ಪ್ರಾಣಿ ತ್ಯಾಜ್ಯ: ಚೆನ್ನೈ ಮಾದರಿ ಅಳವಡಿಕೆ ಚಿಂತನೆ

ಬುಧವಾರ, ಜೂಲೈ 17, 2019
25 °C
ವೈಜ್ಞಾನಿಕ ವಿಲೇವಾರಿಗೆ ಪಾಲಿಕೆಯಿಂದ ಹೊಸ ಕ್ರಮ

ಪ್ರಾಣಿ ತ್ಯಾಜ್ಯ: ಚೆನ್ನೈ ಮಾದರಿ ಅಳವಡಿಕೆ ಚಿಂತನೆ

Published:
Updated:

ಬೆಂಗಳೂರು: ನಗರದಲ್ಲಿ ಪ್ರಾಣಿಗಳ ತ್ಯಾಜ್ಯ ವಿಲೇವಾರಿ ಸಮಸ್ಯೆ ನಿವಾರಿಸಲು ಮುಂದಾಗಿರುವ ಬಿಬಿಎಂಪಿ, ಚೆನ್ನೈನಲ್ಲಿ ಬಳಕೆಯಲ್ಲಿರುವ ಮಾದರಿಯನ್ನು ಅಳವಡಿಸಿಕೊಳ್ಳಲು ಚಿಂತನೆ ನಡೆಸಿದೆ.

ಚೆನ್ನೈನಲ್ಲಿ ಪ್ರಾಣಿತ್ಯಾಜ್ಯ ಘಟಕಗಳನ್ನು ನಿರ್ವಹಿಸುತ್ತಿರುವ ಪ್ರಗತಿ ಸಂಸ್ಥೆಯ ಸಂಸ್ಥಾಪಕ ಜೀವನ್ ದಾಸ್ ರೈ ಅವರು ಈ ಕುರಿತು ಬಿಬಿಎಂಪಿಯಲ್ಲಿ ಮಂಗಳವಾರ ಪ್ರಾತ್ಯಕ್ಷಿಕೆ ನೀಡಿದರು.

‘ಚೆನ್ನೈಯಲ್ಲಿ ನಾವು ನಿರ್ವಹಿಸುತ್ತಿರುವ ಘಟಕದಲ್ಲಿ ಪ್ರಾಣಿಗಳ ತ್ಯಾಜ್ಯವನ್ನು ದುರ್ವಾಸನೆ ಬಾರದ ರೀತಿಯಲ್ಲಿ ವೈಜ್ಞಾನಿಕವಾಗಿ ಸಂಸ್ಕರಣೆ ಮಾಡುತ್ತಿದ್ದೇವೆ. ತ್ಯಾಜ್ಯವನ್ನು ಆಧುನಿಕ ತಂತ್ರಜ್ಞಾನ ಬಳಸಿ ಸಂಸ್ಕರಿಸಿ ಮೀನುಗಳ ಮತ್ತು ಕೋಳಿಗಳ ಆಹಾರ ತಯಾರಿಸುತ್ತಿದ್ದೇವೆ. ಸಂಸ್ಕರಣಾ ಘಟಕದಿಂದ ಹೊರಬರುವ ಕೊಳಚೆ ನೀರನ್ನು ಶುದ್ಧೀಕರಿಸಿ ಉದ್ಯಾನಗಳಿಗೆ ಬಳಸಲಾಗುತ್ತಿದೆ’ ಎಂದು ಜೀವನ್ ದಾಸ್ ತಿಳಿಸಿದರು.

‘ಪ್ರಾಣಿ ತ್ಯಾಜ್ಯದಲ್ಲಿರುವ ಜಿಡ್ಡಿನ ಅಂಶವನ್ನು ಬಯೊಡೀಸೆಲ್‌ ‌ಆಗಿ ಪರಿವರ್ತಿಸುತ್ತೇವೆ. ಕೋಳಿ ಮತ್ತು ಮೀನುಗಳಿಗೆ ಎಣ್ಣೆ ಅಂಶವಿರುವ ಹಾಗೂ ಎಣ್ಣೆ ಅಂಶವಿಲ್ಲದ ಆಹಾರ ತಯಾರಿಸುತ್ತೇವೆ. ಇವುಗಳಿಗೆ ಪ್ರತಿ ಕೆ.ಜಿ.ಗೆ ₹30 ರಿಂದ ₹ 35 ದರ ನಿಗದಿಪಡಿಸಿದ್ದೇವೆ’ ಎಂದರು.

‘ನಗರದಲ್ಲಿ ನಿತ್ಯ ಸರಾಸರಿ 40 ಟನ್‌ಗಳಷ್ಟು ಪ್ರಾಣಿ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಭಾನುವಾರ ಹಾಗೂ ವಿಶೇಷ ದಿನಗಳಲ್ಲಿ  80 ಟನ್‌ಗಳಿಂದ 90 ಟನ್‌ಗಳಷ್ಟು ತ್ಯಾಜ್ಯ ಉತ್ಪತ್ತಿಯಾಗುತ್ತದೆ’ ಎಂದು ಪಶು ಸಂಗೋಪನಾ ವಿಭಾಗದ ಜಂಟಿ‌ ನಿರ್ದೇಶಕರು ಮಾಹಿತಿ ನೀಡಿದರು. 

ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ‘ಚೆನ್ನೈನಲ್ಲಿ ಪ್ರಾಣಿಗಳ ತ್ಯಾಜ್ಯ ವಿಲೇವಾರಿಗೆ ಅತ್ಯುತ್ತಮ ವ್ಯವಸ್ಥೆ ಇದೆ. ಅಲ್ಲಿನ ಘಟಕಕ್ಕೆ ಭೇಟಿ ನೀಡಿರುವ ಪಾಲಿಕೆ ಅಧಿಕಾರಿಗಳೂ ಅದರ ಕಾರ್ಯನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿ ವ್ಯಾಪ್ತಿಯ ಪ್ರಾಣಿ ತ್ಯಾಜ್ಯ ವಿಲೇವಾರಿಗೆ ಅದೇ ಮಾದರಿಯ ಘಟಕವನ್ನು ಅಳವಡಿಸುವ ಉದ್ದೇಶವಿದೆ. ಪ್ರಗತಿ ಸಂಸ್ಥೆಯವರು ಈ ಬಗ್ಗೆ ಆಸಕ್ತಿ ತೋರಿದ್ದಾರೆ. ಮೇಯರ್‌ ಗಂಗಾಂಬಿಕೆ ಹಾಗೂ ಸ್ಥಾಯಿ ಸಮಿತಿ ಸದಸ್ಯರು ಚೆನ್ನೈ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ’ ಎಂದರು.

‘ಕರ್ನಾಟಕ ಪಾರದರ್ಶಕ ಕಾಯ್ದೆ ಅನ್ವಯ ಟೆಂಡರ್‌ ಕರೆದು ಇಲ್ಲೂ ಪ್ರಾಣಿತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲಾಗುವುದು’ ಎಂದರು.

ಕೆಲವು ಮಾಂಸದ ಅಂಗಡಿಯವರು ರಾತ್ರೋರಾತ್ರಿ ಎಲ್ಲೆಂದರಲ್ಲಿ ಪ್ರಾಣಿ ತ್ಯಾಜ್ಯ ಎಸೆಯುತ್ತಾರೆ. ಇದರಿಂದ ಆಸುಪಾಸಿನ ನಿವಾಸಿಗಳಿಗೆ ತೊಂದರೆ ಉಂಟಾಗುತ್ತಿದೆ. ಕೆಲವರು ಕೆರೆಗಳ ಬಳಿ ತ್ಯಾಜ್ಯ ಸುರಿದು ಹೋಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಚರ್ಚೆಯಾಗಿತ್ತು. ಪ್ರಾಣಿತ್ಯಾಜ್ಯ ಸಂಸ್ಕರಣೆಗೆ ಪ್ರತ್ಯೇಕ ವ್ಯವಸ್ಥೆ ರೂಪಿಸಬೇಕು ಎಂದು ಸದಸ್ಯರು
ಒತ್ತಾಯಿಸಿದ್ದರು.

ಅಂಕಿ ಅಂಶ
4 ಸಾವಿರ –ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಮಾಂಸದ ಮಳಿಗೆಗಳು
40 ಟನ್‌ –ಬಿಬಿಎಂಪಿ ವ್ಯಾಪ್ತಿಯಲ್ಲಿ ನಿತ್ಯ ಉ‌ತ್ಪಾದನೆಯಾಗುವ ಪ್ರಾಣಿ ತ್ಯಾಜ್ಯ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !