ಸೋಮವಾರ, ಏಪ್ರಿಲ್ 12, 2021
32 °C

ಕೋವಿಡ್‌ ಮಾರ್ಗಸೂಚಿ ಕಡೆಗಣನೆ: 29 ಮಳಿಗೆಗಳ ಮುಚ್ಚಿಸಿದ ಬಿಬಿಎಂಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದಲ್ಲಿ ಕೋವಿಡ್‌ ಹರಡುವಿಕೆ ನಿಯಂತ್ರಿಸಲು ಸರ್ಕಾರ ರೂಪಿಸಿರುವ ಮಾರ್ಗಸೂಚಿಗಳನ್ನು ಕಡೆಗಣಿಸಿರುವ 29 ಮಳಿಗೆಗಳನ್ನು ಬಿಬಿಎಂಪಿ ಅಧಿಕಾರಿಗಳು ಗುರುವಾರ ಮುಚ್ಚಿಸಿದ್ದಾರೆ. ಇವುಗಳಲ್ಲಿ ಬೇಕರಿಗಳು, ಸೂಪರ್‌ ಮಾರ್ಕೆಟ್‌ಗಳು, ಸಲೂನ್, ಜಿಮ್‌ ಹಾಗೂ ಮಾಲ್‌ಗಳಲ್ಲಿನ ಮಳಿಗೆಗಳು ಸೇರಿವೆ. 

ಸೋಂಕು ಹರಡುವಿಕೆ ನಿಯಂತ್ರಿಸಲು ಮಳಿಗೆಗಳ ಮಾಲೀಕರು ಕ್ರಮಕೈಗೊಂಡಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಪ್ರತಿ ವಲಯಗಳಲ್ಲೂ ಬಿಬಿಎಂಪಿ ಆರೋಗ್ಯಾಧಿಕಾರಿ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಅಂಗಡಿ ಮಳಿಗೆಗಳಿಗೆ ಖುದ್ದಾಗಿ ಭೇಟಿ ನೀಡಿ ಅಲ್ಲಿನ ಸಿಬ್ಬಂದಿ ಸೋಂಕು ನಿಯಂತ್ರಣ ಕ್ರಮಗಳನ್ನು ಪಾಲಿಸುತ್ತಿದ್ದಾರೆಯೇ, ಗ್ರಾಹಕರು ಅಂತರ ಕಾಪಾಡಲು ವ್ಯವಸ್ಥೆ ಕಲ್ಪಿಸಲಾಗಿದೆಯೇ ಎಂಬುದನ್ನು ಪರಿಶೀಲಿಸುತ್ತಿವೆ. ಸಿಬ್ಬಂದಿ ಮಾಸ್ಕ್‌ ಧರಿಸದಿದ್ದರೆ ಅಧಿಕಾರಿಗಳು ದಂಡ ವಿಧಿಸಿ ಎಚ್ಚರಿಕೆ ನೀಡುತ್ತಿದ್ದಾರೆ. ಸೂಪರ್‌ ಮಾರ್ಕೆಟ್‌, ಮಾಲ್‌, ಹೋಟೆಲ್‌ ಮುಂತಾದ ಹೆಚ್ಚು ಜನ ಸೇರುವ ತಾಣಗಳಲ್ಲಿ ಸೋಂಕು ಹರಡುವಿಕೆ ನಿಯಂತ್ರಣ ಕ್ರಮಗಳನ್ನು ಕಡೆಗಣಿಸಿದ್ದರೆ, ಅಂತಹ ಮಳಿಗೆಗಳನ್ನು ಅಧಿಕಾರಿಗಳು ಮುಚ್ಚಿಸುತ್ತಿದ್ದಾರೆ.

ಪಶ್ಚಿಮ ವಲಯದ ಚಾಮರಾಜಪೇಟೆಯ ಕಾವೇರಿ ಬಾರ್‌ ಮತ್ತು ರೆಸ್ಟೋರೆಂಟ್‌, ಮಲ್ಲೇಶ್ವರ ಮಲ್ಟಿ ಕಾರ್‌ ಸರ್ವಿಸ್‌, ಹಿಲ್‌ ಟಾಪ್‌ ಕಾಂಡಿಮೆಂಟ್ಸ್‌, ಶ್ರೀಗಾಯತ್ರೀ ಗ್ಲಾಸ್‌ ಮ್ತು ಪ್ಲೈವುಡ್ಸ್‌, ಶ್ರಿರಾಮ್‌ ಹಾಟ್ ಚಿಪ್ಸ್‌ ಮಳಿಗೆಗಳನ್ನು ಆರೋಗ್ಯಾಧಿಕಾರಿಗಳ ತಂಡ ಮುಚ್ಚಿಸಿತು. ಈ ವಲಯದಲ್ಲಿ 18 ಮಳಿಗೆಗಳಿಗೆ ಒಟ್ಟು ₹14 ಸಾವಿರ ದಂಡ ವಿಧಿಸಲಾಗಿದೆ.

ಮಹದೇವಪುರ ವಲಯದಲ್ಲಿ ಮುನ್ನೆಕೊಳಾಲದ ಖಠಿ ಪಾಯಿಂಟ್‌ ಹಾಗೂ ಮೇಡಹಳ್ಳಿಯ ಬಿಗ್‌ ಡೇ ಸೂಪರ್‌ ಮಾರ್ಕೆಟ್‌ಗಳಿಗೆ ಅಧಿಕಾರಿಗಳು ಬೀಗಮುದ್ರೆ ಹಾಕಿದರು. ಮೂರು ಮಳಿಗೆಗಳಿಗೆ ಒಟ್ಟು ₹ 1,800 ದಂಡ ವಿಧಿಸಿದರು. 

ಯಲಹಂಕ ವಲಯದಲ್ಲಿ ಬ್ಯಾಟರಾಯನಪುರದಲ್ಲಿ ಧ್ರುವೇಶ್‌ ಹೋಂಡಾ  ಶೋರೂಮ್‌, ಮಯೂರ ಬೇಕರಿ, ನಂದಿನಿ ಹಾಲಿನ ಮಳಿಗೆ, ಸೌತ್‌ ಜಂಕ್ಷನ್‌ ಮಳಿಗೆಗಳನ್ನು ಅಧಿಕಾರಿಗಳು ಮುಚ್ಚಿಸಿದರು. ಅಂಗಡಿಯೊಂದಕ್ಕೆ ₹ 1 ಸಾವಿರ ದಂಡ ವಿಧಿಸಿದರು.

ದಕ್ಷಿಣ ವಲಯದ ಶ್ರೀನಗರ, ವಿದ್ಯಾಪೀಠ ಹಾಗೂ ಗಿರಿನಗರ ವಾರ್ಡ್‌ಗಳಲ್ಲಿ ಒಟ್ಟು ಆರು ಮಳಿಗೆಗಳನ್ನು ಮುಚ್ಚಿಸಿದ್ದಾರೆ. ಗಿರಿನಗರದಲ್ಲಿ ದಿ ಬಾಡಿ ಇಮೇಜ್‌ ಜಿಮ್‌ಗೆ ಅಧಿಕಾರಿಗಳು ಬೀಗ ಹಾಕಿಸಿದ್ದಾರೆ. ಪೋರಂ ಮಾಲ್‌ನ ಮಳಿಗೆಯನ್ನು ಮುಚ್ಚಿಸಿದ್ದಾರೆ.

ಪೂರ್ವ ವಲಯದಲ್ಲಿ ಎಸ್‌.ಆರ್‌.ನಗರದಲ್ಲಿ ನೋಬಲ್‌ ಕಾರ್ನರ್‌ ಸೂಪರ್‌ ಮಾರ್ಕೆಟ್‌, ಹೊಯ್ಸಳ ನಗರ ವಾರ್ಡ್‌ನ ಅಲ್‌ಬೇಕ್‌ ಹೋಟೆಲ್‌ ಹಾಗೂ ಮೂರು ಮಳಿಗೆಗಳಿಗೆ ಅಧಿಕಾರಿಗಳು ಬೀಗ ಹಾಕಿಸಿದರು. ವಿವಿಧ ಮಳಿಗೆಗಳಿಂದ ಒಟ್ಟು ₹ 61,700 ಸಾವಿರ ದಂಡ ಸಂಗ್ರಹಿಸಿದರು. ಇದರಲ್ಲಿ ಕಸ ಸಂಗ್ರಹಣೆಯನ್ನು ಸಮರ್ಪಕವಾಗಿ ನಿರ್ವಹಿಸದ ದಂಡವೂ ಇದರಲ್ಲಿ ಸೇರಿದೆ.

ದಾಸರಹಳ್ಳಿ ವಲಯದಲ್ಲಿ ಒಂದು ಮಳಿಗೆಯನ್ನು ಮುಚ್ಚಿಸಲಾಗಿದ್ದು, ವಿವಿಧ ಮಳಿಗೆಗಳಿಂದ ಒಟ್ಟು ₹ 3ಸಾವಿರ ದಂಡ ಸಂಗ್ರಹಿಸಲಾಗಿದೆ. ಬೊಮ್ಮನಹಳ್ಳಿ ವಲಯದಲ್ಲಿ ನಾಲ್ಕು ಮಳಿಗೆಗಳನ್ನು ಮುಚ್ಚಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು