ಶನಿವಾರ, ಮೇ 15, 2021
25 °C
ಸುಪ್ರೀಂಕೋರ್ಟ್‌ ಆದೇಶ ಉಲ್ಲಂಘನೆ ಆರೋಪ

ಹಿಂಬಡ್ತಿ ಹೊಂದಿದವರಿಗೆ ಮತ್ತೆ ಅದೇ ಹುದ್ದೆ!

ವಿಜಯಕುಮಾರ್ ಎಸ್‌.ಕೆ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಸುಪ್ರೀಂ ಕೋರ್ಟ್‌ ಆದೇಶದಂತೆ ಹಿಂಬಡ್ತಿ ಹೊಂದಿದ್ದ ಬಿಬಿಎಂಪಿಯ 78 ಎಂಜಿನಿಯರ್‌ಗಳಲ್ಲಿ ಕೆಲವರನ್ನು ಮತ್ತೆ ಅದೇ ಹುದ್ದೆಗಳಿಗೆ ಹೆಚ್ಚುವರಿಯಾಗಿ ನಿಯೋಜಿಸಲಾಗುತ್ತಿದೆ.

ಮೀಸಲಾತಿ ಆಶಯಗಳನ್ನು ಮತ್ತು ನಿಯಮಾವಳಿಗಳನ್ನು ಗಾಳಿಗೆ ತೂರಿ ಬಡ್ತಿ ನೀಡಲಾಗಿದೆ ಎಂಬ ಆರೋಪದಲ್ಲಿ ಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡಿದ್ದ ಸುಪ್ರೀಂ ಕೋರ್ಟ್‌, 78 ಎಂಜಿನಿಯರ್‌ಗಳಿಗೆ ಹಿಂಬಡ್ತಿ ನೀಡುವಂತೆ ಆದೇಶಿಸಿತ್ತು. ಆದರಂತೆ ಎಲ್ಲರಿಗೂ ಹಿಂಬಡ್ತಿ ನೀಡಿ ಮಾ.7ರಂದು ಪಾಲಿಕೆ ಆಯುಕ್ತರು ಆದೇಶಿಸಿದ್ದಾರೆ.

ಹಿಂಬಡ್ತಿ ಪಡೆದಿರುವ ಎಂಜಿನಿಯರ್‌ಗಳು ಪ್ರಭಾವ ಬಳಸಿ ಮತ್ತೆ ಅದೇ ಹುದ್ದೆಗಳಿಗೆ ಹೆಚ್ಚುವರಿಯಾಗಿ ನಿಯೋಜನೆ ಮಾಡಿಸಿಕೊಳ್ಳುತ್ತಿದ್ದಾರೆ. ಹಿಂಬಡ್ತಿ ನಂತರ ಸಹಾಯಕ ಎಂಜಿನಿಯರ್‌ ಆಗಿರುವವರನ್ನು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಸಹಾಯಕ ನಿರ್ದೇಶಕರು (ನಗರ ಯೋಜನೆ) ಹುದ್ದೆಗಳಿಗೆ ನಿಯೋಜನೆ ಮಾಡಲಾಗುತ್ತಿದೆ.

ಹಿಂಬಡ್ತಿ ಆದೇಶ ನೀಡಿದ ವಾರದಲ್ಲೇ ಹೆಚ್ಚುವರಿಯಾಗಿ ನಿಯೋಜಿಸುವ ಪ್ರಕ್ರಿಯೆ ಆರಂಭವಾಗಿದೆ. ಮಾ.13ರಂದು 10 ಎಂಜಿನಿಯರ್‌ಗಳಿಗೆ ಮತ್ತೆ ಅದೇ ಹುದ್ದೆಗಳನ್ನು ಹೆಚ್ಚುವರಿಯಾಗಿ ನೀಡಲಾಗಿದೆ.

ಇದು ಸುಪ್ರೀಂ ಆದೇಶದ ಸ್ಪಷ್ಟ ಉಲ್ಲಂಘನೆ ಎಂದು ಆರೋಪಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ‌ಅವರಿಗೆ ಭ್ರಷ್ಟಾಚಾರ ನಿರ್ಮೂಲನಾ ಮತ್ತು ಭೂರಕ್ಷಣಾ ಸಮಿತಿ ದೂರು ನೀಡಿದೆ.

‘ಎಂಜಿನಿಯರ್‌ಗಳು ವಾಮ ಮಾರ್ಗದಲ್ಲಿ ಈ ಹುದ್ದೆಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಈ ಲಾಬಿಗೆ ಒಳಗಾಗಿ ಬಿಬಿಎಂಪಿ ಅಧಿಕಾರಿಗಳು ಹೆಚ್ಚುವರಿ ಹುದ್ದೆಗಳಿಗೆ ನಿಯೋಜನೆ ಮಾಡುತ್ತಿದ್ದಾರೆ’ ಎಂದು ಸಮಿತಿಯ ಗೌರವಾಧ್ಯಕ್ಷ ಕೆ.ಜಗದೀಶ್ ದೂರಿನಲ್ಲಿ ಆರೋಪಿಸಿದ್ದಾರೆ.

‘ಹಿಂಬಡ್ತಿ ಪಡೆದವರನ್ನು ಈ ರೀತಿ ಅದೇ ಹುದ್ದೆಯಲ್ಲಿ ಮುಂದುವರಿಸುವುದು ಕಾನೂನು ಬಾಹಿರ. ಹಿಂಬಡ್ತಿ ನಂತರ ಖಾಲಿ ಇರುವ ಹುದ್ದೆಗಳಿಗೆ ಬೇರೆ ಎಂಜಿನಿಯರ್‌ಗಳನ್ನು ನಿಯೋಜಿಸಬೇಕು. ಕೊರತೆ ಇದ್ದರೆ ಲೋಕೋಪಯೋಗಿ ಇಲಾಖೆಯಿಂದ ನಿಯೋಜನೆ ಮೇರೆಗೆ ಪಡೆಯಲು ಅವಕಾಶ ಇದೆ. ಹೆಚ್ಚುವರಿಯಾಗಿ ನಿಯೋಜನೆ ಮಾಡಿರುವ ಆದೇಶ ಆಯುಕ್ತರು ಹಿಂದಕ್ಕೆ ಪಡೆಯಬೇಕು’ ಎಂದು ಒತ್ತಾಯಿಸಿದ್ದಾರೆ.

ಕೆಲಸಕ್ಕೆ ತೊಂದರೆ ಆಗದಂತೆ ನಿಯೋಜನೆ
‘ಹಿಂಬಡ್ತಿ ನಂತರ ತೆರವಾದ ಹುದ್ದೆಗಳಿಗೆ ಇಲಾಖಾ ಪದೋನ್ನತಿ ಸಮಿತಿ(ಡಿಪಿಸಿ) ಮೂಲಕ ಬಡ್ತಿ ನೀಡುವ ಸಂಬಂಧ ಸುಪ್ರೀಂ ಕೋರ್ಟ್‌ ಅನುಮತಿಯನ್ನು ಕೋರಲಾಗಿದೆ’ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದರ ನಡುವೆ, ಮಾರ್ಚ್ ಅಂತ್ಯ ಆಗಿರುವ ಕಾರಣ ಕೆಲಸಕ್ಕೆ ತೊಂದರೆ ಆಗದಂತೆ 10 ಮಂದಿಗೆ ಹೆಚ್ಚುವರಿಯಾಗಿ ಕೆಲ ಹುದ್ದೆಗಳನ್ನು ನೀಡಲಾಗಿದೆ’ ಎಂದು ಅವರು ಸ್ಪಷ್ಟಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು