ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರ ವಲಯಗಳಲ್ಲೇ ಹೆಚ್ಚು ಕೋವಿಡ್: ಬಿಬಿಎಂಪಿ ಕಟ್ಟೆಚ್ಚರ

ಅಧಿಕಾರಿಗಳ ತುರ್ತು ಸಭೆ ನಡೆಸಿದ ಬಿಬಿಎಂಪಿ ಆಯುಕ್ತ
Last Updated 6 ಮಾರ್ಚ್ 2021, 21:29 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೋವಿಡ್‌ ಪ್ರಕರಣಗಳು ಮತ್ತೆ ಹೆಚ್ಚುತ್ತಿರುವುದು ಬಿಬಿಎಂಪಿಗೆ ತಲೆನೋವು ತಂದಿದೆ. ಸೋಂಕು ಹರಡುವಿಕೆ ತಡೆಯಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಚರ್ಚಿಸಲು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಶನಿವಾರ ತುರ್ತು ಸಭೆ ನಡೆಸಿದರು.

ನಗರದ ಕೆ.ಆರ್. ಪುರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಬಿ. ನಾರಾಯಣಪುರ ಸರ್ಕಾರಿ ಪ್ರೌಢ ಶಾಲೆಯಲ್ಲಿ 7 ವಿದ್ಯಾರ್ಥಿಗಳು ಹಾಗೂ ಇಬ್ಬರು ಶಿಕ್ಷಕರು ಕೋವಿಡ್ ಪೀಡಿತರಾಗಿದ್ದರಿಂದ ಈ ಶಾಲೆಯನ್ನು ಏಳು ದಿನ ಸೀಲ್ ಡೌನ್ ಮಾಡಲಾಗಿದೆ. ವಸಂತಪುರ ವಾರ್ಡ್‌ನ ಚಿಕ್ಕಲ್ಲಸಂದ್ರದಲ್ಲಿ ನಾಲ್ವರು ಕೋವಿಡ್‌ ಹೊಂದಿರುವುದು ಶುಕ್ರವಾರ ಪತ್ತೆಯಾಗಿತ್ತು. ಕೋವಿಡ್‌ ಲಸಿಕೆ ನೀಡುತ್ತಿರುವುದರ ನಡುವೆಯ ಮತ್ತೆ ಕೋವಿಡ್‌ ನಿಯಂತ್ರಣದ ಬಗ್ಗೆಯೂ ನಿಗಾ ಇಡಬೇಕಾದ ಅನಿವಾರ್ಯ ಸ್ಥಿತಿಯನ್ನು ಬಿಬಿಎಂಪಿ ಅಧಿಕಾರಿಗಳು ಎದುರಿಸುತ್ತಿದ್ದಾರೆ.

ಪರಿಸ್ಥಿತಿ ಕೈಮೀರದಂತೆ ತಡೆಯುವ ಸಲುವಾಗಿ ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಮಂಜುನಾಥ ಪ್ರಸಾದ್‌ ಅವರು ಪಾಲಿಕೆಯ ಎಲ್ಲಾ ಜಂಟಿ ಆಯುಕ್ತರು, ಆರೋಗ್ಯಾಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳ ಜತೆ ಆನ್‌ಲೈನ್ ಸಭೆಯಲ್ಲಿ ಚರ್ಚಿಸಿದರು.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳು ಕ್ರಮೇಣ ಹೆಚ್ಚಳವಾಗುತ್ತಿದ್ದು, ಪ್ರಮುಖವಾಗಿ ಹೊರ ವಲಯಗಳಲ್ಲಿ ಹೆಚ್ಚು ಪ್ರಕರಣಗಳು ಕಂಡುಬರುತ್ತಿವೆ. ಸೋಂಕು ಉಲ್ಬಣವಾಗದಂತೆ ತ್ವರಿತಗತಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ನಗರದಲ್ಲಿ ಶುಕ್ರವಾರ 38 ಸಾವಿರ ಜನರ ಕೋವಿಡ್‌ ಪರೀಕ್ಷೆ ಮಾಡಲಾಗಿದೆ. ಯಾವ ಭಾಗದಲ್ಲಿ ಹೆಚ್ಚು ಪ್ರಕರಣಗಳು ಕಂಡು ಬರುತ್ತವೆಯೋ ಅಲ್ಲಿ ಹೆಚ್ಚು ಪರೀಕ್ಷೆಗಳನ್ನು ಮಾಡಬೇಕು. ಆ ಮೂಲಕ ಕೋವಿಡ್ ಹರಡುವುದನ್ನು ತಡೆಯಬೇಕು’ ಎಂದರು.

ಸೋಂಕು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯಬೇಕಾದರೆ ಹೆಚ್ಚು ಹೆಚ್ಚು ಪರೀಕ್ಷೆಗಳನ್ನು ಮಾಡಬೇಕು. ಸೋಂಕಿತರ ನೇರ ಹಾಗೂ ಪರೋಕ್ಷ ಸಂಪರ್ಕಕ್ಕೆ ಬಂದವರನ್ನು ಪತ್ತೆ ಕಾರ್ಯವನ್ನು ಸರಿಯಾಗಿ ಮಾಡಬೇಕು. ಅದಕ್ಕಾಗಿ ಪಾಲಿಕೆಯ ಕಂದಾಯ, ಎಂಜಿನಿಯರ್ ಹಾಗೂ ಇತರ ವಿಭಾಗಳ ಅಧಿಕಾರಿಗಳನ್ನು ಬಳಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಕೋವಿಡ್ ಸೋಂಕು ಪತ್ತೆಯಾದ ಬಳಿಕ ಅಲ್ಲಿ ಪಾಲಿಕೆಯ ಕಣ್ಗಾವಲು ತಂಡ ಸರಿಯಾಗಿ ಕೆಲಸ ಮಾಡಬೇಕು. ಜನಸಂದಣಿ ಪ್ರದೇಶಗಳಲ್ಲಿ ಕಡ್ಡಾಯವಾಗಿ ಕೋವಿಡ್ ನಿಯಮ ಪಾಲನೆ ಆಗುವಂತೆ ನೋಡಿಕೊಳ್ಳಬೇಕು. ಎಲ್ಲಾ ವಲಯಗಳಲ್ಲಿಯೂ ಕಳೆದೆರಡು ತಿಂಗಳ ಕೋವಿಡ್ ವರದಿ ಪರಿಶೀಲಿಸಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

60 ಸಾವಿರ ಮಂದಿಗೆ ಲಸಿಕೆ‌

ಸೋಮವಾರದಿಂದ ಬೆಂಗಳೂರಿನಲ್ಲಿ 60 ಸಾವಿರ ಮಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಮಂಜುನಾಥಪ್ರಸಾದ್ ತಿಳಿಸಿದರು.

‘ಕ್ಲಸ್ಟರ್‌ಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಾಗಿದೆ. ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಳ ಮಾಡುವ ಜತೆಗೆ ಯಾವ ಪ್ರದೇಶಗಳಲ್ಲಿ ಪರೀಕ್ಷೆಗಳು ಅಗತ್ಯವಿದೆ ಎಂದು ಗುರುತಿಸಲಾಗಿದೆ’ ಎಂದು ಮಾಹಿತಿ ನೀಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT