ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಬಿಎಂಪಿ: ಆಸ್ತಿ ತೆರಿಗೆ ಬಾಕಿ ಮೇಲಿನ ದಂಡ ಶೇ 50ರಷ್ಟು ಇಳಿಕೆ

ಬಿಬಿಎಂಪಿ ಆಸ್ತಿ ತೆರಿಗೆ ತಿದ್ದುಪಡಿ ಮಸೂದೆ ಅಂಗೀಕಾರ
Published 20 ಫೆಬ್ರುವರಿ 2024, 20:30 IST
Last Updated 20 ಫೆಬ್ರುವರಿ 2024, 20:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆ ಮೇಲಿನ ದಂಡದ ಪ್ರಮಾಣ ಶೇ 50‌ರಷ್ಟು ಕಡಿತಗೊಳಿಸಲು ಅವಕಾಶ ಕಲ್ಪಿಸುವ ‘ಬಿಬಿಎಂಪಿ (ತಿದ್ದುಪಡಿ) ಮಸೂದೆ– 2024’ ವಿಧಾನಸಭೆಯಲ್ಲಿ ಮಂಗಳವಾರ ಅಂಗೀಕಾರಗೊಂಡಿತು.

ಬೆಂಗಳೂರು ನಗರಾಭಿವೃದ್ದಿ ಖಾತೆಯನ್ನೂ ಹೊಂದಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಮಸೂದೆಯನ್ನು ಮಂಡಿಸಿದರು.

ಮಸೂದೆಯ ಕುರಿತು ವಿವರಣೆ ನೀಡಿದ ಶಿವಕುಮಾರ್‌, ‘ಬಡ ಮತ್ತು ದುರ್ಬಲ ವರ್ಗದವರಿಗೆ ಇದರಿಂದ ಅನುಕೂಲ ಆಗಲಿದೆ. ಸರ್ಕಾರದ ವಸತಿ ಯೋಜನೆಯ ಆಸ್ತಿಗಳು ಹಾಗೂ ಕೊಳೆಗೇರಿ ಪ್ರದೇಶದ ಕಟ್ಟಡಗಳಿಗೆ ಬಡ್ಡಿ ಮೇಲಿನ ದಂಡ ಇರುವುದಿಲ್ಲ. 1 ಸಾವಿರ ಚದರ ಅಡಿವರೆಗಿನ ಸ್ವಯಂ ಬಳಕೆ ಆಸ್ತಿದಾರರಿಗೆ ಸಂಪೂರ್ಣ ದಂಡ ವಿನಾಯಿತಿ ನೀಡಲಾಗಿದೆ’ ಎಂದರು.

‘ವಸತಿ ಮತ್ತು ಮಿಶ್ರ ಆಸ್ತಿದಾರರ (ವಸತಿ ಮತ್ತು ವಾಣಿಜ್ಯ) ಬಾಕಿಯನ್ನು ಎಷ್ಟೇ ವರ್ಷದಿಂದ ಉಳಿಸಿಕೊಂಡಿದ್ದರೂ ಹಿಂದಿನ 5 ವರ್ಷಕ್ಕೆ ಮಾತ್ರ ಲೆಕ್ಕಾಚಾರ ಹಾಕಲು ನಿರ್ಧರಿಸಲಾಗಿದೆ. 5 ವರ್ಷಕ್ಕಿಂತ ಹಿಂದಿನ ಅವಧಿಗೆ ಬಡ್ಡಿ ಮನ್ನಾ ಮಾಡಲಾಗಿದೆ. ಇದೊಂದು ಜನಸ್ನೇಹಿ ತಿದ್ದುಪಡಿ ಮಸೂದೆ. ಸರ್ಕಾರಕ್ಕೆ ನಷ್ಟವಾದರೂ ಪರವಾಗಿಲ್ಲ. ಜನರಿಗೆ ಅನುಕೂಲ ಆಗಲಿ ಎಂದು ಮಸೂದೆ ಮಂಡಿಸಲಾಗಿದೆ’ ಎಂದೂ ತಿಳಿಸಿದರು.

ಈ ತಿದ್ದುಪಡಿ ಮಸೂದೆಯಿಂದ ಬೆಂಗಳೂರಿನ ನಾಗರಿಕರಿಗೆ ತೆರಿಗೆ ಬಾಬ್ತು, ದಂಡ ವಿನಾಯಿತಿ ಸೇರಿ ಸುಮಾರು ₹ 2,700 ಕೋಟಿ ಅನುಕೂಲ ಆಗಲಿದೆ. ಜತೆಗೆ ಪಾಲಿಕೆಗೆ ಸುಮಾರು ₹ 1 ಸಾವಿರ ಕೋಟಿಯಷ್ಟು ಆಸ್ತಿ ತೆರಿಗೆ ಬರಲಿದೆ. ಸುಮಾರು 5.51 ಲಕ್ಷ ತೆರಿಗೆ ಬಾಕಿದಾರರು, ಸುಮಾರು 5- 7 ಲಕ್ಷ ತೆರಿಗೆ ವ್ಯಾಪ್ತಿಗೆ ಬಾರದವರು ಹಾಗೂ 3 ಲಕ್ಷದಷ್ಟು ಮಂದಿ ಭಾಗಶಃ ತೆರಿಗೆ ಪಾವತಿದಾರರು ಸೇರಿ 13 ಲಕ್ಷದಿಂದ 15 ಲಕ್ಷ ಜನರಿಗೆ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT