ಶನಿವಾರ, ನವೆಂಬರ್ 28, 2020
24 °C
ಸ್ಮಾರ್ಟ್‌ ಸಿಟಿ ಕಾಮಗಾರಿ– ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸೂಚನೆ

ಅರೆ ಬರೆ ಕಾಮಗಾರಿ– ಪಾಲಿಕೆ ಆಡಳಿತಾಧಿಕಾರಿ ಗರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸ್ಮಾರ್ಟ್‌ ಸಿಟಿ ಯೋಜನೆಯಡಿ ನಗರದಲ್ಲಿ ಕೈಗೆತ್ತಿಕೊಂಡಿರುವ ಟೆಂಡರ್‌ ಶ್ಯೂರ್ ಮಾದರಿಯ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾದ ಬಗ್ಗೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ ಗುಪ್ತ ಗುರುವಾರ ಅಸಮಾಧಾನ ವ್ಯಕ್ತಪಡಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ ವತಿಯಿಂದ ಟೆಂಡರ್ ಶ್ಯೂರ್ ಮಾದರಿಯಲ್ಲಿ 36 ರಸ್ತೆಗಳನ್ನು ಅಭೀವೃದ್ಧೀಪಡಿಸಲಾಗುತ್ತಿದ್ದು, ಆಡಳಿತಾಧಿಕಾರಿಯವರು ಈ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.

ರಸ್ತೆ ಕಾಮಗಾರಿಗಳ ಅನುಷ್ಠಾನದಲ್ಲಿ ವಿಳಂಬವಾಗಿರುವುದು, ಕಾಮಗಾರಿಯನ್ನು ಅರ್ಧಂಬರ್ಧ ನಡೆಸಿದ್ದರಿಂದ ಸಾರ್ವಜನಿಕರಿಗೆ ಕಿರಿ ಕಿರಿ ಉಂಟಾಗುತ್ತಿರುವುದು ಹಾಗೂ ಕೆಲಸ ನಡೆಸುವಾಗ ಸೂಕ್ತ ಸುರಕ್ಷತಾ ಕ್ರಮ ಅನುಸರಿಸದ ಬಗ್ಗೆ ಎಂಜಿನಿಯರ್‌ಗಳನ್ನು ಆಡಳಿತಾಧಿಕಾರಿ ತರಾಟೆಗೆ ತೆಗೆದುಕೊಂಡರು. ಕೆಲಸ ಚುರುಕುಗೊಳಿಸಿ ಕಾಲಮಿತಿಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ತಾಕೀತು ಮಾಡಿದರು. 

ನಗರದ ಕೇಂದ್ರ ವಾಣಿಜ್ಯ ಪ್ರದೇಶದಲ್ಲಿ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಗೊಳಿಸುವ ಸಂದರ್ಭದಲ್ಲಿ ಮಳೆ ನೀರು ಹರಿಯುವ ಚರಂಡಿ ನಿರ್ಮಾಣಕ್ಕೆ ಹಾಗೂ ಕೊಳಚೆ ನೀರಿನ ಕೊಳವೆಗಳನ್ನು ಅಳವಡಿಸಲು ಪಾದಚಾರಿ ಮಾರ್ಗಗಳನ್ನು ಅಗೆಯಲಾಗಿದೆ. ಇಲ್ಲಿ ಕಾಂಕ್ರೀಟ್‌ ಡಕ್ಟ್‌ಗಳನ್ನು ಅಳವಡಿಸಿ ಚೇಂಬರ್ ಕಾಮಗಾರಿಯನ್ನು ಸಕಾಲದಲ್ಲಿ ನಿರ್ವಹಿಸಿಲ್ಲ. ಇದರಿಂದ ಸಾರ್ವಜನಿಕರು ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ‘ಈ ಎಲ್ಲ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು’ ಎಂದು ಸಂಸ್ಥೆಯ ಮುಖ್ಯ ಎಂಜಿನಿಯರ್‌ಗೆ ಗೌರವ್‌ ಗುಪ್ತ ಸೂಚನೆ ನೀಡಿದರು. 

‘ರಸ್ತೆ ಕಾಮಗಾರಿ ನಡೆಯುವ ಸ್ಥಳದಲ್ಲಿ ಸುರಕ್ಷಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಗುಂಡಿ ಅಗೆದಿರುವ ಬಳಿ ಸರಿಯಾದ ರೀತಿಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಬೇಕು ಮತ್ತು ವಾಹನ ಸವಾರರಿಗೆ ಯಾವುದೇ ಸಮಸ್ಯೆ ಆಗಬಾರದು. ಈ ಬಗ್ಗೆ ಗುತ್ತಿಗೆದಾರರಿಗೆ ಸೂಕ್ತ ತಿಳಿವಳಿಕೆ ನೀಡಬೇಕು’ ಎಂದರು.

‘36 ರಸ್ತೆ ಅಭಿವೃದ್ಧಿಗೆ ₹ 482 ಕೋಟಿ’

‘ಸ್ಮಾರ್ಟ್‌ ಸಿಟಿ ಯೋಜನೆಯಡಿ ನಗರದ ಕೇಂದ್ರ ವಾಣಿಜ್ಯ ಪ್ರದೇಶದ 36 ರಸ್ತೆಗಳನ್ನು ₹ 481.65 ಕೋಟಿ ವೆಚ್ಚದಲ್ಲಿ ಟೆಂಡರ್ ಶ್ಯೂರ್ ಮಾದರಿಯಲ್ಲಿ ಅಭೀವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ 13 ಪ್ಯಾಕೇಜ್‌ಗಳನ್ನು ರೂಪಿಸಲಾಗಿದೆ’ ಎಂದು ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಮಾಹಿತಿ ನೀಡಿದರು.

‘ಮೊದಲ ಹಂತದಲ್ಲಿ 7 ಪ್ಯಾಕೇಜ್‌ಗಳನ್ನು ₹ 271.41 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸುತ್ತೇವೆ. ಎರಡನೇ ಹಂತದಲ್ಲಿ 6 ಪ್ಯಾಕೇಜ್‌ಗಳನ್ನು ₹ 210.24 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲಿದ್ದೇವೆ’ ಎಂದರು. 

‘ಇದಲ್ಲದೇ, ಕಬ್ಬನ್ ಉದ್ಯಾನ, ಕೆ.ಆರ್.ಮಾರುಕಟ್ಟೆ, ಶೀವಾಜಿನಗರ ಪ್ರದೇಶ, ಜವಹರಲಾಲ್ ನೆಹರೂ ತಾರಾಲಯಗಳಿಗೆ ಹೊಸ ರೂಪ ನೀಡುವುದು ಹಾಗೂ ಕೆಲವು ಕಟ್ಟಡಗಳ ನವೀಕರಣ ಹಾಗೂ ಅಭಿವೃದ್ಧಿಗಾಗಿ ₹ 365.05 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ. ರಸ್ತೆ ಇಕ್ಕೆಲಗಳಲ್ಲಿ ಒಳಚರಂಡಿ, ಮಳೆ ನೀರು ಹರಿಯುವ ಚರಂಡಿ, ಕುಡಿಯುವ ನೀರು ಪೂರೈಸುವ ಹಳೆಯ ಕೊಳವೆಗಳನ್ನು ತೆರವುಗೊಳಿಸಿ ಹೊಸ ಕೊಳವೆಗಳನ್ನು ಜೋಡಿಸುವುದು, ಕೇಬಲ್‌ ಅಳವಡಿಸಲು ಕಾಂಕ್ರೀಟ್‌ ಡಕ್ಟ್‌ಗಳ ನಿರ್ಮಾಣ, ಜಂಕ್ಷನ್‌ಗಳ ಅಭಿವೃದ್ಧಿ, ಸುಸಜ್ಜಿತ ಪಾದಚಾರಿ ಮಾರ್ಗ ನಿರ್ಮಾಣ, ಕಬ್‌ಸ್ಟೋನ್ಸ್ ಅಳವಡಿಕೆ, ಸೈಕಲ್ ಪಥ ನಿರ್ಮಾಣ ಮೊದಲಾದ ಕಾಮಗಾರಿಗಳು ಸ್ಮಾರ್ಟ್‌ ಸಿಟಿ ಯೋಜನೆ ಅಡಿ ಅನುಷ್ಠಾನಗೊಳ್ಳಲಿವೆ’ ಎಂದು ವಿವರಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು