ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರಿನ ಕಸಕ್ಕೆ ಕೆಜಿಎಫ್‌ನಲ್ಲಿ ಜಾಗ!

Published : 22 ಆಗಸ್ಟ್ 2024, 0:27 IST
Last Updated : 22 ಆಗಸ್ಟ್ 2024, 0:27 IST
ಫಾಲೋ ಮಾಡಿ
Comments

ಕೋಲಾರ: ಕಸ ವಿಲೇವಾರಿಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ‌ (ಬಿಬಿಎಂಪಿ) ಈಗ ಕೋಲಾರ ಜಿಲ್ಲೆಯತ್ತ ಮುಖ ಮಾಡಿದೆ.

ಬೆಂಗಳೂರು ವ್ಯಾಪ್ತಿಯ ಕಸ ವಿಲೇವಾರಿ ಮಾಡಲು ಅಗತ್ಯ ಜಾಗ ಹುಡುಕುವಂತೆ ಜಿಲ್ಲಾಡಳಿತಕ್ಕೆ ಸೂಚನೆ ಕೂಡ ಬಂದಿತ್ತು. ಈ ನಿಟ್ಟಿನಲ್ಲಿ ಜಾಗಕ್ಕೆ ಜಿಲ್ಲೆಯಲ್ಲಿ ಹುಡುಕಾಟ ನಡೆದಿದ್ದು, ಕೆಜಿಎಫ್‌ ತಾಲ್ಲೂಕಿನಲ್ಲಿ 300 ಎಕರೆ ಪ್ರದೇಶ ಗುರುತಿಸಲಾಗಿದೆ. ಈ ಜಾಗ ಬಿಜಿಎಂಎಲ್‌ಗೆ ಸೇರಿದ್ದಾಗಿದ್ದು, ಜಿಲ್ಲಾಧಿಕಾರಿ ಅಕ್ರಂ ಪಾಷಾ ಹಾಗೂ ತಹಶೀಲ್ದಾರ್‌ ನಾಗವೇಣಿ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಈಚೆಗೆ ಪರಿಶೀಲನೆ ನಡೆಸಿದ್ದಾರೆ.

ಹೊಸದಾಗಿ ನಿರ್ಮಾಣವಾಗುತ್ತಿ ರುವ ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ ವೇ ಕಾರಿಡಾರ್‌ನ ಪಕ್ಕದಲ್ಲೇ ಈ ಜಾಗವಿದ್ದು, ಬಿಬಿಎಂಪಿಗೆ ಪ್ರಸ್ತಾವ ಸಲ್ಲಿಸಲಾಗಿದೆ.

‘ವೈಜ್ಞಾನಿಕವಾಗಿ ಘನ ತ್ಯಾಜ್ಯ ವಿಲೇವಾರಿ ಮಾಡಲು ಜಿಲ್ಲೆಯಲ್ಲಿ ಎಲ್ಲಾದರೂ ಜಾಗವಿದ್ದರೆ ಪರಿಶೀಲಿಸುವಂತೆ ಬಿಬಿಎಂಪಿ ಅಧಿಕಾರಿಗಳು ನನ್ನ ಗಮನಕ್ಕೆ ತಂದಿದ್ದರು. ಅದರಂತೆ ಬಿಜಿಎಂಎಲ್‌ನ 300 ಎಕರೆ ಜಾಗ ನೋಡಿದ್ದು, ಖರೀದಿ ಗಾಗಿ ಬಿಬಿಎಂಪಿ ಗಮನಕ್ಕೆ ತರಲಾಗಿದೆ’ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘300 ಎಕರೆ ಪೈಕಿ 100 ಎಕರೆ ಜಾಗದಲ್ಲಿ ಮಾತ್ರ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲಾಗುತ್ತದೆ. ಇನ್ನುಳಿದ 200 ಎಕರೆಯಲ್ಲಿ ಗಿಡ ಬೆಳೆಸಿ ಹಸಿರು ವಲಯವ ಮಾಡಲಾಗುತ್ತದೆ. ಈ ಪ್ರದೇಶದಲ್ಲಿ ಗೊಬ್ಬರ ತಯಾರಿಕೆ, ವಿದ್ಯುತ್‌ ಉತ್ಪಾದನೆಯೂ ಸಾಧ್ಯವಾಗಲಿದೆ. ಇದರಿಂದ ಯಾರಿಗೂ ಯಾವುದೇ ತೊಂದರೆ ಆಗುವುದಿಲ್ಲ.  ಪರಿಸರಕ್ಕಾಗಲಿ, ಪ್ರಾಣಿಗಳಿಗಾಗಲಿ, ಜನರಿಗಾಗಲಿ ತೊಂದರೆ ಇರುವುದಿಲ್ಲ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಈ ಜಾಗವು ಬೆಮಲ್‌– ಬಡಮಾಕನಹಳ್ಳಿ– ಬೇತಮಂಗಲ ಪ್ರದೇಶದ ಆಸುಪಾಸಿನಲ್ಲಿ ಬರಲಿದೆ. ಈ ಪ್ರದೇಶವು ಕೃಷ್ಣಮೃಗಗಳ ಆವಾಸ ಸ್ಥಾನವೂ ಆಗಿದೆ. ಕೃಷ್ಣಮೃಗಗಳ ಸಂರಕ್ಷಿತ ಪ್ರದೇಶ ಮಾಡಲು ಅರಣ್ಯ ಇಲಾಖೆಯಿಂದ ಈಗಾಗಲೇ ಪ್ರಸ್ತಾವ ಹೋಗಿದೆ. ಬೆಂಗಳೂರಿನಿಂದ ಕೆಜಿಎಫ್ ತಾಲ್ಲೂಕಿಗೆ ಕಸ ಬರಲಿದೆ ಎಂಬ ವಿಚಾರ ಗೊತ್ತಾಗಿ ಕೆಲ ಗ್ರಾಮಸ್ಥರೂ ಆತಂಕ ವ್ಯಕ್ತಪಡಿಸಿದ್ದಾರೆ.

ಬಿಬಿಎಂಪಿ ವಾಹನಗಳು ಕೂಡ ಎಕ್ಸ್‌ಪ್ರೆಸ್‌ ವೇನಲ್ಲಿಯೇ ಕಸ ತುಂಬಿಕೊಂಡು ಬಂದು ಇಲ್ಲಿ ಸುರಿದು ಹೋಗುವ ವ್ಯವಸ್ಥೆ ಆಗಲಿದೆ. ಇದರಿಂದ ತ್ವರಿತಗತಿಯಲ್ಲಿ ವಿಲೇವಾರಿಯೂ ನಡೆಯಲಿದೆ.

ಜತೆಗೆ ಕೋಲಾರ ಜಿಲ್ಲೆಯ ಕಸವನ್ನೂ ಇಲ್ಲೇ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಅವಕಾಶ ಸಿಗಲಿದೆ ಎಂಬ ಆಶಯವನ್ನೂ ಜಿಲ್ಲಾಧಿಕಾರಿ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT