ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಉಪನಗರ ರೈಲು ಯೋಜನೆ: ಪೂರ್ವ ಸಾಧ್ಯತಾ ಅಧ್ಯಯನ ನಿರಾಕರಣೆ

ಬಿಎಸ್‌ಆರ್‌ಪಿ: ಬೆಂಗಳೂರು ಸಮೀಪದ ಪ್ರಮುಖ ನಗರಗಳಿಗೆ ವಿಸ್ತರಿಸುವ ಬಗ್ಗೆ ನೈರುತ್ಯ ರೈಲ್ವೆಗೆ ಪತ್ರ ಬರೆದಿದ್ದ ಕೆ–ರೈಡ್‌
Published 12 ಜನವರಿ 2024, 20:42 IST
Last Updated 12 ಜನವರಿ 2024, 20:42 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಯನ್ನು (ಬಿಎಸ್‌ಆರ್‌ಪಿ) ಮೈಸೂರು ಸಹಿತ ಸುತ್ತಲಿನ ನಗರಗಳಿಗೆ ವಿಸ್ತರಿಸಲು ಪೂರ್ವ ಸಾಧ್ಯತಾ ಅಧ್ಯಯನಕ್ಕಾಗಿ ಕೆ–ರೈಡ್‌ ಅನುಮತಿ ಕೇಳಿದ್ದು, ನೈರುತ್ಯ ರೈಲ್ವೆ ನಿರಾಕರಿಸಿದೆ.

ಬಿಎಸ್‌ಆರ್‌ಪಿಯಡಿ ಕೆಎಸ್‌ಆರ್‌ ಬೆಂಗಳೂರು–ದೇವನಹಳ್ಳಿ, ಬೈಯಪ್ಪನಹಳ್ಳಿ–ಚಿಕ್ಕಬಾಣಾವರ, ಕೆಂಗೇರಿ–ವೈಟ್‌ಫೀಲ್ಡ್‌, ಹೀಲಲಿಗೆ–ರಾಜಾನುಕುಂಟೆ ಹೀಗೆ ಒಟ್ಟು ನಾಲ್ಕು ಕಾರಿಡಾರ್‌ಗಳು ನಿರ್ಮಾಣಗೊಳ್ಳುತ್ತಿವೆ. ಈ ಕಾರಿಡಾರ್‌ಗಳಿಂದ ಕೋಲಾರ, ತುಮಕೂರು, ಮಾಗಡಿಗೆ, ಮೈಸೂರು, ಬಂಗಾರಪೇಟೆ, ಹೊಸೂರು, ಗೌರಿಬಿದನೂರಿಗೆ ವಿಸ್ತರಿಸಲು ಪೂರ್ವ ಸಾಧ್ಯತಾ ಅಧ್ಯಯನದ ಅಗತ್ಯವಿದೆ. ಬಿಎಸ್‌ಆರ್‌ಪಿಯನ್ನು ಅನುಷ್ಠಾನಗೊಳಿಸುತ್ತಿರುವ ಕರ್ನಾಟಕ ರೈಲು ಮೂಲ ಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ (ಕೆ- ರೈಡ್) ಪೂರ್ವ ಸಾಧ್ಯತಾ ಅಧ್ಯಯನ ಮಾಡಲು ಸಿದ್ಧವಿದ್ದು, ಅನುಮತಿ ನೀಡಬೇಕು ಎಂದು ಕೆ–ರೈಡ್‌ ವ್ಯವಸ್ಥಾಪಕ ನಿರ್ದೇಶಕರು ರೈಲ್ವೆ ಮಂಡಳಿಗೆ ಪತ್ರ ಬರೆದಿದ್ದರು.

ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಅವರು ಇತ್ತೀಚೆಗೆ ನಡೆಸಿದ್ದ ಬಿಎಸ್‌ಆರ್‌ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿತ್ತು. ಒಟ್ಟು 452 ಕಿ.ಮೀ. ಉದ್ದಕ್ಕೆ ಬಿಎಸ್‌ಆರ್‌ಪಿ ವಿಸ್ತರಿಸಲು ರೈಲ್ವೆ ಬೋರ್ಡ್‌ನಿಂದ ಮೊದಲೇ ಅನುಮೋದನೆಯನ್ನು ಪಡೆಯಲು ಸಭೆಯಲ್ಲಿ ನಿರ್ಧರಿಸಲಾಗಿತ್ತು. ಅದರಂತೆ ಅನುಮತಿಗಾಗಿ ಕೆ–ರೈಡ್‌ನಿಂದ ಪತ್ರ ಬರೆಯಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮರುಪತ್ರ: ನೈರುತ್ಯ ರೈಲ್ವೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಈ ಪತ್ರಕ್ಕೆ ಮರುಪತ್ರ ಬರೆದಿದ್ದು, ಪೂರ್ವ ಸಾಧ್ಯತಾ ಅಧ್ಯಯನ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಬೆಂಗಳೂರು–ಜೋಲಾರ್‌ಪೇಟೆ, ಬೆಂಗಳೂರು– ಧರ್ಮಾವರಂ, ಬೆಂಗಳೂರು– ತುಮಕೂರು ಮಾರ್ಗಗಳಲ್ಲಿ ಗಂಟೆಗೆ 130/160 ಕಿ.ಮೀ. ವೇಗದಲ್ಲಿ ಚಲಿಸುವ ರೈಲುಗಳು ಸಂಚರಿಸಲಿವೆ. ಸ್ವಯಂಚಾಲಿತ ಬ್ಲಾಕ್‌ ಸಿಗ್ನಲಿಂಗ್‌ ಒದಗಿಸಲಾಗುತ್ತಿದೆ. ಪ್ರಮುಖ ಕಾರಿಡಾರ್‌ಗಳಲ್ಲಿ ದ್ವಿಪಥ, ಚತುಷ್ಪಥ ಕೆಲಸಗಳಾಗುತ್ತಿವೆ. ನಿಡವಂದ–ದೊಡ್ಡಬಳ್ಳಾಪುರ–ದೇವನಹಳ್ಳಿ–ಮಾಲೂರು–ಹೀಲಲಿಗೆ–ಸೋಲೂರು–ನಿಡವಂದ ನಿಲ್ದಾಣಗಳನ್ನು ಸಂಪರ್ಕಿಸುವ ವೃತ್ತರೈಲು ಸಂಪರ್ಕ ಜಾಲದ ಸಮೀಕ್ಷೆಯನ್ನು ಇತ್ತೀಚೆಗೆ ರೈಲ್ವೆ ಮಂಡಳಿಯು ಮಂಜೂರು ಮಾಡಿದೆ. ಹೀಗೆ ಸ್ಯಾಟಲೈಟ್‌ ನಗರಗಳಿಗೆ ರೈಲು ಸೇವೆ ವಿಸ್ತರಿಸಲು ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಹಾಗಾಗಿ ಬಿಎಸ್‌ಆರ್‌ಪಿ ವಿಸ್ತರಣೆಯ ಅಗತ್ಯ ಕಾಣುತ್ತಿಲ್ಲ ಎಂದು ವಿವರಣೆ ನೀಡಿದ್ದಾರೆ.

ಬಿಎಸ್ಆರ್‌ಪಿಯ ಕಾರಿಡಾರ್‌ಗಳ ಕಾಮಗಾರಿ ಬಹಳ ನಿಧಾನವಾಗಿ ನಡೆಯುತ್ತಿದ್ದು, ಅವುಗಳಿಗೆ ರಾಜ್ಯ ಸರ್ಕಾರ ವೇಗ ನೀಡಬೇಕಿದೆ ಎಂದು ಪತ್ರದ ಮೂಲಕ ಉತ್ತರಿಸಿದ್ದಾರೆ.

‘ನೈರುತ್ಯ ರೈಲ್ವೆಯ ಮೂಲಕವೇ ರೈಲ್ವೆ ಬೋರ್ಡ್‌ಗೆ ಪತ್ರ ಬರೆಯಬೇಕು. ಕೆ–ರೈಡ್‌ನಿಂದ ಕಳುಹಿಸಲಾದ ಪತ್ರವನ್ನು ಬೋರ್ಡ್‌ಗೆ ಕಳುಹಿಸಿದ್ದರೆ ಸಾಕಿತ್ತು. ಮುಂದಿನ ನಿರ್ಧಾರ ರೈಲ್ವೆ ಬೋರ್ಡ್‌ನಲ್ಲಿ ತೆಗೆದುಕೊಳ್ಳಲಾಗುತ್ತಿತ್ತು. ಆದರೆ, ಮುಂದಕ್ಕೆ ಕಳುಹಿಸದೇ ನೈರುತ್ಯ ಬೋರ್ಡ್‌ನವರೇ ಪೂರ್ವ ಸಾಧ್ಯತಾ ಅಧ್ಯಯನ ಅಗತ್ಯವಿಲ್ಲ ಎಂದು ಉತ್ತರ ನೀಡಿದ್ದಾರೆ’ ಎಂದು ಕೆ–ರೈಡ್‌ನ ಕೆಲವು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದರು.

ರೈಲ್ವೆ ಬೋರ್ಡ್‌ಗೆ ಸಿ4ಸಿ ಪತ್ರ

ರೈಲ್ವೆ ಮತ್ತು ರಾಜ್ಯ ಸರ್ಕಾರದ ಕೂಸು ಆಗಿರುವ ಕೆ–ರೈಡ್‌ಗೆ ನೈರುತ್ಯ ರೈಲ್ವೆಯು ಪೂರ್ವ ಸಾಧ್ಯತಾ ಅಧ್ಯಯನ ಅನುಮೋದನೆ ನೀಡುವ ಬದಲು ಆಘಾತಕಾರಿ ಉತ್ತರವನ್ನು ನೀಡಿದೆ. ಇದನ್ನು ಪರಿಶೀಲಿಸಬೇಕು. ಉಪನಗರ ರೈಲು ಯೋಜನೆಯನ್ನು ವಿಸ್ತರಿಸಲು ಅಧ್ಯಯನಕ್ಕೆ ಅನುಮೋದನೆ ನೀಡಬೇಕು ಎಂದು ಸ್ವಯಂ ಸೇವಾ ಸಂಸ್ಥೆಯಾದ ಸಿಟಿಜನ್ಸ್‌ ಫಾರ್‌ ಸಿಟಿಜನ್ಸ್‌ (ಸಿ4ಸಿ) ರೈಲ್ವೆ ಬೋರ್ಡ್‌ಗೆ ಪತ್ರ ಬರೆದಿದೆ. ಬೆಂಗಳೂರಿನ ಸುತ್ತಮುತ್ತ 100 ಕಿ.ಮೀ. ವ್ಯಾಪ್ತಿಯನ್ನು ಉಪನಗರ ರೈಲು ಯೋಜನೆಯಡಿ ತರಬೇಕು. ಆಗ ಸುತ್ತಲಿನ ನಗರಗಳು ಕೂಡ ಅಭಿವೃದ್ಧಿಯಾಗುತ್ತವೆ. 2 ಕೋಟಿ ಜನರಿಗೆ ಉಪಯೋಗವಾಗುತ್ತದೆ. ಉಪನಗರ ರೈಲುಗಳು 5ರಿಂದ 10 ನಿಮಿಷಕ್ಕೊಂದು ಸಂಚರಿಸುತ್ತವೆ. ದೂರದ ಊರಿಗೆ ಸಂಚರಿಸುವ ರೈಲುಗಳು ಗಂಟೆಗೊಂದು ಇರುತ್ತವೆ. ಉಪನಗರ ರೈಲು ಮತ್ತು ನೈರುತ್ಯ ರೈಲುಗಳು ಒಂದಕ್ಕೊಂದು ಹೋಲಿಕೆಯಾಗುವುದಿಲ್ಲ ಎಂದು ಸಿ4ಸಿ ಸಂಸ್ಥಾಪಕ ರಾಜಕುಮಾರ್ ದುಗರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT