ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿ.ವಿ: 804 ಉತ್ತರ ಪತ್ರಿಕೆಗಳ ತಿರುಚಿದರು!

ಸ್ಕ್ಯಾನಿಂಗ್‌ ಏಜೆನ್ಸಿಯಿಂದ ಅಕ್ರಮ l ಬೆಂಗಳೂರು ವಿ.ವಿ ಕಂಪ್ಯೂಟರ್ ವಿಭಾಗದ ಸಿಬ್ಬಂದಿ ಭಾಗಿ
Last Updated 4 ಜನವರಿ 2021, 21:54 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೇಲಿನ ಅಂಕಗಳನ್ನೇ ತಿರುಚಿರುವ ಹಗರಣ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದಿದೆ. 2020ರ ಸೆಪ್ಟೆಂಬರ್‌–ಅಕ್ಟೋಬರ್‌ನಲ್ಲಿ ನಡೆದ ಪದವಿ ಪರೀಕ್ಷೆಗಳಲ್ಲಿ 804 ಉತ್ತರ ಪತ್ರಿಕೆಗಳಲ್ಲಿನ ಅಂಕಗಳನ್ನು ತಿರುಚಲಾಗಿದೆ.

ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್‌ ಮಾಡಿಕೊಡುವ ಗುತ್ತಿಗೆ ಪಡೆದಿದ್ದ ವಿಶ್ವವಿದ್ಯಾಲಯದ ಅಧಿಕೃತ ಏಜೆನ್ಸಿ ಟಿ.ಆರ್.ಎಸ್. ಫಾರಂ ಆ್ಯಂಡ್‌ ಸರ್ವಿಸಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯೇ ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಇದರ ವಿರುದ್ಧ ತನಿಖೆ ನಡೆಸುವಂತೆ ವಿಶ್ವವಿದ್ಯಾಲಯದ ಕುಲಸಚಿವರಾದ (ಆಡಳಿತ) ಕೆ. ಜ್ಯೋತಿ ಅವರು ಜ್ಞಾನಭಾರತಿ ಪೊಲೀಸ್‌ ಠಾಣೆಗೆ ಜ.1ರಂದು ದೂರು ನೀಡಿದ್ದಾರೆ. ಎಫ್ಐಆರ್‌ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ವಿಶ್ವವಿದ್ಯಾಲಯದ ಕಂಪ್ಯೂಟರ್‌ ವಿಭಾಗದ ಪ್ರೋಗ್ರಾಮರ್ಸ್‌, ಶಿಕ್ಷಣಾಧಿಕಾರಿಗಳು ಮತ್ತು ಕೆಲವು ವಿದ್ಯಾರ್ಥಿಗಳು, ಮಧ್ಯವರ್ತಿಗಳ ವಿರುದ್ಧವೂ ದೂರು ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸುವಂತೆ ಕುಲಸಚಿವರು ಕೋರಿದ್ದಾರೆ.

ತಿರುಚಿದ್ದು ಹೇಗೆ ?: ಮೌಲ್ಯಮಾಪಕರಿಗೆ ತಾವು ಮೌಲ್ಯಮಾಪನ ಮಾಡುವ ಉತ್ತರ ಪತ್ರಿಕೆಗಳ ವಿದ್ಯಾರ್ಥಿಯ ಹೆಸರು, ನೋಂದಣಿ ಸಂಖ್ಯೆ ತಿಳಿಯಬಾರದು ಎಂಬ ನಿಯಮವಿದೆ. ಈ ಕಾರಣದಿಂದ ಉತ್ತರಪತ್ರಿಕೆಗಳ ಮುಖಪುಟವನ್ನು ಬೇರ್ಪಡಿಸಿ, ಡಮ್ಮಿ ಸಂಖ್ಯೆ ಹಾಕಿ ಕೊಡಲು ಮತ್ತು ಮೌಲ್ಯಮಾಪನದ ನಂತರ ಡಮ್ಮಿ ಸಂಖ್ಯೆ ಮತ್ತು ನೋಂದಣಿ ಸಂಖ್ಯೆ ತಾಳೆ ಮಾಡುವುದಕ್ಕಾಗಿ ಏಜೆನ್ಸಿಗೆ ಗುತ್ತಿಗೆ ನೀಡಲಾಗುತ್ತದೆ. ಈ ಏಜೆನ್ಸಿಯವರು, ಮೂಲ ನೋಂದಣಿ ಸಂಖ್ಯೆಯನ್ನು ಮತ್ತು ಡಮ್ಮಿ ಸಂಖ್ಯೆಯನ್ನು ಒಂದೆಡೆ ದಾಖಲು ಮಾಡಿಕೊಂಡು, ಒಎಂಆರ್‌ ಪುಟದ ಮೇಲ್ಭಾಗವನ್ನು ಬೇರ್ಪಡಿಸಿ, ಡಮ್ಮಿ ಸಂಖ್ಯೆ ಹಾಕಿ ಮೌಲ್ಯಮಾಪಕರಿಗೆ ನೀಡಿದ್ದಾರೆ. ಮೌಲ್ಯಮಾಪನದ ನಂತರ ಡಮ್ಮಿ ನಂಬರ್‌ನಿಂದ ನೋಂದಣಿ ಸಂಖ್ಯೆಗೆ ಪರಿವರ್ತಿಸುವ ಏಜೆನ್ಸಿ, ಸೆಮಿಸ್ಟರ್‌ವಾರು ಫಲಿತಾಂಶ ಸಿದ್ಧಪಡಿಸಿ ಇ–ಮೆಲ್‌ ಅಥವಾ ಸಿಡಿಯನ್ನು ಕಂಪ್ಯೂಟರ್‌ ವಿಭಾಗದ ಸಿಸ್ಟಮ್‌ ಅನಾಲಿಸ್ಟ್‌ ಅವರಿಗೆ ಕಳುಹಿಸುತ್ತದೆ. ಈ ಫೈಲ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡು ಡೇಟಾ ಬೇಸ್ ಸರ್ವರ್‌ಗೆ ಫಲಿತಾಂಶದ ಅಂಕಗಳನ್ನು ಅಪ್‌ಲೋಡ್‌ ಮಾಡಲು
ಮತ್ತು ಅಪ್‌ಡೇಟ್‌ ಮಾಡಲು ವಿಶ್ವವಿದ್ಯಾಲಯದ ಪ್ರೋಗ್ರಾಮರ್‌ಗಳು ಮತ್ತು ದತ್ತಾಂಶ ನಮೂದಕರಿಗೆ ಅವಕಾಶವಿರುತ್ತದೆ. ಟಿಆರ್‌ಎಸ್‌ ಕಂಪನಿಯ ಕೆಲವರು ಮತ್ತು ವಿಶ್ವವಿದ್ಯಾಲಯದ ಕಂಪ್ಯೂಟರ್‌ ವಿಭಾಗದ ಕೆಲವರು ಈ ಸಂದರ್ಭದಲ್ಲಿಯೇ ಅಂಕಗಳನ್ನು ತಿರುಚಿದ್ದಾರೆ.

ಬೆಳಕಿಗೆ ಬಂದಿದ್ದು ಹೇಗೆ ?: 2020ರ ಸೆಪ್ಟೆಂಬರ್‌–ಅಕ್ಟೋಬರ್‌ನ 2 ಮತ್ತು 4ನೇ ಸೆಮಿಸ್ಟರ್‌ ಬಿಬಿಎಂ/ಬಿಬಿಎ ಕೋರ್ಸ್‌ನ ಪುನರಾವರ್ತಿತ ಫಲಿತಾಂಶವನ್ನು ಸಿಡಿ ಅಥವಾ ಇ–ಮೇಲ್‌ ಮೂಲಕ ಏಜೆನ್ಸಿ ನೀಡಿತ್ತು. ಫಲಿತಾಂಶವನ್ನು ಪ್ರಕಟಿಸುವ ವೇಳೆ
ದತ್ತಾಂಶ ವೀಕ್ಷಿಸಿದಾಗ ಇಬ್ಬರು ವಿದ್ಯಾರ್ಥಿಗಳ ಅಂಕಗಳು ತಿರುಚಿರುವುದು ಪ್ರೋಗ್ರಾಮರ್‌ ಒಬ್ಬರ ಗಮನಕ್ಕೆ ಬಂದಿದೆ. 41 ಅಂಕ ಪಡೆದಿದ್ದ ವಿದ್ಯಾರ್ಥಿಯ ಅಂಕ 50ಕ್ಕೆ ತಿರುಚಿರುವುದು ಗೊತ್ತಾಗಿದೆ. ಅಲ್ಲದೆ, ವಿಶ್ವವಿದ್ಯಾಲಯದ ವಿಭಾಗದ ಕಡೆಯಿಂದಲೂ ಎಂಟು ವಿದ್ಯಾರ್ಥಿಗಳ ಅಂಕಗಳನ್ನು ಹೆಚ್ಚು ಮಾಡಲಾಗಿದೆ. ಕೊನೆಗೆ, ಈ ಸೆಮಿಸ್ಟರ್‌ನ ಎಲ್ಲ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಪರಿಶೀಲಿಸಿದಾಗ 804 ವಿದ್ಯಾರ್ಥಿಗಳ ಅಂಕ ತಿರುಚಿರುವುದು ಗಮನಕ್ಕೆ ಬಂದಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಮೂರು ವರ್ಷಗಳಿಂದ ನಡೆಯುತ್ತಿದ್ದ ಅಕ್ರಮ?

ಒಂದೇ ವರ್ಷದ ಪರೀಕ್ಷೆಗೆ ಸಂಬಂಧಿಸಿದಂತೆ ಇಷ್ಟು ಉತ್ತರಪತ್ರಿಕೆಗಳನ್ನು ತಿರುಚಿರುವುದು ಬೆಳಕಿಗೆ ಬಂದಿದೆ. ಮೂರು–ನಾಲ್ಕು ವರ್ಷಗಳಿಂದಲೂ ಇದು ನಡೆಯುತ್ತಿದೆ. ಬೆಂಗಳೂರು ವಿಶ್ವವಿದ್ಯಾಲಯ ಮಾತ್ರವಲ್ಲದೆ, ಹಲವು ವಿಶ್ವವಿದ್ಯಾಲಯಗಳಲ್ಲಿ ಸ್ಕ್ಯಾನಿಂಗ್‌ ಗುತ್ತಿಗೆ ಪಡೆದಿರುವ ಏಜೆನ್ಸಿಗಳು ಈ ಕೆಲಸದಲ್ಲಿ ನಿರತವಾಗಿವೆ. ಏಜೆನ್ಸಿಗಳ ಜೊತೆಗೆ, ಆಯಾ ಕಾಲೇಜುಗಳ ಸಿಬ್ಬಂದಿ, ವಿದ್ಯಾರ್ಥಿಗಳು, ಮಧ್ಯವರ್ತಿಗಳು ಮತ್ತು ವಿಶ್ವವಿದ್ಯಾಲಯಗಳ ಸಿಬ್ಬಂದಿಯ ಕೈವಾಡವೂ ಇದ್ದು ದೊಡ್ಡ ಜಾಲವೇ ಇದೆ. ಈ ನಿಟ್ಟಿನಲ್ಲಿ ಉನ್ನತಮಟ್ಟದ ತನಿಖೆ ಆಗಬೇಕು ಎಂದು ಸಿಂಡಿಕೇಟ್ ಸದಸ್ಯರೊಬ್ಬರು ಹೇಳಿದರು.

ವಿಶೇಷ ತಂಡ ರಚನೆ?

‘ಇದು ಠಾಣಾ ವ್ಯಾಪ್ತಿ ಮೀರಿದ ಪ್ರಕರಣ. 800ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿ ಭಾಗವಹಿಸಿರುವುದರಿಂದ ವಿಚಾರಣೆ ನಡೆಸಲು ಹೆಚ್ಚು ಸಿಬ್ಬಂದಿ ಬೇಕು ಮತ್ತು ದೊಡ್ಡ ಮಟ್ಟದಲ್ಲಿ ತನಿಖೆ ನಡೆಯಬೇಕು. ತಾಂತ್ರಿಕವಾಗಿ ಹೆಚ್ಚು ನೈಪುಣ್ಯ ಹೊಂದಿದವರು ತನಿಖೆ ಕೈಗೆತ್ತಿಕೊಳ್ಳಬೇಕು. ಈ ನಿಟ್ಟಿನಿಂದ ವಿಶೇಷ ತಂಡ ರಚಿಸುವ ಅಥವಾ ಸಿಒಡಿಗೆ ವಹಿಸುವ ಸಾಧ್ಯತೆ ಇದೆ ಎಂದು ಹಿರಿಯ ಪೊಲೀಸ್
ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT