ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಐಸಿಯು ಹೊಂದಿಸುವಲ್ಲಿ– ಎಡವಿದ್ದೆಲ್ಲಿ?

ಕೋವಿಡ್‌ ಎರಡನೇ ಅಲೆ ಸಮರ್ಥ ನಿರ್ವಹಣೆಗೆ ಮಾಡಬೇಕಾದುದೇನು? ಮೂರನೇ ಅಲೆ ಎದುರಿಸಲು ಸನ್ನದ್ಧರಾಗುವುದು ಹೇಗೆ?
Last Updated 10 ಮೇ 2021, 1:34 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೋವಿಡ್‌ ಎರಡನೇ ಅಲೆ ಅಟ್ಟಹಾಸ ಮೆರೆಯುತ್ತಿದೆ. ನಗರದ ಅಷ್ಟೂ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳು (ಐಸಿಯು) ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿರುವ ಕೊರೋನಾ ಸೋಂಕಿತರಿಂದ ಭರ್ತಿಯಾಗಿವೆ. ಸಾವಿನಂಚು ತಲುಪಿರುವ ರೋಗಿಗಳ ಚಿಕಿತ್ಸೆಗೂ ಯಾವುದೇ ಆಸ್ಪತ್ರೆಗಳ ಐಸಿಯುಗಳಲ್ಲೂ ಹಾಸಿಗೆ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.

ದ್ವಿತೀಯ ಹಾಗೂ ತೃತೀಯ ಹಂತದ ಆರೋಗ್ಯ ಸೇವೆಯಲ್ಲಿ ದೇಶದಲ್ಲೇ ಅತ್ಯುತ್ತಮ ಸೌಕರ್ಯ ಹೊಂದಿರುವ ನಗರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೆಂಗಳೂರಿನ ಪರಿಸ್ಥಿತಿ ಹೀಗೇಗಾಯಿತು. ನೆರೆಯ ರಾಜ್ಯ ಮಹಾರಾಷ್ಟ್ರದಲ್ಲಿ ಕೋವಿಡ್‌ ಎರಡನೇ ಅಲೆಯಲ್ಲಿ ಸಿಲುಕಿ ಜನ ತರಗೆಲೆಗಳು ಉದುರಿ ಬೀಳುವ ತೆರದಲ್ಲಿ ಪ್ರಾಣ ಬಿಡುತ್ತಿದ್ದಾಗಲೂ ನಮ್ಮ ಸರ್ಕಾರ ‘ಇಂತಹ ಸಮಸ್ಯೆ ನಮ್ಮಲ್ಲೂ ಬರಬಹುದು’ ಎಂದು ಏಕೆ ಮುಂದಾಲೋಚಿಸಲಿಲ್ಲ. ಇಲ್ಲಿ ಎರಡನೇ ಅಲೆಯ ತೀವ್ರ ಸ್ವರೂಪ ಪಡೆದು ಎರಡೂವರೆ ತಿಂಗಳುಗಳಲ್ಲಿ ಏಕೆ ಐಸಿಯು ಘಟಕಗಳ ಬಲವರ್ಧನೆಯ ಪ್ರಯತ್ನ ನಡೆಯಲಿಲ್ಲ...? ಇವೆಲ್ಲವೂ ಇನ್ನೂ ಉತ್ತರವೇ ಸಿಗದೇ ಪ್ರಶ್ನೆಗಳು.

ನಗರದಲ್ಲಿ ನಿತ್ಯವೂ ಸಾವಿರಕ್ಕೂ ಅಧಿಕ ಕೋವಿಡ್‌ ಪ್ರಕರಣಗಳು ವರದಿಯಾಗಲು ಶುರುವಾಗಿ ಎರಡು ತಿಂಗಳುಗಳೇ ಕಳೆದಿವೆ. ಮಾರ್ಚ್‌ನಿಂದ ಇದುವರೆಗೆ ನಗರದ 5.24 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 2,500 ಮಂದಿ ಈ ಅಲ್ಪಾವಧಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಕೋವಿಡ್‌ ನಿಯಂತ್ರಣಕ್ಕೆ ಜನರ ಓಡಾಟದ ಮೇಲೆ ನಿರ್ಬಂಧ ಹೇರುವ ಬಿಗಿ ನಿಯಮಗಳನ್ನು ಜಾರಿಗೆ ತಂದು 15 ದಿನಗಳೇ ಕಳೆದಿವೆ. ಆದರೆ, ಈಗಲೂ ನಿತ್ಯ 20 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿವೆ. ಕೋವಿಡ್‌ಗೆ ನಗರದಲ್ಲಿ ಇದುವರೆಗೆ ಒಟ್ಟು 7,777 ಮಂದಿ (ಮೇ 8ರವರೆಗೆ) ಮಂದಿ ಕೊನೆಯುಸಿರೆಳೆದಿದ್ದಾರೆ. ಇವುಗಳಲ್ಲಿ 2493 ಸಾವುಗಳು ಸಂಭವಿಸಿದ್ದು 2021ರ ಮಾರ್ಚ್‌ ನಂತರದಲ್ಲಿ. ಮೇ ತಿಂಗಳಲ್ಲಿ ಎಂಟೇ ದಿನಗಳಲ್ಲಿ 1,239 ಮಂದಿ ಮೃತಪಟ್ಟಿದ್ದಾರೆ.

ನಿತ್ಯವೂ ಸಂಭವಿಸುತ್ತಿರುವ 150ಕ್ಕೂ ಅಧಿಕ ಸಾವುಗಳಿಗೆ (ಕಳೆದ ಮೂರು ದಿನಗಳಲ್ಲಿ ಸಾವಿನ ಪ್ರಮಾಣದ ಸರಾಸರಿ 250 ದಾಟಿದೆ) ಕೊರೊನಾ ಹೇಗೆ ಕಾರಣವೋ, ಐಸಿಯುವಿನಲ್ಲಿ ಚಿಕಿತ್ಸೆ ಪಡೆಯಲು ಹಾಸಿಗೆಗಳು ಲಭ್ಯವಾಗದಿರುವುದೂ ಅಷ್ಟೇ ಕಾರಣ. ಐಸಿಯು ಹಾಸಿಗೆಗಳು ಸಾಕಷ್ಟು ಪ್ರಮಾಣದಲ್ಲಿ ಸಿದ್ಧವಿರುತ್ತಿದ್ದರೆ ಸಾವಿನ ಸರಮಾಲೆಯನ್ನು ಕಡಿಮೆಮಾಡಬಹುದಿತ್ತು ಎಂಬುದು ನಿರ್ವಿವಾದ.

ಮಲ್ಲೇಶ್ವರದ ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ 50 ಹಾಸಿಗೆ ಸಾಮರ್ಥ್ಯದ ಮಾಡ್ಯುಲಾರ್‌ ಐಸಿಯುವನ್ನು ಹತ್ತೇ ದಿನಗಳಲ್ಲಿ ಸ್ಥಾಪಿಸಲಾಗಿತ್ತು. ಅದರಿಂದ ನೂರಾರು ರೋಗಿಗಳಿಗೆ ಅನುಕೂಲವಾಗಿದೆ. ಅಂತಹ ಪ್ರಯತ್ನ ಇನ್ನಷ್ಟು ಆಸ್ಪತ್ರೆಗಳಲ್ಲಿ ಕೈಗೊಳ್ಳುವ ಅವಕಾಶವಿತ್ತು. ಪರಿಸ್ಥಿತಿ ಕೈ ಮೀರುವ ಹಂತ ತಲುಪಿದ್ದರೂ ಸರ್ಕಾರ ಐಸಿಯು ಮೂಲ ಸೌಕರ್ಯ ಹೆಚ್ಚಳಕ್ಕೆ ಗಂಭೀರ ಪ್ರಯತ್ನ ನಡೆಸಿಯೇ ಇಲ್ಲ. ಈಗಲೂ ಸರ್ಕಾರ ಖಾಸಗಿ ಆಸ್ಪತ್ರೆಗಳ ಮೇಲೆ ಒತ್ತಡ ಹೇರಿ ಅವುಗಳ ಐಸಿಯು ಹಾಸಿಗೆಗಳನ್ನು ಪಡೆಯಲು ಪ್ರಯತ್ನಿಸುವುದರಲ್ಲೇ ತಲ್ಲೀನವಾಗಿದೆ.

ತೀವ್ರ ನಿಗಾ ಘಟಕ ಏನೇನಿರಬೇಕು?
ಐಸಿಯು ಸ್ಥಾಪನೆಗೆ ನಿರಂತರ ಆಮ್ಲಜನಕ ಪೂರೈಕೆ, ಸ್ರಾವ/ ದ್ರವಗಳನ್ನು ಹೀರುವಿಕೆ ಹಾಗೂ ಸಾಂದ್ರ ಅನಿಲ ಪೂರೈಕೆಗೆ ಕೇಂದ್ರೀಕೃತ ವ್ಯವಸ್ಥೆಗಳು ಬಲು ಮುಖ್ಯ. ರೋಗಿಗಳಿಗೆ ಯಾವುದೇ ಕ್ಷಣದಲ್ಲೂ ಆಮ್ಲಜನಕ ಪೂರೈಕೆ ಸ್ಥಗಿತಗೊಳ್ಳಬಾರದು ಎಂದಾದರೆ ದ್ರವೀಕೃತ ಅನಿಲ ರೂಪದ ಆಮ್ಲಜನಕ ಪೂರೈಕೆಗೆ 1 ಸಾವಿರ ಲೀಟರ್‌ ಸಾಮರ್ಥ್ಯದ ಘಟಕವನ್ನು ಹೊಂದಬೇಕಾಗುತ್ತದೆ ಅಥವಾ 250 ಲೀ ಸಾಮರ್ಥ್ಯದ ಎರಡು ಡ್ಯೂರಾ ಸಿಲಿಂಡರ್‌ಗಳಿರಬೇಕು. ಒಂದು ಸಿಲಿಂಡರ್‌ ಖಾಲಿಯಾದಾಗ ಇನ್ನೊಂದನ್ನು ಬಳಸಬಹುದು. 40 ಹಾಸಿಗೆ (20 ವೆಂಟಿಲೇಟರ್‌) ಸಾಮರ್ಥ್ಯದ ಐಸಿಯು ನಡೆಸಲು ಇವಿಷ್ಟು ಬೇಕೇ ಬೇಕು.

ಮೇಲಕ್ಕೆ, ಕೆಳಗೆ, ಎರಡೂ ಪಾರ್ಶ್ವಗಳಿಗೆ ಹೊಂದಿಸುವುದು ಹಾಗೂ ಕತ್ತಿನ ಭಾಗವನ್ನು ಎತ್ತರಿಸುವುದು ಸೇರಿ ಐದು ಕಡೆ ಚಲಿಸಬಲ್ಲ ಹಾಸಿಗೆ ಐಸಿಯುವಿನಲ್ಲಿ ಇರಬೇಕು. ತುರ್ತು ನಿರ್ವಹಣೆ ವ್ಯವಸ್ಥೆಗಳು ಸಕ್ರಿಯವಾಗಿರಬೇಕು. ಐಸಿಯುನಲ್ಲಿ 10 ಹಾಸಿಗೆಗಳಿದ್ದರೆ ಕನಿಷ್ಠ ಮೂರರಿಂದ ಗರಿಷ್ಠ ಐದು ಹಾಸಿಗೆಗಳಿಗೆ ವೆಂಟೆಲೇಟರ್‌ ವ್ಯವಸ್ಥೆ ಇರಬೇಕು. ಪ್ರತಿ ಎರಡು ಹಾಸಿಗೆಗೆ ಒಬ್ಬರು ಶುಶ್ರೂಷಕರು (ಮೂರು ಪಾಳಿಗಳಿಗೆ ಪ್ರತ್ಯೇಕ) ಒಬ್ಬರು ಮುಖ್ಯ ಶುಶ್ರೂಷಕರು ಇರಬೇಕು.

ಇನ್ವೇಸಿವ್‌ ವೆಂಟಿಲೇಟರ್‌ (ಗಂಟಲ ಒಳಗೆ ಕೊಳವೆ ಹಾಕಿ ಆಮ್ಲಜನಕ ಪೂರೈಕೆ) ಇಲ್ಲದೇ ಹೋದರೆ ನಾನ್‌ ಇನ್‌ವೇಸಿವ್ ವೆಂಟಿಲೇಟರ್‌ (ಬೈ–ಪ್ಯಾಪ್‌) ಆದರೂ ಇರಲೇಬೇಕು. ಶೌಚಾಲಯ ಇರಬೇಕು, ಸಂಗ್ರಹಾಗಾರ ಚೆನ್ನಾಗಿರಬೇಕು. ಶುಚಿತ್ವ ನಿರ್ವಹಣೆಗೆ ಮಾದರಿ ಕಾರ್ಯ ವಿಧಾನ ಪಾಲಿಸುವ ನುರಿತ ಸ್ವಚ್ಛತಾ ಕಾರ್ಮಿಕರು ಬೇಕು. ಸ್ವಚ್ಛತೆ ಕಾಪಾಡುವಿಕೆ ಸರಿಯಾಗಿ ಇಲ್ಲದಿದ್ದರೆ ಸೋಂಕು ಹರಡುವ ಸಾಧ್ಯತೆ ಅಧಿಕ.

ಐಸಿಯುವಿನಲ್ಲಿ 10 ರೋಗಿಗಳಿಗೆ ಒಬ್ಬರು ತಜ್ಞ ವೈದ್ಯರು ಬೇಕು. ಪ್ರತಿ ಪಾಳಿಗೊಬ್ಬರು ಶ್ವಾಸಕೋಶ ಚಿಕಿತ್ಸಕರು, ಮುಖ್ಯ ವೈದ್ಯರು ಇರಬೇಕು. ಕನಿಷ್ಠ ಒಂದು ಡಯಾಲಿಸಿಸ್‌ ಯಂತ್ರ ಹಾಗೂ ಅದರ ನಿರ್ವಹಣೆಗೆ ತಂತ್ರಜ್ಞ ಇರಬೇಕು. ಕೆಲವು ರೋಗಿಗಳು ರಕ್ತ ವಾಂತಿ ಮಾಡುತ್ತಾರೆ ಅಥವಾ ರಕ್ತದ ಭೇದಿ ಮಾಡಿಕೊಳ್ಳುತ್ತಾರೆ. ಇಂತಹವರ ಚಿಕಿತ್ಸೆಗೆ ಉದರ ತಜ್ಞರು ಹಾಗೂ ಅಗತ್ಯ ಸಲಕರಣೆಗಳು ಸನ್ನದ್ಧವಾಗಿರಬೇಕು. ಉತ್ತಮ ಸೌಕರ್ಯದ ಐಸಿಯುಗಳಲ್ಲಿ ಕಲನೋಸ್ಕೋಪಿ ಹಾಗೂ ಎಂಡೋಸ್ಕೊಪಿ ವ್ಯವಸ್ಥೆಗಳೂ ಇರುತ್ತವೆ. ಇಷ್ಟಿದ್ದರೆ ಮಾತ್ರ ಅದು ಪೂರ್ಣ ಪ್ರಮಾಣದ ಐಸಿಯು.

ಆದರೆ ಕೋವಿಡ್‌ನಂತಹ ತುರ್ತು ಸಂದರ್ಭಕ್ಕಾಗಿ ನಿರ್ಮಿಸುವ ಐಸಿಯುವಿನಲ್ಲಿ ಡಯಾಲಿಸಿಸ್ ತಂತ್ರಜ್ಞರನ್ನು ಹಾಗೂ ಉದರ ತಜ್ಞರನ್ನು ಕೈಬಿಡಬಹುದು. ಕರ್ತವ್ಯ ನಿರತ ವೈದ್ಯರೇ ಶ್ವಾಶಕೋಶ ಚಿಕಿತ್ಸಕರ ಕಾರ್ಯ ನಿರ್ವಹಿಸಬಹುದು. ಉಳಿದ ಎಲ್ಲ ವ್ಯವಸ್ಥೆಗಳಿರುವುದು ಅತ್ಯಗತ್ಯ.

–ಡಾ.ಜಗದೀಶ ಹಿರೇಮಠ
–ಡಾ.ಜಗದೀಶ ಹಿರೇಮಠ

ಕಡಿಮೆ ಎಂದರೂ ಒಂದು ಹಾಸಿಗೆಗೆ ₹ 25 ಲಕ್ಷ ಖರ್ಚಾಗುತ್ತದೆ. ಪ್ರತಿಷ್ಠಿತ ಆಸ್ಪತ್ರೆಗಳು ಒಂದು ಐಸಿಯು ಹಾಸಿಗೆಗೆ ₹1.5ಕೋಟಿಯಿಂದ ₹ 2 ಕೋಟಿವರೆಗೂ ಖರ್ಚು ಮಾಡುತ್ತವೆ.

ಐಸಿಯು ಹೊಸದಾಗಿ ಕೇಂದ್ರೀಕೃತ ವ್ಯವಸ್ಥೆಯ ಕೊಳವೆ ಮಾರ್ಗ ಅಳವಡಿಸಲು ಒಂದುವಾರ ಬೇಕು. ಎಲ್ಲ ವ್ಯವಸ್ಥೆಗಳಿದ್ದರೆ 10 ಹಾಸಿಗೆಯ ಐಸಿಯುವನ್ನು ಹೊಸದಾಗಿ ಸಜ್ಜುಗೊಳಿಸಲು ಕನಿಷ್ಠ 1 ತಿಂಗಳು ಬೇಕು. ರೋಗಿಗಳಿಲ್ಲದ ಸ್ಥಿತಿಯಲ್ಲಿ ಯಂತ್ರೋಪಕರಣಗಳನ್ನು ಮೂರು ದಿನ ಚಲಾಯಿಸಿ (ನಾಕ್‌ಡೌನ್‌ ರನ್ನಿಂಗ್‌) ಪರಿಶೀಲಿಸಬೇಕು.

ಐಸಿಯು ಸ್ಥಾಪಿಸಿದರೆ ಸಾಲದು; ಅವುಗಳ ನಿರ್ವಹಣೆಯೂ ಬಲು ಮುಖ್ಯ. ತಜ್ಞ ವೈದ್ಯರು, ಶುಶ್ರೂಷಕಿಯರು ಇಲ್ಲದೇ ಹೋದರೆ ಅವು ಪ್ರಯೋಜನಕ್ಕೆ ಬರುವುದಿಲ್ಲ. ಐಸಿಯು ತಜ್ಞರು ತಿಂಗಳಿಗೆ ₹ 3.5 ಲಕ್ಷದಿಂದ ₹ 4 ಲಕ್ಷ ಕಡಿಮೆ ಸಂಬಳಕ್ಕೆ ಬರುವುದಿಲ್ಲ. ಐಸಿಯು ಶುಶ್ರೂಷಕಿಯರಿಗೆ ₹ 40ಸಾವಿರ ಸಂಬಳ ಇದೆ.
–ಡಾ.ಜಗದೀಶ ಹಿರೇಮಠ, ಐಸಿಯು ತಜ್ಞ, (ಜಿಗಣಿಯ ಎಸಿಇ ಸುಹಾಸ್‌ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ)

**

-ಪಿ.ಎಸ್‌.ಹರ್ಷ
-ಪಿ.ಎಸ್‌.ಹರ್ಷ


‘ತಿಂಗಳಲ್ಲೇ ಹಾಸಿಗೆಗಳ ಸಂಖ್ಯೆ 1 ಸಾವಿರದಷ್ಟು ಹೆಚ್ಚಿಸಬಹುದು’
ಸರ್ಕಾರ ಮನಸ್ಸು ಮಾಡಿದರೆ, ಲಭ್ಯ ಇರುವ ಹಾಸಿಗೆಗಳನ್ನೇ ಐಸಿಯು ಹಾಸಿಗೆಗಳನ್ನಾಗಿ ಪರಿವರ್ತಿಸುವ ಮೂಲಕ ಒಂದೇ ವಾರದಲ್ಲಿ ಐಸಿಯು ಘಟಕಗಳಲ್ಲಿ ಲಭ್ಯ ಇರುವ ಹಾಸಿಗೆಗಳ ಸಾಮರ್ಥ್ಯವನ್ನು ಒಂದು ಸಾವಿರ ಹಾಸಿಗೆಗಳವರೆಗೆ ಹೆಚ್ಚಿಸಬಹುದು. ಆದರೆ, ಇವುಗಳಿಗೆ ಪೂರಕವಾಗಿ ಮಾನವ ಸಂಪನ್ಮೂಲ ಹೊಂದಿಸುವುದು ಕಷ್ಟ.
-ಡಾ.ಎಚ್‌.ಎಂ.ಪ್ರಸನ್ನ, ಬೆಂಗಳೂರು ಖಾಸಗಿ ಆಸ್ಪತ್ರೆಗಳು, ಮತ್ತು ನರ್ಸಿಂಗ್‌ ಹೋಂಗಳ ಒಕ್ಕೂಟದ (ಫಾನಾ) ಅಧ್ಯಕ್ಷ

**

-ಡಾ.ಗುಣಶೇಖರ
-ಡಾ.ಗುಣಶೇಖರ

‘ಐಸಿಯು ನಿರ್ವಹಣೆ ಪಾಠವಾಗಲಿ’
ತುರ್ತು ಸಂದರ್ಭದಲ್ಲಿ ಐಸಿಯುಗಳನ್ನು ಸ್ಥಾ‍ಪಿಸಿ ನಿರ್ವಹಿಸುವುದು ಹೇಗೆ ಎಂಬುದನ್ನು ವೈದ್ಯಕೀಯ ಪಠ್ಯಕ್ರಮದಲ್ಲೇ ಅಳವಡಿಸಬೇಕು. ಸದ್ಯಕ್ಕೆ ಸರ್ಕಾರ ಐಸಿಯುಗಳನ್ನು ಒದಗಿಸಿದರೂ ಅದನ್ನು ನಿರ್ವಹಿಸಲು ಅಗತ್ಯವಿರುವಷ್ಟು ನುರಿತ ಮಾನವ ಸಂಪನ್ಮೂಲ ಲಭ್ಯ ಇಲ್ಲ. ಹಾಗಾಗಿ ಇರುವ ಐಸಿಯು ತಜ್ಞರು, ಐಸಿಯು ಶೂಶ್ರೂಷಕರು ಇತರರಿಗೆ ಅಲ್ಪಾವಧಿ ತರಬೇತಿ ನೀಡಿ ತುರ್ತು ನಿರ್ವಹಣಾ ತಂಡಗಳನ್ನು ಸಜ್ಜುಗೊಳಿಬೇಕು. ಕೋವಿಡ್‌ ಮೂರನೇ ಅಲೆಯನ್ನು ನಿರ್ವಹಿಸಬೇಕಾದರೆ ಇಂತಹ ಸಿದ್ಧತೆ ಅನಿವಾರ್ಯ.
-ಡಾ.ಗುಣಶೇಖರ ವುಪ್ಪಲವತಿ, ತಜ್ಞ ವೈದ್ಯ, (ಇನ್‌ವಿವೊ ಆಸ್ಪತ್ರೆ, ಜೆ.ಪಿ.ನಗರ, ಬೆಂಗಳೂರು)

***

-ಪಿ.ಎಸ್‌.ಹರ್ಷ
-ಪಿ.ಎಸ್‌.ಹರ್ಷ

‘ಪ್ರತಿ ವಲಯದಲ್ಲಿ ಆಮ್ಲಜನಕ ವ್ಯವಸ್ಥೆಯ 480 ಹಾಸಿಗೆ’
ಬಿಬಿಎಂಪಿಯ ಪ್ರತಿ ವಲಯದಲ್ಲೂ ಆಮ್ಲಜನಕ ಪೂರೈಕೆ ವ್ಯವಸ್ಥೆಯ ತಲಾ 300 ಹಾಸಿಗೆಗಳು, ತೀವ್ರ ಅವಲಂಬನೆ ಘಟಕಗಳ (ಎಚ್‌ಡಿಯು) ತಲಾ 150 ಹಾಸಿಗೆಗಳು, ತಲಾ 15 ಸಾಮಾನ್ಯ ಐಸಿಯು ಹಾಸಿಗೆಗಳು ಹಾಗೂ ವೆಂಟಿಲೇಟರ್‌ ವ್ಯವಸ್ಥೆಯ ತಲಾ 15 ಹಾಸಿಗೆಗಳನ್ನು ನಿರ್ಮಿಸಲು ಸಿದ್ಧತೆ ನಡೆಸಿದ್ದೇವೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಇವುಗಳಿಗೆ ನಿರಂತರ ಆಮ್ಲಜನಕ ಪೂರೈಕೆಗೆ ವ್ಯವಸ್ಥೆ ಕಲ್ಪಿಸುವುದಕ್ಕೆ ಹಾಗೂ ಮಾನವ ಸಂಪನ್ಮೂಲ ನಿಯೋಜಿಸುವುದಕ್ಕೆ ಸಿದ್ಧತೆ ನಡೆದಿದೆ.
-ಪಿ.ಎಸ್‌.ಹರ್ಷ, ಐಸಿಯು ಸ್ಥಾಪನೆಯ ನೋಡಲ್‌ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT