ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಲ್ಲಿ ಮನೆ ಆರೈಕೆಯಲ್ಲಿದ್ದ 778 ಮಂದಿ ಕೊರೊನಾ ಸೋಂಕಿತರು ಮೇನಲ್ಲಿ ಸಾವು

ಮರು ಪರಿಶೀಲನೆ ನಡೆಸಿ ವರದಿ ನೀಡಲು ಮುಖ್ಯ ಆಯುಕ್ತರ ಸೂಚನೆ
Last Updated 21 ಮೇ 2021, 2:41 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೋವಿಡ್‌ಗೆ ಒಳಗಾಗಿ ಮನೆಯಲ್ಲಿಯೇ ಪ್ರತ್ಯೇಕವಾಗಿದ್ದುಕೊಂಡು ಚಿಕಿತ್ಸೆ ಅಥವಾ ಆರೈಕೆಯಲ್ಲಿದ್ದವರ ಪೈಕಿ ಮೇ ತಿಂಗಳಲ್ಲಿ 778 ಮಂದಿ ಸಾವಿಗೀಡಾಗಿದ್ದಾರೆ ಎಂದು ಬಿಬಿಎಂಪಿ ರಚಿಸಿರುವ ಸಾವು ವಿಶ್ಲೇಷಣಾ ಸಮಿತಿ (ಡೆತ್‌ ಅನಾಲಿಸಿಸ್‌ ಕಮಿಟಿ) ವರದಿ ನೀಡಿದೆ.

ಆದರೆ, ಸಮಿತಿಯ ಈ ವರದಿಯ ಅಂಕಿ–ಅಂಶಗಳ ಸ್ಪಷ್ಟ ಮಾಹಿತಿ ಬೇಕಿದ್ದು, ಮತ್ತೊಮ್ಮೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಸಮಿತಿಗೆ ಸೂಚನೆ ನೀಡಿದ್ದಾರೆ.

’ಕೋವಿಡ್‌ನಿಂದ ಸಾವನ್ನಪ್ಪುವ ಪ್ರಮಾಣವನ್ನು ತಗ್ಗಿಸುವುದು ಹಾಗೂ ಸೋಂಕಿನಿಂದ ಯಾರೂ ಸಾವನ್ನಪ್ಪದಂತೆ ಮುಂಜಾಗ್ರತಾ ಕ್ರಮ ವಹಿಸುವುದು ಸಮಿತಿ ರಚನೆಯ ಉದ್ದೇಶ‘ ಎಂದೂ ಅವರು ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

’ಮನೆಯಲ್ಲಿ ಆರೈಕೆ ಪಡೆದುಕೊಳ್ಳುತ್ತಿದ್ದವರು ಯಾವ ಕಾರಣದಿಂದ ಸಾವಿಗೀಡಾಗಿದ್ದಾರೆ ಎನ್ನುವ ಬಗ್ಗೆ ಸಮಿತಿಯು ವಿಸ್ತೃತ ವರದಿ ನೀಡಲಿದ್ದು, ಇದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು‘ ಎಂದು ತಿಳಿಸಿದರು.

ವಿಶೇಷ ಅಧಿಕಾರಿ ನೇಮಕ

’ನಗರದಲ್ಲಿ ಸೋಂಕು ದೃಢಪಟ್ಟು, ರೋಗಿಯು ಗುಣಮುಖರಾದ ಮೇಲೆ ಆಸ್ಪತ್ರೆಯಿಂದ ಬಿಡುಗಡೆ ಆಗುವ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸುವ ಉದ್ದೇಶದಿಂದ ಸರ್ಕಾರ ವಿಶೇಷ ಅಧಿಕಾರಿಯನ್ನು ನೇಮಿಸಿದೆ. ಗುಣಮುಖರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸುವ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿದ್ದು, ಇದರಲ್ಲಿ ಯಾವುದೇ ಸಮಸ್ಯೆ ಆಗಿಲ್ಲ‘ ಎಂದೂ ಹೇಳಿದರು.

‘ಯಾವ ವಯೋಮಾನದವರಿಗೆ ಮೂರನೇ ಅಲೆಯಲ್ಲಿ ಸಮಸ್ಯೆ ಆಗಲಿದೆ, ಇದನ್ನು ತಡೆಯುವುದು ಹೇಗೆ ಎನ್ನುವ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳಲಿದ್ದು, ಸರ್ಕಾರದ ನಿರ್ದೇಶನ ಅನುಸಾರ ಪಾಲಿಕೆಯ ಹಂತದಲ್ಲಿ ಕ್ರಮ ವಹಿಸಲಾಗುವುದು. ಇನ್ನು ನಗರದಲ್ಲಿ ಅವಶ್ಯಕತೆಗೆ ಬೇಕಾದಷ್ಟು ಕೋವಿಡ್ ಲಸಿಕೆ ಇದೆ‘ ಎಂದು ಆಯುಕ್ತರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT