ಭಾನುವಾರ, ನವೆಂಬರ್ 29, 2020
25 °C
ಬರಗೂರು ರಾಮಚಂದ್ರಪ್ಪ ಅವರ ಕೊಡುಗೆ ಸ್ಮರಿಸಿದ ಶಿಷ್ಯ ವರ್ಗ

‘ಸಂಕಷ್ಟದಲ್ಲಿದ್ದ ವರ್ಗಗಳಿಗೆ ಧ್ವನಿಯಾದ ಬರಗೂರು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಭಾಷೆ, ಸಿನಿಮಾ, ರಾಜಕೀಯ, ಆರ್ಥಿಕತೆ ಸೇರಿದಂತೆ ವಿವಿಧ ವಿಷಯಗಳ ಮೇಲೆ ಸಾಹಿತ್ಯ ಸೃಷ್ಟಿಸುವ ಬರಗೂರು ರಾಮಚಂದ್ರಪ್ಪ ಅವರು, ಸಂಕಷ್ಟಕ್ಕೆ ಸಿಲುಕಿದ ವಿವಿಧ ದುರ್ಬಲ ವರ್ಗಗಳ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ’ ಎಂದು ವಿವಿಧ ಕ್ಷೇತ್ರದ ಗಣ್ಯರು ಶ್ಲಾಘಿಸಿದರು.

ಬರಗೂರು ಮೇಷ್ಟ್ರು ಶಿಷ್ಯರ ಬಳಗವು ಗುರುವಾರ ಆಯೋಜಿಸಿದ್ದ ‘ನಮ್ಮ ಮೇಷ್ಟ್ರು ನಮ್ಮ ಹೆಮ್ಮೆ’ ವೆಬಿನಾರ್‌ನಲ್ಲಿ ಬರಗೂರು ರಾಮಚಂದ್ರಪ್ಪ ಅವರು ಚಳವಳಿ, ಸಾಹಿತ್ಯ, ಸಿನಿಮಾ, ಭಾಷೆ ಹಾಗೂ ಶಿಕ್ಷಣಕ್ಕೆ ನೀಡಿದ ಕೊಡುಗೆಗಳನ್ನು ಅವರ ಆಪ್ತರು ಸ್ಮರಿಸಿದರು.

ಚಿಕ್ಕಮಗಳೂರಿನ ಡಾ.ಆರ್.ಎ. ಪುಷ್ಪ ಭಾರತಿ ಅವರು, ‘ಬರಗೂರು ರಾಮಚಂದ್ರಪ್ಪ ಅವರ ಕೃತಿಯ ಮೂಲವಸ್ತು ಯಾವಾ
ಗಲೂ ಸಾಮಾಜಿಕ ಕಳಕಳಿಯೇ ಆಗಿರುತ್ತದೆ. ಜ್ವಲಂತ ವಿಷಯಗಳನ್ನು ಅಂಕಿ–ಅಂಶಗಳ ಸಹಿತ ಓದುಗರಿಗೆ ಕಟ್ಟಿಕೊಡುತ್ತಾ ಬಂದಿದ್ದಾರೆ’ ಎಂದರು.

ಸಂಘಟನೆಗೆ ಒತ್ತು: ಬೆಳಗಾವಿಯ ಡಾ.ವೈ.ಬಿ. ಹಿಮ್ಮಡಿ, ‘1960–70ರ ಅವಧಿಯಲ್ಲಿ ರಾಜ್ಯದಲ್ಲಿ ಅತ್ಯಾಚಾರ, ದೌರ್ಜನ್ಯಗಳ ವಿರುದ್ಧ ಹೋರಾಡಲು ಜನಪರ ಚಳವಳಿಗಳು ನಡೆದವು. 1979ರಲ್ಲಿ  ಧರ್ಮಸ್ಥಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
ದಲ್ಲಿ ದಲಿತ ಸಾಹಿತ್ಯ ಗೋಷ್ಠಿ ನಡೆಸುವಂತೆ ಸಾಹಿತ್ಯ ಪರಿಷತ್ತಿಗೆ ಒತ್ತಾಯಿಸಲಾಯಿತು. ಆದರೆ, ಅಂದಿನ ಅಧ್ಯಕ್ಷರು ಅದಕ್ಕೆ ಒಪ್ಪದ ಕಾರಣ ಸಮ್ಮೇಳನದ ದಿನವೇ ಬೆಂಗಳೂರಿನಲ್ಲಿ ಬಂಡಾಯ ಸಾಹಿತ್ಯ ಸಮ್ಮೇಳನ ನಡೆಸಲಾಯಿತು’ ಎಂ‌ದರು.

‘ಇಡೀ ಕರ್ನಾಟಕವನ್ನು ಸುತ್ತಾಡಿದ ಬರಗೂರು ರಾಮಚಂದ್ರ ಅವರು, ತಮಗಿರುವ ವೈಚಾರಿಕ ಹಾಗೂ ಬೌದ್ಧಿಕ ಚಿಂತನೆಗಳ ಮೂಲಕ ಬಂಡಾಯ ಸಾಹಿತ್ಯ ಚಳವಳಿಯನ್ನು ಕಟ್ಟಿದರು. ನವ್ಯದ ವಿಮರ್ಶಕರು ಬಂಡಾಯ ಸಾಹಿತ್ಯವು ಇದು ಸಾಹಿತ್ಯದ ಪ್ರಕಾರವಲ್ಲ ಎಂದು
ವಿಮರ್ಶೆ ಮಾಡಿದಾಗ ಅದಕ್ಕೆ ತಕ್ಕ ಉತ್ತರ ನೀಡಿ, ಬೆಳೆಸಿದರು’ ಎಂದರು.

ಹಿರಿಯ ಪತ್ರಕರ್ತ ಗಂಗಾಧರ ಮೊದಲಿಯಾರ್, ‘ಸಾಹಿತ್ಯ ಮತ್ತು ಸಿನಿಮಾ ಅಂತರ್ಗತವಾಗಿರುತ್ತದೆ. ಮೊದಲು ಪ್ರಭಾವಗಳಿಂದ ಪ್ರೇರಿತವಾಗಿ ಸಿನಿಮಾಗಳನ್ನು ನಿರ್ಮಿಸಲಾಗುತ್ತಿತ್ತು. ಮನುಷ್ಯ ಪ್ರೀತಿಯ ಅನ್ವೇಷಣೆಗೆ ಬರಗೂರು ಅವರು ಒತ್ತು ನೀಡುತ್ತಾ ಬಂದರು’ ಎಂದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು