ಶುಕ್ರವಾರ, ನವೆಂಬರ್ 22, 2019
20 °C
ಕಾರ್ಮಿಕರ ಸೆಸ್‌, ರಾಯಧನ, ತೆರಿಗೆ ಮುರಿದುಕೊಳ್ಳಲು ಜಾಣ ಮರೆವು, ಅಳತೆ ಪುಸ್ತಕಗಳೇ ನಾಪತ್ತೆ!

ಬಿಲ್‌ನಲ್ಲಿ ಕಡಿತ ಮಾಡದ ಮೊತ್ತವೇ ₹ 76 ಕೋಟಿ

Published:
Updated:
Prajavani

ಬೆಂಗಳೂರು: ಕಾಮಗಾರಿಯ ಬಿಲ್‌ ಪಾವತಿ ವೇಳೆ ಕಾರ್ಮಿಕರ ಸೆಸ್‌, ರಾಯ ಧನ, ಆದಾಯ ತೆರಿಗೆ, ಕರ್ನಾಟಕ ಮಾರಾಟ ತೆರಿಗೆಯನ್ನು (ಕೆಎಸ್‌ಟಿ)  ಮುರಿದುಕೊಳ್ಳಬೇಕು. ಆದರೆ, ಈ ವಿಚಾರದಲ್ಲೂ ಬಿಬಿಎಂಪಿ ಅಧಿಕಾರಿಗಳು ಲೋಪ ಎಸಗಿದ್ದಾರೆ. ರಾಜರಾಜೇಶ್ವರಿ ನಗರ, ಮಲ್ಲೇಶ್ವರ ಹಾಗೂ ಗಾಂಧಿನಗರ ವಿಭಾಗಗಳಲ್ಲಿ ಒಟ್ಟು ₹ 76.56 ಕೋಟಿ ಗಳಷ್ಟು ಮೊತ್ತವನ್ನು ಕಡಿತ ಮಾಡಿಕೊಂಡಿಲ್ಲ.

ಬಿಬಿಎಂಪಿಯ ರಾಜರಾಜೇಶ್ವರಿನಗರ, ಮಲ್ಲೇಶ್ವರ ಹಾಗೂ ಗಾಂಧಿನಗರ ವಿಭಾಗಗಳಲ್ಲಿ 2008ರಿಂದ 2012ರ ನಡುವೆ ಅನುಷ್ಠಾನಗೊಳಿಸಿದ್ದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಲ್ಲಿನ ಅಕ್ರಮಗಳ ಬಗ್ಗೆ ತನಿಖೆ ನಡೆಸಿರುವ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ಸಮಿತಿ ಇದನ್ನು ಪತ್ತೆಹಚ್ಚಿದೆ.

ರಾಜರಾಜೇಶ್ವರಿನಗರ ವಿಭಾಗದ 1,227 ಕಡತಗಳಿಗೆ ಸಂಬಂಧಿಸಿದಂತೆ ಒಟ್ಟು ₹ 4.91 ಕೋಟಿ, ಮಲ್ಲೇಶ್ವರ ವಿಭಾಗದಲ್ಲಿ ಒಟ್ಟು ₹ 24.02 ಕೋಟಿ ಹಾಗೂ ಗಾಂಧಿನಗರ ವಿಭಾಗಕ್ಕೆ ಸಂಬಂಧಿಸಿದಂತೆ ಒಟ್ಟು ₹47.63 ಕೋಟಿ ಮೊತ್ತವನ್ನು ಕಡಿತ ಮಾಡಿಕೊಳ್ಳ ಬೇಕಿತ್ತು ಎಂದು ಸಮಿತಿ ತನಿಖಾ ವರದಿಯಲ್ಲಿ ಹೇಳಿದೆ.

ಅಳತೆ ಪುಸ್ತಕಗಳೇ ನಾಪತ್ತೆ: ಕಾಮಗಾರಿ ಗಳ ಬಿಲ್‌ ಪಾವತಿಗೆ ಸಂಬಂಧಿಸಿದಂತೆ ಅಳತೆ ಪುಸ್ತಕ ನಿರ್ವಹಣೆ ಸಂಬಂಧಪಟ್ಟ ಎಂಜಿನಿಯರ್‌ಗಳ ಜವಾಬ್ದಾರಿ. ಆದರೆ, ಈ ಮೂರು ವಲಯಗಳಲ್ಲಿ ಒಟ್ಟು 49 ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಳತೆ ಪುಸ್ತಕಗಳೇ ನಾಪತ್ತೆಯಾಗಿದ್ದವು.

ಆರ್‌.ಆರ್‌.ನಗರ ವಿಭಾಗದ 10, ಮಲ್ಲೇಶ್ವರ ವಿಭಾಗದ 15 ಹಾಗೂ ಗಾಂಧಿನಗರದ 34 ಕಾಮಗಾರಿಗಳ ಅಳತೆ ಪುಸ್ತಕಗಳನ್ನು ಅಧಿಕಾರಿಗಳು ಪರಿಶೀಲನೆಗೆ ಒದಗಿಸಿಲ್ಲ ಎಂದು ಸಮಿತಿ ವರದಿಯಲ್ಲಿ ಹೇಳಿದೆ. ಅಲ್ಲದೇ, ಗಾಂಧಿನಗರ ವಿಭಾಗದ ದಾಖಲೆ ಪರಿಶೀಲಿಸಿದಾಗ 50 ಕಾಮಗಾರಿ ಗಳ ಕುರಿತ ಬಿಲ್‌ಗಳೂ ಇಲ್ಲದಿರುವುದು ಕಂಡುಬಂದಿದೆ ಎಂದು ವರದಿ ಯಲ್ಲಿ ಉಲ್ಲೇಖಿಸ ಲಾಗಿದೆ. ಕಾಮಗಾರಿ ‍ಪೂರ್ಣಗೊಂಡ ಬಗ್ಗೆ ಸಂಬಂಧಪಟ್ಟ ಎಂಜಿನಿಯರ್‌ ಸ್ಥಳ ಪರಿಶೀಲನೆ ನಡೆಸಿ ಪ್ರಮಾಣಪತ್ರ ನೀಡಬೇಕು.

ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ₹ 10 ಸಾವಿರ, ಕಾರ್ಯಪಾಲಕ ಎಂಜಿನಿಯರ್‌ ₹ 5 ಲಕ್ಷ, ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ₹ 25 ಲಕ್ಷ ಹಾಗೂ ಮುಖ್ಯ ಎಂಜಿನಿಯರ್‌ ₹ 25 ಲಕ್ಷಕ್ಕಿಂತ ಹೆಚ್ಚು ಮೊತ್ತದ ಕಾಮಗಾರಿ ಪೂರ್ಣಗೊಂಡ ಪ್ರಮಾಣಪತ್ರ ನೀಡಬಹುದು. ಆದರೆ, 84 ಕಾಮಗಾರಿಗಳಲ್ಲಿ ಈ ಪ್ರಮಾಣಪತ್ರವನ್ನೇ ನೀಡಿಲ್ಲ. ಆದರೂ, ಬಿಲ್‌ ಪಾವತಿಸಲಾಗಿದೆ. ಆರ್.ಆರ್.ನಗರ ವಿಭಾಗದಲ್ಲಿ 26, ಮಲ್ಲೇಶ್ವರ ವಿಭಾಗದಲ್ಲಿ 13 ಹಾಗೂ ಗಾಂಧಿನಗರ ವಿಭಾಗದಲ್ಲಿ 45 ಕಾಮಗಾರಿಗಳು ಪೂರ್ಣಗೊಂಡ ಬಗ್ಗೆ ಎಂಜಿನಿಯರ್‌ಗಳು ಪ್ರಮಾಣಪತ್ರ ಸಲ್ಲಿಸಿಲ್ಲ.

ಬೆಂಗಳೂರು: ‘ಬ್ರಹ್ಮಾಂಡ ಭ್ರಷ್ಟಾಚಾರ’ ಸರಣಿಗೆ ಸಾಕಷ್ಟು ಓದುಗರು ಪ್ರತಿಕ್ರಿಯಿಸಿದ್ದಾರೆ. ‘ಪಾಲಿಕೆಯಲ್ಲಿ ನಿರೀಕ್ಷೆಗೂ ಮೀರಿ ಅಕ್ರಮಗಳು ನಡೆಯುತ್ತಿವೆ. ತೆರಿಗೆ ಹಣವನ್ನು ಲೂಟಿ ಮಾಡುವುದಕ್ಕಾಗಿಯೇ ಕಾಮಗಾರಿ ಆರಂಭವಾಗುತ್ತವೆ’ ಎಂದು ಕೆಲವರು ದೂರಿದ್ದಾರೆ. ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ. 

ಪಾಲಿಕೆಯಲ್ಲಿ ಲೂಟಿಕೋರರ ದಂಡು

ಬಿಬಿಎಂಪಿ ಕಾಮಗಾರಿ ಇಂದು ಅಕ್ರಮದ ಕಳ್ಳದಾರಿಯ ರೂಪ ಪಡೆದಿದೆ. ಹಣ ಕೊಳ್ಳೆ ಹೊಡೆಯುವುದಕ್ಕಾಗಿಯೇ ಕಾಮಗಾರಿಗಳನ್ನು ಆರಂಭಿಸುವಂತಿದೆ.  ಇದರ ಬಗ್ಗೆ ತನಿಖೆಗಳು ನಡೆಯುತ್ತಿಲ್ಲ. ಪಾಲಿಕೆಯಲ್ಲಿರುವ ಬಹುತೇಕರು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಅಕ್ರಮಗಳಲ್ಲಿ ಭಾಗಿಯಾಗುತ್ತಾರೆ.

- ಪ್ರಜ್ವಲ್, ದಾಸರಹಳ್ಳಿ

**

ತೆರಿಗೆ ಹಣದ ಲೂಟಿ

ಕಾಮಗಾರಿ ಹೆಸರಲ್ಲಿ ಖಜಾನೆ ತುಂಬಿಸಿಕೊಳ್ಳುತ್ತಿರುವ ಅಧಿಕಾರಿಗಳಿಗೆ ತಡೆಯೇ ಇಲ್ಲವಾಗಿದೆ. ನೇರವಾಗಿ ಹಣ ಲೂಟಿ ಮಾಡಲು ಸಾಧ್ಯವಿಲ್ಲ ಎಂದು ಈ ರೀತಿ ಕಳ್ಳದಾರಿಯಲ್ಲಿ ಹಣ ತುಂಬಿಸಿಕೊಳ್ಳುವುದಕ್ಕೆ ನಾಚಿಕೆ ಆಗಬೇಕು. ಅದು ತೆರಿಗೆದಾರರು ಬೆವರು ಸುರಿಸಿ ಕಟ್ಟಿದ ಹಣ ಎಂಬ ಅರಿವೇ ಅವರಿಗೆ ಇಲ್ಲ.

ಸುರೇಶ್‌, ಬೆಂಗಳೂರು

**

ಸಿಪ್ಪೆ ತಿಂದವರು ಸೆರೆಮನೆಗೆ!

ಪಾಲಿಕೆ ಹಗರಣಗಳಲ್ಲಿ ರೌಡಿಶೀಟರ್‌ ಹಿನ್ನೆಲೆಯ ಗುತ್ತಿಗೆದಾರರು, ಎಂಜಿನಿಯರ್‌ಗಳು ಹಾಗೂ ಕಚೇರಿ ಸಿಬ್ಬಂದಿ ಪಾಲುದಾರರು. ಮತ್ತೊಂದೆಡೆ ಸದರಿ ಕ್ಷೇತ್ರದ ಪ್ರತಿನಿಧಿಗಳದ್ದು ದೊಡ್ಡ ಪಾಲು. ತನಿಖೆಯಾದರೆ ಸಿಪ್ಪೆ ತಿಂದವರು ಮಾತ್ರ ಸೆರೆಮನೆಗೆ ಹೋದರೆ, ಹಣ್ಣು ತಿಂದವರು ಅರಮನೆಯಲ್ಲೇ ಇರುತ್ತಾರೆ.

- ಎಸ್.ಪ್ರಭಾಕರ್, ಕೆ.ಪಿ.ಅಗ್ರಹಾರ 

**

ಲೂಟಿ ಮಾಡುವ ಜ್ಞಾನ ಹೆಚ್ಚು

ಪಾಲಿಕೆ ಅಧಿಕಾರಿಗಳಿಗೆ ಎಂತಹ ಕಾಮಗಾರಿ ನಡೆದರೆ ಜನರಿಗೆ ಅನುಕೂಲವಾಗುತ್ತದೆ ಎನ್ನುವುದಕ್ಕಿಂತ, ಎಂತಹ ಕಾಮಗಾರಿ ಆರಂಭಿಸಿದರೆ ಹೆಚ್ಚು ಹಣ ಲೂಟಿ ಮಾಡಬಹುದು ಎಂಬ ಜ್ಞಾನ ಹೆಚ್ಚಿದೆ. ಅಕ್ರಮ ಎಸಗಿದವರನ್ನು ನಾಮಕಾವಸ್ತೆ ಅಮಾನತು ಮಾಡುತ್ತಾರೆ. ಆದರೆ, ಅವರು ತಮ್ಮ ಕಸುಬು ಮುಂದುವರಿಸುತ್ತಾರೆ. 

- ಡಿ.ಎನ್.ರಮೇಶ್, ಸುಂಕೇನಹಳ್ಳಿ 

**

ಎರವಲು ಸೇವೆ ಬೇಡ

ಎರವಲು ಸೇವೆಯ ಆಧಾರದಲ್ಲಿ ಪಾಲಿಕೆಗೆ ನಿಯುಕ್ತಿಗೊಳ್ಳುವ ಅಧಿಕಾರಿಗಳು ಹೆಚ್ಚು ಭ್ರಷ್ಟಾಚಾರ ಮಾಡುತ್ತಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿದರೆ ಹಣ ಮಾಡುವುದಕ್ಕಾಗಿಯೇ ಹುದ್ದೆಗೆ ಬಂದಿದ್ದೇವೆ ಎಂದು ವರ್ತಿಸುತ್ತಾರೆ. ಈ ವ್ಯವಸ್ಥೆ ಮೊದಲು ತೊಲಗಬೇಕು.

ಜಿ.ಶಿವಕುಮಾರ್, ಎಚ್‌ಎಸ್‌ಆರ್‌ ಬಡಾವಣೆ

**

ನೀವೂ ಪ್ರತಿಕ್ರಿಯಿಸಿ

ಬಿಬಿಎಂಪಿಯ ಮೂರು ವಿಭಾಗಗಳಲ್ಲಿ 2008ರಿಂದ 2012ರನಡುವೆ ನಡೆದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಲ್ಲಿ ನಡೆದಿರುವ ಭಾರಿ ಅಕ್ರಮಗಳ ಬಗ್ಗೆ ಸಾರ್ವಜನಿಕರು ಅಭಿಪ್ರಾಯ ಹಂಚಿಕೊಳ್ಳಬಹುದು.

ನಿಮ್ಮ ಅನಿಸಿಕೆಗಳನ್ನು (ಭಾವಚಿತ್ರ ಹಾಗೂ ವಿಳಾಸ ಸಮೇತ) ವಾಟ್ಸ್‌ ಆ್ಯಪ್‌ ಮಾಡಿ

ವಾಟ್ಸ್‌ಆ್ಯಪ್‌ ಸಂಖ್ಯೆ: 9513322930

ಪ್ರತಿಕ್ರಿಯಿಸಿ (+)