ಶುಕ್ರವಾರ, ಆಗಸ್ಟ್ 14, 2020
28 °C

ಬಿಬಿಎಂಪಿ: ವಲಯಕ್ಕೊಂದು ಶ್ರದ್ಧಾಂಜಲಿ ವಾಹನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ನಿಂದ ಕೊನೆಯುಸಿರೆಳೆದವರ ಮೃತದೇಹ ಕೊಂಡೊಯ್ಯಲು ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿ ವಲಯಕ್ಕೊಂದರಂತೆ ಎಂಟು ಶ್ರದ್ಧಾಂಜಲಿ ವಾಹನಗಳಿವೆ. ಪ್ರತಿ ವಾಹನಕ್ಕೂ ಚಾಲಕ ಸೇರಿದಂತೆ ನಾಲ್ವರು ಸಿಬ್ಬಂದಿಯನ್ನೂ ಒದಗಿಸಲಾಗಿದೆ. ಮೃತದೇಹವನ್ನು ಸ್ಮಶಾನಕ್ಕೆ ಒಯ್ಯುವುದು ಹಾಗೂ ಅಂತ್ಯಕ್ರಿಯೆಗೆ ನೆರವಾಗುವುದು ಅವರ ಜವಾಬ್ದಾರಿ.

‘ಮೃತದೇಹವನ್ನು ಕೊಂಡೊಯ್ಯುವ ಎಲ್ಲ ಸಿಬ್ಬಂದಿಗೂ ವೈಯಕ್ತಿಕ ಸುರಕ್ಷತಾ ಸಾಧನ (ಪಿಪಿಇ) ನೀಡಿದ್ದೇವೆ. ಶವದ ಅಂತ್ಯಕ್ರಿಯೆ ಬಳಿಕ ಆ ಸ್ಥಳಕ್ಕೆ ಸೋಂಕು ನಿವಾರಕ ಸಿಂಪಡಿಸಿ ಸಿಬ್ಬಂದಿಯೇ ಸ್ವಚ್ಛಗೊಳಿಸುತ್ತಾರೆ. ಅವರು ಧರಿಸುವ ಪಿಪಿಇ ಕಿಟ್‌ಗಳನ್ನು ವೈದ್ಯಕೀಯ ತ್ಯಾಜ್ಯದಂತೆಯೇ ವಿಲೇ ಮಾಡಲಾಗುತ್ತದೆ’ ಎಂದು ಬಿಬಿಎಂಪಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಮಾರ್ಗಸೂಚಿ ಪ್ರಕಾರ ಮೃತದೇಹವನ್ನು ಹೂಳುವುದಾದರೆ ಕನಿಷ್ಠ 10 ಅಡಿ ಆಳದ ಗುಂಡಿ ತೆಗೆಯಬೇಕು. ಗುಂಡಿ ತೆಗೆಯಲು ಜೆಸಿಬಿ ಬಳಸುತ್ತೇವೆ. ಮೃತರ ಬಂಧುಗಳು ಅಂತಿಮ ವಿಧಿ ನೆರವೇರಿಸಲು ಅವಕಾಶ ಕಲ್ಪಿಸಿದ ಬಳಿಕ ಸಿಬ್ಬಂದಿಯೇ ಮೃತದೇಹವನ್ನು ಹೂಳುತ್ತಾರೆ’ ಎಂದರು.

‘ನಗರದಲ್ಲಿ ಇದುವರೆಗೆ ಕೋವಿಡ್‌ ಸೋಂಕು ಇದ್ದ 95 ಮಂದಿ ಮೃತಪಟ್ಟಿದ್ದಾರೆ. ಇವುಗಳಲ್ಲಿ 83 ಸಾವುಗಳು ಜೂನ್‌ 1ರ ಬಳಿಕ ಸಂಭವಿಸಿವೆ. ದಿನಕ್ಕೆ ಸರಾಸರಿ ಮೂರು ಮಂದಿ ಕೋವಿಡ್‌ನಿಂದ ಕೊನೆಯುಸಿರೆಳೆದಿದ್ದಾರೆ. ಶವಸಂಸ್ಕಾರಕ್ಕೆ ಎಂಟು ವಾಹನಗಳು ಲಭ್ಯ ಇರುವುದರಿಂದ ಸದ್ಯಕ್ಕಂತೂ ಯಾವುದೇ ಸಮಸ್ಯೆ ಇಲ್ಲ’ ಎಂದರು.

ಸಿಬ್ಬಂದಿಗೆ ಸೋಂಕು: ಬಿಬಿಎಂಪಿ ಶ್ರದ್ಧಾಂಜಲಿ ವಾಹನದ ಸಿಬ್ಬಂದಿಯೊಬ್ಬರಿಗೂ ಗುರುವಾರ ಕೊರೊನಾ ಸೋಂಕು ತಗುಲಿದೆ. ಸುರಕ್ಷತಾ ಕ್ರಮಗಳನ್ನು ಅನುಸರಿಸಿದ ಬಳಿಕವೂ ಅವರಿಗೆ ಸೋಂಕು ತಗುಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು