ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ಪಾವತಿಸದಿದ್ದರೆ ಆಸ್ತಿ ಮುಟ್ಟುಗೋಲು

ಕಟ್ಟುನಿಟ್ಟಿನ ಕ್ರಮ ವಹಿಸಲು ವಿಶೇಷ ಆಯುಕ್ತರಿಗೆ ಆಡಳಿತಾಧಿಕಾರಿ ಸೂಚನೆ
Last Updated 9 ಅಕ್ಟೋಬರ್ 2020, 19:56 IST
ಅಕ್ಷರ ಗಾತ್ರ

ಬೆಂಗಳೂರು: ‘ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ವಾರಂಟ್ ಜಾರಿ ಮಾಡಿ ಆಸ್ತಿ ಮುಟ್ಟುಗೊಲಿಗೆ ಕ್ರಮ ವಹಿಸಿ’ ಎಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ ಗುಪ್ತ ಅವರು ವಿಶೇಷ ಆಯುಕ್ತರಿಗೆ ಸೂಚನೆ ನೀಡಿದರು.

ಆಸ್ತಿ ತೆರಿಗೆ ಸಂಗ್ರಹ ಹಾಗೂ ಖಾತಾ ನೀಡುವ ವಿಷಯದ ಸಂಬಂಧ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ‘ಆಸ್ತಿ ತೆರಿಗೆ ವ್ಯಾಪ್ತಿಗೆ ಸೇರಿದ ಸ್ವತ್ತುಗಳನ್ನು ಗುರುತಿಸಿ ತೆರಿಗೆ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕು. ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರ ಪಟ್ಟಿ ಸಿದ್ಧಪಡಿಸಿ ಸಂಗ್ರಹಕ್ಕೆ ಮುಂದಾಗಬೇಕು’ ಎಂದು ತಿಳಿಸಿದರು.

‘ಸರ್ಕಾರದಿಂದ ಬರುವ ಅನುದಾನದ ಮೇಲೆ ಅವಲಂಬಿತರಾಗದೆ ಪಾಲಿಕೆ ವರಮಾನ ಹೆಚ್ಚಿಸಲು ಎಲ್ಲ ಕಂದಾಯ ಅಧಿಕಾರಿಗಳು ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಬೇಕು. ಪಾಲಿಕೆ ವಿವಿಧ ಮೂಲಗಳಿಂದ ಬರುವ ಆದಾಯದ ಪ್ರಮಾಣವನ್ನು ಕ್ರಮೇಣವಾಗಿ ಹೆಚ್ಚಳ ಮಾಡಬೇಕು’ ಎಂದು ಸೂಚನೆ ನೀಡಿದರು.

ವಿಶೇಷ ಆಯುಕ್ತ ಬಸವರಾಜು ಮಾತನಾಡಿ, ‘ಸುಮಾರು 19.80 ಲಕ್ಷ ಆಸ್ತಿಗಳು ತೆರಿಗೆ ವ್ಯಾಪ್ತಿಯಲ್ಲಿದ್ದು, ಪ್ರಸಕ್ತ ಸಾಲಿನಲ್ಲಿ ಈವರೆಗೆ ₹2,039 ಕೋಟಿ ಸಂಗ್ರಹ ಮಾಡಲಾಗಿದೆ. ಈಗಾಗಲೇ ವಲಯವಾರು ಹಾಗೂ ವಾರ್ಡ್‌ವಾರು 100 ಸುಸ್ತಿದಾರರ ಪಟ್ಟಿ ಸಿದ್ದಪಡಿಸಿದ್ದು, ಎಲ್ಲರಿಗೂ ನೋಟಿಸ್ ನೀಡಲಾಗಿದೆ. ಮುಂದಿನ ದಿನಗಳಲ್ಲಿ ವಾರಂಟ್ ನೀಡಿ ಆಸ್ತಿ ಮುಟ್ಟುಗೋಲು ಹಾಕುವ ಮೂಲಕ ಆಸ್ತಿ ತೆರಿಗೆ ಸಂಗ್ರಹ ಮಾಡಲಾಗುವುದು. ಆಸ್ತಿ ತೆರಿಗೆ ವ್ಯಾಪ್ತಿಗೆ ಸೇರ್ಪಡೆಯಾಗದ ಆಸ್ತಿಗಳನ್ನು ಸೇರ್ಪಡೆಗೊಳಿಸುವ ಸಂಬಂಧ ಒಂದು ತಿಂಗಳಲ್ಲಿ ಸರ್ವೇ ನಡೆಸಲಾಗುವುದು’ ತಿಳಿಸಿದರು.

ಡ್ರೋನ್ ಮೂಲಕ ಸರ್ವೆ

ಹೊಸ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಸೇರಿಸುವ ಸಂಬಂಧ ಜಿಐಎಸ್ ಮತ್ತು ಡ್ರೋನ್ ಮೂಲಕ ಸರ್ವೆ ನಡೆಸುವಂತೆ ಆಯುಕ್ತ ಎನ್. ಮಂಜುನಾಥಪ್ರಸಾದ್ ಸೂಚನೆ ನೀಡಿದರು.

‘ತೆರಿಗೆದಾರರ ಸಂಖ್ಯೆ ಹೆಚ್ಚಳ ಮಾಡಬೇಕು. ಅವರಿಗೆ ಸ್ವಯಂ ಆಸ್ತಿ ತೆರಿಗೆ ಯೋಜನೆ ಬಗ್ಗೆ ಮನವರಿಕೆ ಮಾಡಿಸಬೇಕು. ಪಾವತಿ ಮಾಡಿದ್ದಾರೋ ಇಲ್ಲವೋ ಎಂಬುದನ್ನು ಪರಿಶೀಲನೆ ನಡೆಸಬೇಕು’ ಎಂದು ಹೇಳಿದರು.

‘ಪ್ರತಿ ವಲಯದಲ್ಲೂ ಖಾತಾ ಮೇಳ ಏರ್ಪಡಿಸಿ ಆಸ್ತಿ ಮಾಲೀಕರಿಗೆ ನಿಗದಿತ ಸಮಯದಲ್ಲಿ ಖಾತಾ ದೊರೆಯುವಂತೆ ನೋಡಿಕೊಳ್ಳಬೇಕು. ಆಸ್ತಿ ತೆರಿಗೆ ಸಂಗ್ರಹ ಮಾಡುವ ವಿಷಯದಲ್ಲಿ ಯಾರೊಬ್ಬರೂ ಸಬೂಬು ಹೇಳದೆ ಕೆಲಸ ಮಾಡಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT