ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಲ್ಲಿ ಗ್ಯಾಂಗ್‌ರೇಪ್: ಬಾಂಗ್ಲಾ ಅಕ್ರಮ ವಲಸಿಗರ ಬಳಿ ಆಧಾರ್, ವೋಟರ್ ಐಡಿ

Last Updated 29 ಮೇ 2021, 2:40 IST
ಅಕ್ಷರ ಗಾತ್ರ

ಬೆಂಗಳೂರು: ಬಾಂಗ್ಲಾದೇಶದ 23 ವರ್ಷದ ಯುವತಿ ಜೊತೆ ಮೃಗೀಯವಾಗಿ ವರ್ತಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದ ಇಬ್ಬರು ಆರೋಪಿಗಳ ಕಾಲಿಗೆ ಪೂರ್ವ ವಿಭಾಗದ ಪೊಲೀಸರು ಗುಂಡು ಹೊಡೆದಿದ್ದಾರೆ. ಕೃತ್ಯದಿಂದ ತೀವ್ರ ಗಾಯಗೊಂಡು ನಾಪತ್ತೆಯಾಗಿದ್ದ ಸಂತ್ರಸ್ತೆ ಕೇರಳದಲ್ಲಿ ಪತ್ತೆಯಾಗಿದ್ದಾರೆ.

‘ರಾಮಮೂರ್ತಿನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೃತ್ಯವನ್ನು ಆರೋಪಿಗಳೇ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹರಿಯಬಿಟ್ಟಿದ್ದರು. ಅಸ್ಸಾಂ ಪೊಲೀಸರು ನೀಡಿದ್ದ ಮಾಹಿತಿ ಆಧರಿಸಿ ಆರೋಪಿಗಳಾದ ಬಾಂಗ್ಲಾದೇಶದ ಸಾಗರ್, ಮೊಹಮ್ಮದ್ ಬಾಬಾ ಶೇಕ್, ರಿದಾಯ್ ಬಾಬು ಹಾಗೂ ಹೈದರಾಬಾದ್‌ನ ಹಕೀಲ್ ಎಂಬುವರನ್ನು ಗುರುವಾರ ಬಂಧಿಸಲಾಗಿತ್ತು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ನಾಲ್ವರು ಆರೋಪಿಗಳನ್ನು ಮಹಜರು ಪ್ರಕ್ರಿಯೆಗಾಗಿ ಕೆ. ಚನ್ನಸಂದ್ರದ ಕನಕನಗರಕ್ಕೆ ಶುಕ್ರವಾರ ಬೆಳಿಗ್ಗೆ ಕರೆದೊಯ್ಯಲಾಗಿತ್ತು. ಇದೇ ಸಂದರ್ಭದಲ್ಲಿ ಸಾಗರ್ ಹಾಗೂ ರಿದಾಯ್ ಬಾಬು, ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದರು.’

‘ಗಾಳಿಯಲ್ಲಿ ಗುಂಡು ಹಾರಿಸಿದ್ದ ಪೊಲೀಸ್ ಅಧಿಕಾರಿ, ಶರಣಾಗುವಂತೆ ಸೂಚಿಸಿದ್ದರು. ಆದರೂ ಆರೋಪಿಗಳು ತಪ್ಪಿಸಿಕೊಳ್ಳಲು ಮುಂದಾಗಿದ್ದರು. ಈ ವೇಳೆ ಅಧಿಕಾರಿ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡಿರುವ ಆರೋಪಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಬ್ಬಂದಿಗೂ ಗಾಯವಾಗಿದ್ದು, ಚಿಕಿತ್ಸೆ ಪಡೆದುಕೊಂಡಿದ್ದಾರೆ’ ಎಂದೂ ಅಧಿಕಾರಿ ತಿಳಿಸಿದರು.

‘ಕೃತ್ಯ ನಡೆದಿದ್ದ ಮನೆಯಲ್ಲಿದ್ದ ಹಾಸಿಗೆ, ದಿಂಬು, ಮದ್ಯದ ಬಾಟಲಿ ಸೇರಿದಂತೆ ಹಲವು ವಸ್ತುಗಳನ್ನು ಪೊಲೀಸರು ಮಹಜರು ವೇಳೆ ಸಂಗ್ರಹಿಸಿದ್ದಾರೆ. ಬಾಂಗ್ಲಾದೇಶದ ಆರೋಪಿಗಳ ಬಳಿ ಆಧಾರ್, ಚುನಾವಣಾ ಗುರುತಿನ ಚೀಟಿ ಹಾಗೂ ಇತರೆ ದಾಖಲೆಗಳೂ ಸಿಕ್ಕಿವೆ’ ಎಂದೂ ತಿಳಿಸಿದರು.

ಕೇರಳದಲ್ಲಿ ಸಂತ್ರಸ್ತೆ: ‘ಅತ್ಯಾಚಾರ ಎಸಗಿದ್ದ ಆರೋಪಿಗಳು ಜೀವ ಬೆದರಿಕೆ ಒಡ್ಡಿದ್ದರಿಂದ ಹೆದರಿದ ಸಂತ್ರಸ್ತೆ ಕೇರಳಕ್ಕೆ ಹೋಗಿದ್ದರು. ಸ್ನೇಹಿತರೊಬ್ಬರ ಮನೆಯಲ್ಲಿ ಉಳಿದುಕೊಂಡಿದ್ದರು. ಸಂತ್ರಸ್ತೆಯ ಸುಳಿವರಿತು ಕೇರಳಕ್ಕೆ ಹೋಗಿದ್ದ ಪೂರ್ವ ವಿಭಾಗದ ಮಹಿಳಾ ಇನ್‌ಸ್ಪೆಕ್ಟರ್ ನೇತೃತ್ವದ ತಂಡ, ಅವರನ್ನು ಪತ್ತೆ ಮಾಡಿ ನಗರಕ್ಕೆ ಕರೆತರುತ್ತಿದೆ’ ಎಂದು ಅಧಿಕಾರಿ ವಿವರಿಸಿದರು.

‘ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಹೇಳಿಕೆ ಪಡೆಯಲಾಗುವುದು. ನಂತರ ಮಹಜರು ನಡೆಸಿ ಆರೋಪಿಗಳ ಗುರುತು ಪತ್ತೆಗೆ ಪರೇಡ್ ನಡೆಸಲಾಗುವುದು’ ಎಂದೂ ಹೇಳಿದರು.

‘ಅತ್ಯಾಚಾರಕ್ಕೆ ಮಹಿಳೆಯರಿಬ್ಬರ ನೆರವು’
‘ಸಂತ್ರಸ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲು ಆರೋಪಿಗಳಿಗೆ ಸಹಕಾರ ನೀಡಿದ್ದ ಆರೋಪದಡಿ ಇಬ್ಬರು ಮಹಿಳೆಯರನ್ನೂ ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಬೇಕಿದೆ’ ಎಂದು ಅಧಿಕಾರಿ ಮಾಹಿತಿ ನೀಡಿದರು.

‘ಬಂಧಿತ ಮಹಿಳೆಯರು, ಸಂತ್ರಸ್ತೆ ಜೊತೆಯಲ್ಲಿ ಇರುತ್ತಿದ್ದರು. ಕೃತ್ಯದ ದಿನವೂ ಮಹಿಳೆಯರು ಮನೆಯಲ್ಲೇ ಇದ್ದರು. ಆರೋಪಿಗಳೊಂದಿಗೆ ಸೇರಿ ಸಂತ್ರಸ್ತೆ ಜೊತೆ ಅವರೂ ಜಗಳ ತೆಗೆದಿದ್ದರು. ಸಂತ್ರಸ್ತೆಯ ಬಟ್ಟೆ ಬಿಚ್ಚಿದ್ದ ಬಂಧಿತ ಮಹಿಳೆ, ಹೊಟ್ಟೆ ಮೇಲೆ ಕುಳಿತು ಕೈಗಳನ್ನು ಅದುಮಿ ಹಿಡಿದಿದ್ದಳು. ಉಳಿದ ಆರೋಪಿಗಳು ಗುಪ್ತಾಂಗದೊಳಗೆ ಮದ್ಯದ ಬಾಟಲಿ ಹಾಗೂ ಕಾಲ್ಬೆರಳು ತುರುಕಿ ಮೃಗೀಯವಾಗಿ ವರ್ತಿಸಿದ್ದರು. ಇವೆಲ್ಲವೂ ವಿಡಿಯೊದಲ್ಲಿ ಸೆರೆಯಾಗಿತ್ತು’ ಎಂದೂ ಅಧಿಕಾರಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT