ಮಂಗಳವಾರ, ಮೇ 11, 2021
28 °C

ಬಿಬಿಎಂಪಿ ಬಜೆಟ್: ಎ– ಖಾತಾ, ಬಿ– ಖಾತಾ ಕಿರಿಕಿರಿ: ಈ ಬಾರಿ ಇತಿಶ್ರೀ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎ–ಖಾತಾ ಮತ್ತು ಬಿ–ಖಾತಾ ಸಮಸ್ಯೆಗಳಿಗೆ ಬಿಬಿಎಂಪಿ ಈ ಬಾರಿಯಾದರೂ ಇತಿಶ್ರೀ ಹಾಡಲಿದೆಯೇ?

ಬಿಬಿಎಂಪಿಯ 2021–22ನೇ ಸಾಲಿನ ಬಜೆಟ್‌ ಅಂತಹದ್ದೊಂದು ಆಶಾಕಿರಣ ಮತ್ತೆ ಕಾಣಿಸಿದೆ.

‘ಬೆಂಗಳೂರು ನಗರದಲ್ಲಿ ಪಾರದರ್ಶಕ ವ್ಯವಸ್ಥೆ ಜಾರಿಗೆ ಮತ್ತು ಕ್ರಮಬದ್ದ ಬೆಳವಣಿಗೆಗೆ ಅನುಕೂಲವಾಗುವಂತೆ ಆಸ್ತಿಗಳ ಖಾತಾ ನೋಂದಣಿಗೆ ಬಿ–ವಹಿ (ಬಿ ಖಾತಾ) ನಿರ್ವಹಿಸುವ ಪದ್ಧತಿ ರದ್ದುಗೊಳಿಸಲು ಪೂರ್ವ ಸಿದ್ಧತಾ ಕಾರ್ಯ ಪ್ರಗತಿಯಲ್ಲಿದೆ. ಕಂದಾಯ ಇಲಾಖೆ ಸಹಕಾರದಿಂದ ಈ ಕಾರ್ಯ ನಡೆಯುತ್ತಿದೆ. ಕಾನೂನಾತ್ಮಕ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಹೆಚ್ಚಿನ ಮಾಹಿತಿ ಒದಗಿಸಲಾಗುವುದು’ ಎಂದು ಬಜೆಟ್‌ನಲ್ಲಿ ಹೇಳಲಾಗಿದೆ.

‘ಬಿ–ಖಾತಾ’ಗಳನ್ನು ‘ಎ– ಖಾತಾ’ ಆಗಿ ಪರಿವರ್ತಿಸುವ ಕುರಿತ ಭರವಸೆಯ ಮಾತುಗಳು ಬಿಬಿಎಂಪಿ ಬಜೆಟ್‌ನಲ್ಲಿ ಉಲ್ಲೇಖವಾಗುತ್ತಿರುವುದು ಇದು ಮೊದಲೇನಲ್ಲ. ಚುನಾಯಿತ ಪ್ರತಿನಿಧಿಗಳ ಆಡಳಿತದ ಅವಧಿಯಲ್ಲಿ ಈ ಹಿಂದೆ ಮೂರು ಬಜೆಟ್‌ಗಳಲ್ಲಿ ಈ ಬಗ್ಗೆ ಉಲ್ಲೇಖವಾಗಿತ್ತು. ಆದರೆ, ಕಾರ್ಯರೂಪಕ್ಕೆ ಬಂದಿರಲಿಲ್ಲ.

‘2007ಕ್ಕಿಂತ ಮುಂಚೆ ಬಿ–ಖಾತಾ ವ್ಯವಸ್ಥೆ ಬೆಂಗಳೂರಿನಲ್ಲಿ ಜಾರಿಯಲ್ಲಿರಲಿಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 8 ಲಕ್ಷ ಆಸ್ತಿಗಳು ಬಿ–ಖಾತಾ ಹೊಂದಿವೆ. ಇವುಗಳಲ್ಲಿ ಕಟ್ಟಡ ಅಥವಾ ಮನೆ ನಿರ್ಮಿಸುವುದಕ್ಕೆ ಮಂಜೂರಾತಿ ಸಿಗುವುದಿಲ್ಲ. ಇವುಗಳನ್ನು ಮಾರಾಟ ಮಾಡುವಾಗಲೂ ಸೂಕ್ತ ಬೆಲೆ ಸಿಗುತ್ತಿಲ್ಲ. ಕೆಲವು ದಶಕಗಳ ಹಿಂದೆ ಸುಧಾರಣಾ ಶುಲ್ಕ ಕಟ್ಟಿಸಿಕೊಂಡು ಖಾತಾ ನೀಡುವ ಕ್ರಮ ಇತ್ತು. ಈಗ ಬಿ ಖಾತಾಗಳನ್ನು ಎ ಖಾತಾ ಆಗಿ ಪರಿವರ್ತಿಸುವುದಕ್ಕೆ ಕಾನೂನಿನಲ್ಲಿ ಕೆಲವೊಂದು ಮಾರ್ಪಾಡುಗಳ ಅಗತ್ಯವಿದೆ. ಇದಕ್ಕೆ ಕ್ರಮ ಕೈಗೊಳ್ಳಲಾಗಿದೆ. ಹಾಗಾಗಿ ಈ ಆರ್ಥಿಕ ವರ್ಷದಲ್ಲೇ ಇದು ಜಾರಿಗೆ ಬರಲಿದೆ’ ಎನ್ನುತ್ತಾರೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ.

‘ಹೊಸತಾಗಿ ನೀಡುವ ಖಾತಾಗಳ ಜೊತೆ, ಇದುವರೆಗೆ ನೀಡಿರುವ ಬಿ ಖಾತಾಗಳಿಗೂ ಎ– ಖಾತಾ ನೀಡಲಾಗುತ್ತದೆ’ ಎಂದು ಅವರು ಸ್ಪಷ್ಟಪಡಿಸಿದರು.

‘ಈ ಹಿಂದೆ ಸಂಬಂಧಪಟ್ಟ ಪ್ರಾಧಿಕಾರದಿಂದ ಮಂಜೂರಾತಿ ಪಡೆಯದೆಯೇ ನಿರ್ಮಿಸಿದ್ದ ಬಡಾವಣೆಗಳ ನಿವೇಶನಗಳಿಗೆ, ಭೂಪರಿವರ್ತನೆ ಮಾಡದೆ ಕಟ್ಟಡ ನಿರ್ಮಿಸಿದ್ದ ನಿವೇಶನಗಳಿಗೆ ಬಿ ಖಾತಾ ನೀಡಲಾಗುತ್ತಿತ್ತು. ಕಂದಾಯ ನಿವೇಶನಗಳಲ್ಲಿನ ಕಟ್ಟಡಗಳಿಗೂ ಬಿ ಖಾತಾ ನೀಡಲಾಗುತ್ತಿತ್ತು. ಈ ಪರಿಪಾಠ ಕೊನೆಯಾಗಲಿದೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

‘ಕಟ್ಟಡ ನಿರ್ಮಾಣ ಬೈಲಾ ಉಲ್ಲಂಘಿಸಿ ಕಟ್ಟಡ ನಿರ್ಮಿಸಿದ ಪ್ರಕರಣಗಳು ಇದರ ವ್ಯಾಪ್ತಿಯಲ್ಲಿ ಬರುವುದಿಲ್ಲ. ಎ–ಖಾತಾ ನಿವೇಶನದಲ್ಲಿ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಿದರೂ ಅದು ಅಕ್ರಮ ಕಟ್ಟಡ ಎನಿಸಿಕೊಳ್ಳುತ್ತದೆ. ಅವುಗಳನ್ನು ಅಕ್ರಮ–ಸಕ್ರಮ ಯೋಜನೆ ಅಡಿ ಸಕ್ರಮಗೊಳ್ಳಬೇಕು. ಈ ಕುರಿತ ವ್ಯಾಜ್ಯ ಸುಪ್ರೀಂ ಕೋರ್ಟ್‌ನಲ್ಲಿದೆ’ ಎಂದು ಅವರು ಸ್ಪಷ್ಟಪಡಿಸಿದರು.

‘ಸಂಬಂಧಪಟ್ಟ ಪ್ರಾಧಿಕಾರದಿಂದ ಮಂಜೂರಾತಿ ಪಡೆಯದೇ ನಿರ್ಮಿಸಿದ ಬಡಾವಣೆಗಳಲ್ಲಿ ಕೆಲವು ನಿವೇಶನಗಳಿಗೆ ಬಿಬಿಎಂಪಿ ಅಧಿಕಾರಿಗಳು ಬಿ ಖಾತಾ ನೀಡಿದ್ದಾರೆ. ಅದೇ ಬಡಾವಣೆಯಲ್ಲೇ ಕೆಲವು ನಿವೇಶನಗಳಿಗೆ ಎ ಖಾತಾ ನೀಡಿರುವ ಉದಾಹರಣೆ ಇದೆ. ಬಿ–ಖಾತಾ ವ್ಯವಸ್ಥೆ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿದೆ. ಎ ಖಾತಾ ಮಾತ್ರ ನೀಡುವ ವ್ಯವಸ್ಥೆ ಜಾರಿಗೆ ಬಂದರೆ ಇಂತಹ ಭ್ರಷ್ಟಾಚಾರಗಳಿಗೆ ತನ್ನಿಂದ ತಾನೆ ಕಡಿವಾಣ ಬೀಳಲಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು. 

ಕರ ಭಾರವಿಲ್ಲ– ₹ 3500 ಕೋಟಿ ಆಸ್ತಿ ತೆರಿಗೆ ಗುರಿ 

ಬಿಬಿಎಂಪಿಯಲ್ಲಿ ಈ ಹಿಂದೆ ಆಡಳಿತಾಧಿಕಾರಿ ಅವಧಿಯಲ್ಲೇ ಆಸ್ತಿ ತೆರಿಗೆ ಹೆಚ್ಚಿಸಲಾಗಿತ್ತು. ಈ ಬಾರಿ ಚುನಾಯಿತ ಪ್ರತಿನಿಧಿಗಳ ಆಡಳಿತ ಇಲ್ಲ. ಹಾಗಾಗಿ ಈ ಬಾರಿಯೂ ಆಸ್ತಿ ತೆರಿಗೆ ಹಚ್ಚಳ ಮಾಡಬಹುದೆಂಬ ಆತಂಕ ಜನರಲ್ಲಿತ್ತು. ಆದರೆ, ಬಿಬಿಎಂಪಿ ಯಾವುದೇ ತೆರಿಗೆ ಹೆಚ್ಚಿಸಿಲ್ಲ.

ಬಿಬಿಎಂಪಿ 2021–22ನೇ ಸಾಲಿನಲ್ಲಿ ₹ 2800 ಕೋಟಿ ಆಸ್ತಿತೆರಿಗೆ ಹಾಗೂ ಹಳೆ ತೆರಿಗೆ ಬಾಕಿ ವಸೂಲಿ ಸೇರಿ ₹ 3500 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿಯನ್ನು ನಿಗದಿಪಡಿಸಿದೆ.

₹ 1,251 ಕೋಟಿ ತೆರಿಗೆಯೇತರ ಆದಾಯ ಹಾಗೂ ಇತರ ಮೂಲಗಳಿಂದ ₹ 416 ಕೋಟಿ ಆದಾಯ ಸೇರಿ ಒಟ್ಟು ಪಾಲಿಕೆ ಸ್ವಂತ ಮೂಲಗಳಿಂದ ₹ 5020.23 ಕೋಟಿ ವರಮಾನ ಗಳಿಸುವ ನಿರೀಕ್ಷೆ ಹೊಂದಿದೆ.  

2020–21ನೇ ಸಾಲಿನಲ್ಲಿ ಮಾರ್ಚ್ 24ರವರೆಗೆ ₹ 2,850 ಕೋಟಿ (ಹಳೆ ಬಾಕಿ ಸೇರಿ) ಮಾತ್ರ ಆಸ್ತಿ ತೆರಿಗೆ ಸಂಗ್ರಹಿಸಲಾಗಿದೆ. ವಸ್ತುಸ್ಥಿತಿ ಹಾಗಿರುವಾಗ ₹ 3,500 ಕೋಟಿ ಆಸ್ತಿ ತೆರಿಗೆ ಸಂಗ್ರಹ ಗುರಿ ನಿಗದಿ ವಾಸ್ತವಕ್ಕೆ ಹತ್ತಿರ ಹೇಗಾಗುತ್ತದೆ ಎಂಬ ಪ್ರಶ್ನೆ ಸಹಜ. 

ಇದಕ್ಕೆ ಉತ್ತರಿಸಿದ ಎನ್‌. ಮಂಜುನಾಥ ಪ್ರಸಾದ್‌, ‘ಪಾಲಿಕೆ ವ್ಯಾಪ್ತಿಯಲ್ಲಿ 4.10 ಲಕ್ಷ ಆಸ್ತಿಗಳ ವರ್ಗೀಕರಣದ ವೇಳೆ ಮಾಲೀಕರು ತಪ್ಪು ಮಾಹಿತಿ ನೀಡಿದ್ದರು. ಇಂತಹ 78ಸಾವಿರ ಆಸ್ತಿ ಮಾಲೀಕರಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ. ಇನ್ನಷ್ಟು ಆಸ್ತಿ ಮಾಲೀಕರನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ತಪ್ಪುಗಳು ಸರಿಯಾದರೆ ಸಹಜವಾಗಿಯೇ ಆಸ್ತಿ ತೆರಿಗೆ ಸಂಗ್ರಹ ಹೆಚ್ಚಳವಾಗಲಿದೆ’ ಎಂದು ವಿವರಿಸಿದರು.

‘ಟೋಟಲ್‌ ಸ್ಟೇಷನ್‌ ಸರ್ವೆ ನಡೆಸಿದ್ದ ಅನೇಕ ಆಸ್ತಿಗಳಿಗೆ ಸಂಬಂಧಿಸಿಯೂ ಜಂಟಿ ಆಯುಕ್ತರ ಹಂತದಲ್ಲೇ ವಿಚಾರಣೆ ಮುಗಿಸಲಾಗಿತ್ತು. ಅವುಗಳನ್ನು ನನ್ನ ಹಂತದಲ್ಲಿ ಸ್ವಯಂಪ್ರೇರಿತವಾಗಿ ಮರುವಿಚಾರಣೆಗೆ ಕೈಗೆತ್ತಿಕೊಂಡು ಪಾಲಿಕೆಗೆ ಬಾಕಿ ಇರುವ ಆಸ್ತಿ ತೆರಿಗೆ ವಸೂಲಿಗೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು. 

ಎಲ್ಲ ಆಸ್ತಿ ಇ– ಆಸ್ತಿ ತಂತ್ರಾಂಶದ ವ್ಯಾಪ್ತಿಗೆ

ಬಿಬಿಎಂಪಿ ವ್ಯಾಪ್ತಿಯ ಎಲ್ಲ ಆಸ್ತಿಗಳನ್ನು ಇ– ಆಸ್ತಿ ತಂತ್ರಾಂಶದ ವ್ಯಾಪ್ತಿಗೆ ತರಲಾಗುತ್ತದೆ. ಈ ಸಲುವಾಗಿಯೇ ₹ 10 ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಕಾಯ್ದಿರಿಸಲಾಗಿದೆ.

 ಇದುವರೆಗೆ ಮೂರು ವಾರ್ಡ್‌ಗಳಲ್ಲಿ ಇ– ಆಸ್ತಿ ತಂತ್ರಾಂಶವನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು. ಇದನ್ನು ಕೇಂದ್ರ ವಲಯದ ಇನ್ನುಳಿದ 97 ವಾರ್ಡ್‌ಗಳಿಗೆ ವಿಸ್ತರಿಸಲು ಇತ್ತೀಚೆಗಷ್ಟೇ ಪಾಲಿಕೆ ಕ್ರಮ ಕೈಗೊಂಡಿದೆ. ಹಂತ ಹಂತವಾಗಿ ಹೊರ ವಲಯದ ವಾರ್ಡ್‌ಗಳಿಗೂ ಈ ವ್ಯವಸ್ಥೆಯನ್ನು ವಿಸ್ತರಿಸಲಾಗುತ್ತದೆ.

ಉಪಕರ ಪಾಲಿಕೆಯಲ್ಲೇ ಬಳಕೆ

ಪಾಲಿಕೆ ಆಸ್ತಿ ತೆರಿಗೆಯ ಶೇ 15ರಷ್ಟು ಆರೋಗ್ಯ ಕರ, ಶೇ 3 ಭಿಕ್ಷುಕರ ಕರ, ಶ 6ರಷ್ಟು ಗ್ರಂಥಾಲಯ ಕರ ಸೇರಿ ಶೇ 24ರಷ್ಟು ಉಪಕರವನ್ನು ಸಂಗ್ರಹಿಸುತ್ತಿದೆ. ಭಿಕ್ಷುಕರ ಕರದ ರೂಪದಲ್ಲಿ ಸಂಗ್ರಹವಾಗುವ ಮೊತ್ತದಲ್ಲಿ ಶೇ 50ರಷ್ಟನ್ನು ಪಾಲಿಕೆಯೇ ನಿರ್ವಹಿಸುವ ರಾತ್ರಿ ನಿರಾಶ್ರಿತರ ಆಶ್ರಯ ತಾಣಗಳನ್ನು ಹೆಚ್ಚಿಸುವುದಕ್ಕೆ ಹಾಗೂ ನಗರ ಬಡತನ ನಿರ್ಮೂಲನೆ ಕಾರ್ಯಕ್ರಮಗಳಿಗೆ ಬಳಸಲು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸುವುದಾಗಿ ಬಜೆಟ್‌ನಲ್ಲಿ ಹೇಳಲಾಗಿದೆ.

ಸಂಗ್ರಹವಾಗುವ ಗ್ರಂಥಾಲಯ ಕರದ ಒಟ್ಟು ಮೊತ್ತದಲ್ಲಿ ಶೇ 50ರಷ್ಟನ್ನು ಪಾಲಿಕೆ ನಡೆಸುತ್ತಿರುವ ಶಾಲಾ ಕಾಲೇಜುಗಳ ಗ್ರಂಥಾಲಯ ಅಭಿವೃದ್ಧಿಗೆ ಬಳಸುವ ಕುರಿತೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ.

ಇದುವರೆಗೆ ಭಿಕ್ಷುಕರ ಕರವನ್ನು ಸಮಾಜ ಕಲ್ಯಾಣ ಇಲಾಖೆಯ ಕೇಂದ್ರ ಪರಿಹಾರ ಸಮಿತಿಗೆ ಹಾಗೂ ಗ್ರಂಥಾಲಯ ಕರವನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ವರ್ಗಾಯಿಸಲಾಗುತ್ತಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು