ಗುರುವಾರ , ಅಕ್ಟೋಬರ್ 1, 2020
24 °C
ಒಂದು ವರ್ಷ ನಿದ್ದೆ ಹೋಗಿದ್ದ ಪಾಲಿಕೆ– ಹೈಕೋರ್ಟ್‌ ಕೆಂಗಣ್ಣಿಗೆ ಗುರಿಯಾಗುವ ಆತಂಕ

ಕಸ ವಿಲೇವಾರಿ ಟೆಂಡರ್‌– ತುರ್ತು ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಸ ವಿಲೇವಾರಿ–ಸಾಂದರ್ಭಿಕ ಚಿತ್ರ

ಬೆಂಗಳೂರು: ಕಸ ವಿಲೇವಾರಿ ಟೆಂಡರ್‌ ಅಂತಿಮಗೊಳಿಸುವ ವಿಚಾರದಲ್ಲಿ ಸ್ಪಷ್ಟ ನಿರ್ಧಾರಕ್ಕೆ ಬರಲು ಬಿಬಿಎಂಪಿಗೆ ಇನ್ನೂ ಸಾಧ್ಯವಾಗಿಲ್ಲ. ಇಂದೋರ್‌ ಮಾದರಿಯಲ್ಲಿ ಕಸ ವಿಲೇ ಮಾಡುವ ಮಂತ್ರವನ್ನು ಒಂದು ವರ್ಷದಿಂದ ಜಪಿಸುತ್ತಿರುವ ಪಾಲಿಕೆಯ ಈಗಿನ ಆಡಳಿತ ಅದರ ಪರಿಣಾಮಕಾರಿ ಅನುಷ್ಠಾನಕ್ಕೂ ಕ್ರಮಕೈಗೊಂಡಿಲ್ಲ.

ಕೇಂದ್ರ ಸರ್ಕಾರದ ಹೊಸ ನಿಯಮಗಳ ಪ್ರಕಾರ ಮಿಶ್ರಕಸವನ್ನು ಭೂಭರ್ತಿ ಕೇಂದ್ರದಲ್ಲಿ ಸುರಿಯುವಂತಿಲ್ಲ. ಹಾಗಾಗಿ ಗಂಗಾಂಬಿಕೆ ಮೇಯರ್‌ ಆಗಿದ್ದ ಅವಧಿಯಲ್ಲಿ ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ಬಗ್ಗೆ ಟೆಂಡರ್‌ ಆಹ್ವಾನಿಸಲಾಗಿತ್ತು. 2019ರ ಮೇನಲ್ಲಿ ನಡೆದ ಟೆಂಡರ್‌ ಪ್ರಕ್ರಿಯೆಯಲ್ಲಿ ಒಟ್ಟು 168 ವಾರ್ಡ್‌ಗಳ ಕಸ ವಿಲೇವಾರಿಗೆ 558 ಗುತ್ತಿಗೆದಾರರು ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ತಡೆಯಾಜ್ಞೆ ಇದ್ದುದರಿಂದ ಎಂಎಸ್‌ಜಿಪಿಗೆ ಸಂಬಂಧಿಸಿದ 30 ವಾರ್ಡ್‌ಗಳ ಟೆಂಡರ್‌ ಬಿಡ್‌ ತೆರೆದಿರಲಿಲ್ಲ.

ವಾರ್ಷಿಕ ಟೆಂಡರ್‌ ಮೊತ್ತ ₹1 ಕೋಟಿಗಿಂತ ಕಡಿಮೆಯಿದ್ದರೆ ಅದಕ್ಕೆ ಆಯುಕ್ತರ ಒಪ್ಪಿಗೆ ಸಾಕಾಗುತ್ತದೆ. ಟೆಂಡರ್‌ ಮೊತ್ತ ₹ 1 ಕೋಟಿಯಿಂದ ₹ 3 ಕೋಟಿ ನಡುವೆಯಿದ್ದರೆ ಆರೋಗ್ಯ ಸ್ಥಾಯಿಸಮಿತಿಯ ಹಾಗೂ ₹ 3 ಕೋಟಿಗಿಂತ ಹೆಚ್ಚು ಇದ್ದರೆ ಕೌನ್ಸಿಲ್‌ ಸಭೆಯ ಅನುಮೋದನೆ ಅಗತ್ಯ. 45 ವಾರ್ಡ್‌ಗಳ ಟೆಂಡರ್‌ ಸಂಬಂಧ ಆಯಕ್ತರ ಮಟ್ಟದಲ್ಲೇ ನಿರ್ಧಾರ ಕೈಗೊಳ್ಳಬಹುದಾಗಿದೆ. 105 ವಾರ್ಡ್‌ಗಳ ಗುತ್ತಿಗೆ ಸಂಬಂಧ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಹಾಗೂ ಕೌನ್ಸಿಲ್‌ ಸಭೆಯ ಅನುಮೋದನೆ ಅಗತ್ಯವಿದೆ. 

ಪಾಲಿಕೆಯ ಈಗಿನ ಆಡಳಿತ ಹಸಿ ಕಸ ಮತ್ತು ಒಣ ಕಸ ಸಂಗ್ರಹದ ಗುತ್ತಿಗೆಯನ್ನು ಒಬ್ಬರಿಗೆ ನೀಡುವ ಬಗ್ಗೆ ಆಸಕ್ತಿ ಹೊಂದಿದೆ. ಹಾಗಾಗಿ ಟೆಂಡರ್‌ ಪ್ರಕ್ರಿಯೆ ಅಂತಿಮಗೊಂಡರೂ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡುವುದನ್ನು ಮುಂದೂಡುತ್ತಾ ಬಂದಿದೆ. ಇದನ್ನು ಪ್ರಶ್ನಿಸಿ ಗುತ್ತಿಗೆದಾರರು ಹೈಕೋರ್ಟ್‌ ಮೊರೆ ಹೋಗಿದ್ದರು.

ಕಸದ ಟೆಂಡರ್‌ ವಿಚಾರ ಪಾಲಿಕೆ ಕೌನ್ಸಿಲ್‌ ಸಭೆಯಲ್ಲೂ ಮಂಗಳವಾರ ಚರ್ಚೆಗೊಳಾಗಿದೆ. 

‘ಕೇವಲ ಶೇ 25ರಷ್ಟು ಕಸವನ್ನು ಮಾತ್ರ ವಿಂಗಡಣೆ ಯಾಗುತ್ತಿದೆ. ನಿತ್ಯ ಸರಾಸರಿ 3 ಸಾವಿರ ಟನ್‌ಗಳಷ್ಟು ಮಿಶ್ರ ಕಸ ಭೂಭರ್ತಿ ಕೇಂದ್ರಗಳಿಗೆ ಹೋಗುತ್ತಿದೆ. ಹಾಗಾಗಿ ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ವ್ಯವಸ್ಥೆ ಯಶಸ್ವಿಯಾಗದು’ ಎನ್ನುತ್ತಾರೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ರಾಜು.

ಇದನ್ನು ವಿರೋಧ ಪಕ್ಷದವರು ಒಪ್ಪಲು ಸಿದ್ಧವಿಲ್ಲ. ‘ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿಕೂಟದ ಆಡಳಿತವಿದ್ದಾಗ ಕಸ ವಿಂಗಡಣೆ ಪ್ರಮಾಣ ಶೇ 65ರವರೆಗೆ ಹೋಗಿತ್ತು. ಟೆಂಡರ್‌ ಜಾರಿಯಾದರೆ ಕಸ ವಿಲೇವಾರಿ ಹದ್ದುಬಸ್ತಿಗೆ ಬರಲಿದೆ’ ಎಂಬುದು ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ವಾದ.

ಕೌನ್ಸಿಲ್‌ ಸಭೆ ಬಳಿಕ ಮೇಯರ್‌ ಈ ವಿಚಾರವಾಗಿ ತುರ್ತು ಸಭೆ ನಡೆಸಿದ್ದಾರೆ. ಅಚ್ಚರಿಯೆಂದರೆ ಆ ಸಭೆಯಲ್ಲಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರೇ ಭಾಗವಹಿಸಿಲ್ಲ. 

‘ಕಸದ ಟೆಂಡರ್‌ ಜಾರಿ ಕುರಿತು ಹೈಕೋರ್ಟ್‌ ಆದೇಶ ಏನಿದೆ ಎಂಬ ಬಗ್ಗೆ ಚರ್ಚಿಸಿದ್ದೇವೆ. ಈ ವಿಚಾರದಲ್ಲಿ ಒಂದೆರಡು ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಿದ್ದೇವೆ’ ಎಂದು ಮೇಯರ್‌ ಎಂ.ಗೌತಮ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು