ಶನಿವಾರ, ಜುಲೈ 24, 2021
25 °C
ಅಧಿಕಾರಿಗಳ ಜೊತೆ ಸಭೆ ನಡೆಸಿದ ಮೇಯರ್‌

ಬಿಬಿಎಂಪಿ ಸ್ವತ್ತು ರಕ್ಷಣೆಗೆ ಕೇಂದ್ರೀಕೃತ ವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ತನ್ನ ಒಡೆತನದ ಎಲ್ಲ ಸ್ವತ್ತುಗಳ ಸಂರಕ್ಷಣೆಗೆ ಕೇಂದ್ರೀಕೃತ ವ್ಯವಸ್ಥೆ ರೂಪಿಸಲು ಬಿಬಿಎಂಪಿ ಮುಂದಾಗಿದೆ. ಆಸ್ತಿ ದಾಖಲೆಗಳನ್ನು ಡಿಜಿಟಲೀಕರಿಸಲು ಹಾಗೂ ಮೂಲ ದಾಖಲೆಗಳನ್ನು ಕಾಪಾಡಲು ಕೇಂದ್ರ ಕಚೇರಿಯಲ್ಲಿ ಭದ್ರತಾ ಕೊಠಡಿಯನ್ನೂ ತೆರೆಯಲು ಬಿಬಿಎಂಪಿ ನಿರ್ಧರಿಸಿದೆ. 

ಮೇಯರ್‌ ಎಂ.ಗೌತಮ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಅಧಿಕಾರಿಗಳ ವಿಶೇಷ ಸಭೆಯುಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಪಾಲಿಕೆ ಒಡೆತನದಲ್ಲಿ ಎಷ್ಟು ಸ್ವತ್ತುಗಳಿವೆ, ಗುತ್ತಿಗೆ ನೀಡಿರುವ ಆಸ್ತಿಗಳೆಷ್ಟು, ಗುತ್ತಿಗೆ ಅವಧಿ ಮುಗಿದ ಬಳಿಕ ಪಾಲಿಕೆ ವಶಕ್ಕೆ ಪಡೆದಿರುವ ಆಸ್ತಿಗಳೆಷ್ಟು, ಅವುಗಳ ಸಂರಕ್ಷಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳೇನು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಆಸ್ತಿಗಳ ನಿರ್ವಹಣೆಗೆ ಸೂಕ್ತ ವ್ಯವಸ್ಥೆಯೇ ಇಲ್ಲ. ಪ್ರಸ್ತುತ ಆಯಾ ವಾರ್ಡ್‌ಗಳ ಸಹಾಯಕ ಕಂದಾಯ ಅಧಿಕಾರಿಗಳೇ (ಎಆರ್‌ಒ) ತಮ್ಮ ವ್ಯಾಪ್ತಿಯ ಪಾಲಿಕೆ ಆಸ್ತಿಗಳ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಮಾಹಿತಿ ನೀಡಿದರು.

‘ಎಲ್ಲ ಆಸ್ತಿಗಳ ರಕ್ಷಣೆಗೆ ಪ್ರತ್ಯೇಕ ಅಧಿಕಾರಿಯನ್ನು ನಿಯೋಜಿಸಿ, ಕಬಳಿಕೆ ತಡೆಯುವ ಹೊಣೆಯನ್ನು ಅವರಿಗೆ ವಹಿಸಬೇಕು. ಎಲ್ಲ ವಲಯಗಳ ಉಪ ಆಯುಕ್ತರು (ಡಿ.ಸಿ) ತಮ್ಮ ಅಧೀನದ ಎಆರ್‌ಒಗಳ ನೆರವಿನಿಂದ ಪಾಲಿಕೆಯ ಆಸ್ತಿಗಳ ಪಟ್ಟಿ ಸಿದ್ಧಪಡಿಸಬೇಕು’ ಎಂದು ಮೇಯರ್‌ ಸೂಚಿಸಿದರು.

‘ಎಲ್ಲ ಸ್ವತ್ತುಗಳ ಸರ್ವೆ ಹಾಗೂ ಮೌಲ್ಯಮಾಪನ ನಡೆಸಬೇಕು. ಅವುಗಳ ರಕ್ಷಣೆಗೆ ಬೇಲಿ ಹಾಗೂ   ಬಿಬಿಎಂಪಿ ಸ್ವತ್ತು ಎಂಬ ಫಲಕ ಅಳವಡಿಸಲಾಗಿದೆಯೇ ಎಂಬುದನ್ನೂ ಪರೀಶೀಲಿಸಿ ಅವುಗಳ ರಕ್ಷಣೆ ಕ್ರಮ ಕೈಗೊಳ್ಳಬೇಕು. ಈ ಎಲ್ಲ ಕೆಲಸಗಳನ್ನು ಭೂಮಾಪಕರು ತಿಂಗಳ ಒಳಗೆ ಪೂರ್ಣಗೊಳಿಸಬೇಕು. ಪಾಲಿಕೆ ಆಸ್ತಿಗಳಿಗೆ ಬೇಲಿ ಹಾಕಲು ಬಜೆಟ್‌ನಲ್ಲಿ ₹ 20 ಕೋಟಿ ಕಾಯ್ದಿರಿಸಲಾಗಿದ್ದು, ಇದನ್ನು ಬಳಸಿಕೊಳ್ಳಬಹುದು’ ಎಂದು ಮೇಯರ್‌ ಹೇಳಿದರು. 

‘ಆಸ್ತಿ ದಾಖಲೆಗಳನ್ನು ಡಿಜಿಟಲೀಕರಿಸಿ ಇಟ್ಟುಕೊಂಡರೆ ಕಬಳಿಕೆ ತಡೆಯುವುದು ಸುಲಭವಾಗಲಿದೆ. ಅಷ್ಟೂ ಆಸ್ತಿಗಳನ್ನು ತಿಂಗಳ ಒಳಗೆ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಾಯಿಸಬೇಕು. ಆಗ ಪಾಲಿಕೆ ಸ್ವತ್ತನ್ನು ಯಾರೂ ಅಕ್ರಮವಾಗಿ ನೋಂದಾಯಿಸಲು ಅವಕಾಶವಿರದು’ ಎಂದು ಮೇಯರ್ ಸಲಹೆ ನೀಡಿದರು.

‘ಭೋಗ್ಯಕ್ಕೆ (ಲೀಸ್) ನೀಡಿರುವ ಪಾಲಿಕೆಯ ಎಲ್ಲಾ ಕಟ್ಟಡಗಳ ದಾಖಲಾತಿಗಳನ್ನು ಪುನರ್ ಪರಿಶೀಲಿಸಬೇಕು. ಪಾಲಿಕೆ ಒಡೆತನದ ಆಸ್ತಿಗಳನ್ನು ನಿಗದಿತ ಸಮಯದಲ್ಲಿ ಹಿಂಪಡೆಯಲು ಕ್ರಮವಹಿಸಬೇಕು. ಭೋಗ್ಯದ ಅವಧಿ ಮುಗಿದ ಕಟ್ಟಡಗಳಿದ್ದರೆ ಇಂದಿನ ಮಾರುಕಟ್ಟೆ ದರದ ಪ್ರಕಾರ ಶುಲ್ಕ ನಿಗದಿಪಡಿಸಿ, ಗುತ್ತಿಗೆಯನ್ನು ನವೀಕರಿಸಬಹುದು’ ಎಂದು ಮೇಯರ್‌ ಹೇಳಿದರು.

ಸರ್ಕಾರದಿಂದ ಹಸ್ತಾಂತರವಾದ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಪಾಲಿಕೆಗೆ ಹಸ್ತಾಂತರಿಸಿರುವ ಬಡಾವಣೆಗಳಲ್ಲಿರುವ ಆಸ್ತಿಗಳ ಪ್ರತ್ಯೇಕ ಪಟ್ಟಿ ತಯಾರಿಸಬೇಕು. ಇಂತಹ ಬಹಳಷ್ಟು ಆಸ್ತಿಗಳಿಗೆ ಗುರುತು ಸಂಖ್ಯೆ (ಪಿಐಡಿ) ನೀಡಿಲ್ಲ. ಆದಷ್ಟು ಬೇಗ ಪಿಐಡಿ ನೀಡಿ ಅವುಗಳ ರಕ್ಷಣೆಗೆ ಕ್ರಮಕೈಗೊಳ್ಳುವಂತೆ ಮೇಯರ್‌ ತಿಳಿಸಿದರು. 

ಮಾಲಿಕತ್ವ ಕುರಿತು ವ್ಯಾಜ್ಯಗಳಿರುವ ಆಸ್ತಿಗಳ ಕುರಿತು ಬಿಬಿಎಂಪಿಯ ಆಸ್ತಿ ವಿಭಾಗ ಹಾಗೂ ಕಾನೂನು ಕೋಶದ ಮುಖ್ಯಸ್ಥರು ಚರ್ಚಿಸಿ, ಅವುಗಳನ್ನು ಉಳಿಸಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು 

ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್, ವಿಶೇಷ ಆಯುಕ್ತ (ಆಸ್ತಿಗಳು) ಮಂಜುನಾಥ್, ಕಾನೂನು ಕೋಶದ ಮುಖ್ಯಸ್ಥ ದೇಶಪಾಂಡೆ, ಎಲ್ಲ ವಲಯಗಳ ಜಂಟಿ ಆಯುಕ್ತರು ಸಭೆಯಲ್ಲಿ ಭಾಗವಹಿಸಿದರು.

ಅಂಕಿ ಅಂಶ
7,906
: ಬಿಬಿಎಂಪಿ ಒಡೆತನದ ಆಸ್ತಿಗಳು
324: ಭೋಗ್ಯಕ್ಕೆ ನೀಡಲಾದ ಆಸ್ತಿಗಳು
165: ಭೋಗ್ಯದ ಅವಧಿ ಚಾಲ್ತಿಯಲ್ಲಿರುವವು
159: ಭೋಗ್ಯದ ಅವಧಿ ಮುಕ್ತಾಯವಾಗಿರುವವು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು