ಸೋಮವಾರ, ಜನವರಿ 18, 2021
27 °C
ಚಿಕ್ಕಪೇಟೆ, ಅವೆನ್ಯೂ ರಸ್ತೆ ಆಸುಪಾಸಿನ ಕಾಮಗಾರಿ ಪರಿಶೀಲನೆ

ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ: ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಅವೆನ್ಯೂ ರಸ್ತೆ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸಂಸದ ಪಿ.ಸಿ. ಮೋಹನ್‌ ಹಾಗೂ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ ಗುಪ್ತ ಅವರು ಬಿಬಿಎಂಪಿ, ಸ್ಮಾರ್ಟ್‌ ಸಿಟಿ ಸಂಸ್ಥೆ ಹಾಗೂ ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಚಿಕ್ಕಪೇಟೆ ವ್ಯಾಪ್ತಿಯ ಅವೆನ್ಯೂ ರಸ್ತೆಯನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಇಲ್ಲಿ ಜಲಮಂಡಳಿ ವತಿಯಿಂದ ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಿದ್ದು, ತಾತ್ಕಾಲಿಕವಾಗಿ ಡಾಂಬರೀಕರಣ ಮಾಡಲಾಗಿದೆ. ಗುಂಡಪ್ಪ ಸ್ಟ್ರೀಟ್, ಮಾಮೂಲ್ ಪೇಟೆ, ಹಳೆ ತರಗುಪೇಟೆ, ಸುಲ್ತಾನ್‌ಪೇಟೆ, ಒ.ಟಿ.ಸಿ ರಸ್ತೆ, ಅಕ್ಕಿಪೇಟೆ ಹಾಗೂ ಬಳೆಪೇಟೆ ಸೇರಿದಂತೆ ಹಲವು ಕಡೆ, ಅಗೆದ ರಸ್ತೆಗಳನ್ನು ಜಲಮಂಡಳಿಯೇ ದುರಸ್ತಿ ಮಾಡಿದೆ. ಇನ್ನೂ ಕೆಲವು ರಸ್ತೆಗಳಲ್ಲಿ ದುರಸ್ತಿ ಕಾಮಗಾರಿ ಬಾಕಿ ಇದೆ. ಅರೆಬರೆ ಕಾಮಗಾರಿಗಳಿಂದಾಗಿ ಇಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ‘ಪ್ರಜಾವಾಣಿ’ಯ ನ.19ರ ಸಂಚಿಕೆಯಲ್ಲಿ ‘ಅವೆನ್ಯೂ ರಸ್ತೆ ಅವ್ಯವಸ್ಥೆ’ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು.

ಈ ಪ್ರದೇಶದ ಕಾಮಗಾರಿಗಳನ್ನು ಸಂಸದ ಹಾಗೂ ಆಡಳಿತಾಧಿಕಾರಿ ಬುಧವಾರ ಪರಿಶೀಲಿಸಿದರು. ರಸ್ತೆ ಅಗೆದಿರುವ ಕಡೆ ಶೀಘ್ರವೇ ಕಾಂಕ್ರೀಟಿಕರಣ ಅಥವಾ ಡಾಂಬರೀಕರಣ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮಾಮೂಲ್ ಪೇಟೆ ಮುಖ್ಯರಸ್ತೆಯಲ್ಲಿ ಜಲಮಂಡಳಿಯು ಒಳಚರಂಡಿ ಕೊಳವೆ ಅಳವಡಿಸಲು ರಸ್ತೆ ಅಗೆದಿರುವ ಪರಿಣಾಮ ವಾಹನಗಳ ಓಡಾಟಕ್ಕೆ ತೀರಾ ಸಮಸ್ಯೆ ಆಗುತ್ತಿದೆ. ಮಳೆ ಬಂದಾಗ ರಸ್ತೆಯಲ್ಲೇ ನೀರು ನಿಲ್ಲುತ್ತದೆ ಎಂದು ಸ್ಥಳೀಯ ವ್ಯಾಪಾರಿಗಳು ದೂರಿದರು.

‘ರಸ್ತೆ ಇಕ್ಕೆಲಗಳ ಚರಂಡಿಗಳಲ್ಲಿ ಹೂಳೆತ್ತದೆ ಸಮಸ್ಯೆ ಎದುರಾಗಿದೆ. ಹೂಳೆತ್ತಿದರೆ ಸಮಸ್ಯೆ ನಿವಾರಣೆಯಾಗಲಿದೆ’ ಎಂದು ಸಂಸದರು ತಿಳಿಸಿದರು.

ಚಿಕ್ಕಪೇಟೆ, ಅವೆನ್ಯೂ ರಸ್ತೆ ಪ್ರದೇಶಗಳ ಮೋರಿಗಳ ಹೂಳೆತ್ತಿ, ಮಳೆನೀರು ಸರಾಗವಾಗಿ ಹರಿಯುವಂತೆ ಕ್ರಮವಹಿಸಬೇಕು. ಮಳೆನೀರು ಚರಂಡಿ ಮತ್ತು ರಾಜಕಾಲುವೆಗಳನ್ನು ವೈಜ್ಞಾನಿಕವಾಗಿ ಜೋಡಣೆ ಮಾಡಬೇಕು. ನೀರು ಮತ್ತು ಕೊಳಚೆ ನೀರಿನ ಕೊಳವೆಗಳ ಸಂಪರ್ಕ ಎಲ್ಲೆಲ್ಲಿ  ಕಡಿತಗೊಂಡಿದೆ, ಯಾವ ಭಾಗದಲ್ಲಿ ಕೊಳವೆಗಳು ಬ್ಲಾಕ್ ಆಗಿವೆ ಎಂಬುದನ್ನು ಜಿಐಎಸ್ ನಕ್ಷೆ ಆಧಾರದಲ್ಲಿ ಗುರುತಿಸಬೇಕು. ಇಲ್ಲಿಗೆ ಎಷ್ಟು ಸಾಮರ್ಥ್ಯದ ಕೊಳವೆಗಳ ಅಗತ್ಯವಿದೆ ಎಂಬ ಕುರಿತ ಸಮಗ್ರ ವಿವರ ಸಿದ್ದಪಡಿಸಿ, ಹಂತ-ಹಂತವಾಗಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ನೀರು ಕಟ್ಟಿಕೊಳ್ಳುವ ಸ್ಥಳಗಳನ್ನು ಜೆಟ್ಟಿಂಗ್ ಯಂತ್ರದ ಮೂಲಕ ಸರಿಪಡಿಸಬೇಕು. ಮ್ಯಾನ್‌ಹೋಲ್‌ಗಳಿಗೆ ಮಳೆ ನೀರು ನುಗ್ಗದಂತೆ ಕ್ರಮವಹಿಸಬೇಕು ಎಂದು ಎಂದು ಆಡಳಿತಾಧಿಕಾರಿ ಸಲಹೆ ನೀಡಿದರು. 

ಸುಲ್ತಾನ್‌ಪೇಟೆ ಮುಖ್ಯ ರಸ್ತೆಯಲ್ಲಿ 300 ಎಂ.ಎಂ. ಸುತ್ತಳತೆಯ ಒಳಚರಂಡಿ ಕೊಳವೆಗಳಗಳನ್ನು ರಸ್ತೆಯಲ್ಲೇ ಹಾಕಲಾಗಿದೆ. ಇದರಿಂದ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿರುವುದನ್ನು ಗಮನಿಸಿದ ಆಡಳಿತಾಧಿಕಾರಿ, ‘ಕೊಳವೆಗಳನ್ನು ಬೇರೆಡೆ ಸ್ಥಳಾಂತರಿಸಿ’ ಎಂದು ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು. 

ಅವೆನ್ಯೂ ರಸ್ತೆ (1 ಕಿ.ಮೀ ಉದ್ದ) ಅಭಿವೃದ್ಧಿ ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳುವ ಸಲುವಾಗಿ ವಾಹನ ಸವಾರರಿಗೆ ಬದಲಿ ರಸ್ತೆಯನ್ನು ಗುರುತಿಸಬೇಕು. ಅವಶ್ಯವಿದ್ದಲ್ಲಿ ವಿನ್ಯಾಸ ಮಾರ್ಪಡಿಸಿ ವಾರದೊಳಗೆ ಸಮಗ್ರ ಮಾಹಿತಿ ನೀಡಬೇಕು ಎಂದು ಸ್ಮಾರ್ಟ್ ಸಿಟಿ ಮುಖ್ಯ ಎಂಜಿನಿಯರ್‌ ರಂಗನಾಥ್ ನಾಯ್ಕ್ ಅವರಿಗೆ ಆಡಳಿತಾಧಿಕಾರಿ ನಿರ್ದೇಶನ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು