ಸೋಮವಾರ, ಸೆಪ್ಟೆಂಬರ್ 20, 2021
29 °C
ಒಂದೂವರೆ ತಿಂಗಳಲ್ಲಿ ಒಂದೂ ಸಾವಿಲ್ಲ * ಐಸಿಯುನಲ್ಲಿಯೂ ಯಾವುದೇ ಮಗು ದಾಖಲಾಗಿಲ್ಲ

ಮಕ್ಕಳಲ್ಲಿ ಸೋಂಕು: ಆತಂಕ ಬೇಡ– ಬಿಬಿಎಂಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 18 ವರ್ಷದೊಳಗಿನವರಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿಲ್ಲ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಬಿಬಿಎಂಪಿ ಮಕ್ಕಳ ತಜ್ಞರ ಸಮಿತಿ ಹೇಳಿದೆ. 

ಮಕ್ಕಳಲ್ಲಿ ಕೊರೊನಾ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದರಿಂದ ಸಾರ್ವಜನಿಕರು ಆತಂಕಗೊಂಡಿದ್ದಾರೆ. ಆದರೆ, ಕೋವಿಡ್‌ ಪ್ರಕರಣಗಳ ದತ್ತಾಂಶ ಪರಿಗಣಿಸಿದಾಗ, ಮಕ್ಕಳಲ್ಲಿ ಸೋಂಕಿನ ಪ್ರಮಾಣ ತಿಂಗಳಿನಿಂದ ತಿಂಗಳಿಗೆ ಕಡಿಮೆಯಾಗುತ್ತಿದೆ ಎಂದೂ ಸಮಿತಿಯು ಸ್ಪಷ್ಟನೆ ನೀಡಿದೆ.

20 ದಿನಗಳಲ್ಲಿ ದಿನಕ್ಕೆ ಸರಾಸರಿ 388 ಹೊಸ ಪ್ರಕರಣಗಳು ವರದಿಯಾಗುತ್ತಿದ್ದು, ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರಗತಿಯ ಏರಿಕೆ ಕಂಡು ಬಂದಿಲ್ಲ. 18 ವರ್ಷದ ಒಳಗಿನವರಲ್ಲಿ ಕಂಡು ಬಂದ ಸೋಂಕಿನ ಪ್ರಕರಣಗಳ ಬಗ್ಗೆಯೂ ಪರಿಶೀಲಿಸಿದಾಗ, ನಾಲ್ಕು ತಿಂಗಳಲ್ಲಿ ವರದಿಯಾಗಿರುವ ಒಟ್ಟು ಪ್ರಕರಣಗಳಲ್ಲಿ ಈ ವಯಸ್ಸಿನವರಲ್ಲಿ ಕಂಡು ಬಂದ ಪ್ರಕರಣಗಳ ಪ್ರಮಾಣ ಶೇ 11 ಮಾತ್ರ. 

18 ವರ್ಷದ ಒಳಗಿನವರಿಗೆ ಸಂಬಂಧಿಸಿದಂತೆ ಜೂನ್‌ನಲ್ಲಿ 2,643 ಪ್ರಕರಣಗಳು ವರದಿಯಾಗಿದ್ದರೆ, ಜುಲೈನಲ್ಲಿ 778 ಹಾಗೂ ಆಗಸ್ಟ್‌ 13ರವರೆಗೆ 309 ಪ್ರಕರಣಗಳು ವರದಿಯಾಗಿವೆ. ಆಗಸ್ಟ್‌ನಲ್ಲಿನ ಪ್ರಕರಣಗಳನ್ನು ಮಾತ್ರವೇ ಗಮನಿಸಿದರೆ, ಈ ವಯಸ್ಸಿನವರಲ್ಲಿ 511 ಪ್ರಕರಣಗಳು ವರದಿಯಾಗಿವೆ. ಅಂದರೆ, ಒಟ್ಟು ಪ್ರಕರಣಗಳಲ್ಲಿ ಶೇ 11.5 ಮಾತ್ರ ಎಂದು ಸಮಿತಿ ಹೇಳಿದೆ. 

ಮಕ್ಕಳ ತಜ್ಞರ ಸಮಿತಿಯ ಸದಸ್ಯರು: 

ಗೌರವ್ ಗುಪ್ತ, ಡಿ. ರಂದೀಪ್, ಡಾ. ಬಿ.ಕೆ. ವಿಜಯೇಂದ್ರ, ಡಾ. ನಿರ್ಮಲಾ ಬುಗ್ಗಿ, ಡಾ. ರಕ್ಷಯ್, ಡಾ. ವಿಶ್ವನಾಥ ಕಾಮೋಜಿ, ಡಾ. ಪ್ರಶಾಂತ್ ಅರಸ್, ಡಾ. ಮಲ್ಲಿಕಾರ್ಜುನ್, ಡಾ. ಸೆಂಥಿಲ್, ಡಾ. ಪಿ. ನರೇಶ್, ಡಾ. ಆನಂದ್, ಡಾ. ಸರಸ್ವತಿ, ಡಾ. ಲಲಿತಾ, ಡಾ. ಭಾರತಿ ಹಾಗೂ ಡಾ. ರಮೇಶ್.

ಸಮಿತಿ ಪ್ರಸ್ತಾಪಿಸಿದ ಮುಖ್ಯ ಅಂಶಗಳು 

* ಸದ್ಯ, ಮಕ್ಕಳ ಆಸ್ಪತ್ರೆಗಳಲ್ಲಿ  ಸರ್ಕಾರಿ ಕೋಟಾದಡಿ 5 ಮತ್ತು ಖಾಸಗಿ ಕೋಟಾದಡಿ 24 ಮಕ್ಕಳು ದಾಖಲಾಗಿದ್ದಾರೆ. ಎಲ್ಲ ವಯಸ್ಸಿನವರ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಈ ವಯಸ್ಸಿನವರ ಶೇಕಡ ಪ್ರಮಾಣ 5.7. 

* ತೀವ್ರ ನಿಗಾ ಘಟಕದಲ್ಲಿ ಯಾವುದೇ ಮಕ್ಕಳು ದಾಖಲಾಗಿಲ್ಲ. ಕಳೆದ ಒಂದೂವರೆ ತಿಂಗಳಲ್ಲಿ (ಜುಲೈನಿಂದ ಆ.13) ಯಾವುದೇ ಮಕ್ಕಳು ಕೋವಿಡ್‌ನಿಂದ ಮೃತಪಟ್ಟಿಲ್ಲ 

* ಮಕ್ಕಳಲ್ಲಿ ಸೋಂಕು ಲಕ್ಷಣಗಳು ಕಂಡು ಬಂದರೆ, ಅವರನ್ನು  ಬಿಬಿಎಂಪಿ ದೈಹಿಕ ಚಿಕಿತ್ಸಾ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಕರೆದುಕೊಂಡುಬರಹುದು.

* ಮಕ್ಕಳ ಆರೈಕೆಗಾಗಿ ನಗರದಲ್ಲಿ 7 ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಬಿಬಿಎಂಪಿಯು ಮಕ್ಕಳ ಆರೈಕೆಗಾಗಿ ಶೀಘ್ರದಲ್ಲೇ 30 ಹಾಸಿಗೆಗಳ ಸಾಮರ್ಥ್ಯದ ವ್ಯವಸ್ಥೆ ಮಾಡಲಿದೆ.

* 3 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಮಕ್ಕಳು ಕಟ್ಟುನಿಟ್ಟಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಮತ್ತು ಚಿಕ್ಕ ಮಕ್ಕಳು ಯಾವಾಗಲೂ ಪೋಷಕರ ಮೇಲ್ವಿಚಾರಣೆಯಲ್ಲಿರುವುದು ಸೂಕ್ತ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು