಿಸಿಕೊಳ್ಳುವ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಇಲ್ಲ. ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿ ಹೋಗುವ ಜನಪ್ರತಿನಿಧಿಗಳು ಮತ್ತೆ ಈ ಕಡೆಗೆ ತಿರುಗಿ ನೋಡುವುದಿಲ್ಲ. ಬಡವರಾಗಿ ಹುಟ್ಟಿದ ತಪ್ಪಿಗೆ ಈ ಕಷ್ಟ ಅನುಭವಿಸುತ್ತಿದ್ದೇವೆ’ ಎಂದು ಕಾರ್ಮಿಕ ಮಹಿಳೆ ನರಸಮ್ಮ ಅಳಲು ತೋಡಿಕೊಂಡರು.

ವಲಸೆ ಕಾರ್ಮಿಕರನ್ನು ಕಾಡುತ್ತಿರುವ ಚಳಿಜ್ವರ

ತೂಬರಹಳ್ಳಿ ಮತ್ತು ಮುನ್ನೇಕೊಳಲು ಬಳಿ ಇರುವ ವಲಸೆ ಕಾರ್ಮಿಕರ ಜೋಪಡಿಗಳಿಗೆ ನುಗ್ಗಿದ್ದ ನೀರಿನ ಪ್ರಮಾಣ ಇನ್ನೂ ಕಡಿಮೆಯಾಗಿಲ್ಲ. ಕೆಲವು ಜೋಪಡಿಗಳಲ್ಲಿ ನೀರು ಇಳಿದಿದ್ದು, ಬಹುತೇಕ ಜೋಪಡಿಗಳು ಇನ್ನೂ ನೀರಿನಲ್ಲೇ ಇವೆ.

‘ಮೂರ್ನಾಲ್ಕು ದಿನಗಳಿಂದ ನೀರಿನಲ್ಲೇ ಜೀವನ ನಡೆಸುತ್ತಿರುವ ಕಾರ್ಮಿಕರಿಗೆ ಈಗ ರೋಗಭೀತಿ ಕಾಡುತ್ತಿದೆ. ಮಕ್ಕಳು ಮತ್ತು ಮಹಿಳೆಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಚಳಿಜ್ವರ ಕಾಣಿಸಿಕೊಳ್ಳುತ್ತಿದೆ’ ಎಂದು ಈ ಕಾರ್ಮಿಕರ ಪರ ಹೋರಾಟ ನಡೆಸುತ್ತಿರುವ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಪಿ.ಮುನಿರಾಜು ಹೇಳಿದರು.

‘ಬಿಬಿಎಂಪಿಯಿಂದ ಮೂರು ಹೊತ್ತಿನ ಊಟದ ವ್ಯವಸ್ಥೆ ಆಗಿದೆ. ಆದರೆ, ಸಾಂಕ್ರಾಮಿಕ ರೋಗದ ಭೀತಿಯಲ್ಲಿರುವ ಕಾರ್ಮಿಕರ ಆರೋಗ್ಯ ತಪಾಸಣೆಗೆ ವ್ಯವಸ್ಥೆ ಮಾಡಬೇಕಿದೆ. ಇಲ್ಲದಿದ್ದರೆ ಹೆಚ್ಚಿನ ತೊಂದರೆಯಾಗುವ ಸಾಧ್ಯತೆ ಇದೆ’ ಎಂದರು.


ಪರಿಹಾರ ಶಿಬಿರ ತೆರೆಯಲು ಒತ್ತಾಯ

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬಿಬಿಎಂಪಿ ಕೂಡಲೇ ಪರಿಹಾರ ಶಿಬಿರಗಳನ್ನು ತೆರೆಯಬೇಕು ಎಂದು ಸಿಪಿಐ ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಎಂ.ಸತ್ಯಾನಂದ ಆಗ್ರಹಿಸಿದ್ದಾರೆ.

ಗುಡಿಸಲುಗಳಲ್ಲಿ ವಾಸಿಸು ತ್ತಿರುವ ಕೂಲಿ ಕಾರ್ಮಿಕರಿಗೆ ವಸತಿ ಮತ್ತು ಆಹಾರ ವ್ಯವಸ್ಥೆ ಮಾಡಬೇಕು. ನೈರ್ಮಲ್ಯ ಸೌಲಭ್ಯಗಳನ್ನು ನೀಡಬೇಕು, ಕೂಡಲೇ ಆರೋಗ್ಯ ಶಿಬಿರಗಳನ್ನು ನಡೆಸಬೇಕು. ಬೀದಿ ಬದಿಯ ಮತ್ತು ಸಣ್ಣ ವ್ಯಾಪಾರಿಗಳಿಗೆ ಬಿಬಿ ಎಂಪಿಯಿಂದ ಜೀವನಾಧಾರ ಭತ್ಯೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಎಲ್ಲ ನಿಯಮಗಳನ್ನೂ ಉಪೇಕ್ಷಿಸಿ ಅನಿಯಂತ್ರಿತವಾಗಿ ಬೆಳೆಯುತ್ತಿರುವ ರಿಯಲ್ ಎಸ್ಟೇಟ್ ಕುರಿತು ಬಿಬಿಎಂಪಿ ಮತ್ತು ರಾಜ್ಯ ಸರ್ಕಾರ ತಾಂತ್ರಿಕ ಶ್ವೇತಪತ್ರವನ್ನು ಬಿಡುಗಡೆ ಮಾಡಬೇಕು ಎಂದು
ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT