ಬ್ಯಾಂಕ್‌ಗಳ ಖಾಸಗೀಕರಣ ಅಭಿವೃದ್ಧಿಗೆ ಮಾರಕ: ನಿವೃತ್ತ ನ್ಯಾಮಮೂರ್ತಿ ಗೋಪಾಲ ಗೌಡ

ಬೆಂಗಳೂರು: ‘ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣವು ದೇಶದ ಅಭಿವೃದ್ಧಿಗೆ ಮಾರಕವಾದುದು. ಇದು ಸಂವಿಧಾನ ವಿರೋಧಿ ನಿಲುವು. ಇದರಿಂದ ಸಾಮಾಜಿಕ ನ್ಯಾಯ ಮರೆಯಾಗಲಿದೆ’ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಮಮೂರ್ತಿ ವಿ.ಗೋಪಾಲ ಗೌಡ ತಿಳಿಸಿದರು.
53ನೇ ಬ್ಯಾಂಕ್ ರಾಷ್ಟ್ರೀಕರಣ ದಿನಾಚರಣೆಯ ಅಂಗವಾಗಿ ಬಿ.ಇ.ಎಫ್.ಐ-ಕರ್ನಾಟಕ ಹಮ್ಮಿಕೊಂಡಿದ್ದ ‘ಬ್ಯಾಂಕಿಂಗ್ ಕ್ಷೇತ್ರ: ಅಂದು–ಇಂದು’ ಕುರಿತ ವೆಬಿನಾರ್‌ನಲ್ಲಿ ಭಾನುವಾರ ಅವರು ಮಾತನಾಡಿದರು.
‘ಬ್ಯಾಂಕ್‌ಗಳ ಖಾಸಗೀಕರಣದಿಂದ ದೇಶಕ್ಕೆ ದೊಡ್ಡ ಆಪತ್ತು ಎದುರಾಗಲಿದೆ ಎಂದು ಬುದ್ದಿಜೀವಿಗಳು ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರದ ನೀತಿಯ ಬಗ್ಗೆ ನ್ಯಾಯಮೂರ್ತಿಗಳೂ ಕಳವಳ ವ್ಯಕ್ತಪಡಿಸಿದ್ದಾರೆ’ ಎಂದರು.
‘1969ರಲ್ಲಿ ಇಂದಿರಾ ಗಾಂಧಿಯವರು ಸಂವಿಧಾನಕ್ಕೆ ತಿದ್ದುಪಡಿ ತಂದು ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡಿದ್ದರು. ಅದರಿಂದ ಕೃಷಿಕರಿಗೆ, ನಿರುದ್ಯೋಗಿ ಯುವಕರಿಗೆ, ಮಹಿಳೆಯರಿಗೆ ಹಾಗೂ ತಳಸ್ತರದ ಜನರಿಗೆ ಹೆಚ್ಚು ಅನುಕೂಲವಾಗಿತ್ತು. ಆದರೆ 1991ರಲ್ಲಿ ಪಿ.ವಿ.ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಬುನಾದಿ ಹಾಕಿಕೊಟ್ಟಿತ್ತು. ಇದನ್ನು ಈಗಿನ ಎನ್‌ಡಿಎ ಸರ್ಕಾರ ಮುಂದುವರಿಸಿಕೊಂಡು ಹೋಗುತ್ತಿದೆ. ಕೇಂದ್ರ ಸರ್ಕಾರದ ಈ ಕ್ರಮದ ವಿರುದ್ಧ ನಾವೆಲ್ಲ ಗಟ್ಟಿ ಧ್ವನಿ ಎತ್ತಬೇಕು’ ಎಂದು ತಿಳಿಸಿದರು.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ‘ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಯಾರ ಹಂಗಿನಲ್ಲೂ ಇರಬಾರದು. ಆದರೆ ಈಗ ದೇಶದಲ್ಲಿ ಅಂತಹ ಪರಿಸ್ಥಿತಿ ಇಲ್ಲ. ಬಹುರಾಷ್ಟ್ರೀಯ ಕಂಪನಿಗಳು ಹಾಗೂ ದೇಶಿ ಬಂಡವಾಳ ಹೂಡಿಕೆದಾರರು ಸರ್ಕಾರವನ್ನು ನಿಯಂತ್ರಿಸುತ್ತಿದ್ದಾರೆ. ಶಾಸಕಾಂಗ ಹಾಗೂ ನ್ಯಾಯಾಂಗದ ಮೇಲೆ ಪ್ರಭಾವ ಬೀರುತ್ತಿದ್ದಾರೆ’ ಎಂದು ತಿಳಿಸಿದರು.
‘ದೇಶದಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯಗಳೆರಡೂ ಇರಲೇಬೇಕು. ಭದ್ರತೆ, ಸಂಶೋಧನೆ, ಅಭಿವೃದ್ಧಿ ಹಾಗೂ ಹಣಕಾಸು ಕ್ಷೇತ್ರಗಳು ಸರ್ಕಾರದ ಸ್ವಾಮ್ಯದಲ್ಲಿರಬೇಕು. ಇಲ್ಲದೆ ಹೋದರೆ ದೇಶದ ಭದ್ರತೆಗೆ ಕುತ್ತು ಉಂಟಾಗುತ್ತದೆ’ ಎಂದರು.
‘ಕಲ್ಯಾಣ ರಾಜ್ಯ ಕಟ್ಟುವುದು ಸಂವಿಧಾನದ ಮೂಲ ಆಶಯ. ಆದರೆ ನೀರು, ಶಿಕ್ಷಣ, ಆರೋಗ್ಯ, ವಸತಿ, ಸಾರಿಗೆ ಹೀಗೆ ಎಲ್ಲಾ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸಲಾಗುತ್ತಿದೆ. ಶೇ 60ರಷ್ಟು ಸಂಪತ್ತು ಶೇ 1ರಷ್ಟು ಮಂದಿಯ ಬಳಿ ಇದೆ. ಹೀಗಾಗಿ ಸಮಾಜದಲ್ಲಿ ಅಸಮಾನತೆ ನೆಲೆಸಿದೆ. ಖಾಸಗೀಕರಣದಿಂದ ಸಾಮಾಜಿಕ ನ್ಯಾಯವೂ ಅಪ್ರಸ್ತುತವಾಗುತ್ತಿದೆ’ ಎಂದು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ (ಹಂಪಿ) ನಿವೃತ್ತ ಪ್ರಾಧ್ಯಾಪಕ ಎಂ.ಚಂದ್ರ ಪೂಜಾರಿ ‘ಅರ್ಥಶಾಸ್ತ್ರ ಹಾಗೂ ರಾಜಕೀಯದ ನಡುವೆ ಗಾಢವಾದ ಸಂಬಂಧ ಇದೆ. ಜನಪರ ಆರ್ಥಿಕ ನೀತಿಗಳು ಬೇಕಾದರೆ ಜನಪರ ರಾಜಕೀಯವೂ ಇರಬೇಕಾಗುತ್ತದೆ. ರಾಷ್ಟ್ರೀಕರಣದ ನಂತರ ಬ್ಯಾಂಕ್‌ಗಳ ಮೇಲೆ ಜನರಿಗೆ ನಂಬಿಕೆ ಹುಟ್ಟಿಕೊಂಡಿತ್ತು. ಆರ್ಥಿಕತೆಗೂ ಹೊಸ ಚೈತನ್ಯ ಮೂಡಿತ್ತು’ ಎಂದರು.
ಸಿಐಟಿಯು–ಕರ್ನಾಟಕ ಅಧ್ಯಕ್ಷೆ ಎಸ್.ವರಲಕ್ಷ್ಮಿ, ಬಿಇಎಫ್‌ಐ–ಕರ್ನಾಟಕ ಅಧ್ಯಕ್ಷ ಕೆ.ಶ್ರೀನಿವಾಸ ಬಾಬು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.