ಭಾನುವಾರ, ಜೂನ್ 26, 2022
22 °C
ಪೋಸ್ಟ್‌ಮ್ಯಾನ್‌ಗೆ 2ನೇ ರ್‍ಯಾಂಕ್‌, ಸೆಕ್ಯೂರಿಟಿ ಗಾರ್ಡ್‌ಗೆ 3ನೇ ರ‍್ಯಾಂಕ್‌

ಬಡತನದಲ್ಲೂ ಗ್ರಾಮೀಣ ಪ್ರತಿಭೆಗಳ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗ್ರಾಮೀಣ ಪ್ರದೇಶದ ಬಡ ಕುಟುಂಬದ ಈ ಪ್ರತಿಭೆಗಳು ದುಡಿಮೆ ಜತೆ ಪದವಿ ಪಡೆದು ರ‍್ಯಾಂಕ್‌ ಗಳಿಸಿದವರು. ಓದುವ ಛಲ ಮತ್ತು ಸಾಧಿಸುವ ತುಡಿತದಿಂದ ಜೀವನದಲ್ಲಿ ಯಶಸ್ಸಿನ ಮಾರ್ಗವನ್ನು ಕಂಡುಕೊಂಡಿದ್ದಾರೆ.

ಬೆಂಗಳೂರು ನಗರ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿಯಲ್ಲಿ ಎರಡನೇ ರ‍್ಯಾಂಕ್‌ ಪಡೆದಿರುವ ಕೆ.ಪಿ. ಸಂಜಯ್‌ ಮತ್ತು ಮೂರನೇ ರ‍್ಯಾಂಕ್‌ ಪಡೆದಿರುವ  ಕೆ. ರಾಮಚಂದ್ರಪ್ಪ ಅವರು ತಮಗೆ ಎದುರಾದ ಸವಾಲುಗಳು, ಸಂಕಷ್ಟಗಳ ನಡುವೆಯೂ ಓದುವುದನ್ನು ಮುಂದುವರಿಸಿದವರು. ಏ.11ರಂದು ನಡೆಯಲಿರುವ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದಲ್ಲಿ ಇವರು ಚಿನ್ನದ ಪದಕಗಳನ್ನು ಪಡೆಯಲಿದ್ದಾರೆ.

ನಗರದ ಸುಂಕದಕಟ್ಟೆ ಪ್ರದೇಶದ ವಿಶ್ವನೀದಂ ಅಂಚೆ ಶಾಖೆಯಲ್ಲಿ ಪೋಸ್ಟ್‌ಮ್ಯಾನ್ ಆಗಿ ಕೆಲಸ ಮಾಡುತ್ತಿರುವ 25 ವರ್ಷದ ಕೆ.ಪಿ. ಸಂಜಯ್‌, ವಿ.ವಿ. ಪುರಂ ಕಲಾ ಮತ್ತು ವಾಣಿಜ್ಯ ಸಂಜೆ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದಿದ್ದಾರೆ. ಶೇ 91.75ರಷ್ಟು ಅಂಕಗಳಿಸಿ ವಿಶ್ವವಿದ್ಯಾಲಯಕ್ಕೆ ಎರಡನೇ ರ‍್ಯಾಂಕ್‌ ಗಳಿಸಿದ್ದಾರೆ. ‌ಇದೇ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದ ಸಂಜಯ್‌, ಶೇ 87ರಷ್ಟು ಅಂಕ ಪಡೆದಿದ್ದರು.

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕಾರಕ್ಕಹಳ್ಳಿ ಗ್ರಾಮದ ಸಂಜಯ್‌, ಪೋಸ್ಟ್‌ಮ್ಯಾನ್‌ ಕೆಲಸ ಮಾಡುತ್ತ ಓದಿನ ಜತೆಗೆ, ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ತಂಗಿ ಬಿ.ಇ. (ಎಲೆಕ್ಟ್ರಾನಿಕ್ಸ್‌ ಮತ್ತು ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌) ಓದಲು ಸಹ ಸಂಪೂರ್ಣ ನೆರವಾಗಿದ್ದಾರೆ. ಸಂಜಯ್‌ ಮತ್ತೆ ತಮ್ಮ ಓದು ಮುಂದುವರಿಸಿ ಅಧಿಕಾರಿಯಾಗುವ ಗುರಿ ಹೊಂದಿದ್ದಾರೆ.

‘ತಂದೆ ಅನಕ್ಷರಸ್ಥ. ತಾಯಿ ಎಸ್ಸೆಸ್ಸೆಲ್ಸಿ ಮುಗಿಸಿದ್ದಾರೆ. ನಮಗಿರುವುದು 30 ಗುಂಟೆ ಜಾಗ. ಮನೆಯಲ್ಲಿ ಬಡತನದಿಂದಾಗಿ ಓದುವುದು ಕಷ್ಟವಾಗಿತ್ತು. ಹೀಗಾಗಿ, ಬೇಗ ಕೆಲಸಕ್ಕೆ ಸೇರಿದೆ. ಐಟಿಐ ಮಾಡಿ, ಪಿಯುಸಿ ಓದಿದೆ. ಪೋಸ್ಟ್‌ಮ್ಯಾನ್‌ ಕೆಲಸ ಜತೆ ಸಂಜೆ ಕಾಲೇಜಿಗೆ ಹೋಗಿ ಪದವಿ ಮುಗಿಸಿದ್ದೇನೆ. ರ‍್ಯಾಂಕ್‌ ಪಡೆಯಬೇಕು ಎನ್ನುವುದು ನನ್ನ ಛಲವಾಗಿತ್ತು. ಕೆಪಿಎಸ್‌ಸಿ ಪರೀಕ್ಷೆ ಬರೆದು ಸರ್ಕಾರದಲ್ಲಿ ಅಧಿಕಾರಿಯಾಗುವ ಬಯಕೆ ನನ್ನದು. ಅಂಚೆ ಶಿಕ್ಷಣ ಮೂಲಕ ಓದು ಮುಂದುವರಿಸುತ್ತೇನೆ. ಜತೆ, ಜತೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್‌ ಪಡೆಯಲು ಉದ್ದೇಶಿಸಿದ್ದೇನೆ’ ಎಂದು ಸಂಜಯ್‌ ಹೇಳುತ್ತಾರೆ.

‘ಕಾಲೇಜು ಪ್ರಾಂಶುಪಾಲರಾದ ಶ್ರೀಧರ್‌, ಅಧ್ಯಾಪಕರಾದ ಜಯರಾಮ್‌ ಹಾಗೂ ಅಂಚೆ ಇಲಾಖೆಯ ಅಧಿಕಾರಿಗಳು ಮತ್ತು ನೌಕರರು ಪ್ರೋತ್ಸಾಹ, ಮಾರ್ಗದರ್ಶನ ನೀಡಿದ್ದಾರೆ. ರ‍್ಯಾಂಕ್‌ ಪಡೆದಿದ್ದಕ್ಕೆ ಅಂಚೆ ಇಲಾಖೆ ಗೌರವಿಸಿದ್ದು ಹೆಮ್ಮೆಯ ಕ್ಷಣ’ ಎಂದು ನೆನಪಿಸಿಕೊಳ್ಳುತ್ತಾರೆ.

ಶಿಕ್ಷಕನಾಗುವ ಬಯಕೆ: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಅಜ್ಜಯ್ಯನಹಟ್ಟಿಯ ಗ್ರಾಮದ ಕೆ. ರಾಮಚಂದ್ರಪ್ಪ ಅವರ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಬಡ ಕುಟುಂಬದಲ್ಲಿ ಬೆಳೆದ ರಾಮಚಂದ್ರಪ್ಪ ಅವರಿಗೆ ಶಿಕ್ಷಣ ಪಡೆಯುವುದಕ್ಕಿಂತಲೂ ದುಡಿಯುವುದು ಅನಿವಾರ್ಯವಾಗಿತ್ತು.

ನಗರದ ವಿ.ವಿ. ಪುರ ಕಲಾ ಮತ್ತು ವಾಣಿಜ್ಯ ಪದವಿ (ಹಗಲು) ಕಾಲೇಜಿನಲ್ಲಿ ಅಧ್ಯಯನ ಮಾಡಿರುವ ರಾಮಚಂದ್ರಪ್ಪ ಅವರು, ಬಿ.ಎ. ಪದವಿಯಲ್ಲಿ ಶೇ 89.83ರಷ್ಟು ಅಂಕ ಗಳಿಸಿ ಮೂರನೇ ರ‍್ಯಾಂಕ್‌ ಪಡೆದಿದ್ದಾರೆ. ರಾತ್ರಿ ಹೊತ್ತಿನಲ್ಲಿ ಸೆಕ್ಯೂರಿಟಿ ಗಾರ್ಡ್‌ ಮತ್ತು ಸಮಾರಂಭಗಳಲ್ಲೂ ಊಟ ಬಡಿಸುವ ಕೆಲಸಗಳನ್ನು ಮಾಡುತ್ತಾ ಅಧ್ಯಯನ ಕೈಗೊಂಡಿದ್ದರು.

‘ನನ್ನ ತಂದೆ–ತಾಯಿ ಅನಕ್ಷರಸ್ಥರು. ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ಕಷ್ಟದಾಯಕವಾಗಿತ್ತು. ಜಮೀನು ಸಹ ಇಲ್ಲ. ಎಸ್ಸೆಸ್ಸೆಲ್ಸಿ ಮುಗಿದ ತಕ್ಷಣ ಓದು ನಿಲ್ಲಿಸಿ ದುಡಿಯೋಕೆ ಹೇಳಿದ್ದರು. ನಮ್ಮ ಚಿಕ್ಕಪ್ಪ ಬೆಂಗಳೂರಿಗೆ ಕರೆದುಕೊಂಡು ಬಂದು ಕಾಲೇಜಿಗೆ ಸೇರಿಸಿದರು. ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಗುರಿಯೊಂದಿಗೆ ರಾತ್ರಿ ಸೆಕ್ಯೂರಿಟಿ ಗಾರ್ಡ್‌ ಕೆಲಸ ಮಾಡುತ್ತ ಓದು ಮುಂದುವರಿಸಿದೆ. ಕೆಲ ಬಾರಿ ಸಮಾರಂಭಗಳಲ್ಲಿ ಊಟ ಬಡಿಸುವ ಕೆಲಸಕ್ಕೆ ಹೋಗುತ್ತೇನೆ. ಪಿಯುಸಿಯಲ್ಲೂ ಶೇ 93ರಷ್ಟು ಅಂಕ ಪಡೆದಿದ್ದೆ’ ಎಂದು ರಾಮಚಂದ್ರಪ್ಪ ತಾವು ಬೆಳೆದ ಬಂದ ಪರಿಸ್ಥಿತಿಯನ್ನು ವಿವರಿಸುತ್ತಾರೆ.

‘ಈಗ ಬಿ.ಇಡಿ. ಪಡೆಯಲು ವಿಜಯ ಶಿಕ್ಷಕರ ಮಹಾವಿದ್ಯಾಲಯಕ್ಕೆ ಸೇರಿದ್ದೇನೆ. ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆಯನ್ನು ಸಹ ಕೈಗೊಂಡಿದ್ದೇನೆ. ಸರ್ಕಾರಿ ಅಧಿಕಾರಿ ಅಥವಾ ಶಿಕ್ಷಕನಾಗಬೇಕು ಎನ್ನುವ ಗುರಿ ಹೊಂದಿದ್ದೇನೆ. ನನ್ನ ಓದಿಗೆ ಹಿಂದುಳಿದ ವರ್ಗಗಳ ಇಲಾಖೆಯ ವಸತಿ ನಿಲಯ ವಾರ್ಡನ್‌ ನರಸಿಂಹರಾಜು, ಕಾಲೇಜು ಪ್ರಾಂಶುಪಾಲರಾದ ಈಶ್ವರರೆಡ್ಡಿ ಮತ್ತು ಅಧ್ಯಾಪಕರು ಸ್ಪೂರ್ತಿ ನೀಡಿ, ಮಾರ್ಗದರ್ಶನ ನೀಡಿದ್ದಾರೆ’ ಎಂದು ಸ್ಮರಿಸಿಕೊಳ್ಳುತ್ತಾರೆ.

*
ಸಂಜಯ್‌ ಪಿಯುಸಿನಲ್ಲಿ 9ನೇ ರ‍್ಯಾಂಕ್‌ ಬಂದಿದ್ದ. ಅಧ್ಯಾಪಕರು ಮತ್ತು ಕಾಲೇಜು ವತಿಯಿಂದ ಮಾರ್ಗದರ್ಶನ, ನೆರವು ನೀಡಿದ್ದೇವೆ. ನಮಗೂ, ಕಾಲೇಜಿಗೂ ಹೆಮ್ಮೆಯಾಗಿದೆ
-ಡಾ. ಶ್ರೀಧರ್‌, ವಿ.ವಿ. ಪುರಂ ಕಲಾ ಮತ್ತು ವಾಣಿಜ್ಯ ಸಂಜೆ ಕಾಲೇಜಿನ ಪ್ರಾಂಶುಪಾಲ

*

ರಾಮಚಂದ್ರ ಐಎಎಸ್‌ ಮಾಡುವ ಗುರಿ ಹೊಂದಿದ್ದಾನೆ. ಕಾಲೇಜಿನ ಇತಿಹಾಸದಲ್ಲೇ ಮೊದಲ ಬಾರಿ ರ‍್ಯಾಂಕ್‌ ದೊರೆತಿದೆ. ನಮ್ಮೆಲ್ಲರಿಗೂ ಹೆಮ್ಮೆಯಾಗಿದೆ
-ಡಾ.ಸಿ.ಎಂ. ಈಶ್ವರರೆಡ್ಡಿ, ವಿ.ವಿ. ಪುರಂ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು