ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಗುಂಡಿ ಮುಚ್ಚಲು ಇಲ್ಲ ಕಾಳಜಿ– ಆಡಳಿತಾಧಿಕಾರಿ ಅತೃಪ್ತಿ

ಬಿಬಿಎಂಪಿ ಡಾಂಬರು ಮಿಶ್ರಣ ಘಟಕ ಪರಿಶೀಲನೆ * ಪ್ರತಿ ಲೋಡ್‌ಗೂ ಲೆಕ್ಕವಿಡುವಂತೆ ಸೂಚನೆ
Last Updated 7 ಅಕ್ಟೋಬರ್ 2020, 19:58 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಬಿಎಂಪಿ ವತಿಯಿಂದಲೇ ಡಾಂಬರು ಮಿಶ್ರಣ ಘಟಕವನ್ನು ಸ್ಥಾಪಿಸಿದ ಬಳಿಕವೂ ರಸ್ತೆಗುಂಡಿಗಳನ್ನು ಮುಚ್ಚುವ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ರಸ್ತೆಗುಂಡಿಗಳನ್ನು ಮುಚ್ಚುವ ಕಾಮಗಾರಿಯ ಸಮರ್ಪಕ ಮೇಲ್ವಿಚಾರಣೆಯೂ ನಡೆಯುತ್ತಿಲ್ಲ’ ಎಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ ಗುಪ್ತ ಅಸಮಾಧಾನ ವ್ಯಕ್ತಪಡಿಸಿದರು.

ಬಿಬಿಎಂಪಿಯು ಕಣ್ಣೂರಿನ ಬಳಿ ಸ್ಥಾಪಿಸಿರುವ ಡಾಂಬರು ಮಿಶ್ರಣ ಘಟಕಕ್ಕೆ ಬುಧವಾರ ಭೇಟಿ ನೀಡಿ ಅವರು ಪರಿಶೀಲನೆ ನಡೆಸಿದರು. ಘಟಕದ ಕಾರ್ಯ ಚಟುವಟಿಕೆ ಮೇಲೆ ನಿಗಾ ವಹಿಸದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪ್ರತಿವಲಯಕ್ಕೆ ನಿತ್ಯ ಎಷ್ಟು ಲೋಡ್ ಡಾಂಬರು ಮಿಶ್ರಣವನ್ನು ಕಳುಹಿಸಲಾಗುತ್ತಿದೆ, ಯಾವ ರಸ್ತೆಗಳಲ್ಲಿ ಎಷ್ಟು ಗುಂಡಿಗಳನ್ನು ಮುಚ್ಚಲಾಗಿದೆ, ಇದಕ್ಕೆ ಬಳಸುವ ಸಾಮಗ್ರಿಗಳ ಗುಣಮಟ್ಟ ಮತ್ತು ಪ್ರಮಾಣ ಎಷ್ಟು, ಎಂಜಿನಿಯರ್‌ಗಳು ಸಲ್ಲಿಸಿರುವ ಬೇಡಿಕೆ ಎಷ್ಟು ಎಂಬ ಕುರಿತು ವಿವರವನ್ನು ಆಡಳಿತಾಧಿಕಾರಿ ಕೇಳಿದಾಗ ಅಧಿಕಾರಿಗಳ ಬಳಿ ಸಮರ್ಪಕ ಉತ್ತರವಿರಲಿಲ್ಲ.

ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಪ್ರಹ್ಲಾದ್‌, ‘ಈ ಘಟಕದಲ್ಲಿ ತಯಾರಾಗುವ ಡಾಂಬರು ಮಿಶ್ರಣವನ್ನು ರಸ್ತೆ ಮೂಲಸೌಕರ್ಯ ವಿಭಾಗದ ಅಧೀನದ ಮುಖ್ಯ ರಸ್ತೆಗಳು ಹಾಗೂ ಉಪಮುಖ್ಯ ರಸ್ತೆಗಳಿಗೆ ಮಾತ್ರ ಬಳಸಲಾಗುತ್ತಿದೆ. ಆಯಾ ವಲಯದ ಎಂಜಿನಿಯರ್‌ಗಳಿಂದ ಬೇಡಿಕೆ ಪಟ್ಟಿಯನ್ನು ಪಡೆದು ಡಾಂಬರು ಮಿಶ್ರಣ ಕಳುಹಿಸಲಾಗುತ್ತಿದೆ. ಇದಕ್ಕಾಗಿ ವಲಯಕ್ಕೊಬ್ಬ ಗುತ್ತಿಗೆದಾರರನ್ನು ನಿಯೋಜಿಸಲಾಗಿದೆ’ ಎಂದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಗೌರವ ಗುಪ್ತ, ‘ಎಲ್ಲಾ ರಸ್ತೆಗಳಿಗೆ ಏಕೆ ಡಾಂಬರು ಮಿಶ್ರಣ ಕಳುಹಿಸುತ್ತಿಲ್ಲಾ. ಇರುವ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಸಿಕೊಂಡು ಸರಿಯಾಗಿ ಕೆಲಸ ಮಾಡಬೇಕು. ಮಳೆಗಾಲವಿದೆ, ಸಿಬ್ಬಂದಿ ಹಾಗೂ ಯಂತ್ರೋಪಕರಣಗಳ ಕೊರತೆ ಇದೆ ಎಂಬ ಸಬೂಬು ಹೇಳಬೇಡಿ. ಸರಿಯಾಗಿ ಕೆಲಸ ಮಾಡಿ’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

‘ಡಾಂಬರು ಮಿಶ್ರಣ ಘಟಕ ವನ್ನು ಸಂಪೂರ್ಣ ಬಳಕೆ ಮಾಡಿಕೊಂಡು ಗುಂಡಿಗಳನ್ನು ತ್ವರಿತವಾಗಿ ಮುಚ್ಚಲು ಕ್ರಮಕೈಗೊಳ್ಳಬೇಕು. ಪ್ರತಿ ವಲಯಕ್ಕೆ ನಿತ್ಯ ಕಳುಹಿಸುವ ಡಾಂಬರ್‌ ಮಿಶ್ರಣದ ಬಗ್ಗೆ ಲೆಕ್ಕ ಇಡಬೇಕು. ಘಟಕದಿಂದ ನಿತ್ಯ ಎಲ್ಲಿಗೆ ಡಾಂಬರು ಮಿಶ್ರಣವನ್ನು ಸಾಗಿಸಲಾಗಿದೆ ಎಂಬ ಸಂಪೂರ್ಣ ಮಾಹಿತಿ ನೋಂದಣಿ ಪುಸ್ತಕದಲ್ಲಿರಬೇಕು’ ಎಂದು ತಾಕೀತು ಮಾಡಿದರು.

‘ನಿತ್ಯವೂ ಘಟಕದಿಂದ ಹೊರಗೆ ಕಳುಹಿಸುವ ಮಿಶ್ರಣವನ್ನು ಟ್ರಕ್‌ನ ತೂಕದ ಆಧಾರದಲ್ಲಿ ನಮೂದಿಸಿ ನಿರ್ವಹಣೆ ಮಾಡಬೇಕು. ಯಾವ ಟ್ರಕ್ ಎಲ್ಲಿಗೆ ಹೋಗುತ್ತಿದೆ, ಎಷ್ಟು ಗುಂಡಿಗಳನ್ನು ಮುಚ್ಚಲಾಗಿದೆ ಎಂಬ ಕ್ಷಣ ಕ್ಷಣದ ಮಾಹಿತಿ ನನಗೆ, ಆಯುಕ್ತರಿಗೆ, ಎಲ್ಲಾ ವಲಯಗಳ ವಿಶೇಷ ಆಯುಕ್ತರಿಗೆ, ಜಂಟಿ ಆಯುಕ್ತರಿಗೆ, ಪ್ರಧಾನ ಎಂಜಿನಿಯರ್‌ಗೆ, ಮತ್ತು ಮುಖ್ಯ ಎಂಜಿನಿಯರ್‌ಗಳಿಗೆ ಲಭ್ಯವಾಗಬೇಕು’ ಎಂದು ಸೂಚಿಸಿದರು.

ಡಾಂಬರು ಮಿಶ್ರಣ ತಯಾರಿಸಲು ಬೇಕಾಗುವ ಸಾಮಗ್ರಿಗಳನ್ನು ಎಲ್ಲಿಂದ ತರಲಾಗುತ್ತಿದೆ. ಮಿಶ್ರಣಕ್ಕೆ ಬಳಸುವ ಜೆಲ್ಲಿಕಲ್ಲಿನ ಗುಣಮಟ್ಟ ಹೇಗಿದೆ ಎಂದೂ ಮಾಹಿತಿ ಪಡೆದರು.

‘ಘಟಕದಲ್ಲಿ ದಿನಕ್ಕೆ 60 ಟ್ರಕ್ ಲೋಡ್‌ಗಳಷ್ಟು ಡಾಂಬರು ಮಿಶ್ರಣ ತಯಾರಿಸಬಹುದು. ಈ ಘಟಕದಲ್ಲಿ ಜಲ್ಲಿ, ಜಲ್ಲಿಪುಡಿ ಹಾಗೂ ಡಾಂಬರು ಬಳಸಿ ಸಂಪೂರ್ಣ ಸ್ವಯಂಚಾಲಿತವಾಗಿ ಡಾಂಬರು ಮಿಶ್ರಣ ತಯಾರಿಸಲಾಗುತ್ತದೆ’ ಎಂದು ಪ್ರಹ್ಲಾದ್ ತಿಳಿಸಿದರು.

ಮುಖ್ಯಾಂಶಗಳು

* ಘಟಕದಲ್ಲಿ ನಿತ್ಯ 60 ಟ್ರಕ್‌ಗಳಷ್ಟು ಡಾಂಬರು ಮಿಶ್ರಣ ತಯಾರಿ

* ಡಾಂಬರು ಮಿಶ್ರಣದ ಬೇಡಿಕೆ ಹಾಗೂ ಪೂರೈಕೆ ಬಗ್ಗೆ ಪ್ರತ್ಯೇಕ ನೋಂದಣಿಪುಸ್ತಕ ನಿರ್ವಹಿಸಲು ಸೂಚನೆ

* ಸಬೂಬು ಹೇಳದೇ ಗುಂಡಿ ಮುಚ್ಚಿ– ಆಡಳಿತಾಧೀಕಾರಿ ಕಟ್ಟುನಿಟ್ಟಿನ ಸೂಚನೆ

ಅಂಕಿ ಅಂಶ

4.5 ಎಕರೆ – ಕಣ್ಣೂರಿನ ಡಾಂಬರು ಮಿಶ್ರಣ ಘಟಕದ ವಿಸ್ತೀರ್ಣ

₹ 7.5 ಕೋಟಿ – ಘಟಕದ ನಿರ್ಮಾಣಕ್ಕೆ ತಗುಲಿದ ವೆಚ್ಚ

120 ಟನ್‌ – ಘಟಕದಲ್ಲಿ ಪ್ರತಿ ಗಂಟೆಗೆ ತಯಾರಾಗುವ ಡಾಂಬರು ಮಿಶ್ರಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT