ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ‘ಪಡಿತರ ಕಿಟ್‌’ ಕೊಡಿಸುವುದಾಗಿ ದಂಪತಿಗೆ ಸುಲಿಗೆ

ಜೈಲಿನಿಂದ ಬಿಡುಗಡೆಯಾದ ಎರಡೇ ದಿನಕ್ಕೆ ಕೃತ್ಯ: ಮತ್ತೆ ಜೈಲು ಸೇರಿದ ಆರೋಪಿ
Published 3 ಏಪ್ರಿಲ್ 2024, 15:44 IST
Last Updated 3 ಏಪ್ರಿಲ್ 2024, 15:44 IST
ಅಕ್ಷರ ಗಾತ್ರ

ಬೆಂಗಳೂರು: ರಸ್ತೆ ಬದಿ ನಿಂತಿದ್ದ ವೃದ್ಧ ದಂಪತಿಗೆ ರಂಜಾನ್ ಹಬ್ಬದ ಅಂಗವಾಗಿ ಪಡಿತರ ಕಿಟ್‌ ಕೊಡಿಸುವುದಾಗಿ ನಂಬಿಸಿ, ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗುರಪ್ಪನಪಾಳ್ಯ ನಿವಾಸಿ ಅಬ್ದುಲ್ (43) ಬಂಧಿತ ಆರೋಪಿ. ಈತ ಎರಡು ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. 

ಅಖಿಲಾ ಹಾಗೂ ರಶೀದ್‌ ದಂಪತಿಗೆ ಕಿಟ್‌ ಕೊಡಿಸುವುದಾಗಿ ಕರೆದೊಯ್ದಿದ್ದ ಆರೋಪಿ, ₹9 ಸಾವಿರ ನಗದು ಮತ್ತು 21 ಗ್ರಾಂ ಚಿನ್ನಾಭರಣ ಸುಲಿಗೆ ಮಾಡಿದ್ದ. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಆತನಿಂದ 21 ಗ್ರಾಂ ಚಿನ್ನಾಭರಣ ಮತ್ತು ಬೈಕ್ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

‘ಮಾರ್ಚ್‌ 26ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ದಂಪತಿ ಆನೆಪಾಳ್ಯದ 4ನೇ ಕ್ರಾಸ್ ಬಳಿ ರಸ್ತೆಬದಿ ನಿಂತಿದ್ದರು. ಆಗ ಬೈಕ್‌ನಲ್ಲಿ ಸ್ಥಳಕ್ಕೆ ಬಂದಿದ್ದ ಆರೋಪಿ, ವೃದ್ಧ ದಂಪತಿಗೆ ಕಿಟ್‌ ಆಮಿಷವೊಡ್ಡಿದ್ದ. ಅದಕ್ಕೆ ಒಪ್ಪಿದ್ದ ರಶೀದ್ ಅವರನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹೊಸೂರು ಮುಖ್ಯರಸ್ತೆಯ ಆನೇಪಾಳ್ಯ ಮೋರಿಯ ಬಳಿ ಇಳಿಸಿದ್ದ. ಬಳಿಕ ಚಾಕು ತೋರಿಸಿ ₹5 ಸಾವಿರ ನಗದು ಕಸಿದುಕೊಂಡಿದ್ದ. ಆ ನಂತರ ಅಖಿಲಾ ಬಳಿ ಬಂದು ‘ನಿಮ್ಮ ಪತಿಯಿಂದ ಕಿಟ್ ತರಲು ಸಾಧ್ಯವಾಗುತ್ತಿಲ್ಲ. ಅವರನ್ನು ಅಲ್ಲಿಯೇ ಬಿಟ್ಟು ಬಂದಿದ್ದೇನೆ’ ಎಂದು ತನ್ನ ಬೈಕ್‌ನಲ್ಲಿ ಅವರನ್ನೂ ಕರೆದೊಯ್ದಿದ್ದ. ಬನ್ನೇರುಘಟ್ಟ ರಸ್ತೆಯ ಸುಬ್ಬಣ್ಣ ಗಾರ್ಡನ್ ಬಳಿ ಇಳಿಸಿ, ಅವರಿಗೂ ಮಾರಕಾಸ್ತ್ರ ತೋರಿಸಿ ಬೆದರಿಸಿ 14 ಗ್ರಾಂ ತೂಕದ ಚಿನ್ನದ ಸರ, 7 ಗ್ರಾಂ ತೂಕದ ಕಿವಿಯೋಲೆ, ₹4 ಸಾವಿರ ನಗದು ಕಿತ್ತುಕೊಂಡು ಪರಾರಿಯಾಗಿದ್ದ’ ಎಂದು ಪೊಲೀಸರು ಹೇಳಿದರು.

ಆರೋಪಿ ಅಬ್ದುಲ್‌ ಗುಜರಿ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ವೃದ್ಧರನ್ನೇ ಗುರಿಯಾಗಿಸಿ ಹಬ್ಬಗಳ ಸಂದರ್ಭದಲ್ಲಿ ರೇಷನ್‌ ಕಿಟ್‌ ಕೊಡಿಸುತ್ತೇನೆ. ಇತರೆ ಸೌಲಭ್ಯ ನೀಡುತ್ತೇನೆ ಎಂದು ಹೇಳಿಕೊಂಡು ಕರೆದೊಯ್ದು ಸುಲಿಗೆ ನಡೆಸುತ್ತಿದ್ದ. ಈ ಸಂಬಂಧ ಈತನ ವಿರುದ್ಧ ಕುಮಾರಸ್ವಾಮಿ ಲೇಔಟ್, ಜಯನಗರ ಮತ್ತು ತಿಲಕ್‌ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು. ಸುಲಿಗೆ ಪ್ರಕರಣದಲ್ಲಿ ತಿಲಕ್‌ನಗರ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಮಾರ್ಚ್‌ 24ರಂದು ಜೈಲಿನಿಂದ ಬಿಡುಗಡೆಯಾಗಿದ್ದ ಆರೋಪಿ, ಎರಡು ದಿನಗಳ ಬಳಿಕ ಅಶೋಕನಗರ ಠಾಣೆ ವ್ಯಾಪ್ತಿಯಲ್ಲಿ ಕೃತ್ಯ ಎಸಗಿದ್ದಾನೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT