ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪೇಗೌಡರ ಕನಸಿನಂತೆ ಬೆಂಗಳೂರು ಅಭಿವೃದ್ಧಿ: ಬಸವರಾಜ ಬೊಮ್ಮಾಯಿ

Last Updated 12 ನವೆಂಬರ್ 2022, 2:19 IST
ಅಕ್ಷರ ಗಾತ್ರ

ಬೆಂಗಳೂರು: ‘ನಾಡಪ್ರಭು ಕೆಂಪೇಗೌಡರ ಚಿಂತನೆ ಮತ್ತು ಆಶಯಗಳಂತೆ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಸಂಕಲ್ಪ ಮಾಡಿದ್ದೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಭುವನಹಳ್ಳಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ‘ಶತಮಾನಗಳ ಹಿಂದೆಯೇ ಬೆಂಗಳೂರಿಗರಿಗೆ ವಿಜಯನಗರ ಸಾಮ್ರಾಜ್ಯದ ಅಭಿವೃದ್ಧಿಯ ಪರಿಕಲ್ಪನೆ ಯನ್ನು ಅವರು ಪರಿಚಯಿಸಿದ್ದರು. ಸರ್ಕಾರವೂ ಅದೇ ಹಾದಿಯಲ್ಲಿ ಸಾಗುವ ಸಂಕಲ್ಪ ಮಾಡಿದೆ’ ಎಂದರು.

ಪ್ರಧಾನಿ ಮೋದಿಯವರೂ ರಾಜ್ಯದ ಅಭಿವೃದ್ಧಿಗೆ ಬೆಂಗಾವಲಾಗಿ ನಿಂತಿದ್ದಾರೆ. ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ವಂದೇ ಭಾರತ್‌ ರೈಲು ಮತ್ತು ಎರಡನೆ ಟರ್ಮಿನಲ್‌ ಈಗ ಅವರು ನೀಡಿರುವ ದೊಡ್ಡ ಕೊಡುಗೆಗಳು ಎಂದು ಹೇಳಿದರು.

ನವೋದ್ಯಮದ ಶಕ್ತಿಯಿಂದ ದೇಶ ಗೆದ್ದಿದೆ –ಪ್ರಧಾನಿ
ಬೆಂಗಳೂರು:
‘ಭಾರತದ ನವೋದ್ಯಮಗಳ ಶಕ್ತಿ ಬೆಂಗಳೂರು ನಗರದಲ್ಲಿದೆ. ಈ ಶಕ್ತಿಯೇ ದೇಶವನ್ನು ಇತರ ರಾಷ್ಟ್ರಗಳ ಎದುರು ಗೆಲ್ಲಿಸಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಭುವನಹಳ್ಳಿಯಲ್ಲಿ ಶುಕ್ರವಾರ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅವರು, ‘ನವೋದ್ಯಮದಲ್ಲಿ ಹೊಸತನ್ನು ಸೃಷ್ಟಿಸುವ ಅಪರಿಮಿತ ವಿಶ್ವಾಸವಿದೆ. ಬೆಂಗಳೂರಿನ ಯುವಜನರ ಈ ವಿಶ್ವಾಸವೇ ದೇಶಕ್ಕೆ ಹೊಸ ಅವಕಾಶಗಳನ್ನು ತೆರೆದಿದೆ’ ಎಂದರು.

ಜಗತ್ತು ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದಾಗಲೇ ₹ 4 ಲಕ್ಷ ಕೋಟಿ ಹೂಡಿಕೆ ಕರ್ನಾಟಕಕ್ಕೆ ಹರಿದುಬಂದಿದೆ. ಕಳೆದ ವರ್ಷ ವಿದೇಶ ನೇರ ಬಂಡವಾಳ ಆಕರ್ಷಣೆಯಲ್ಲಿ ಈ ರಾಜ್ಯವು ಇಡೀ ದೇಶಕ್ಕೆ ಮಾದರಿಯಾಗಿತ್ತು. ಎಲ್ಲ ಕ್ಷೇತ್ರಗಳಲ್ಲೂ ಕರ್ನಾಟಕಕ್ಕೆ ಹೂಡಿಕೆ ಹರಿದುಬರುತ್ತಿದೆ. ದೇಶದ ರಕ್ಷಣಾ ಇಲಾಖೆಯು ಬಳಸುತ್ತಿರುವ ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ‍ಪೈಕಿ ಶೇಕಡ 70ರಷ್ಟು ಇಲ್ಲಿಯೇ ಉತ್ಪಾದನೆಯಾಗುತ್ತಿವೆ ಎಂಬುದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು.

ಭೀಮ್‌ ಯುಪಿಐ, ದೇಶೀಯ 5–ಜಿ ತಂತ್ರಜ್ಞಾನ ಸೇರಿ ಹಲವು ಕನಸುಗಳನ್ನು ಬೆಂಗಳೂರು ಸಾಕಾರಗೊಳಿಸಿದೆ. ಕೆಂಪೇಗೌಡರ ಕಲ್ಪನೆಯಂತೆ ಈ ನಗರದಲ್ಲಿ ವಾಣಿಜ್ಯ, ಸಂಸ್ಕೃತಿ ಮತ್ತು ಸೌಲಭ್ಯ ಎಲ್ಲವೂ ಇದೆ. ನಗರ ನಿರ್ಮಾತೃವಿನ ದೂರದೃಷ್ಟಿ ಈಗಲೂ ಫಲ ನೀಡುತ್ತಿದೆ ಎಂದರು.

ಪ್ರಾಸ್ತಾವಿಕ ಭಾಷಣ ಮಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ‘ಎ.ಬಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ವಿಮಾನ ನಿಲ್ದಾಣದ ಮೊದಲ ಟರ್ಮಿನಲ್‌ ಅನ್ನು ಬೆಂಗಳೂರಿಗೆ ಕೊಡುಗೆಯಾಗಿ ನೀಡಿದ್ದರು. ಈಗ ಮೋದಿ ಅವರು ಎರಡನೇ ಟರ್ಮಿನಲ್‌ ನೀಡಿದ್ದಾರೆ’ ಎಂದರು.

ಶಿಷ್ಟಾಚಾರ ಉಲ್ಲಂಘನೆ– ಶಾಸಕ ಟೀಕೆ
ದೇವನಹಳ್ಳಿ:
‘ನಾಡಪ್ರಭು ಕೆಂಪೇಗೌಡರ ಪ್ರಗತಿ ಪ್ರತಿಮೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನನ್ನಿಂದ ಕಸಿದುಕೊಂಡು ಹಕ್ಕುಚ್ಯುತಿ ಮಾಡಿದ್ದಾರೆ’ ಎಂದು ದೇವನಹಳ್ಳಿ ಜೆಡಿಎಸ್‌ ಶಾಸಕ ನಿಸರ್ಗ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಾಸಕ ಸ್ಥಾನಕ್ಕೆ ಉಂಟಾಗಿರುವ ಹಕ್ಕುಚ್ಯುತಿಗೆ ಸಂಬಂಧಿಸಿದಂತೆ ಕಾನೂನಾತ್ಮಕವಾಗಿ ಶಾಸಕಾಂಗದಿಂದ ನ್ಯಾಯ ಪಡೆದುಕೊಳ್ಳುತ್ತೇನೆ’ ಎಂದರು.

ಕಾರ್ಯಕ್ರಮ ಮುಗಿಯುವ ವೇಳೆಗೆ ಆಹ್ವಾನ ಪತ್ರಿಕೆಯನ್ನು ಗ್ರಾಮ ಪಂಚಾಯಿತಿಯ ಪೌರ ಕಾರ್ಮಿಕರೊಬ್ಬರ ಕೈಯಲ್ಲಿ ಕಳುಹಿಸಲಾಗಿತ್ತು. ಆತ ರಸ್ತೆಯಲ್ಲಿಯೇ ಆಹ್ವಾನ ಪತ್ರಿಕೆ ನೀಡಲು ಮುಂದಾಗಿದ್ದ. ಇಷ್ಟರ ಮಟ್ಟಿಗೆ ಬಿಜೆಪಿ ಸರ್ಕಾರ ಜನಪ್ರತಿನಿಧಿಯನ್ನು ಗೌರವಿಸುತ್ತಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT