ಸೋಮವಾರ, ಮೇ 17, 2021
21 °C

ಬಿಬಿಎಂಪಿ ಆಯುಕ್ತ ಅನಿಲ್‌ಕುಮಾರ್ ದಿಢೀರ್ ವರ್ಗಾವಣೆ; ಮಂಜುನಾಥ ಪ್ರಸಾದ್ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯ ರಾಜಧಾನಿಯು ದೇಶದ ಪ್ರಮುಖ ಕೋವಿಡ್ ಹಾಟ್‌ಸ್ಪಾಟ್ ಆಗಿರುವ ಬೆನ್ನಲ್ಲೇ ಆಡಳಿತದಲ್ಲೂ ದೊಡ್ಡ ಬದಲಾವಣೆಯಾಗಿದೆ. ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ಅವರನ್ನು ರಾಜ್ಯ ಸರ್ಕಾರ ಶನಿವಾರ ದಿಢೀರ್ ವರ್ಗಾವಣೆ ಮಾಡಿ, ಅವರ ಜಾಗಕ್ಕೆ ಈ ಹಿಂದೆ ಇದೇ ಹುದ್ದೆ ನಿರ್ವಹಿಸಿದ್ದ ಎನ್. ಮಂಜುನಾಥ ಪ್ರಸಾದ್ ಅವರನ್ನು ನೇಮಿಸಿದೆ.

2019ರ ಆಗಸ್ಟ್‌ನಲ್ಲಿ ಅನಿಲ್‌ಕುಮಾರ್ ಅವರು ಆಯುಕ್ತರಾಗಿ ವರ್ಗವಾಗುವ ಮುನ್ನ ಮೂರು ವರ್ಷಗಳ ಕಾಲ ಈ ಹುದ್ದೆಯನ್ನು ಮಂಜುನಾಥ ಪ್ರಸಾದ್ ನಿರ್ವಹಿಸಿದ್ದರು. ಶನಿವಾರವೇ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ವಿಪತ್ತು ನಿರ್ವಹಣೆ, ಭೂಮಿ ಹಾಗೂ ಯುಪಿಒಆರ್‌  ಹುದ್ದೆಗಳನ್ನೂ ಹೆಚ್ಚುವರಿಯಾಗಿ ನಿಭಾಯಿಸಬೇಕಾಗಿದೆ.

ಅನಿಲ್‌ಕುಮಾರ್ ಅವರಿಗೆ ಸಾರ್ವಜನಿಕ ಉದ್ದಮೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯ ಹೊಣೆ ವಹಿಸಲಾಗಿದೆ. ಈ ಹುದ್ದೆಯನ್ನು ಪ್ರಸ್ತುತ ಕಾರ್ಯದರ್ಶಿ ದರ್ಜೆಯ ಅಧಿಕಾರಿ ನಿರ್ವಹಿಸುತ್ತಿದ್ದರು.

ಕೊರೊನಾ ಸೋಂಕು ಹರಡುವಿಕೆ ಪ್ರಾಥಮಿಕ ಹಂತದಲ್ಲಿದ್ದಾಗ ಅದರ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಪ್ರಶಂಸೆಗಳು ವ್ಯಕ್ತವಾಗಿದ್ದವು. ಆದರೆ, ಕಳೆದ ಎರಡು ತಿಂಗಳಿಂದ ಅದು ಕ್ರಮೇಣ ಬದಲಾಗುತ್ತಾ ಹೋಯಿತು. ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಾ ಹೋದಂತೆ ಹೈಕೋರ್ಟ್‌ ಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡಿತ್ತು.

ಸರ್ಕಾರದ ಮೂಲಗಳ ಪ್ರಕಾರ, ‘ಬೆಂಗಳೂರಿನ ಬಹುತೇಕ ಶಾಸಕರು ಅನಿಲ್‌ಕುಮಾರ್ ವಿರುದ್ಧ ಮುಖ್ಯಮಂತ್ರಿ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದರು. ಯಾರೊಬ್ಬರೂ ಅವರ ಬೆಂಬಲಕ್ಕೆ ನಿಲ್ಲಲಿಲ್ಲ. ಇದೇ ಅವರಿಗೆ ಮುಳುವಾಯಿತು.’

 ‘₹436 ಕೋಟಿ ಮೊತ್ತದ ಯೋಜನೆಯನ್ನು ಕೆಆರ್‌ಐಡಿಎಲ್‌ಗೆ ನೀಡಿದ್ದು ಕೂಡ ಅವರ ಮೇಲೆ ಅಸಮಾಧಾನ ಹೆಚ್ಚಾಗುವಂತೆ ಮಾಡಿತು. ಬೆಂಗಳೂರಿನ ಪ್ರಭಾವಿ ಸಚಿವರೊಬ್ಬರ ಮಾತನ್ನು ಅನಿಲ್‌ಕುಮಾರ್ ಕೇಳುತ್ತಿರಲಿಲ್ಲ. ಇದೂ ಕೂಡ ಅವರ ವರ್ಗಾವಣೆಗೆ ಕಾರಣವಾಯಿತು’ ಎಂದು ಮೂಲಗಳು ಹೇಳಿವೆ.

‘ಬಿಐಇಸಿಯಲ್ಲಿನ ಕೋವಿಡ್ ಆರೈಕೆ ಕೇಂದ್ರಕ್ಕೆ ಸಾಮಗ್ರಿಗಳನ್ನು ಬಾಡಿಗೆ ಆಧಾರದಲ್ಲಿ ಪಡೆದಿರುವುದು ಸರ್ಕಾರಕ್ಕೆ ಮುಜುಗರ ಉಂಟು ಮಾಡಿತ್ತು. ಈ ವೈಫಲ್ಯ ಮುಚ್ಚಿಕೊಳ್ಳಲು ಮತ್ತು ಬೇರೆಯವರನ್ನು ರಕ್ಷಣೆ ಮಾಡಲು ಅನಿಲ್‌ಕುಮಾರ್ ಅವರನ್ನು ತಲೆದಂಡ ಮಾಡಲಾಗಿದೆ’ ಎಂದೂ ಹೇಳಲಾಗಿದೆ.

‘ಬೆಂಗಳೂರಿನಲ್ಲಿ ಕೋವಿಡ್‌ ನಿರ್ವಹಣೆ ಬಗ್ಗೆ ಕೇಂದ್ರದ ತಂಡ ಮಾಡಿದ ಟೀಕೆಗಳನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ’ ಎಂದೂ ಮೂಲಗಳು ಅಭಿಪ್ರಾಯಪಟ್ಟಿವೆ.

ಕೋವಿಡ್ ಪ್ರಕರಣಗಳು ತಾರಕಕ್ಕೆ ಏರಿಕೆಯಾಗಿರುವ ಸಂದರ್ಭದಲ್ಲಿ ಪಾಲಿಕೆಯ ಹೊಣೆ ಹೊರಲು ಮಂಜುನಾಥ್ ಪ್ರಸಾದ್ ಕೂಡ ಆಸಕ್ತಿ ವಹಿಸಿರಲಿಲ್ಲ. ಮುಖ್ಯಮಂತ್ರಿ ಕಚೇರಿ ನಿರ್ದಿಷ್ಟವಾಗಿ ಸೂಚನೆ ನೀಡಿದ ಬಳಿಕ ನಿರ್ಧಾರ ಬದಲಿಸಿ ಪಾಲಿಕೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ವರ್ಗಾವಣೆ ಪ್ರಶ್ನಿಸಿ ಅನಿಲ್‌ಕುಮಾರ್ ಅವರು ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ) ಮೊರೆ ಹೋಗಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಈ ಬಗ್ಗೆ ಖಚಿತಪಡಿಸಲು ಹಲವು ಬಾರಿ ಪ್ರಯತ್ನಿಸಿದರೂ ಅನಿಲ್‌ಕುಮಾರ್ ಸಂಪರ್ಕಕ್ಕೆ ಸಿಗಲಿಲ್ಲ.

ವರ್ಗಾವಣೆ ಪ್ರಶ್ನಿಸಿ ಸಿಎಟಿ ಮೊರೆ?
ವರ್ಗಾವಣೆ ಪ್ರಶ್ನಿಸಿ ಅನಿಲ್‌ಕುಮಾರ್ ಅವರು ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ) ಮೊರೆ ಹೋಗಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಈ ಬಗ್ಗೆ ಖಚಿತಪಡಿಸಲು ಹಲವು ಬಾರಿ ಪ್ರಯತ್ನಿಸಿದರೂ ಅನಿಲ್‌ಕುಮಾರ್ ಸಂಪರ್ಕಕ್ಕೆ ಸಿಗಲಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು