ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿಯಲ್ಲೇ ಬದುಕು ಕಂಡವರ ಊಟಕ್ಕೆ ಕರ್ಫ್ಯೂ

ಮನೆ ಮಠ ಇಲ್ಲದವರ ಗೋಳು ಕೇಳುವವರಿಲ್ಲ, ಆಹಾರ ಹುಡುಕಿ ಬೀದಿ ಬೀದಿ ಅಲೆದರು
Last Updated 23 ಮಾರ್ಚ್ 2020, 3:32 IST
ಅಕ್ಷರ ಗಾತ್ರ

ಬೆಂಗಳೂರು: ‘ನನಗೆ ಮನೆ ಮಠ ಏನೂ ಇಲ್ಲ. ಕೂಲಿ ನಾಲಿ ಮಾಡಿಕೊಂಡು, ಬನ್‌ ಮತ್ತು ಚಹಾ ಕುಡಿದು ಹೇಗೋ ಬದುಕುತ್ತಿದ್ದೇನೆ. ನಿನ್ನೆ ಸಂಜೆಯಿಂದ ಏನೂ ತಿಂದಿಲ್ಲ...’

70 ವರ್ಷದ ವೃದ್ಧ ಸೀತಾರಾಮ್‌ ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡಿದ್ದು ಹೀಗೆ. ಅವರಂತೆಯೇ ಬೀದಿ ಬದಿಯಲ್ಲೇ ಬದುಕು ಕೊಂಡಿರುವ ನೂರಾರು ಮಂದಿ ‘ಜನತಾ ಕರ್ಫ್ಯೂ’ವಿನಿಂದಾಗಿ ಭಾನುವಾರ ದಿನವಿಡೀ ಉಪವಾಸ ಕಳೆಯಬೇಕಾಯಿತು.

‘40 ವರ್ಷಗಳಿಂದ ಬೆಂಗಳೂರಿನಲ್ಲೇ ಇದ್ದೇನೆ. ನನಗೆ ಮದುವೆಯಾಗಿಲ್ಲ. ನನ್ನವರು ಎಂದೂ ಯಾರೂ ಇಲ್ಲ. ಆಸ್ಪತ್ರೆ ಬಳಿ ಉಳಿದು
ಕೊಳ್ಳುತ್ತಿದ್ದೆ. ಈಗ ಅಲ್ಲಿ ಉಳಿದು ಕೊಂಡರೆ ನನಗೂ ಕಾಯಿಲೆ ಅಂಟಿಕೊಳ್ಳುತ್ತದೆಯೇನೋ ಎಂಬ ಭಯ. ಆ ಕಾಯಿಲೆ (ಕೋವಿಡ್‌ 19) ಬಂದ್ರೆ ಯಾವ ಡಾಕ್ಟ್ರೂ ನಮ್ಮನ್ನು ನೋಡಲ್ಲ. ಹಾಗಾಗಿ ತಣ್ಣಗೆ ಇರುವ ಈ ಬಸ್‌ ನಿಲ್ದಾಣದಲ್ಲಿ ಬಂದು ಉಳಿದುಕೊಂಡಿದ್ದೇನೆ’ ಎಂದು ಮಲ್ಲೇಶ್ವರದ ಬಸ್‌ನಿಲ್ದಾಣದಲ್ಲಿ ಮಲಗಿದ್ದ ಸೀತಾರಾಮ್‌ ತಿಳಿಸಿದರು.

‘ನಮಗೆ ತುಮಕೂರು ಜಿಲ್ಲೆಯಲ್ಲಿ ಜಮೀನಿತ್ತು. ನನ್ನಪ್ಪ ಕುಡಿತದ ಚಟಕ್ಕೆ ಬಿದ್ದು ಎಲ್ಲ ಮಾರಿಕೊಂಡು ಬಿಟ್ಟ. ಈಗ ಎಲ್ಲದಕ್ಕೂ ಆಧಾರ್‌ ಕಾರ್ಡ್ ಹಾಗೂ ರೇಷನ್‌ ಕಾರ್ಡ್‌ ಕೇಳುತ್ತಾರೆ. ನಮ್ಮಂಥವರಿಗೆ ಯಾರೂ ಆಧಾರ್‌ ಕಾರ್ಡ್‌ ಮಾಡಿಕೊಡಲ್ಲ. ಅದಕ್ಕೆ ಗ್ಯಾರಂಟಿ ಬೇಕಂತೆ. ನಾವೇನು ಗ್ಯಾರಂಟಿ ಕೊಡಬಹುದು. ನಮ್ಮಂಥವರ ಗೋಳು ಯಾರು ಕೇಳುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪ್ರಪಂಚದಲ್ಲಿ ಎಲ್ಲ ಚೆನ್ನಾಗಿದ್ರೆ ಮಾತ್ರ ಮನುಷ್ಯ. ಮನೆ ಮಠ ಇರಬೇಕು. ಅದಿಲ್ಲದಿದ್ದರೆ ಬಹಳ ಕಷ್ಟ. ಕಾಯಿಲೆ ಬಂದ್ರೂ ನೋಡುವವರಿಲ್ಲ. ಎಲ್ಲದಕ್ಕೂ ಬಹಳ ಕಷ್ಟ’ ಎಂದು ತಮ್ಮ ಸಂಕಷ್ಟ ಹೇಳಿಕೊಂಡರು.

ಕೆ.ಆರ್‌.ಪುರದ ಶಂಕರ ಅವರನ್ನು ಇನ್ನೊಂದು ರೀತಿಯ ಗೋಳು. ಖಾಸಗಿ ಸಂಸ್ಥೆಯೊಂದರಲ್ಲಿ ಸ್ವಚ್ಛತಾ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಅವರು ಊಟಕ್ಕಾಗಿ ದಿನವಿಡೀ ಅಲೆದರು.

‘ನಾನು ನಿನ್ನೆ ರಾತ್ರಿ 8ರಿಂದ ಬೆಳಿಗ್ಗೆ 6 ಗಂಟೆವರೆಗೆ ಕೆಲಸ ಮಾಡಿದ್ದೆ. ಮನೆಗೆ ಮರಳಲು ಬಸ್‌ ಇಲ್ಲ. ನನ್ನ ಬಳಿ ಹಣವೂ ಇಲ್ಲ. ಎಲ್ಲಾದರೂ ಊಟ ಸಿಗುತ್ತದೆಯೇ ಎಂದು ಇದುವರೆಗೂ ಅಲೆದಿದ್ದೇನೆ. ಎಲ್ಲ ಹೋಟೆಲ್‌ಗಳೂ ಬಂದ್‌. ಹಾಗಾಗಿ ಉಪವಾಸ ಇದ್ದೇನೆ’ ಎಂದು ಶಂಕರ್‌ ತಿಳಿಸಿದರು.

‘ಮನೆಯಲ್ಲಿ ಪತ್ನಿ ಒಬ್ಬಳೇ ಇದ್ದಾಳೆ. ಅವಳ ಎರಡೂ ಮೂತ್ರಪಿಂಡಗಳೂ ವಿಫಲವಾಗಿವೆ. ಅವಳನ್ನು ನೋಡಿಕೊಳ್ಳಲೂ ಯಾರೂ ಇಲ್ಲ. ಮನೆ ತಲುಪಲಾಗದೇ ಚಡಪಡಿಸುತ್ತಿದ್ದೇನೆ’ ಎಂದು ಕಳವಳ ತೋಡಿಕೊಂಡರು.

ಬಾಣಸಿಗನಿಗೂ ಖಾಲಿ ಹೊಟ್ಟೆ

ಹೋಟೆಲ್‌ನಲ್ಲಿ ಬಾಣಸಿಗರಾಗಿದ್ದ ಭಾಸ್ಕರ್‌ ಅವರಿಗೂ ಜನತಾ ಕರ್ಫ್ಯೂ ಬಿಸಿ ತಟ್ಟಿತ್ತು. ನಿತ್ಯ ನೂರಾರು ಜನರಿಗೆ ಊಟ ತಯಾರಿಸುತ್ತಿದ್ದ ಅವರೂ ಬೆಳಿಗ್ಗೆಯಿಂದ ಏನೂ ತಿನ್ನದೇ ಖಾಲಿ ಹೊಟ್ಟೆಯಲ್ಲಿ ಉಳಿಯಬೇಕಾಯಿತು.

‘ನಾನು ಸೌಂತ್‌ಎಂಡ್‌ ವೃತ್ತದ ಬಳಿಯ ಹೋಟೆಲ್‌ನಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದೆ. ಇತ್ತೀಚೆಗೆ ಬಿದ್ದು ಕೈಗೆ ಏಟು ಮಾಡಿಕೊಂಡಿದ್ದೆ. ಆ ಬಳಿಕ ಕೆಲಸ ಮಾಡಲು ಆಗುತ್ತಿರಲಿಲ್ಲ. ಹಾಗಾಗಿ ಕೆಲಸ ಬಿಡಬೇಕಾಯಿತು. ಇವತ್ತು ಕೈ ಊದಿಕೊಂಡಿತ್ತು. ಹಾಗಾಗಿ ಮಲ್ಲೇಶ್ವರ ಕೆ.ಸಿ.ಜನರಲ್‌ ಆಸ್ಪತ್ರೆಗೆ ದಾಖಲಾಗುವ ಎಂದು ಮೆಜೆಸ್ಟಿಕ್‌ನಿಂದ ನಡೆದುಕೊಂಡೇ ಇಲ್ಲಿಗೆ ಬಂದೆ’ ಎಂದು ಭಾಸ್ಕರ್‌ ತಿಳಿಸಿದರು.

‘ಮೈ–ಕೈ ಗಟ್ಟಿ ಇರುವವರೆಗೆ ಮಾತ್ರ ಹೋಟೆಲ್‌ ಕೆಲಸ. ನಮ್ಮಿಂದ ಕೆಲಸ ಮಾಡಲು ಸಾಧ್ಯವಾಗಲ್ಲ ಎಂದರೆ ಮನೆಗೆ ಕಳುಹಿಸುತ್ತಾರೆ. ನನ್ನೂರು ಉಡುಪಿ ಜಿಲ್ಲೆಯ ಹೆಬ್ರಿ. ಹೆಂಡತಿ ಮಕ್ಕಳು ಅಲ್ಲೇ ಇದ್ದಾರೆ. ಊರಿಗೆ ಮರಳೋಣ ಎಂದರೆ ದುಡ್ಡಿಲ್ಲ. ಹೇಗಾದರೂ ಮಾಡಿ ಗಾಯ ವಾಸಿ ಮಾಡಿಸಿಕೊಂಡು ಮತ್ತೆ ಕೆಲಸಕ್ಕೆ ಸೇರಿಕೊಳ್ಳಬೇಕು. ಸ್ವಲ್ಪ ಕಾಸು ಸಂಪಾದನೆ ಆದ ಬಳಿಕ ಊರಿಗೆ ಮರಳುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT