ಸೋಮವಾರ, ಏಪ್ರಿಲ್ 6, 2020
19 °C
ವಾಣಿಜ್ಯ ಪರವಾನಗಿ: ವ್ಯಾಪಾರಿಗಳ ಮೇಲೆ ಪಾಲಿಕೆ ಆರೋಗ್ಯ ವಿಭಾಗದ ಅಧಿಕಾರಿಗಳ ಒತ್ತಡ

ಆನ್‌ಲೈನ್‌ ನವೀಕರಣಕ್ಕೂ ಕಚೇರಿಗೆ ಬನ್ನಿ!

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ವಾಣಿಜ್ಯ ಪರವಾನಗಿ ನವೀಕರಣ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲೇ ನಡೆಸಬೇಕು ಎಂದು ಬಿಬಿಎಂಪಿ ಕಡ್ಡಾಯ ಮಾಡಿದೆ. ಆದರೂ ಬಿಬಿಎಂಪಿಯ ಆರೋಗ್ಯ ವಿಭಾಗದ ತಳಮಟ್ಟದ ಅಧಿಕಾರಿಗಳು, ತಮ್ಮ ಮೂಲಕವೇ ಪರವಾನಗಿ ನವೀಕರಿಸುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ.

‘ಆರೋಗ್ಯ ವಿಭಾಗದ ಅಧಿಕಾರಿಗಳ ಕಿರುಕುಳ ತಪ್ಪಿಸುವ ಸಲುವಾಗಿ ಪರವಾನಗಿ ನವೀಕರಣಕ್ಕೆ ನಾಲ್ಕೈದು ವರ್ಷಗಳ ಹಿಂದೆಯೇ ಆನ್‌ಲೈನ್‌ ವ್ಯವಸ್ಥೆ ಜಾರಿಗೆ ತರಲಾಗಿತ್ತು. ಇದೇ ವ್ಯವಸ್ಥೆಯಡಿ ವಾಣಿಜ್ಯ ಪರವಾನಗಿ ನವೀಕರಿಸಿಕೊಂಡರೂ ಕಿರುಕುಳ ತಪ್ಪುತ್ತಿಲ್ಲ’ ಎಂದು ಚಿಕ್ಕಪೇಟೆಯ ವ್ಯಾಪಾರಿ ಎಸ್‌.ಚೌಹಾಣ್‌ ‘ಪ್ರಜಾವಾಣಿ’ ಜೊತೆ ಅಳಲು ತೋಡಿಕೊಂಡರು.

‘ಪಾಲಿಕೆಯ ಆರೋಗ್ಯ ಇಲಾಖೆ ಅಧಿಕಾರಿಗಳು ಅಂಗಡಿಗೆ ಬಂದು ಅನಗತ್ಯ ದಾಖಲೆಗಳನ್ನು ಕೇಳಿ ಸತಾಯಿಸುತ್ತಿದ್ದಾರೆ. ನಾವು ಆನ್‌ಲೈನ್‌ ಮೂಲಕ ಪಡೆದ ವಾಣಿಜ್ಯ ಪರವಾನಗಿ ನವೀಕರಣದ ಪ್ರತಿಯನ್ನು ತೋರಿಸಿದರೆ, ಅದರಲ್ಲಿ ಯಾವುದೇ ಅಧಿಕಾರಿಯ ಸಹಿ ಇಲ್ಲ ಎಂದು ತಗಾದೆ ತೆಗೆಯುತ್ತಾರೆ. ತಮ್ಮ ಮೂಲಕವೇ ಪರವಾನಗಿ ನವೀಕರಿಸುವಂತೆ ಬಾಯಿಬಿಟ್ಟು ಕೇಳುತ್ತಾರೆ. ಇದಕ್ಕ ಪಾಲಿಕೆ ನಿಗದಿಪಡಿಸಿದ್ದಕ್ಕಿಂತ ₹ 1ಸಾವಿರದಿಂದ ₹ 2 ಸಾವಿರದಷ್ಟು ಹೆಚ್ಚು ಹಣ ಪಡೆಯುತ್ತಾರೆ. ಇದಕ್ಕೆ  ರಸೀದಿಯನ್ನೂ ನೀಡುವುದಿಲ್ಲ’ ಎಂದು ಅವರು ದೂರಿದರು.

‘ಅನಗತ್ಯ ವಿಳಂಬ ಹಾಗೂ ಅಧಿಕಾರಿಗಳು ವಾಣಿಜ್ಯ ಮಳಿಗೆಗಳ ಮಾಲೀಕರನ್ನು ಸತಾಯಿಸುವುದನ್ನು ತಪ್ಪಿಸುವ ಸಲುವಾಗಿಯೇ ನಾವು ವಾಣಿಜ್ಯ ಪರವಾನಗಿ ನೀಡುವುದಕ್ಕೆ ಆನ್‌ಲೈನ್ ವ್ಯವಸ್ಥೆ ಜಾರಿಗೊಳಿಸಿದ್ದೇವೆ. ಈಗ ಯಾವುದೇ ‘ಮ್ಯಾನುವಲ್‌’ ವ್ಯವಸ್ಥೆ ಜಾರಿಯಲ್ಲಿಲ್ಲ. ವ್ಯಾಪಾರಿಗಳು ಬಿಬಿಎಂಪಿ ವೆಬ್‌ಸೈಟ್‌ಗೆ ಹೋಗಿ, ಹಿಂದಿನ ವರ್ಷದ ಅರ್ಜಿ ಸಂಖ್ಯೆಯನ್ನು ನಮೂದಿಸಿ, ನಿಗದಿತ ಶುಲ್ಕ ಪಾವತಿಸಿ ಪ್ರಮಾಣಪತ್ರ ಡೌನ್‌ಲೋಡ್‌ ಮಾಡಿಕೊಳ್ಳಬಹುದು’ ಎಂದು ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ (ಸಾರ್ವಜನಿಕ ಅರೋಗ್ಯ) ಬಿ.ಕೆ. ವಿಜಯೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪರವಾನಗಿ ನವೀಕರಣ ಪ್ರಕ್ರಿಯೆ ಬಗ್ಗೆ ಸಮಗ್ರ ಮಾಹಿತಿ ವೆಬ್‌ಸೈಟ್‌ನಲ್ಲೇ ಸಿಗುತ್ತದೆ. ಅದರಲ್ಲಿ ನೀಡಿರುವ ಸೂಚನೆ ಅನುಸರಿಸಿ ಯಾರು ಬೇಕಾದರೂ ಪರವಾನಗಿ ನವೀಕರಿಸಬಹುದು. ಇಡೀ  ಪ್ರಕ್ರಿಯೆ 10 ನಿಮಿಷಗಳಿಂದ ಅರ್ಧ ಗಂಟೆಗಳಲ್ಲಿ ಪೂರ್ಣಗೊಳ್ಳುತ್ತದೆ’ ಎಂದೂ ತಿಳಿಸಿದರು.

‘ಹೊಸ ವಾಣಿಜ್ಯ ಪರವಾನಗಿಗೆ ಅರ್ಜಿ ಹಾಕಿದ್ದರೆ, ಆರೋಗ್ಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುತ್ತಾರೆ. ಆದರೆ, ನವೀಕರಣಕ್ಕೆ ಅದರ ಅಗತ್ಯವಿಲ್ಲ’ ಎಂದು ಮುಖ್ಯ ಆರೋಗ್ಯಾಧಿಕಾರಿ ಸ್ಪಷ್ಟಪಡಿಸಿದರು.

‘ದಂಡರಹಿತವಾಗಿ ಪರವಾನಗಿ ನವೀಕರಣ ಮಾಡುವ ಗಡುವು ಇದೇ 28ಕ್ಕೆ ಮುಗಿಯಬೇಕಿತ್ತು. ಆದರೆ, ಅದನ್ನು ಬಿಬಿಎಂಪಿ ಮಾ .15ರವರೆಗೆ ವಿಸ್ತರಿಸಿದ್ದೇವೆ. ಅದರ ನಂತರ ನವೀಕರಿಸಿದರೆ ದಂಡ ಕಟ್ಟಬೇಕು. ದಂಡರಹಿತವಾಗಿ ಪರವಾನಗಿ ನವೀಕರಿಸುವ ಅವಧಿ ವಿಸ್ತರಿಸುವಂತೆ ಮಳಿಗೆಗಳ ಮಾಲೀಕರು ಕೋರಿದ್ದಾರೆ. ಈ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ’ ಎಂದರು.

‘5 ವರ್ಷಗಳಿಗೊಮ್ಮೆ ನವೀಕರಿಸಿದರೂ ಸಾಕು’
‘ಐದು ವರ್ಷಗಳಿಗೆ ಒಮ್ಮೆಲೆ ವಾಣಿಜ್ಯ ಪರವಾನಗಿ ಪಡೆಯುವ ವ್ಯವಸ್ಥೆಯನ್ನು ಪಾಲಿಕೆ ಜಾರಿಗೆ ತಂದಿದೆ. ಉದ್ಯಮಿಗಳು ನಿಗದಿತ ಶುಲ್ಕಪಾವತಿಸಿ ಐದು, ನಾಲ್ಕು, ಮೂರು ಅಥವಾ ಎರಡು ವರ್ಷದವರೆಗೂ ಪರವಾನಗಿ ನವೀಕರಿಸಿಕೊಳ್ಳಬಹುದು’ ಎಂದು ವಿಜಯೇಂದ್ರ ಮಾಹಿತಿ ನೀಡಿದರು.

‘ಯಾರಿಂದಲಾದರೂ ನಿಯಮ ಉಲ್ಲಂಘನೆ ಬಗ್ಗೆ ದೂರು ಬಂದರೆ ಮಾತ್ರ ಆರೋಗ್ಯ ವಿಭಾಗದ ಅಧಿಕಾರಿಗಳು ವಾಣಿಜ್ಯ ಮಳಿಗೆಯ ಸ್ಥಳ ಪರಿಶೀಲನೆ ನಡೆಸಬಹುದು. ದೂರಿನ ಬಗ್ಗೆ ವಲಯ ಮಟ್ಟದ ಆರೋಗ್ಯಾಧಿಕಾರಿ ಅಥವಾ ಜಂಟಿ ಆಯುಕ್ತರು ವಿಚರಣೆ ನಡೆಸುತ್ತಾರೆ. ಆಗ ಅಂಗಡಿಯವರು ನಿಯಮ ಉಲ್ಲಂಘನೆ ಮಾಡಿದ್ದರೆ ಶುಲ್ಕ ವಿಧಿಸುವ ಅಥವಾ ಪರವಾನಗಿ ರದ್ದುಪಡಿಸುವ ಅಧಿಕಾರ ಪಾಲಿಕೆಗೆ ಇದೆ. ಈ  ಬಗ್ಗೆ ಮೇಲ್ಮನವಿ ಸಮಿತಿಯ ಮೊರೆ ಹೋಗುವುದಕ್ಕೂ ಅವಕಾಶ ಇದೆ’ ಎಂದರು.

‘ಕಿರುಕುಳ ನೀಡಿದರೆ ದೂರು ಕೊಡಿ’
‘ಅಂಗಡಿ ಪರವಾನಗಿ ನವೀಕರಣ ವಿಚಾರಕ್ಕೆ ಸಂಬಂಧಿಸಿ ಆರೋಗ್ಯ ಪರಿವೀಕ್ಷಕರು ವಿನಾಕಾರಣ ಮಳಿಗೆಗಳಿಗೆ ಭೇಟಿ ನೀಡಿ ಕಿರುಕುಳ ನೀಡಿದರೆ ಆಯಾ ವಲಯದ ಜಂಟಿ ಆಯುಕ್ತರಿಗೆ ಅಥವಾ ಆರೋಗ್ಯಾಧಿಕಾರಿಗೆ ದೂರು ನೀಡಬಹುದು.ವಲಯ ಮಟ್ಟದಲ್ಲಿ ನ್ಯಾಯ ಸಿಗದಿದ್ದರೆ ಪಾಲಿಕೆ ಆಯುಕ್ತರ ಅಥವಾ ನನ್ನ ಗಮನಕ್ಕೆ ತರಬಹುದು’ ಎಂದು ಮುಖ್ಯ ಆರೋಗ್ಯಾಧಿಕಾರಿ ತಿಳಿಸಿದರು.

**
ಮಾ.15: ವಾಣಿಜ್ಯ ಪರವಾನಗಿ ನವೀಕರಣದ ಕೊನೆಯ ದಿನಾಂಕ
ಮಾ.31: ಶೇ 25ರಷ್ಟು ದಂಡನಾ ಶುಲ್ಕದೊಂದಿಗೆ ವಾಣಿಜ್ಯ ಪರವಾನಗಿ ನವೀಕರಣ
ಮಾ.31ರ ಬಳಿಕ ನವೀಕರಿಸಿದರೆ ಶೇ 100ರಷ್ಟು ದಂಡ

**
ವಾಣಿಜ್ಯ ಪರವಾನಗಿ ನವೀಕರಣ ಹೇಗೆ?
ಪಾಲಿಕೆ ವೆಬ್‌ಸೈಟ್‌ನಲ್ಲಿ ವಾಣಿಜ್ಯ ಪರವಾನಗಿ ನವೀಕರಣದ ಮೇಲೆ ಕ್ಲಿಕ್‌ ಮಾಡಿ–ಹಿಂದಿನ ವರ್ಷದ ಅರ್ಜಿ ಸಂಖ್ಯೆ ನಮೂದಿಸಿ–ಮಾಹಿತಿಗಳನ್ನು ಭರ್ತಿ ಮಾಡಿ– ಆನ್‌ಲೈನ್‌ ಮೂಲಕ ಶುಲ್ಕ ಪಾವತಿ– ಪ್ರಕ್ರಿಯೆ ಪೂರ್ಣ– ಸ್ವೀಕೃತಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳುವುದು–ಪರವಾನಗಿ ಅರ್ಜಿಯ ಮಂಜೂರಾತಿಗಾಗಿ ಆರೋಗ್ಯಾಧಿಕಾರಿ ಲಾಗಿನ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು