ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ: ದುಪ್ಪಟ್ಟು ದಂಡ ಇಲ್ಲ, ಬ್ಯಾಂಕ್‌ ಬಡ್ಡಿ ದರ

ತಪ್ಪು ಮಾಹಿತಿ ನೀಡಿರುವ ಆಸ್ತಿ ತೆರಿಗೆ ಪಾವತಿದಾರರಿಗೆ ನಿರಾಳ
Published 6 ಫೆಬ್ರುವರಿ 2024, 23:30 IST
Last Updated 6 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಯಂ ಘೋಷಣೆ ಆಸ್ತಿ ತೆರಿಗೆ ಪದ್ಧತಿಯಲ್ಲಿ ವಲಯ ವರ್ಗೀಕರಣವನ್ನು ತಪ್ಪಾಗಿ ಘೋಷಿಸಿಕೊಂಡ ಆಸ್ತಿ ಮಾಲೀಕರಿಗೆ ದುಪ್ಪಟ್ಟು ದಂಡ ಮನ್ನಾ ಮಾಡಿ, ವ್ಯತ್ಯಾಸದ ಮೊತ್ತ ಮತ್ತು ಆ ಮೊತ್ತಕ್ಕೆ ಬ್ಯಾಂಕ್‌ ಬಡ್ಡಿ ದರ ಸಂಗ್ರಹಿಸಲು ಬಿಬಿಎಂಪಿ ನಿರ್ಧರಿಸಿದೆ.

‘ಸ್ವಯಂ ಘೋಷಣೆ ಆಸ್ತಿ ತೆರಿಗೆ ಪದ್ಧತಿಯಲ್ಲಿ ವಲಯಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಆಸ್ತಿ ಮಾಲೀಕರು ತಪ್ಪು ಮಾಡಿದ್ದಾರೆ. ಈ ತಪ್ಪನ್ನು ಬಿಬಿಎಂಪಿ ಸರಿಯಾದ ಸಮಯಕ್ಕೆ ಮಾಲೀಕರಿಗೆ ತಿಳಿಸಿಲ್ಲ. ಹೀಗಾಗಿ, ತೆರಿಗೆದಾರರಿಂದ ದುಪ್ಪಟ್ಟು ಆಸ್ತಿ ತೆರಿಗೆ ಹಣವನ್ನು ಸಂಗ್ರಹಿಸುವಂತಿಲ್ಲ. ವ್ಯತ್ಯಾಸದ ಮೊತ್ತ ಮತ್ತು ಅದಕ್ಕೆ ಬ್ಯಾಂಕ್‌ ಬಡ್ಡಿ ದರವನ್ನು ವಿಧಿಸಬಹುದು’ ಎಂದು 2023ರ ಸೆಪ್ಟೆಂಬರ್‌ 13ರಂದು ಸರ್ಕಾರ ಆದೇಶಿಸಿತ್ತು. ಅದನ್ನು ಜಾರಿಗೆ ತರಲು ಬಿಬಿಎಂಪಿ ಫೆ.3ರಂದು ಸುತ್ತೋಲೆ ಹೊರಡಿಸಿದೆ.

2016–17ನೇ ಸಾಲಿನಿಂದ ತಪ್ಪು ವರ್ಗೀಕರಣದಲ್ಲಿ ಆಸ್ತಿ ತೆರಿಗೆ ಪಾವತಿಸಿದ್ದರೆ, ದುಪ್ಪಟ್ಟು ದಂಡದ ಬದಲು ಬ್ಯಾಂಕ್‌ ಬಡ್ಡಿ ದರ ಅಂದರೆ ಶೇ 6.75ರಷ್ಟನ್ನು ಪೂರ್ಣ ಅವಧಿಗೆ ವಿಧಿಸಬೇಕು ಎಂದು ಬಿಬಿಎಂಪಿ ಸುತ್ತೋಲೆಯಲ್ಲಿ ತಿಳಿಸಿದೆ.

ಸ್ವಯಂ ಘೋಷಣೆ ಆಸ್ತಿ ತೆರಿಗೆಯಲ್ಲಿ ವಲಯ ವರ್ಗೀಕರಣವನ್ನು 78,254 ಆಸ್ತಿಗಳಲ್ಲಿ ತಪ್ಪಾಗಿ ನಮೂದಿಸಲಾಗಿದೆ. ಇದರಲ್ಲಿ 11,725 ನೋಟಿಸ್‌ ಜಾರಿ ಮಾಡಲಾಗಿದೆ. 7,891 ನೋಟಿಸ್‌ಗಳಿಗೆ ತೆರಿಗೆದಾರರು ಪ್ರತಿಕ್ರಿಯಿಸಿ, ಆಸ್ತಿ ತೆರಿಗೆಯನ್ನೂ ಪಾವತಿಸಿದ್ದಾರೆ. ಇಂತಹವರಿಂದ ಹೆಚ್ಚುವರಿ ಪಾವತಿಸಿಕೊಂಡಿರುವ ಹಣವನ್ನು ಮುಂದಿನ ಆಸ್ತಿ ತೆರಿಗೆ ಸಾಲಿನಲ್ಲಿ ಹೊಂದಾಣಿಕೆ ಮಾಡಬೇಕು ಎಂದು ಎಲ್ಲ ವಲಯ ಆಯುಕ್ತರು ಹಾಗೂ ಕಂದಾಯ ವಿಭಾಗದ ಅಧಿಕಾರಿಗಳಿಗೆ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚಿಸಿದ್ದಾರೆ.

ವಲಯ ವರ್ಗೀಕರಣ ವಿವರಗಳು ಆಸ್ತಿ ತೆರಿಗೆ ತಂತ್ರಾಂಶದಲ್ಲಿ ತಪ್ಪಾಗಿ ನಮೂದಿತವಾಗಿದ್ದರೆ, ಅಂತಹ ಪ್ರಕರಣಗಳ ನೋಟಿಸ್‌ಗಳನ್ನು ರದ್ದುಪಡಿಸಬೇಕು. ವಲಯ ವರ್ಗೀಕರಣಕ್ಕಿಂತ ಹೆಚ್ಚಿನ ವರ್ಗವನ್ನು ಆಯ್ದುಕೊಂಡಿದ್ದರೆ ಅಂತಹ ಪ್ರಕರಣಗಳಲ್ಲಿ ಮರುಪಾವತಿಗೆ ಸರ್ಕಾರದ ಆದೇಶದಲ್ಲಿ ಸೂಚನೆಯಿಲ್ಲ. ಆ ಪ್ರಕರಣಗಳಲ್ಲಿ ಹೆಚ್ಚುವರಿ ಹಣವನ್ನು ಹೊಂದಾಣಿಕೆ ಮಾಡಲಾಗುವುದಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT