ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಕಸದ ಲಾರಿ ಗುದ್ದಿ ವೃದ್ಧೆ ಸಾವು

ಚಾಲಕ ಸಿಗ್ನಲ್ ಜಂಪ್ ಮಾಡಿದ್ದರಿಂದ ಅಪಘಾತ
Published 17 ಜುಲೈ 2023, 22:48 IST
Last Updated 17 ಜುಲೈ 2023, 22:48 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಕಸ ಸಾಗಣೆ ಲಾರಿ ಗುದ್ದಿ ಮುನಿಯಮ್ಮ (60) ಮೃತಪಟ್ಟಿದ್ದು, ಈ ಸಂಬಂಧ ಹಲಸೂರು ಗೇಟ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕೊಡಿಗೆಹಳ್ಳಿಯ ಗಂಗಾ ಭವಾನಿ ರಸ್ತೆಯ ನಿವಾಸಿ ಮುನಿಯಮ್ಮ ಅವರು ಸೋಮವಾರ ಮಧ್ಯಾಹ್ನ ರಸ್ತೆ ದಾಟುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ನಿರ್ಲಕ್ಷ್ಯ ಹಾಗೂ ಅತೀ ವೇಗದ ಚಾಲನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು, ಬಿಬಿಎಂಪಿ ಲಾರಿ ಚಾಲಕ ಶಿವಕುಮಾರ್‌ನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಸಿಗ್ನಲ್ ಜಂಪ್ ಮಾಡಿದ್ದ ಚಾಲಕ: ‘ಚಾಲಕ ಶಿವಕುಮಾರ್, ಲಾರಿ (ಕೆಎ 05 ಎಎಫ್ 7198) ಚಲಾಯಿಸಿಕೊಂಡು ನೃಪತುಂಗ ರಸ್ತೆಯಿಂದ ಕಾರ್ಪೊರೇಷನ್ ವೃತ್ತದತ್ತ ಹೊರಟಿದ್ದ. ಹಡ್ಸನ್ ವೃತ್ತದ ಸಿಗ್ನಲ್‌ನಲ್ಲಿ ಕೆಂಪು ಹೊತ್ತಿಕೊಂಡಿತ್ತು. ಅದನ್ನು ಲೆಕ್ಕಿಸದೇ ಸಿಗ್ನಲ್ ಜಂಪ್ ಮಾಡಿ ಅತೀ ವೇಗವಾಗಿ ಲಾರಿ ಚಲಾಯಿಸಿದ್ದ’ ಎಂದು ಪೊಲೀಸರು ತಿಳಿಸಿದರು.

‘ವೃದ್ಧೆ ಮುನಿಯಮ್ಮ ಅವರು ಝೀಬ್ರಾ ಕ್ರಾಸಿಂಗ್‌ನಲ್ಲಿ ರಸ್ತೆ ದಾಟುತ್ತಿದ್ದರು. ಲಾರಿ, ವೃದ್ಧೆಗೆ ಡಿಕ್ಕಿ ಹೊಡೆದಿತ್ತು. ರಸ್ತೆಯಲ್ಲಿ ಬಿದ್ದಿದ್ದ ಅವರ ಕಾಲಿನ ಮೇಲೆ ಲಾರಿ ಚಕ್ರ ಹರಿದಿತ್ತು. ತೀವ್ರ ಗಾಯಗೊಂಡು ನರಳಾಡುತ್ತಿದ್ದ ಮುನಿಯಮ್ಮ ಅವರನ್ನು ವೃತ್ತದಲ್ಲಿದ್ದ ಸಿಬ್ಬಂದಿ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಅವರು ತೀರಿಕೊಂಡರು’ ಎಂದು ಹೇಳಿದರು.

‘ಚಾಲಕ ಶಿವಕುಮಾರ್ ಸಿಗ್ನಲ್‌ ಜಂಪ್‌ ಮಾಡಿದ್ದರಿಂದ ಅಪಘಾತ ಸಂಭವಿಸಿದೆ. ಲಾರಿ ಜಪ್ತಿ ಮಾಡಿ, ಶಿವಕುಮಾರ್‌ನನ್ನು ಸೆರೆ ಹಿಡಿಯಲಾಗಿದೆ. ಈತ ಮದ್ಯ ಕುಡಿದಿರುವ ಅನುಮಾನವಿದ್ದು, ವೈದ್ಯಕೀಯ ಪರೀಕ್ಷೆ ವರದಿ ಬಂದ ಬಳಿಕವೇ ಹೆಚ್ಚಿನ ಮಾಹಿತಿ ತಿಳಿಯಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT